ಸಂಧ್ಯಾ ಹೊನಗುಂಟಿಕರ್
ಸಂಧ್ಯಾ ಹೊನಗುಂಟಿಕರ್
ಸಂಧ್ಯಾ ಹೊನಗುಂಟಿಕರ್ ಅವರು ಕಲ್ಯಾಣ ಕರ್ನಾಟಕದ ಮಹತ್ವದ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ಅಕ್ಟೋಬರ್ 23, ಸಂಧ್ಯಾ ಅವರ ಜನ್ಮದಿನ. ಅವರು ಮೂಲತಃ ಕಲಬುರ್ಗಿಯವರು. ತಂದೆ - ವಾಸುದೇವರಾವ್ ಕುಲಕರ್ಣಿ. ತಾಯಿ ಸರೋಜಾಬಾಯಿ ಕುಲಕರ್ಣಿ. ಬಾಲ್ಯ ಕಳೆದಿದ್ದು ಮತ್ತು ವಿದ್ಯಾಭ್ಯಾಸ ನಡೆದದ್ದು ಯಾದಗಿರಿಯಲ್ಲಿ. ಎಂ.ಎ. (ಕನ್ನಡ) ಪದವಿ ಪಡೆದಿರುವ ಇವರಿಗೆ ಸಾಹಿತ್ಯ, ಸಮಾಜ ಸೇವೆ ಮತ್ತು ಅಭಿನಯ ಮುಂತಾದವು ಆಸಕ್ತಿಯ ಕ್ಷೇತ್ರಗಳು.
ಸಂಧ್ಯಾ ಹೊನಗುಂಟಿಕರ್ ಅವರ ವೈವಿಧ್ಯಮುಖಿ ಬರಹಗಳು ನಾಡಿನ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ನಿರಂತರ ಮೂಡಿಬಂದಿವೆ.
ಅವರ ಪ್ರಕಟಿತ ಕೃತಿಗಳಲ್ಲಿ ಕಡಲ ಒಡಲು ಬಗೆದಷ್ಟು , ಹರಿದ ಹಾಸಿಗೆ ಹಂಬಲ, ಹಾರಲಾಗದ ನೊಣ, ಒಂದೇ ಕ್ಯಾನ್ವಾಸಿನಲ್ಲಿ, ಹೆಸರು ಕಳೆದುಕೊಂಡ ಊರು (ಕಥಾ ಸಂಕಲನ), ಶರಣರ ಹದಿನೈದು ಕತೆಗಳು (ಮಕ್ಕಳ ಕಥಾ ಸಂಕಲನ), ಸೂರ್ಯ ಮುಖಿ (ಪ್ರಬಂಧಗಳು), ಸಖಿ ಶಕ್ತಿ, ಯಶಸ್ವಿ ಬದುಕಿಗೆ ಮೆಟ್ಟಿಲು; ದಾಸ ದರ್ಪಣ ಮುಂತಾದ ವೈವಿಧ್ಯಪೂರ್ಣ ಕೃತಿಗಳಿವೆ.
ಸಂಧ್ಯಾ ಹೊನಗುಂಟಿಕರ್ ಅವರು ರಂಗ ಕಲಾವಿದೆಯಾಗಿ ಬೆಂಗಳೂರು ದೂರದರ್ಶನ ಕೇಂದ್ರದ ನಾಟಕಗಳಾದ ಲಕ್ಕವ್ವನ ಮಂದಿ, ಸ್ತ್ರೀಲೋಕ; ಕಲಬುರ್ಗಿ ದೂರದರ್ಶನ ಕೇಂದ್ರದ ನಾಟಕಗಳಾದ ಗ್ರಹಣ, ಸಹನಾ; ಹಲವಾರು ವೇದಿಕೆಗಳಲ್ಲಿ ಪ್ರದರ್ಶನಗೊಂಡ ಗ್ರಹಣ, ಸಮಗಾರ ಹರಳಯ್ಯ, ಅಂಬಕ್ಕನ ಅಮೇರಿಕಾ ಪ್ರವಾಸ, ಯುದ್ಧಭಾರತ, ಮಗ ಮತ್ತು ಮಾಯಿನ ಗಿಡ ಮುಂತಾದ ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ.
