ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿ. ಎಸ್. ಸದಾಶಿವ


ಜಿ. ಎಸ್. ಸದಾಶಿವ


ಜಿ. ಎಸ್. ಸದಾಶಿವ ಕನ್ನಡಕ್ಕೆ ವಿಶಿಷ್ಟವೆನಿಸುವ ಕಥೆಗಳನ್ನು ಕೊಟ್ಟವರು. ಪತ್ರಿಕಾಲೋಕದಲ್ಲಿ ಸೇವೆ ಸಲ್ಲಿಸಿದ ಅವರ ಬರಹಗಳ ಶಕ್ತಿ ಕನ್ನಡದ ಅನೇಕ ಪ್ರಶಸ್ತಿ ವಿಜೇತ ಚಿತ್ರಗಳ ಚಿತ್ರಕಥೆ ಮತ್ತು ಸಂಭಾಷಣೆಗಳಲ್ಲಿಯೂ ಕಂಗೊಳಿಸಿತ್ತು. 

ಜಿ.ಎಸ್. ಸದಾಶಿವ 1939ರ ಸೆಪ್ಟೆಂಬರ್ 13ರಂದು ತಮ್ಮ ತಾಯಿಯ ತೌರೂರು ಗಿಂಡೀಮನೆಯಲ್ಲಿ ಜನಿಸಿದರು.  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಭಾರಂಗೀ ಹೋಬಳಿ ಗುಂಡಮನೆ,  ಸದಾಶಿವ ಅವರು ಬೆಳೆದ ಊರು.  ತಂದೆ ಶ್ರೀಪಾದರಾಯರು. ತಾಯಿ ಲಲಿತಮ್ಮ. ಅವರದು ಕೃಷಿಕ ಕುಟುಂಬ. ಈಗ ಗುಂಡೂಮನೆಯೂ ಇಲ್ಲ: ಗಿಂಡೀಮನೆಯೂ ಇಲ್ಲ. ಶರಾವತಿ ನದಿಯ ಆ ದಂಡೆ, ಈ ದಂಡೆ ಊರುಗಳಾದ ಇವು ಶರಾವತಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾದವು. 

ಊರ ಮಗ್ಗುಲ ಹಾಂಸೆ ಎಂಬಲ್ಲಿದ್ದ ಸರ್ಕಾರಿ ಪ್ರಾಥಮಿಕ ಏಕೋಪಾಧ್ಯಾಯ ಶಾಲೆಯಲ್ಲಿ ಸದಾಶಿವ ಅವರ ಪ್ರಾಥಮಿಕ ಶಿಕ್ಷಣ ನಡೆಯಿತು.  ಮುಂದೆ ಸಾಗರ, ಶಿವಮೊಗ್ಗದಲ್ಲಿ ಓದಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಹಾಗೂ ಮಾನಸಗಂಗೋತ್ರಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿದರು. 

ಸದಾಶಿವ ಅವರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು 'ಸಂಯುಕ್ತ ಕರ್ನಾಟಕ' ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಪ್ರವೇಶ ಮಾಡಿದರು. ಅಲ್ಲಿಂದ 'ಪ್ರಜಾವಾಣಿ'ಗೆ ಬಂದು 'ಸುಧಾ' ವಾರಪತ್ರಿಕೆ ಮತ್ತು 'ಮಯೂರ' ಮಾಸಪತ್ರಿಕೆಗಳಲ್ಲೂ ಕಾರ್ಯನಿರ್ವಹಿಸಿದರು. ನಂತರದ ವರ್ಷಗಳಲ್ಲಿ ವೈಯೆನ್ಕೆ ಅವರ ಜೊತೆ 'ಕನ್ನಡ ಪ್ರಭ' ಪತ್ರಿಕೆಯಲ್ಲಿ ಸದಾಶಿವರ ಪತ್ರಿಕೋದ್ಯಮ ಸೇವೆ ಮುಂದುವರಿಯಿತು. 

ಮಗುವಾಗಿ ಬಂದವನು, ನಮ್ ಕೌಲಿ ಕಂಡ್ರಾ, ತುಣುಕುಗಳು, ಸಿಕ್ಕು ಮುಂತಾದವು ಸದಾಶಿವ ಅವರ ಕಥಾ ಸಂಕಲನಗಳು, ಇವೆಲ್ಲ 'ಇದುವರೆಗಿನ ಕಥೆಗಳು' ಎಂದು ಸಮಗ್ರ ಕಥಾಸಂಕಲನವಾಗಿ ಮೂಡಿವೆ. ಪಾರಿವಾಳ ಮತ್ತು ಹಕ್ಕಿ ಹಿಡಿಯುವವನು, ಆಲಿಬಾಬಾ ಮತ್ತು ಇತರ ಕಥೆಗಳು, ಪ್ರಾಚೀನ ಭಾರತದ ಕಥೆಗಳು, ಮೀನುಗಾರ ಮತ್ತು ರಾಜ, ಮೂರ್ಖ ರಾಜಕುಮಾರರು, ಮಯೂರ ಮುಂತಾದವು ಅವರ ಅನುವಾದಿತ ಮಕ್ಕಳ ಕಥೆಗಳ ಸಂಕಲನಗಳು. ಸದಾಶಿವರ ಇತರ ಅನುವಾದಿತ ಕೃತಿಗಳಲ್ಲಿ ಕಥರೀನಾ ಬ್ಲಂ, ಶಿಬಿರದ ಹಾದಿಯಲ್ಲಿ, ತಾಯಿ, ಚೆಲುವು ಮುಂತಾದವು ಸೇರಿವೆ. ಅಂಕಣ ಬರಹಗಳಲ್ಲಿ ಗುರು-ಶಿಷ್ಯ, ಇದೀಗ ನಿಮ್ಮ ಕೈಯಲ್ಲಿ, ಸದಾ ವಾರೆನೋಟ ಸೇರಿವೆ. 

ಜಿ. ಎಸ್. ಸದಾಶಿವ ಅವರು ಆಕ್ರಮಣ, ಮೂರು ದಾರಿಗಳು, ಆಕ್ಸಿಡೆಂಟ್ ಮತ್ತು ಮೌನಿ ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದರು.

ಸದಾಶಿವ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,  ಸಂದೇಶ ಪತ್ರಿಕೋದ್ಯಮ ಪ್ರಶಸ್ತಿ ಮುಂತಾದ ಗೌರವಗಳು ಸಂದಿದ್ದವು. 

ಜಿ. ಎಸ್. ಸದಾಶಿವ ಅವರು 2007ರ ಜನವರಿ 9ರಂದು ಬೆಂಗಳೂರಿನಲ್ಲಿ ನಿಧನರಾದರು.

On the birth anniversary of journalist and writer G. S. Sadashiva 



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