ಜಯದೇವಿ ಜಂಗಮಶೆಟ್ಟಿ
ಡಾ. ಜಯದೇವಿ ಜಂಗಮಶೆಟ್ಟಿ ಅವರು ಹೆಸರಾಂತ ಸಂಗೀತಗಾರ್ತಿ, ಪ್ರಾಧ್ಯಾಪಕಿ ಮತ್ತು ಬರಹಗಾರ್ತಿ.
ಜುಲೈ 17, ಜಯದೇವಿ ಜಂಗಮಶೆಟ್ಟಿ ಅವರ ಜನ್ಮದಿನ. ಮೂಲತಃ ಇವರು ರಾಯಚೂರಿನವರು. ಸಂಗೀತದಲ್ಲಿ ವಿದ್ವತ್ ವಿಶಾರದ ಪದವೀಧರರಾದ ಇವರು ಜೈಪುರ ಗ್ವಾಲಿಯರ್ ಘರಾನಾದ ಹೆಸರಾಂತ ಗಾಯಕಿ. ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ 'ಕೇಡಿಲ್ಲವಾಗಿ ಹಾಡುವೆ (ವಚನಗಾಯನ ಪರಂಪರೆಯ ನೆಲೆ ನಿಲುವುಗಳು)' ಮಹಾಪ್ರಬಂಧಕ್ಕೆ ಪಿಎಚ್.ಡಿ ಗೌರವ ಸಂದಿದೆ.
ಜಯದೇವಿ ಅವರು ಡಾ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಡಾ. ರಾಜಶೇಖರ ಮನ್ಸೂರ, ಜಯಶ್ರೀ ಪಟ್ನೆಗರ್ ಮುಂತಾದ ಮಹಾನ್ ಸಂಗೀತಗಾರರ ಬಳಿ ಸಂಗೀತ ಸಾಧನೆ ಮಾಡಿದವರು. ಇವರು ಭಾರತದಾದ್ಯಂತ ಸಂಗೀತ ಗಾಯನ ಕಾರ್ಯಕ್ರಮಗಳನ್ನು ನೀಡಿ ಹೆಸರಾಗಿದ್ದಾರೆ. ರಾಗ-ಭೈರವಿ (2019) ಎಂಬುದು ಇವರು ಸಂಗೀತ ನಿರ್ದೇಶಿಸಿದ ಕನ್ನಡ ಚಲನಚಿತ್ರ. ಶ್ರವ್ಯಮಾಧ್ಯಮಗಳಲ್ಲಿಯೂ ಇವರ ಅನೇಕ ಆಲ್ಬಮ್ಗಳು ಖ್ಯಾತಿ ಗಳಿಸಿವೆ.
ಜಯದೇವಿ ಜಂಗಮಶೆಟ್ಟಿ ಅವರು ಕಲಬುರಗಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಲಲಿತಕಲಾ ಸಂಗೀತ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶನಾತ್ಮಕ ಕಲೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಬರಹಗಾರ್ತಿಯಾಗಿ ಜಯದೇವಿ ಜಂಗಮಶೆಟ್ಟಿ ಅವರ ಪ್ರಕಟಿತ ಕೃತಿಗಳಲ್ಲಿ ಪ್ರವಚನ ಸಂಗೀತ ರತ್ನ ಪಂಡಿತ ಸಿದ್ಧರಾಮ ಜಂಬಲದಿನ್ನಿ, ಕೇಡಿಲ್ಲವಾಗಿ ಹಾಡುವೆ, ಬಯಲ ನಾದವ ಹಿಡಿದು, ಉಲಿವ ನಾದದ ಚರಣ, ಗೀತಮಾತೆಂಬ ಜ್ಯೋತಿ ಮುಂತಾದವು ಸೇರಿವೆ.
ಜಯದೇವಿ ಜಂಗಮಶೆಟ್ಟಿ ಅವರಿಗೆ ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಸಮ್ಮಾನ ಪ್ರಶಸ್ತಿ, ವಚನ ಗಾಯನಕ್ಕಾಗಿ ರಮಣಶ್ರೀ ಪ್ರಶಸ್ತಿ, ಸರಕಾರದ ಬಾಲವಿಕಾಸ ಅಕಾಡೆಮಿಯಿಂದ ಕಲ್ಚರಲ್ ಗುರು ಪ್ರಶಸ್ತಿ, ರಾಜ್ಯಮಟ್ಟದ ಅಮ್ಮ ಪ್ರಶಸ್ತಿ, ಚೆನ್ನೈನ ಭಾರತ ರತ್ನ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ, ‘ಉಲಿವ ನಾದದ ಚರಣ’ ಕೃತಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುಸ್ತಕ ಬಹುಮಾನ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಮಹಾನ್ ಸಾಧಕರಾದ ಡಾ. ಜಯದೇವಿ ಜಂಗಮಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
On the birthday of our Great musician DrJayadevi Jangamashetti 🌷🌷🌷
ಕಾಮೆಂಟ್‌ಗಳು