ಅಭಿನವ ವಿದ್ಯಾತೀರ್ಥರು
ಶ್ರೀ ಅಭಿನವ ವಿದ್ಯಾತೀರ್ಥರು
ಶ್ರೀ ಅಭಿನವ ವಿದ್ಯಾತೀರ್ಥರು ಶ್ರೀ ಶಾರದಾ ಪೀಠದ 35ನೇ ಜಗದ್ಗುರುಗಳು.
ಪ್ರಸ್ತುತ ಶಾರದಾ ಪೀಠದ ಶ್ರೀಭಾರತೀ ತೀರ್ಥ ಸ್ವಾಮೀಜಿಗಳ ಗುರುವರ್ಯರಾಗಿದ್ದ ಶ್ರೀ ಅಭಿನವ ವಿದ್ಯಾತೀರ್ಥರು, 1917ನೇ ನವೆಂಬರ್ 13ರ ಪೈಂಗಳ ಸಂವತ್ಸರದ ಆಶ್ವಯಜ ಬಹುಳ ಚತುರ್ದಶಿ (ನರಕ ಚತುರ್ದಶಿಯಂದು) ಸ್ವಾತಿ ನಕ್ಷತ್ರದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿ ಜನಿಸಿದರು. ತಂದೆ ಕೈಪು ರಾಮಶಾಸ್ತ್ರೀ. ತಾಯಿ ವೆಂಕಟ ಲಕ್ಷ್ಮಮ್ಮ. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸ ಶರ್ಮ. ಇವರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಶ್ರೀ ಶಾರದಾ ಪೀಠದಲ್ಲಿ ಬ್ರಹ್ಮೋಪದೇಶ ಪಡೆದು 13ನೇ ವಯಸ್ಸಿನಲ್ಲಿ ಹಿರಿಯ ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಸ್ವಾಮೀಜಿಗಳಿಂದ ಸನ್ಯಾಸ ಸ್ವೀಕಾರ ಮಾಡಿದರು.
ಜಲಸ್ಥಂಬನ ಎಂಬ ಯೋಗ ವಿದ್ಯೆ ಬಲ್ಲವರಾಗಿದ್ದ ವಿದ್ಯಾತೀರ್ಥರು 1960ರಲ್ಲಿ ಚೆನ್ನೈನಲ್ಲಿ ಚಾತುರ್ಮಾಸ್ಯ ವ್ರತ ಆಚರಿಸುವ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿಗಳಾದ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ರಾಷ್ಟ್ರರತ್ನ ಎಂಬ ಬಿರುದು ನೀಡಿದ್ದರು. ಧರ್ಮ ಪ್ರಚಾರಕ್ಕಾಗಿ ಹಲವಾರು ಬಾರಿ ದೇಶದ ವಿವಿಧೆಡೆ ವಿಜಯಯಾತ್ರೆ ನಡೆಸಿ. ಸನಾತನ ಧರ್ಮ ಪ್ರಚಾರ ನಡೆಸಿದ್ದರು. ಶಂಕರಚಾರ್ಯರ ಮೊದಲ ಗುರು ಸುರೇಶ್ವರಚಾರ್ಯರ ದೇವಾಲಯದಲ್ಲಿ ಮೊದಲ ಕುಂಭಾಭಿಷೇಕವನ್ನು 1970ರಲ್ಲಿ ನಡೆಸಿದ್ದರು. 1963ರಲ್ಲಿ ತಮ್ಮ ಗುರುಗಳಾದ ಶ್ರೀ ಚಂದ್ರಶೇಖರಭಾರತೀ ಸ್ವಾಮೀಜಿಗಳ ಅಧಿಷ್ಠಾನ ಮಂದಿರಕ್ಕೆ ಕುಂಭಾಭಿಷೇಕ ನೆರವೇರಿಸಿದ್ದರು. 1954ರಲ್ಲಿ ಪಟ್ಟಾಭಿಷಿಕ್ತರಾದರು. ಅಗಾಧ ಸಂಸ್ಕೃತ ಪಾಂಡಿತ್ಯ ಹೊಂದಿದ್ದ ಇವರು, ವೇದ ಪಾರಂಗತರಾಗಿದ್ದರು. ಇವರ ಕಾಲಾವಧಿಯಲ್ಲಿ ಶ್ರೀಮಠವು ಸಾಕಷ್ಟು ಅಭಿವದ್ದಿ ಹೊಂದಿದ್ದು, ಶ್ರೀಮಠದಿಂದ ಗುರುನಿವಾಸಕ್ಕೆ ತೆರಳುವ ಕಿರು ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಇವರು 1989ರ ಶುಕ್ಲ ಸಂವತ್ಸರದ ಭಾದ್ರಪದದ ಬಹುಳ ಸಪ್ತಮಿಯಂದು ನರಸಿಂಹವನದ ಸಚ್ಚಿದಾನಂದವಿಲಾಸದಲ್ಲಿ ಮುಕ್ತಿ ಹೊಂದಿದರು.
Sri Abhinava Vidyatheertha 🌷🙏🌷
ಕಾಮೆಂಟ್‌ಗಳು