ಕವಿತಾ ಮುಚ್ಚಂಡಿ
ಕವಿತಾ ಮುಚ್ಚಂಡಿ
ಕವಿತಾ ಮುಚ್ಚಂಡಿ ಅವರು ಬರಹಗಾರ್ತಿಯಾಗಿ, ಸಮಾಜಪರ ಕಾಳಜಿಯ ಕಾನೂನು ತಜ್ಞರಾಗಿ ಜನ ಸಮುದಾಯದಲ್ಲಿ ಆಪ್ತರಾದವರು.
ಸೆಪ್ಟೆಂಬರ್ 1, ಕವಿತಾ ಅವರ ಜನ್ಮದಿನ. ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ತಂದೆ ಗಣೇಶ್ ರಾವ್ ಕಾಟ್ಕರ್ ಆದಾಯ ತೆರಿಗೆ ಸಲಹೆಗಾರರಾಗಿದ್ದು, ವಿದ್ಯೆಗೆ ಬಹಳ ಪ್ರಾಮುಖತೆ ನೀಡುತ್ತಿದ್ದರು. ತಾಯಿ ಚಂದ್ರಾ ಬಾಯಿ ಅವರು 1940ರ ದಶಕದಲ್ಲಿ ಕನ್ನಡ ಬಿ.ಎ. ಆನರ್ಸ್ ಪದವೀಧರರು. ಕುವೆಂಪು ಅವರ ಪ್ರಾಧ್ಯಾಪಕರಾಗಿದ್ದರು. ಕವಿತಾ ಅವರ ತಾಯಿ ಅಪಾರ ಕೃಷ್ಣ ಭಕ್ತೆ. ಅವರು ಭಗವದ್ಗೀತೆಯ ಆಯ್ದ ಶ್ಲೋಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಎರಡು ಪುಸ್ತಕಗಳನ್ನು ಮಗಳಿಗೆ ನೀಡಿದ್ದರು. ಇದು ಕವಿತಾ ಅವರ ತಾಯಿಯ ನೆನಪು ಮತ್ತು ಪ್ರೀತಿ. ಕವಿತಾ ಅವರು ಮದುವೆಗೆ ಮುಂಚೆ ಬಿ.ಎ. ಓದಿ, ಎರಡು ಮಕ್ಕಳ ತಾಯಾದ ನಂತರ ಎಲ್.ಎಲ್.ಬಿ ಓದಿದದರೆನ್ನುವುದು ಅವರಿಗಿರುವ ಶ್ರದ್ಧೆ ಸಾಮರ್ಥ್ಯಗಳ ಬಗ್ಗೆ ಸಾಕಷ್ಟು ಹೇಳುತ್ತದೆ.
ಕವಿತಾ ಮುಚ್ಚಂಡಿ ಅವರು ಕೆಲ ಕಾಲ ತಮ್ಮನ್ನು ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡು, ನಂತರ ಕಾನೂನಿನ ಮರಾಠಿ ಹಾಗು ಕನ್ನಡ ಕಡತಗಳನ್ನು ಇಂಗ್ಲಿಷಿಗೆ ಅನುವಾದ ಮಾಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈಗ ಅವರು ಸ್ವಯಂ ನಿವೃತ್ತರಾಗಿದ್ದು ಸಾಮಾಜಿಕ ಆಸಕ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕವಿತಾ ಮುಚ್ಚಂಡಿ ಅವರು ಚಿಕ್ಕಂದಿನಲ್ಲೇ ಸಾಹಿತ್ಯಾಸಕ್ತರು. ಶಾಲಾ ಕಾಲೇಜಿನ ವಾರ್ಷಿಕ ಪತ್ರಿಕೆಗಳಲ್ಲಿ ಅವರ ಕವನಗಳು, ಪ್ರಬಂಧಗಳು ಅಚ್ಚಾಗಿದ್ದವು. ನಂತರ ವಕೀಲಿ ವೃತ್ತಿಯಲ್ಲಿ ಇವರ ಬರವಣಿಗೆ ಹಿಂದಕ್ಕೆ ಸರಿದಿತ್ತು.
ಮುಖ ಪುಸ್ತಕದ ಕನ್ನಡ ಕಥಾಗುಚ್ಛದಲ್ಲಿ ಕವಿತಾ ಮುಚ್ಚಂಡಿ ಅವರ ಬರಹಗಳಿಗೆ ಬಹಳಷ್ಟು ಮನ್ನಣೆ ದೊರಕಿತು. ಇವರ ಸಣ್ಣಕತೆ, ಕವನ, ಪ್ರಬಂಧ, ಕಾನೂನಿನ ಅರಿವು ಮೂಡಿಸುವ ಲೇಖನಗಳು ಜನರನ್ನು ಅಪಾರವಾಗಿ ಸೆಳೆದಿವೆ. ಕೊರೊನಾ ಕಾಲದಲ್ಲಿ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕೆ ಮಾಡಿದ್ದಾರೆ. ಇವರ ಬರಹಗಳಿಗೆ ಹಲವಾರು ಪ್ರಶಸ್ತಿ, ಗೌರವಗಳೂ ಸಂದಿವೆ.
ಕವಿತಾ ಮುಚ್ಚಂಡಿ ಅವರ ಸಣ್ಣಕತೆಗಳ ಮೊದಲ ಸಂಕಲನ "ಪ್ರಾಂಜಲ" 2023 ವರ್ಷದ ಜನವರಿ ತಿಂಗಳಲ್ಲಿ ಬಿಡುಗಡೆಯಾಯಿತು.
ಕವಿತಾ ಮುಚ್ಚಂಡಿ ಅವರು ರಾಜಾಜಿನಗರದ "ವನಿತಾ ಸೇವಾ ಮಂದಿರ" ಎಂಬ ಮಹಿಳಾ ಸಮಾಜದ ವತಿಯಿಂದ ನಡೆಯುತ್ತಿರುವ ಶಾಲೆಯ ಕಾರ್ಯಾಕಾರಿ ಸಮಿತಿಯ ಸದಸ್ಯರಾಗಿದ್ದು, ಉಚಿತ ಕಾನೂನು ಸಲಹೆ ಮತ್ತು ಶಾಲೆಯ ಇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತ ಬಂದಿದ್ದಾರೆ. ಈ ಶಾಲೆಯ ವೈಶಿಷ್ಟ್ಯವೆಂದರೆ ಸರ್ಕಾರದ ಅನುದಾನವಿಲ್ಲದೆ, ಪೋಷಕರಿಂದಲೂ ದೇಣಗಿ ಸ್ವೀಕರಿಸದೆ, ಕೇವಲ ದಾನಿಗಳಿಂದ ಬಂದ ಹಣದಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವುದು.
ಹೀಗೆ ವಿಭಿನ್ನ ಆಸಕ್ತಿಗಳ ಸದಾಶಯಗಳಿಂದ ಎಲ್ಲರಿಗೂ ಆಪ್ತರಾಗಿರುವ ನಿತ್ಯ ನಗೆಮೊಗದ ಕವಿತಾ ಮುಚ್ಚಂಡಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Kavitha Muchandi🌷🌷🌷
ಕಾಮೆಂಟ್‌ಗಳು