ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನಸೂಯ ಜಹಗೀರದಾರ

ಅನಸೂಯ ಜಹಗೀರದಾರ

ಶಿಕ್ಷಕಿಯಾಗಿರುವ ಅನಸೂಯ ಜಹಗೀರದಾರ ಅವರು ಸಂಗೀತ,  ಸಾಹಿತ್ಯ ಮತ್ತು ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ.

ಅನಸೂಯ ಜಹಗೀರದಾರ ಅವರ ಜನ್ಮದಿನ ಡಿಸೆಂಬರ್ 19. ಕೊಪ್ಪಳದವರಾದ ಅನಸೂಯ ಜಹಗೀರದಾರ ಅವರು ಕನ್ನಡ ಮತ್ತು ಸಮಾಜಶಾಸ್ತ್ರಗಳಲ್ಲಿ ಎಂ.ಎ., ಹಾಗೂ ಬಿ.ಎಡ್ ಪದವಿ ಪಡೆದು ಕೊಪ್ಪಳ ಜಿಲ್ಲೆಯ, ಯಲಬುರ್ಗಾ ತಾಲ್ಲೂಕಿನ ಬೇವೂರು ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ.

ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತರಾದ ಅನಸೂಯ ಜಹಗೀರದಾರ ಹಿಂದೂಸ್ಥಾನಿ ಸಂಗೀತದಲ್ಲಿ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಸಾಧಿಸಿದ್ದಾರೆ. ಅವರು ಅನೇಕ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ಬಂದಿದ್ದು ಆಕಾಶವಾಣಿಯಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ಸ್ವಯಂ ಗಝಲ್ ರಚಿಸಿ ಹಾಡುವುದೂ ಅವರ ವಿಶೇಷ ಅಕ್ಕರೆಗಳಲ್ಲೊಂದು.

ಸಾಹಿತ್ಯ ಕೃಷಿಯಲ್ಲಿ ಅನಸೂಯ ಜಹಗೀರದಾರ ಅವರ ವೈವಿಧ್ಯಮುಖಿ ಬರಹಗಳು ಕವನ, ಕಥೆ, ಖಂಡಕಾವ್ಯ, ಲೇಖನ, ಪ್ರಬಂಧ, ಶಿಶುಗೀತೆ, ನಾಟಕಗಳು, ಹನಿಗವನ, ಗಝಲ್, ಶಾಯರಿ, ಹಾಯಿಕು ರೂಪಗಳಲ್ಲಿ ಮೂಡಿದ್ದು ಎಲ್ಲ ಪ್ರಸಿದ್ಧ ನಿಯತಕಾಲಿಕಗಳು ಮತ್ತು ಸಾರ್ವಜನಿಕ ಜಾಲತಾಣಗಳಲ್ಲಿ ನಿರಂತರವಾಗಿ ಮೂಡಿಬರುತ್ತಿವೆ.

ಅನಸೂಯ ಅವರ ಪ್ರಕಟಿತ ಕೃತಿಗಳಲ್ಲಿ 'ಒಡಲ ಬೆಂಕಿ', 'ಅಸ್ಥಿಮಜ್ಜೆ' ಕವನ ಸಂಕಲನಗಳು, ‘ಆತ್ಮಾನುಸಂಧಾನ', ‘ನಿನ್ನೊಲುಮೆ ಇರದಿರೆ' ಗಝಲ್ ಸಂಕಲನಗಳು, 'ನೀಹಾರಿಕೆ‌' ಹನಿಗವನ ಸಂಕಲನ, 'ಪರಿವರ್ತನೆ' ಕಥಾ ಸಂಕಲನ  ಮುಂತಾದವು  ಸೇರಿವೆ.

