ಕೆ. ಎಸ್. ಶುಭ್ರತಾ
ಕೆ. ಎಸ್. ಶುಭ್ರತಾ
ಡಾ. ಕೆ.ಎಸ್. ಶುಭ್ರತಾ ಅವರು ಮನೋವೈದ್ಯರಾಗಿ, ಪ್ರಾಧ್ಯಾಪಕರಾಗಿ, ಲೇಖಕಿಯಾಗಿ ಮತ್ತು ಭರತನಾಟ್ಯ ಕಲಾವಿದೆಯಾಗಿ ಹೆಸರಾಗಿದ್ದಾರೆ.
ಜುಲೈ 18, ಶುಭ್ರತಾ ಅವರ ಜನ್ಮದಿನ. ಶಿವಮೊಗ್ಗೆಯಲ್ಲಿ ನೆಲೆಸಿರುವ ಇವರು ದ್ವಿತೀಯ ಪಿಯುಸಿಯಲ್ಲಿ ರ‍್ಯಾಂಕ್ ಸಾಧನೆ ಮಾಡಿ, ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ, ನಂತರ ಬೆಂಗಳೂರಿನ ನಿಮ್ಹಾನ್ಸ್ ನಿಂದ ಎಂಡಿ ಮನೋವೈದ್ಯಕೀಯ ಪದವಿ ಪಡೆದರು.
ಡಾ. ಶುಭ್ರತಾ ಅವರು ಮನೋವೈದ್ಯಕೀಯದಲ್ಲಿ ಪ್ಯಾರಿಸ್‌ನಿಂದ ಫೆಲೋಶಿಪ್, ಮೆಲ್ಬೋರನ್ನಿಂದ RANZP ಫೆಲೋಶಿಪ್ ಪ್ರಶಸ್ತಿ, ಕೆನಡಾದಲ್ಲಿ ಯುವ ಸಂಶೋಧಕಿ ಪ್ರಶಸ್ತಿ, ಲಂಡನ್ನಲ್ಲಿ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ ನಿಂದ ನ್ಯೂರೋಸೈಕ್ ಬರ್ಸರಿ ಅವಾರ್ಡ್ ಮುಂತಾದ ಗೌರವಗಳನ್ನು ಗಳಿಸಿದ್ದಾರೆ. ಇವರು ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ 2013-14ರ ಫೆಲೋಶಿಪ್ ಪಡೆದಿದ್ದರು. ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಮುನ್ನೂರಕ್ಕೂ ಹೆಚ್ಚು ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳನ್ನು ಮೂಡಿಸಿದ್ದಾರೆ. ಈಗಾಗಲೇ ಮನೋವೈದ್ಯಕೀಯಕ್ಕೆ ಸಂಬಂಧಪಟ್ಟ 7 ಪುಸ್ತಕಗಳನ್ನು ಮತ್ತು "ಅಮ್ಮನ ಚಾದರದ ಕತೆ ಮತ್ತು ಇತರ ಪ್ರಬಂಧಗಳು" ಎಂಬ ಪ್ರಬಂಧ ಸಂಕಲನವನ್ನು ಪ್ರಕಟಿಸಿದ್ದಾರೆ. ‘ಆತ್ಮಹತ್ಯೆ ತಡೆ’ ಕುರಿತಂತೆ ಮೆಡಿಕಲ್ ವಿದ್ಯಾರ್ಥಿಗಳ ಪ್ರಬಂಧಗಳ ಲೇಖನಗಳನ್ನು ಸಂಪಾದಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.
