ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿಡ್ನಿ ಶ್ರೀನಿವಾಸ್


ಸಿಡ್ನಿ ಶ್ರೀನಿವಾಸ್
 

ಸಿಡ್ನಿ ಶ್ರೀನಿವಾಸ್ ಎಂದು ಖ್ಯಾತರಾದ ಕರ್ಕೇನಹಳ್ಳಿ ಶ್ರೀನಿವಾಸ್ ಅವರು ವಿಜ್ಞಾನಿಗಳಾಗಿ, ಕನ್ನಡ ಮತ್ತು ಇಂಗ್ಲಿಷ್ ಬರಹಗಾರರಾಗಿ, ಸಿಡ್ನಿ ಕನ್ನಡ ವಾಣಿ ಕಾರ್ಯಕ್ರಮದ ಸಹ ಪ್ರಾಯೋಜಕರಾಗಿ ಅಮೂಲ್ಯ ಸೇವೆ ಸಲ್ಲಿಸುತ್ತ ಬಂದಿದ್ದಾರೆ.

ಶ್ರೀನಿವಾಸ್ ಅವರು 1946ರ ನವೆಂಬರ್ 18ರಂದು ಜನಿಸಿದರು.  ಬೆಂಗಳೂರು ಹೈಸ್ಕೂಲಿನಲ್ಲಿ ಓದಿದ ಇವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಇ., ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್'ನಲ್ಲಿ ಎಂ. ಇ ಮತ್ತು ಪಿಎಚ್.ಡಿ ಸಾಧನೆ ಮಾಡಿದರು. 

 ಬೆಂಗಳೂರಿನ ಎನ್.ಎ.ಎಲ್. ಸಂಸ್ಥೆಯಲ್ಲಿ 1977-81 ಅವಧಿಯಲ್ಲಿ ಕಾರ್ಯನಿರ್ವಹಿಸಿದ ಶ್ರೀನಿವಾಸ್ ಅವರು  ಜರ್ಮನಿಯ ಕಾರ್ಲ್ ಶ್ರೂಹೆ ಮತ್ತು ಸಿಡ್ನಿ ವಿಶ್ವವಿದ್ಯಾಲಯಗಳಲ್ಲಿ 1981ರಿಂದ 2012ರ ವರ್ಷದ ವರೆಗೆ ಕಾರ್ಯನಿರ್ವಹಿಸಿ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ಏರೋಸ್ಪೇಸ್, ಮೆಕಾನಿಕಲ್, ಮೆಕಟ್ರಾನಿಕ್ಸ್ ವಿಭಾಗಗಳ 'ಡೆಪ್ಯೂಟಿ ಹೆಡ್' ಸ್ಥಾನವನ್ನಲಂಕರಿಸಿದ್ದರು. ಅವರು ಜಪಾನ್, ಅಮೆರಿಕಾ, ಫಿನ್ಲ್ಯಾಂಡುಗಳಲ್ಲಿನ ಪ್ರಸಿದ್ಧ ವಿಶ್ವವಿದ್ಯಾಲಯಗಳಿಗೆ ಸಂದರ್ಶನ ಪ್ರಾಧ್ಯಾಪಕರಾಗಿದ್ದಾರೆ.

ಶ್ರೀನಿವಾಸ್ ಅವರಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತಿಗಳ ಒಡನಾಟ ಲಭ್ಯವಾಗಿ ಬರೆಯುವ ಹಂಬಲ ಮೊಳೆತಿತ್ತು. ಇವರ ವಿಜ್ಞಾನ ಲೇಖನಗಳು  “ಪ್ರಜಾಮತ”, “ಪ್ರಜಾವಾಣಿ”, “ಸುಧಾ”, “ಜನಪ್ರಿಯ ವಿಜ್ಞಾನ”ಗಳಲ್ಲಿ ಆಗಿನ ದಿನಗಳಿಂದಲೂ ಪ್ರಕಟಗೊಂಡಿವೆ.  “ಮಯೂರ” , “ಕೆಂಡ ಸಂಪಿಗೆ”, ದಟ್ಸ್ ಕನ್ನಡ.ಕಾಮ್ ಮುಂತಾದ ಪತ್ರಿಕೆಗಳಲ್ಲಿ ಇವರ ಹಲವಾರು ಸಣ್ಣಕತೆಗಳು  ಪ್ರಕಟಗೊಂಡಿವೆ. ಇತ್ತೀಚೆಗೆ ಸುಧಾ ವಾರಪತ್ರಿಕೆಯಲ್ಲಿ ಆರು ವಾರಗಳ ಕಾಲ ಮೂಡಿ ಬಂದ 'ವಿಜ್ಞಾನ ತೀರ್ಥಯಾತ್ರೆ' ಮಾಲಿಕೆ ಅಪಾರ ಮೆಚ್ಚುಗೆ ಗಳಿಸಿತು.‍

