ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೀಣಾ ನಾಯಕ್


 ವೀಣಾ ನಾಯಕ್

ವೀಣಾ ನಾಯಕ್ ಬರಹಗಾರರಾಗಿ, ಅಮೂಲ್ಯ ಪುಸ್ತಕ ಸಂಗ್ರಾಹಕರಾಗಿ ಮತ್ತು ಸಾಹಿತ್ಯ ಪರಿಚಾರಿಕರಾಗಿ ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. 

ವೀಣಾ ನಾಯಕ್ ಅವರು ಮಂಗಳೂರು ಮೂಲದವರು.  ಅವರು ಜನಿಸಿದ್ದು 1951ರ ಅಕ್ಟೋಬರ್ 16 ರಂದು. ಮೂಡಬಿದಿರೆಯ ಜೈನ್ ಸ್ಕೂಲ್‍ನಲ್ಲಿ  ಹೈಸ್ಕೂಲ್ ವಿದ್ಯಾಬ್ಯಾಸ ಪೂರೈಸಿದ ಇವರು ಚಿಕ್ಕಮಗಳೂರಿನ ಐಡಿಎಸ್‍ಜಿ ಸರ್ಕಾರಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಪೂರೈಸಿದರು.

ವೀಣಾ ನಾಯಕ್ ಅವರು ಕಾರ್ಪೋರೇಶನ್ ಬ್ಯಾಂಕ್ನಲ್ಲಿ ಉದ್ಯೋಗಕ್ಕೆ ಸೇರಿ,  ಮೈಸೂರು, ಬೆಂಗಳೂರು, ಮಂಗಳೂರು ಮುಂತಾದೆಡೆಗಳಲ್ಲಿ ಕಾರ್ಯನಿರ್ವಹಿಸಿ ಚೀಫ್ ಮ್ಯಾನೇಜರ್ ಜವಾಬ್ದಾರಿ ನಿರ್ವಹಿಸಿ ನಿವೃತ್ತರಾಗಿ,  ಮಂಗಳೂರಿನಲ್ಲಿ ನೆಲೆಸಿದ್ದಾರೆ.

ವೀಣಾ ನಾಯಕ್ ಅವರು ನಿವೃತ್ತಿಯ ನಂತರವೂ  ಸಂಸ್ಕೃತದ ಕೆಲವು ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿರುವುದು,  ಅವರ ಕಲಿಕಾ ಹಂಬಲಕ್ಕೆ ಸಾಕ್ಷಿಯಾಗಿದೆ.  ಸಂಗೀತದಲ್ಲೂ ಉತ್ತಮ ಅಭಿರುಚಿ ಹೊಂದಿರುವ ಇವರಿಗೆ ಸಂಗೀತವನ್ನು ಕೇಳುವುದು ಇಷ್ಟದ ಹವ್ಯಾಸ. 

ವೀಣಾ ನಾಯಕ್ ಅವರ ಪುಸ್ತಕ ಪ್ರೀತಿ ಅಪಾರ. ತಮ್ಮ ಮನೆಯಲ್ಲಿಯೇ ದೊಡ್ಡ ಗ್ರಂಥಾಲಯದಂತೆ ಅಪಾರ ಕನ್ನಡ ಹಾಗೂ ಇಂಗ್ಲೀಷ್ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ.‍ ಮುಖ್ಯವಾಗಿ ಅವುಗಳಲ್ಲಿ ಬಹುತೇಕ  ಪುಸ್ತಕಗಳನ್ನು ಓದಿದ್ದಾರೆ.  ಪುಸ್ತಕಗಳನ್ನು ಆಕರ್ಷಕವಾದ ವಿಶಾಲ ದೃಷ್ಟಿಯಿಂದ ವಿಮರ್ಶಿಸುವ ಇವರು, ಅದನ್ನೇ ಬರೆದರೆ ಹತ್ತಾರು ದೊಡ್ಡ ಸಂಪುಟಗಳಾದೀತು ಎಂಬುದು ಅವರನ್ನು ಬಲ್ಲವರ ಆಪ್ತ ಮಾತು. ಇವರ ಸಂಗ್ರಹದಲ್ಲಿ ಕನ್ನಡದ ಹಿಂದಿನ ಮತ್ತು ಇಂದಿನ ತಲೆಮಾರಿನ  ಲೇಖಕರ ಒಂದೆರಡಾದರೂ ಪುಸ್ತಕಗಳು ಇದ್ದೇ ಇವೆ.

ವೀಣಾ ನಾಯಕ್ ಅವರು ಸಾಹಿತ್ಯ ಪರಿಚಾರಿಕೆಯ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿದ್ದಾರೆ. ಇವರು "ಪುಸ್ತಕ ಅವಲೋಕನ" ಎನ್ನುವ ಫೇಸ್ ಬುಕ್ ಬಳಗದಲ್ಲಿ ಎರಡೂವರೆ ವರ್ಷಗಳ ಕಾಲ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹಲವು ಅಭಿಯಾನಗಳ ಮೂಲಕ ಅಲ್ಲಿನ ಸದಸ್ಯರಿಗೆ ಬೇರೆ ಬೇರೆ ಲೇಖಕರ/ವಿಷಯಗಳ ಬಗ್ಗೆ ಬರೆಯಲು ಕೊಟ್ಟು, ಬಹುಮಾನದ ರೂಪದಲ್ಲಿ ಎಲ್ಲರಿಗೂ ಪುಸ್ತಕಗಳನ್ನು ಹಂಚಿದ್ದರು.  ಈಗಲೂ ಸಹ ಉತ್ಸಾಹಿಗಳಿಗೆ ಯಾವುದಾದರೂ ಚಟುವಟಿಕೆಯನ್ನು ನೀಡಿ, ಭಾಗವಹಿಸಿದ ಸದಸ್ಯರ ಮನೆ ಮನೆಗೆ  ತಮ್ಮ ಸ್ವಂತ ಖರ್ಚಿನಲ್ಲಿ, ತಮ್ಮ ಪತಿಯವರ ಜೊತೆಗೂಡಿ ಶಿಸ್ತಾಗಿ ಪ್ಯಾಕ್ ಮಾಡಿ ಪುಸ್ತಕಗಳನ್ನು ಕಳುಹಿಸುತ್ತ ಬಂದಿದ್ದಾರೆ.

ಹೀಗೆ ಇವರ ಸಾಹಿತ್ಯ ಸೇವೆಯನ್ನು ಆಪ್ತವಾಗಿ ನೆನೆಯುವ ಅವರ ಅಭಿಮಾನಿಗಳು ಅವರನ್ನು "ಪುಸ್ತಕಮಾತೆ" ಎಂದೇ  ಸಂಬೋಧಿಸುವುದಿದೆ.

ಬಹುಮುಖಿ ಸಾಹಿತ್ಯ ಸೇವೆ ಮಾಡುತ್ತಿರುವ ಹಿರಿಯರಾದ ವೀಣಾ ನಾಯಕ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ಮಾಹಿತಿ ಆಧಾರ ಮತ್ತು ಕೃತಜ್ಞತೆ: Vasantha Ganesh🌷🙏🌷


Happy birthday Veena Nayak 🌷🌷🌷




(

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