ಶುಭ್ರತಾ ಅವರಿಗೆ ಭಾರತೀಯ ಮನೋವೈದ್ಯಕೀಯ ಸಂಘದಿಂದ ಡಾ|| ಎಸ್.ಎಸ್.ಜಯರಾಮ್ ಪ್ರಶಸ್ತಿ, ಐಎಂಎ ಶ್ರೇಷ್ಟ ವೈದ್ಯಬರಹಗಾರ್ತಿ ಪ್ರಶಸ್ತಿ, ಬೇಂದ್ರೆ ಪ್ರತಿಷ್ಠಾನದಿಂದ 'ಮಕ್ಕಳ ಮನೋವಿಕಾಸ' ಪುಸ್ತಕಕ್ಕೆ ಬೇಂದ್ರೆ ಪುಸ್ತಕ ಬಹುಮಾನ ಮುಂತಾದ ಗೌರವಗಳು ಸಂದಿವೆ.
ಶುಭ್ರತಾ ಅವರು ಏಳು ವರ್ಷಗಳಿಂದ ಭಾರತೀಯ ವೈದ್ಯಕೀಯ ಸಂಘ, ಶಿವಮೊಗ್ಗ ಶಾಖೆಯ ಪತ್ರಿಕೆಯ ಸಂಪಾದಕಿಯಾಗಿದ್ದಾರೆ. ಮನೋವೈಜ್ಞಾನಿಕ ಕತೆಗಳನ್ನು ಬರೆಯುತ್ತಿರುವ ಶುಭ್ರತಾ, 2022ರ ರಾಜ್ಯ ಮಟ್ಟದ ತ್ರಿವೇಣಿ ಮನೋವೈಜ್ಞಾನಿಕ ಸ್ಪರ್ಧೆಯಲ್ಲಿ, ಮೆಚ್ಚುಗೆ ಬಹುಮಾನ ಪಡೆದಿದ್ದಾರೆ. ಕರ್ಮವೀರ, ತರಂಗ ಮುಂತಾದ ವಾರಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. 2023 ಮತ್ತು 2024 ರಲ್ಲಿ ಬಳ್ಳಾರಿ ಮತ್ತು ಸಿಂಧನೂರಿನಲ್ಲಿ ಐಎಂಎ ಕನ್ನಡ ವೈದ್ಯ ಬರಹಗಾರರ ಬಳಗದಿಂದ ದತ್ತಿ ಉಪನ್ಯಾಸದ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ, ಶಿವಮೊಗ್ಗ ಜಿಲ್ಲೆಯ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2024 ಲೋಕಸಭಾ ಚುನಾವಣೆಗೂ ಶಿವಮೊಗ್ಗ ಜಿಲ್ಲಾ ಐಕಾನ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಶುಭ್ರತಾ ಹಲವಾರು ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಇನ್ನೂರಕ್ಕೂ ಹೆಚ್ಚು ಮಾನಸಿಕ ಆರೋಗ್ಯದ ಅರಿವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದಲ್ಲಿಯೂ ಮಾನಸಿಕ ಆರೋಗ್ಯ ಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಕ್ಷೇಮ ಟ್ರಸ್ಟ್ (ರಿ) ನ ಮಾನೇಜಿಂಗ್ ಟ್ರಸ್ಟಿ ಆಗಿರುವ ಡಾ|| ಶುಭ್ರತಾ, ಕ್ಷೇಮದ ಮೂಲಕ ಸಮಗ್ರ ಆರೋಗ್ಯಕ್ಕಾಗಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಭಾರತೀಯ ಮನೋವೈದ್ಯಕೀಯ ಸಂಘದ ರಾಷ್ಟ್ರಮಟ್ಟದ ಸಾಹಿತ್ಯ ಮತ್ತು ಮಾನಸಿಕ ಆರೋಗ್ಯ ಟಾಸ್ಕ್ ಫೋರ್ಸಿನ ಸಂಚಾಲಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಐಎಂಎ ಬರಹಗಾರರ ಸಮಿತಿಯ ಸಕ್ರಿಯ ಸದಸ್ಯೆ ಮತ್ತು ಪ್ರಸಕ್ತ ಸಾಲಿನಲ್ಲಿ ರಾಜ್ಯ ಐಎಂಎ ವೈದ್ಯ ವಿದ್ಯಾರ್ಥಿ ಜಾಲದ ಚೇರ್ಮನ್ ಆಗಿದ್ದಾರೆ.