ಅನಸೂಯ ಜಹಗೀರದಾರ ಅವರ 'ಒಡಲಬೆಂಕಿ' ಕೃತಿಗೆ ಡಾ. ಡಿ. ಎಸ್. ಕರ್ಕಿ ರಾಜ್ಯಕಾವ್ಯ ಪುರಸ್ಕಾರ ಪ್ರಶಸ್ತಿ,  'ಆತ್ಮಾನುಸಂಧಾನ' ಕೃತಿಗೆ ಉಮಾಶಂಕರ ಪ್ರತಿಷ್ಠಾನ ಪ್ರೋತ್ಸಾಹಕ ಕಾವ್ಯ ಪ್ರಶಸ್ತಿ, 'ಪರಿವರ್ತನೆ' ಕೃತಿಗೆ ಹಾಸನದ ಪದ್ಮಾವತಿ ವೆಂಕಟೇಶ ದತ್ತಿ ಕಥಾ ಮಾಣಿಕ್ಯ ಪ್ರಶಸ್ತಿ, ಮೈಸೂರಿನ 'ಅಭಿರುಚಿ' ಕಥಾಪ್ರಶಸ್ತಿ ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,  ವಿಶೇಷ  ಶಿಕ್ಷಕಿ ರಾಜ್ಯಪ್ರಶಸ್ತಿ ( ಕರ್ನಾಟಕ ಸರಕಾರ 2007), ರಾಜ್ಯ ಕಾವ್ಯಶ್ರೀ ಪ್ರಶಸ್ತಿ ( ಮಂಡ್ಯ ಜಿಲ್ಲೆ ಕಸ್ತೂರಿ ಸಿರಿಗನ್ನಡ ವೇದಿಕೆ ), ಶಿವಮೊಗ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಘಟಕದ ಕುವೆಂಪು ಪುರಸ್ಕಾರ, ಗಜಲ್ ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಪ್ಪಳದ ನಿಂಗೋಜಿ  ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಗೌರವ, ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅವರಿಂದ ಕುವೆಂಪು ರಾಜ್ಯ ಕಾವ್ಯ ಪುರಸ್ಕಾರ, ಕೊಪ್ಪಳ ಜಿಲ್ಲಾ ಮಹಿಳಾ ಒಕ್ಕೂಟ ಪುರಸ್ಕಾರ, ಕೊಪ್ಪಳ ಜಿಲ್ಲಾ ಹೋರಾಟ ರಜತ ಮಹೋತ್ಸವ ಪುರಸ್ಕಾರ, ಯಲ್ಲಾಪುರ ಜಿಲ್ಲೆ ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕರ್ನಾಟಕ ಶಿರೋಮಣಿ ಪ್ರಶಸ್ತಿ, ಸಂಯುಕ್ತ ಕರ್ನಾಟಕ ಯುಗಾದಿ ಕಾವ್ಯ ಸ್ಪರ್ದೆ ಮೆಚ್ಚುಗೆ ಬಹುಮಾನ, ಸೇರಿದಂತೆ  ಹಲವಾರು ಸಂಘ ಸಂಸ್ಥೆಗಳಗ ಗೌರವಗಳು ಸಂದಿವೆ. ಇವರ ಒಂದು ಕವಿತೆ ವಿಜಯನಗರ ವಿಶ್ವವಿದ್ಯಾಲಯ  ಬಳ್ಳಾರಿಯ ಬಿಎಸ್ ಸಿ,ಬಿಸಿಎ, ಜಿಎಂಟಿ  ಪದವಿ ವಿದ್ಯಾರ್ಥಿಗಳಿಗೆ ನಾಲ್ಕನೆಯ ಸೆಮಿಸ್ಟರ್ ಬೇಸಿಕ್ ಕನ್ನಡ ಪಠ್ಯವಾಗಿದೆ. ಹೊರ ನೆರೆಯ ರಾಜ್ಯ ಮಹಾರಾಷ್ಟ್ರ ವಿವಿಗಳಿಗೆ  ಇವರ ಗಜಲ್ಗಳು ಪಠ್ಯವಾಗಿವೆ. ಇವರ ಕವಿತೆಗಳು ತೆಲುಗು ಭಾಷೆಗೆ ಅನುವಾದಗೊಂಡು ತೆಲುಗು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಸಾಹಿತ್ಯ ಸಮ್ಮೇಳನ, ಪ್ರಸಿದ್ಧ ಗೋಷ್ಠಿಗಳು, ವೇದಿಕೆಗಳು ಮತ್ತು ಆಕಾಶವಾಣಿಯಲ್ಲಿ ಕಾವ್ಯವಾಚನ ಮಾಡಿದ್ದಾರೆ.

ಅನಸೂಯ ಜಹಗೀರದಾರ ಅವರು ಹಲವಾರು ಕನ್ನಡ ಪರ ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ,  ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಇವರು ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ  ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ.  ಕ ರಾ ಸ ನೌ ಸಂಘ ಜಿಲ್ಲಾ ಘಟಕ ಕೊಪ್ಪಳದಲ್ಲಿ ಹಲವಾರು ವರ್ಷದಿಂದ ನಾಮನಿರ್ದೇಶಿತ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿದ್ದಾರೆ. ತಿರುಳ್ಗನ್ನಡ ಸಹಕಾರಿ ಪತ್ತಿನ ಸಂಘ ಕೊಪ್ಪಳ ಮಹಿಳಾ ನಿರ್ದೇಶಕರೂ, ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದಾರೆ. ಕೊಪ್ಪಳ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷರಾಗಿಯೂ ಇವರ ಸೇವೆ ಸಂದಿದೆ.  ಅನೇಕ ಅಖಿಲ ಭಾರತ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮ್ಮೇಳನಗಳ ಆಯೋಜನೆಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದಾರೆ.

ಅನಸೂಯ ಜಹಗೀರದಾರ ಅವರಿಗೆ ಶುಭಹಾರೈಕೆಗಳು.

Anasuya Shastri🌷🌷🌷










ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