ಸಿಡ್ನಿ ಶ್ರೀನಿವಾಸ್ ಅವರು Fluid Mechanics, Propulsion,, Computational Fluid Dynamics, Optimization, Bio-medical engineering ಸಂಶೋಧನೆ, (ಇಂದಿಗೂ ಇದರಲ್ಲಿ ನಿರತರು), ಸ್ಟೆಂಟ್ (Stents ) ವಿನ್ಯಾಸ, ರಕ್ತನಾಳದಲ್ಲಿ ರಕ್ತ ಪರಿಚಲನೆ ಇತ್ಯಾದಿ ವಿಚಾರಗಳಲ್ಲಿ ಪರಿಣಿತರು. ಶ್ರೀನಿವಾಸ್ ಅವರು 150ಕ್ಕೂ ಹೆಚ್ಚು ವಿಜ್ಞಾನ ಲೇಖನಗಳ ಪ್ರಕಟಣೆ ಮತ್ತು ಪ್ರಸ್ತುತಿ ಮಾಡಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ಮಾಡುತ್ತಾ ಬಂದಿದ್ದು, ಪಠ್ಯ ಪುಸ್ತಕಗಳ ಪ್ರಕಟಣೆ ಸಹಾ ಮಾಡಿದ್ದಾರೆ. ಅನೇಕ ಅಧಿವೇಶನಗಳಲ್ಲಿ ಅತಿಥಿ ಉಪನ್ಯಾಸಗಳನ್ನು ನೀಡಿದ್ದಾರೆ. ಇವರು 2002ರ International Conference on Computational Fluid Dynamics, ICCFD2, Sydney, Australia ಸಮಾವೇಶದ  ಅಧ್ಯಕ್ಷತೆ ವಹಿಸಿದ್ದರು.

ಸಿಡ್ನಿ ಶ್ರೀನಿವಾಸ್ ಅವರು ಕನ್ನಡದಲ್ಲಿ ಶ್ರೀನಿವಾಸ ರಾಮಾನುಜನ್, ಐಸಾಕ್ ನ್ಯೂಟನ್, ಆಲ್ಬರ್ಟ್ ಐನ್‍ಸ್ಟೈನ್, ಗೆಲಿಲಿಯೋ, ಅಲನ್ ಟ್ಯೂರಿಂಗ್, ಆಲ್ಫ್ರೆಡ್ ನೋಬೆಲ್, ಮೇರಿ ಕ್ಯೂರಿ, ಚಾರ್ಲ್ಸ್ ಡಾರ್ವಿನ್ ಮೊದಲಾದವರ ಕಿರು ಜೀವನ ಚರಿತ್ರೆಗಳನ್ನು ಮೂಡಿಸಿದ್ದಾರೆ. ಇಂಗ್ಲಿಷಿನಲ್ಲಿಯೂ ಶ್ರೀನಿವಾಸ ರಾಮಾನುಜನ್, ನ್ಯೂಟನ್, ಐನ್‍ಸ್ಟೈನ್, ಚಾರ್ಲ್ಸ್ ಡಾರ್ವಿನ್ ಅವರ ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ಆಸ್ಟ್ರೇಲಿಯಾದ ಜಾನಪದ ಕತೆಗಳು ಮತ್ತು ಅಳಿಯಲಾರದ ನೆನಹು ಇವರ ಕೃತಿಗಳಲ್ಲಿ ಸೇರಿವೆ.

 ಶ್ರೀನಿವಾಸ್ ಅವರು 2RRR ಕ್ಷೇತ್ರದಿಂದ ಪ್ರಸಾರವಾಗುವ ಸಿಡ್ನಿ ಕನ್ನಡ ವಾಣಿ ಕಾರ್ಯಕ್ರಮದ ಸಹ ಪ್ರಾಯೋಜಕರು. ಇವರು ಸಿಡ್ನಿಯ  (ಭಾರತೀಯ) ಇಂಗ್ಲಿಷ್ ಪತ್ರಿಕೆಗಳಲ್ಲಿ ಸಂಗೀತ ಮತ್ತು ನೃತ್ಯ ಪ್ರದರ್ಶನಗಳ  ವಿಮರ್ಶೆ ಸಹಾ ಮೂಡಿಸಿದ್ದಾರೆ. ದೂರದರ್ಶನ ಮತ್ತು ಪತ್ರಿಕೆಗಳಿಗೆ, ವಂದನಾ ಶಿವ, ಟಾಮ್ ಕೋವನ್ (ಸಂಸ್ಕಾರ ಚಿತ್ರದ ಛಾಯಾಗ್ರಾಹಕರು),  ಹೇಮ ಮಾಲಿನಿ, ಜಾಕಿರ್ ಹುಸೇನ್, ಬಾಂಬೆ ಜಯಶ್ರೀ, ಧನಂಜಯ ದಂಪತಿಗಳು, ಟಿ. ಎಸ್. ನಾಗಾಭರಣ ಮುಂತಾದವರೊಡನೆ ಸಂದರ್ಶನ ಮಾಡಿದ್ದಾರೆ.  

ಆತ್ಮೀಯರಾದ ಸಿಡ್ನಿ ಶ್ರೀನಿವಾಸ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Srinivas Karkenahalli Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