ಲ.ನ. ಸ್ವಾಮಿ
ಲ.ನ. ಸ್ವಾಮಿ
ಡಾ. ಲ.ನ. ಸ್ವಾಮಿ ಅವರು ಚರಿತ್ರೆಯ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಪುರಾತತ್ವ ವಸ್ತುಸಂಗ್ರಹಾಲಯಗಳ ಅಧಿಕಾರಿಗಳಾಗಿ ಮತ್ತು ಬರಹಗಾರರಾಗಿ ಪ್ರಸಿದ್ಧರಾಗಿದ್ದಾರೆ.
ಲ.ನ. ಸ್ವಾಮಿಯವರು ಮಂಡ್ಯ ಜಿಲ್ಲೆಯಲ್ಲಿ 1962ರ ಆಗಸ್ಟ್ 2 ರಂದು ಜನಿಸಿದರು. ಅವರು ತಮ್ಮಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ., ಬಿ.ಇಡ್, ಎಂ.ಎ ಪದವಿಗಳು ಹಾಗೂ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದಲ್ಲಿ ಪಿಎಚ್.ಡಿ ಸಾಧನೆಯನ್ನು ಮಾಡಿದ್ದಾರೆ.
ಸ್ವಾಮಿ ಅವರು ಅಧ್ಯಾಪಕ ವೃತ್ತಿಗೆ ಪ್ರವೇಶಿಸುವ ಮೊದಲು, ಹಂಪಿಯ ಎಎಸ್‌ಐ, ಬೆಂಗಳೂರಿನ ಸೆಂಟರ್ ಫಾರ್ ಹಿಸ್ಟರಿ ಅಂಡ್ ಫಿಲಾಸಫಿ ಆಫ್ ಸೈನ್ಸಸ್ ಮತ್ತು ತಂಜಾವೂರಿನ ತಮಿಳು ವಿಶ್ವವಿದ್ಯಾಲಯವೂ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಸಂಶೋಧಕರಾಗಿ ಕೆಲಸ ಮಾಡಿದರು. ಮುಂದೆ ಅವರು ಮೈಸೂರಿನ ಟೆರೇಸಿಯನ್ ಕಾಲೇಜು, ಜೆಎಸ್ಎಸ್ ಕಾಲೇಜು ಮತ್ತು ನಟರಾಜ ಕಾಲೇಜು, ಮತ್ತು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಮುಂತಾದೆಡೆ ಪ್ರಾಧ್ಯಾಪನ ನಡೆಸಿದರು.
ನಂತರದಲ್ಲಿ ಅವರು ಕರ್ನಾಟಕದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ರಾಜ್ಯ ಇಲಾಖೆಯಲ್ಲಿ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕೆಲಕಾಲ, ಕ್ಯಾಲಿಕಟ್‌ನ ಮ್ಯಾರಿಟೈಮ್ ಸ್ಟಡೀಸ್ ಮತ್ತು ರಿಸರ್ಚ್ ಯೂನಿವರ್ಸಿಟಿಯ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. 2012 ರವರೆಗೆ ವಿಶೇಷ ಅಧಿಕಾರಿಯಾಗಿ. ಡಾ ಸ್ವಾಮಿ ಅವರು 2014 ರಲ್ಲಿ ವಿಜಯಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ ಸೇರುವ ಮೊದಲು ಸಂದರ್ಶಕ ಪ್ರಾಧ್ಯಾಪಕರಾಗಿ ಎರಡು ಪ್ರತಿಷ್ಠಿತ ಕಾಲೇಜುಗಳಲ್ಲಿಯೂ ಕೆಲಸ ಮಾಡಿದರು.
