ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ
ಮಹಾನ್ ಸಂಗೀತ ತಜ್ಞ, ಸಂಗೀತ ವಿದ್ವಾಂಸರಾದ ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ ನಿಧನರಾಗಿದ್ದಾರೆ.
ವಿದ್ವಾನ್ ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ ಅವರು ಭಾರತೀಯ ಶಾಸ್ತ್ರೀಯ ಸಂಗೀತದ ಪಿಟೀಲು ವಾದಕರಾಗಿ, ಸಂಗೀತತಜ್ಞರಾಗಿ, ಸಂಗೀತಗಾರರಾಗಿ ಮತ್ತು ಹಾಡುಗಾರರಾಗಿ ಪ್ರಸಿದ್ಧರಾಗಿದ್ದವರು.
ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ ಅವರು 1938ರ ಜೂನ್ 15ರಂದು ಜನಿಸಿದರು. ಅವರ ಊರು ಹೈದರಾಬಾದು.
ಕರ್ಣಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರಾಗಿದ್ದ ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ ಅವರು ನಾಲ್ಕು ದಶಕಗಳಿಗೂ ಅಧಿಕ ಕಾಲ ತಾಳದಶ ಪ್ರಾಣಗಳಲ್ಲಿನ ಪ್ರಮುಖ ಅಂಶವಾದ ತಾಳ ಪ್ರಸ್ತಾರದ ಮೇಲೆ ಸಂಶೋಧನೆ ನಡೆಸಿದ್ದರು. ಅವರು, ಸಂಗೀತ ಕಲಾನಿಧಿ ಎಂ.ಎಸ್. ಗೋಪಾಲಕೃಷ್ಣನ್ ಅವರ ಅನುಯಾಯಿಯಾಗಿದ್ದರು.
ಆಕಾಶವಾಣಿಯಲ್ಲಿ ಟಾಪ್ ಗ್ರೇಡ್ ಪಿಟೀಲು ವಾದಕರಾಗಿದ್ದ ಮಲ್ಲಿಕಾರ್ಜುನ ಶರ್ಮಾ ಅವರು, ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದರು. ದೇಶದ ಅನೇಕ ಗಣ್ಯ ಕಲಾವಿದರಿಗೆ ಸಹವಾದನ ನೀಡಿದ್ದರಲ್ಲದೆ, ಪ್ರಧಾನ ಪಿಟೀಲು ವಾದನ ಕಾರ್ಯಕ್ರಮಗಳನ್ನೂ ನೀಡಿದ್ದರು.
ಮಲ್ಲಿಕಾರ್ಜುನ ಶರ್ಮಾ ಅವರು ನೇಡುನೂರಿ ಕೃಷ್ಣಮೂರ್ತಿ ಅವರೊಂದಿಗೆ ಯುಕೆ, ಅಮೆರಿಕ ಮತ್ತು ಕೆನಡಾಕ್ಕೆ ಸಂಗೀತ ಕಾರ್ಯಕ್ರಮ ಪ್ರವಾಸ ನೀಡಿದ್ದರು. ಆಂಧ್ರ ಪ್ರದೇಶದ ವಿವಿಧ ಸರ್ಕಾರಿ ಸಂಗೀತ ಮತ್ತು ನೃತ್ಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಾಂಶುಪಾಲರಾಗಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ 1996 ರಲ್ಲಿ ನಿವೃತ್ತಿ ಹೊಂದಿದ್ದರು.
1985 ರಲ್ಲಿ ಮಲ್ಲಿಕಾರ್ಜುನ ಶರ್ಮಾ ಅವರ ತಾಳಪ್ರಸ್ತಾರ ರತ್ನಾಕರಮ್ (ತೆಲುಗು) ಪುಸ್ತಕಕ್ಕೆ ತೆಲುಗು ವಿಶ್ವವಿದ್ಯಾಲಯದಿಂದ "ಉತ್ತಮ ಲಲಿತಕಲೆಗಳ ಪುಸ್ತಕ" ಪ್ರಶಸ್ತಿ ಸಂದಿತ್ತು. 2010 ರಲ್ಲಿ ಚೆನ್ನೈನ ಸಂಗೀತ ಅಕಾಡೆಮಿಯಿಂದ ಟಿಟಿಕೆ ಪ್ರಶಸ್ತಿ ಸಂದಿತ್ತು. ಅವರು ಭಾರತೀಯ ಶಾಸ್ತ್ರೀಯ ಸಂಗೀತದ ಕುರಿತು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದರು. ಗುರುವಾಗಿ ಅನೇಕ ಶಿಷ್ಯರನ್ನು ಪೋಷಿಸಿದ್ದರು. ಯೂಟ್ಯೂಬ್ನಲ್ಲಿಯೂ ಸಂಗೀತ ಪ್ರೇರಕ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಮೂಡಿಸಿದ್ದರು.
ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ ಅವರು 2024ರ ಅಕ್ಟೋಬರ್ 20ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮನ 🌷🙏🌷
ಕೊಡುಗೆ: Dr. Ambika Shastry
Respects to departed Music scholar Vidwan Akella Mallikarjuna Sharma M S Akella 🌷🙏🌷
ಕಾಮೆಂಟ್‌ಗಳು