ಸಂಧ್ಯಾ ಹೊನಗುಂಟಿಕರ್ ಅವರು ಬೆಂಗಳೂರು ದೂರದರ್ಶನದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ, ಕಲಬುರ್ಗಿ ಆಕಾಶವಾಣಿಯಲ್ಲಿ 'ಸೂರ್ಯಮುಖಿ' ಜನಪ್ರಿಯ ರೇಡಿಯೋ ಕಾಲಂ, ಕವನವಾಚನ, ಚಿಂತನೆ, ಕತೆಗಳು, ಹರಟೆ ಮತ್ತು ಉಪನ್ಯಾಸಗಳಲ್ಲಿ ಪಾಲ್ಗೊಂಡಿದ್ದಾರೆ. ಮೈಸೂರು ಆಕಾಶವಾಣಿಯಿಂದ ಪ್ರಸಾರಗೊಂಡ 'ಪದ ಸಂಸ್ಕೃತಿ' ಎಂಬ ಕಾರ್ಯಕ್ರಮದ 12 ಸರಣಿಗಳಲ್ಲಿ ಪಾಲ್ಗೊಂಡಿದ್ದಾರೆ. ಸಂಧ್ಯಾಕಾಲ ಪತ್ರಿಕೆಯಲ್ಲಿ 'ಮಾತಿನ ಕಟ್ಟೆ' ಅಂಕಣ ಬರಹಗಳನ್ನು ಮೂಡಿಸಿದ್ದಾರೆ. ರಾಜ್ಯದ ಅನೇಕ ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ಲೇಖನಗಳುಗಳು ಪ್ರಕಟಗೊಂಡಿವೆ.
ಸಂಧ್ಯಾ ಹೊನಗುಂಟಿಕರ್ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಕಥಾ ಸ್ಪರ್ಧೆಗೆ ತೀರ್ಪುಗಾರರಾಗಿ, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ತೀರ್ಪುಗಾರರಾಗಿ, ಬಾಗಲಕೋಟಿಯ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನದ ತೀರ್ಪುಗಾರರಾಗಿ ಹಾಗೂ ಕಲಾದಗಿಯಲ್ಲಿ ಕಥಾ ಕಮ್ಮಟಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಸಂಧ್ಯಾ ಹೊನಗುಂಟಿಕರ್ ಅವರ ಹಾರಲಾಗದ ನೊಣ ಕಥೆಯು ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿ ಎ ತರಗತಿಗೆ, ಕಡಲ ಒಡಲು ಬಗೆದಷ್ಟು ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಗೆ,
ಹಾವು ಮುತ್ತಿನ ಹುಡುಕಾಟ ಬೆಂಗಳೂರು ವಿಶ್ವವಿದ್ಯಾಲಯದ ಬಿಸಿಎ ಪದವಿಗೆ ಪಠ್ಯವಾಗಿದೆ.
ಸಂಧ್ಯಾ ಹೊನಗುಂಟಿಕರ್ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ಧಾರವಾಡದ ವಿದ್ಯಾವರ್ಧಕದ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, “ಸಂಚಯ” ಸಾಂಸ್ಕೃತಿಕ ಪತ್ರಿಕೆಯ ಕಥಾಸರ್ಧೆಯಲ್ಲಿ ಪ್ರಥಮ ಬಹುಮಾನ, ಸಂಚಯ ಕವನ ಸ್ಪರ್ಧೆಯಲ್ಲಿ ಬಹುಮಾನ, ಕರವೇ ನಲ್ನುಡಿ ಪತ್ರಿಕೆಯ ರಾಜ್ಯೋತ್ಸವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ವಿಜಯವಾಣಿ ಪತ್ರಿಕೆಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ’ಖರೇವಂದ್ರ ತಪ್ಪು' ಬಾನುಲಿ ನಾಟಕಕ್ಕೆ ರಾಷ್ಟ್ರಮಟ್ಟದ ಮತ್ತು ರಾಜ್ಯ ಮಟ್ಟದ ಸರ್ಧೆಯಲ್ಲಿ ಪ್ರಥಮ ಬಹುಮಾನ, ರಂಗಮಾಧ್ಯಮ ಗುಲಬರ್ಗಾದಿಂದ ಗೌರವ, ರೋಟರಿಕ್ಲಬ್ ಗುಲಬರ್ಗಾದಿಂದ ’ಮಹಿಳಾ ರತ್ನ’ ಗೌರವ, ಕೆ.ಎಂ.ಎಫ್. ಗುಲಬರ್ಗಾದಿಂದ ಗೌರವ, ಸಾಹಿತ್ಯ ಸಾರಥಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಸಂಧ್ಯಾ ಹೊನಗುಂಟಿಕರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
On the birthday of Sandhya Honaguntikar 🌷🌷🌷
ಕಾಮೆಂಟ್‌ಗಳು