ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬನದ ಹುಣ್ಣಿಮೆ


 ಬನದ ಹುಣ್ಣಿಮೆ

ಒಂದು ವರ್ಷದಲ್ಲಿ 12 ಹುಣ್ಣಿಮೆಗಳು ಬರುತ್ತದೆ. ಒಂದೊಂದು ಹುಣ್ಣಿಮೆಗೂ ಒಂದೊಂದು ವಿಶೇಷತೆಯಿದೆ. ಅದರಲ್ಲಿ ಪುಷ್ಯ ಮಾಸದ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎನ್ನುವರು. ಸಾಮಾನ್ಯವಾಗಿ ಇದು ಆಂಗ್ಲ ವರ್ಷದ ಜನವರಿಯಲ್ಲಿ ಬರುತ್ತದೆ. ಆದ್ದರಿಂದ ವರ್ಷದ ಮೊದಲ ಹುಣ್ಣಿಮೆ ಎಂದೂ ಹೇಳಬಹುದು.

ಅಗಸ್ತ್ಯ ಋಷಿಗಳು ಬನಶಂಕರಿ ದೇವಿಯನ್ನು ಬನಸಿರಿದೇವಿ ಎಂದು ಕರೆದಿರುವರು. ಕಾರಣ 'ಬನ' ಎಂದರೆ ಅರಣ್ಯ. 'ಸಿರಿ' ಎಂದರೆ ಸಂಪತ್ತು ಎಂದು. ಬನದ ಹುಣ್ಣಿಮೆಯ ನವರಾತ್ರಿಯು ಪ್ರತಿವರ್ಷ ಪುಷ್ಯ ಮಾಸದ ಶುಕ್ಲ ಪಕ್ಷದ ಅಷ್ಟಮಿ ದಿನದಿಂದ ಪ್ರಾರಂಭ ಆಗುವುದು. ಆ ದಿನದಂದು ಅಷ್ಟಭುಜಗಳಾದ ಅಷ್ಟ ಸಿದ್ಧಿಯನ್ನು  ಕೊಡುವ ಸರ್ವಮಂಗಳಾ ದೇವಿಯನ್ನು ಪೂಜಿಸುತ್ತಾರೆ.

ನವಮಿ ದಿನದಂದು ಒಂಬತ್ತು ಕೋಟಿ ಸಖಿಯರಿಂದೊಡಗೂಡಿದ ನವದುರ್ಗೆ ದೇವಿಯನ್ನು ಪೂಜಿಸುತ್ತಾರೆ. ದಶಮಿಯಂದು ದಶ ದಿಕ್ಪಾಲಕ ಕಿರೀಟಗಳಿಂದ ಪೂಜಿತಳಾದ ಪಾದಪದ್ಮಗಳುಳ್ಳ ರಾವಣನನ್ನು ವಧೆ  ಮಾಡಲು ವಿಧ್ಯುಕ್ತನಾದ ಶ್ರೀರಾಮನಿಗೆ ಸಂತೋಷ ಕೊಟ್ಟ ದೇವಿಯನ್ನು ಪೂಜಿಸುತ್ತಾರೆ.  ಏಕಾದಶಿ ದಿನದಂದು ಏಕಾದಶ ರುದ್ರರಿಂದ ಪೂಜಿತಳಾದ ಪರಮೇಶ್ವರಿಯನ್ನು ಪೂಜಿಸುತ್ತಾರೆ. ದ್ವಾದಶಿಯಂದು ಆದಿತ್ಯ ಮಂಡಲ ಸ್ಥಳಾದ ಜಗನ್ಮಾತೆಯನ್ನು ಪೂಜಿಸುತ್ತಾರೆ. ತ್ರಯೋದಶಿಯಂದು ಲೋಕದ ದುಃಖ ನಿವಾರಣೆ ಮಾಡುವ ಜಗದಂಬೆಯನ್ನು ಪೂಜಿಸುತ್ತಾರೆ.