ಡಾ ಸ್ವಾಮಿಯವರ ಸಾಗರ ಪುರಾತತ್ತ್ವ ಶಾಸ್ತ್ರದ ಪ್ರಾವೀಣ್ಯತೆಯು CSIR-ತಮಿಳು ವಿಶ್ವವಿದ್ಯಾನಿಲಯದ “Maritime History of India" ಎಂಬ ಶೀರ್ಷಿಕೆಯಡಿನ ಮಹತ್ವದ ರಾಷ್ಟ್ರೀಯ ಯೋಜನೆಯಲ್ಲಿ ಮತ್ತು ಆ ಕ್ಷೇತ್ರಕ್ಕೆ ಸಂಬಂಧಿಸಿದ ಅವರ ಎಲ್ಲಾ ಪ್ರಕಟಣೆಗಳಲ್ಲಿ ಪ್ರತಿಫಲಿಸಿದೆ. ಸ್ವಾಮಿ ಅವರು ಸಮುದ್ರ ಪುರಾತತ್ವ ಮತ್ತು ಇತಿಹಾಸದ ವಿವಿಧ ಅಂಶಗಳ ಮೇಲೆ ಮೂವತ್ತು ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಅವರ ಮಾರಿಟೈಮ್ ಆರ್ಕಿಯಾಲಜಿ ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ Boats and Ships in Indian Art (1997), Maritime Contacts of Ancient India (2000), Ethno-marine Archaeology (2010) and Some Aspects of South Indian Shipping (2014) ಮುಂತಾದವು ಸೇರಿವೆ.
ಸ್ವಾಮಿ ಅವರು ತಮ್ಮ ಮಾರ್ಗದರ್ಶಕರು ಮತ್ತು ಪುರಾತತ್ವಶಾಸ್ತ್ರದ ಪ್ರಸಿದ್ಧ ಪ್ರಾಧ್ಯಾಪಕರೂ ಆದ ಡಾ. ಬಿ ಕೆ ಗುರುರಾಜ ರಾವ್ ಅವರಿಗೆ ಸಲ್ಲಿಸಲಾದ 'ಗೌರವಂ, ಫೆಲಿಸಿಟೇಶನ್ ವಾಲ್ಯೂಮ್'(1996) ಅನ್ನು ಸಂಪಾದಿಸಿದರು. History of Srirangapatna (1996) ಆ ಐತಿಹಾಸಿಕ ನಗರದ ಮೇಲೆ ಪ್ರಕಟವಾದ ಮತ್ತೊಂದು ಮೊನೊಗ್ರಾಫ್ ಆಗಿದೆ. ವೆಂಕಾಮಾತ್ಯ, ಪುರಾವೃತ್ತಾಂತ (ಸಂಶೋಧನ ಲೇಖನಗಳ ಸಂಗ್ರಹ) ಎಂಬ ಕೃತಿಗಳು ಇವರ ಮುಖ್ಯ ಕೃತಿಗಳಲ್ಲಿವೆ. ಮೈಸೂರು, ಮೈಸೂರಿನ ಸಂಸ್ಕೃತಿ, ದಸರಾ ಮತ್ತು ಮೈಸೂರಿನ ರಾಜಮನೆತನಗಳ ಕುರಿತಾಗಿಯೂ ಇವರ ಅನೇಕ ವಿದ್ವತ್ಪೂರ್ಣ ಸಂಪಾದನೆಗಳಿವೆ.
ಸ್ವಾಮಿ ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವಿವಿಧ ಪುಸ್ತಕಗಳನ್ನು ಮಾತ್ರವಲ್ಲದೆ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ 200 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
ಸ್ವಾಮಿಯವರ ವಿಶೇಷತೆಗಳಲ್ಲಿ ಐತಿಹಾಸಿಕ ಸಾಕ್ಷ್ಯಚಿತ್ರಗಳ ನಿರ್ದೇಶನ, ಮಲ್ಟಿಮೀಡಿಯಾ ಪ್ರಸ್ತುತಿಗಳ ದೃಶ್ಯೀಕರಣ, ಪುರಾತತ್ವ ಸಂಶೋಧನೆ, ಐತಿಹಾಸಿಕ ಛಾಯಾಚಿತ್ರಗಳ ಸಂಗ್ರಹ, ಛಾಯಾಗ್ರಹಣ ಮುಂತಾದ ಅನೇಕ ಕುಶಲತೆಗಳು ಸೇರಿವೆ.
ಸಾಧಕರೂ, ಸಂಶೋಧಕರೂ ಆದ ಡಾ. ಲ.ನ. ಸ್ವಾಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to Historian Dr. La Na Swamy Sir 🌷🙏🌷
(
ಕಾಮೆಂಟ್‌ಗಳು