ಚಿಕ್ಕ ವಯಸ್ಸಿಂದಲೇ ಭರತನಾಟ್ಯವನ್ನು ಕಲಿತಿರುವ ಶುಭ್ರತಾ, ಮೈಸೂರಿನ ಡಾ. ವಸುಂಧರಾ ದೊರೆಸ್ವಾಮಿಯವರ ಶಿಷ್ಯೆ. ಭರತನಾಟ್ಯದ ವಿದ್ವತ್‌ನಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಶಿವಮೊಗ್ಗ, ಭದ್ರಾವತಿ, ಸಿರ್ಸಿ, ಇಕ್ಕೇರಿ ಉತ್ಸವ, ಹಂಪಿ ಉತ್ಸವ, ಬೆಂಗಳೂರು, ಮೈಸೂರು, ನವದೆಹಲಿ, ಇತ್ಯಾದಿ ಹಲವು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪುರಂದರ ವೈವಿಧ್ಯ, ತ್ಯಾಗರಾಜ ವೈಭವ, ನವರಸಧಾರೆ, ಕಗ್ಗದರ್ಶನ, ನೃತ್ಯ ಸಂಭ್ರಮ, ವಿಶ್ವಾಮಿತ್ರ ಗಾಯತ್ರಿ, ಇತ್ಯಾದಿ ವಿಶೇಷ ನೃತ್ಯರೂಪಕಗಳನ್ನು, ನಿರ್ದೇಶಿಸಿ ಪ್ರದರ್ಶಿಸಿದ್ದಾರೆ. ‘ಕವಿಕುಲಗುರು ನಮನ’ ನೃತ್ಯರೂಪಕಕ್ಕೆ, ಭಾರತೀಯ ಸಾಂಸ್ಕೃತಿಕ ಸಚಿವಾಲಯದಿಂದ ವೈಯಕ್ತಿಕ ಅನುದಾನವನ್ನು 2014ರಲ್ಲಿ ಪಡೆದಿದ್ದಾರೆ. ಭಾರತೀಯ ಸಾಂಸ್ಕೃತಿಕ ಸಚಿವಾಲಯದಿಂದ 2022ರ ಸಾಲಿನ ಜ್ಯೂನಿಯರ್ ಫೆಲೋಶಿಪ್ ಪಡೆದಿದ್ದಾರೆ. ವಿದ್ವಾನ್ ಶೃಂಗೇರಿ ಹೆಚ್ ಎಸ್ ನಾಗರಾಜ್ ಅವರಲ್ಲಿ ಕರ್ನಾಟಕ ಸಂಗೀತದ ಸಾಧನೆಯನ್ನು ಮಾಡಿದ್ದಾರೆ. ಶ್ರೀವಿಜಯ ಕಲಾನಿಕೇತನದ ನಿರ್ದೇಶಕಿಯರಲ್ಲಿ ಒಬ್ಬರಾದ ಇವರು, ಮಕ್ಕಳಿಗೆ ಭರತನಾಟ್ಯವನ್ನು ಕಲಿಸುತ್ತಾರೆ ಮತ್ತು ಸ್ವತಃ ಪ್ರದರ್ಶನಗಳನ್ನು ನೀಡುತ್ತಾರೆ ನೃತ್ಯ ಸಂಗೀತದ ಮೂಲಕ ಮಾನಸಿಕ ಆರೋಗ್ಯಕ್ಕಾಗಿ ಶ್ರೀವಿಜಯದ ಮೂಲಕ ಶ್ರಮಿಸುತ್ತಿದ್ದಾರೆ.
ಸಾಧಕಿ ಡಾ. ಶುಭ್ರತಾ ಅವರಿಗೆ ಹುಟ್ಟಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Dr. Shubrata Ks 🌷🙏🌷
ಕಾಮೆಂಟ್‌ಗಳು