ಚತುರ್ದಶಿ ದಿನದಂದು ಸಿದ್ಧಿ ಕೂಡುವ ಪ್ರಣವ ಸ್ವರೂಪಿಯನ್ನು ಪೂಜಿಸುತ್ತಾರೆ ಮತ್ತು 108 ತರಕಾರಿಗಳ ಪಲ್ಯವನ್ನು ಮಾಡಿ ಶಾಕಂಬರಿಗೆ ನೈವೇದ್ಯ ಮಾಡುತ್ತಾರೆ.  ಕೊನೆಯ ದಿನವೇ ಬನದ ಹುಣ್ಣಿಮೆ ಅಂದು ಪೂರ್ಣಾನಂದ ಪ್ರದಾಯಕಳಾದ ಮತ್ತು ಪೂರ್ಣಾನಂದ ಸ್ವರೂಪಳಾದ ಬನಶಂಕರಿ ದೇವಿಯನ್ನು ಪೂಜಿಸುತ್ತಾರೆ. ಅಂದು ಬನಶಂಕರಿ ದೇವಿಯ ರಥೋತ್ಸವ ನಡೆಯುವುದು.

ಅಂದು ಬಾದಾಮಿ ಬನಶಂಕರಿ ದೇವಾಲಯ ಮತ್ತು ಕರ್ನಾಟಕದ ಎಲ್ಲಾ ಬನಶಂಕರಿ ದೇವಾಲಯಗಳಲ್ಲಿ ಜಾತಿ, ಮತ ಭೇಧವಿಲ್ಲದೆ ಎಲ್ಲಾ ಭಕ್ತರು ಸೇರಿ ಬನಶಂಕರಿ ರಥ ಎಳೆಯುವರು. ಆ ಸಮಯದಲ್ಲಿ ಭಕ್ತರು  ಸೇರಿ ಬನಶಂಕರಿ  ರಥ ಎಳೆಯುವರು.  ನಿನಗೆ ಸರಿಸಾಟಿ ಎಂದೂ ಆಗಲಾರೆ, ನಾನು  ನಿನ್ನ ಪಾದದಡಿಯಲ್ಲಿಯೇ ಇರತಕ್ಕವನು ಎಂದು ಘೋಷಣೆ ಕೂಗುತ್ತಾರೆ.

ಬನಶಂಕರಿ ಹಲವಾರು ರೂಪಗಳಲ್ಲಿ ಅವತರಿಸಿ ನಮ್ಮನ್ನು  ರಕ್ಷಿಸುವಳು ಎಂದು ನಂಬಿಕೆಯಿದೆ. ರಕ್ತದಂತಿಕೆ ದೇವಿಯು ನಮ್ಮ ಕಣ್ಣುಗಳನ್ನು ಕಾಪಾಡುವಳು, ನಂದಜೆದೇವಿಯು ಕಿವಿಗಳನ್ನು, ಪಾರ್ವತಿಯು ನಾಸಿಕವನ್ನೂ, ಮಹಾಕಾಳಿಯು ತುಟಿಗಳನ್ನೂ, ಮಹಾಲಕ್ಷ್ಮಿಯು ಮುಖವನ್ನೂ, ಮಹಾಸರಸ್ವತಿಯು ನಾಲಿಗೆಯನ್ನೂ, ಚಾಮುಂಡಿಯು ಹಲ್ಲುಗಳನ್ನೂ ಭದ್ರಕಾಳಿ ಕೈಗಳನ್ನು, ಕೌಮಾರಿದೇವಿಯು ಹೃದಯವನ್ನೂ, ವೈಷ್ಣವಿದೇವಿಯು ಉದರವನ್ನೂ ಸುಂದರಿದೇವಿಯು ತೊಡೆಗಳನ್ನು, ಶಾಂಭವಿ ಪಾದಗಳನ್ನೂ ರಕ್ಷಿಸುವಳು ಎಂಬ ನಂಬಿಕೆಯಿದೆ.

ಮನಸ್ಸಿಗೆ ಶಾಂತಿ,  ಉತ್ತಮ ಆರೋಗ್ಯಕ್ಕೆ ಮತ್ತು ಉತ್ತಮ ಬಾಳ್ವೆಗಾಗಿ ದೇವಿಯನ್ನು ಆರಾಧಿಸಬೇಕು.  ಪುಷ್ಯ ಮಾಸದ ಹುಣ್ಣಿಮೆ ದಿನ ಬನಶಂಕರಿ ದೇವಿಯನ್ನು ಪೂಜಿಸಿದರೆ ಉತ್ತಮವಾದ ಫಲವನ್ನು ಪಡೆಯಬಹುದು ಎಂದು ಸ್ಕಂದ ಪುರಾಣದಲ್ಲಿದೆ.

ಮಾಹಿತಿ ಕೃಪೆ: ಮಂಡಗದ್ದೆ ಪ್ರಕಾಶಬಾ ಅವರ ಕನ್ನಡ ಪ್ರಭದಲ್ಲಿನ ಬರಹ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