ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಿ. ಜಯಚಂದ್ರನ್

ಪಿ. ಜಯಚಂದ್ರನ್ ನಿಧನ

ಮಹಾನ್ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ ನಿಧನರಾಗಿದ್ದಾರೆ.  

ಪಾಳಿಯಾತ್ ಜಯಚಂದ್ರನ್ ಅವರು ಕೇರಳದ ಕೊಚಿ ಚಿಲ್ಲೆಯ,  ರವೀಪುರಂ ತಾಲ್ಲೂಕಿನ ಭದ್ರಾಲಯಮ್ ಎಂಬಲ್ಲಿ 1944ರ ಮಾರ್ಚ್ 3ರಂದು ಜನಿಸಿದರು.  ಮುಂದೆ ಅವರು ಇರಿಂಜಾಲಕುಡದಲ್ಲಿ ಪ್ರಾಣಿಶಾಸ್ತ್ರ ವಿಷಯದಲ್ಲಿ ಪದವಿ ಗಳಿಸಿದರು.  ಇವರ ತಂದೆ ರವಿವರ್ಮ ಕೊಚಾನಿಯನ್ ಅವರು ಕೊಚಿ ರಾಜವಂಶಸ್ಥರ ಕುಟುಂಬದವರಾಗಿದ್ದು, ಸ್ವಯಂ ಸಂಗೀತ ಸಾಧಕರಾಗಿದ್ದರು.  ತಾಯಿ ಸುಭದ್ರಾಕುಂಜಮ್ಮ.

ಜಯಚಂದ್ರನ್ ಅವರು ಶಾಲೆಯಲ್ಲಿದ್ದ ದಿನಗಳಲ್ಲೇ ಲಘು ಸಂಗೀತ ಮತ್ತು ಮೃದಂಗವಾದನದಲ್ಲಿ ಅನೇಕ ಬಹುಮಾನಗಳನ್ನು ಗೆದ್ದಿದ್ದರು.  1958ರಲ್ಲಿ ನಡೆದ ಕೇರಳ ರಾಜ್ಯಮಟ್ಟದ ಯುವಗಾಯನದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದವರು ಕೆ.ಜೆ. ಏಸುದಾಸ್. ಎರಡನೇ ಬಹುಮಾನ ಗೆದ್ದವರು ಪಿ. ಜಯಚಂದ್ರನ್. ಜೊತೆಗೆ ಮೃದಂಗ ವಾದನದಲ್ಲಿ ಪ್ರಥಮ ಗಳಿಸಿದವರು ಜಯಚಂದ್ರನ್. 

1967ರಲ್ಲಿ, ಅವರು ಬಾಬುರಾಜ್ ಸಂಗೀತ ಸಂಯೋಜನೆಯ "ಅನುರಾಗಗಣಂ ಪೋಲೆ" ಎಂಬ ಇಂದಿಗೂ ಪ್ರಸಿದ್ಧವಾಗಿರುವ  ಗೀತೆಯನ್ನು ಹಾಡಿದರು. ಎಂ. ಎಸ್. ವಿಶ್ವನಾಥನ್ ಸಂಯೋಜನೆಯಲ್ಲಿ 'ಪಾಣಿತೀರತ ವೀಡು' ಚಿತ್ರಕ್ಕಾಗಿನ "ನೀಲಗಿರಿಯುಡೆ ('ಸುಪ್ರಭಾತಂ')" ಹಾಡಿಗೆ 1972 ರಲ್ಲಿ ಅತ್ಯುತ್ತಮ ಗಾಯಕ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. 1978ರ ವರ್ಷವು ಅವರಿಗೆ  "ರಾಗಂ ಶ್ರೀರಾಗಂ'”ಹಾಡಿಗೆ ಮತ್ತೊಂದು ಕೇರಳ ರಾಜ್ಯ ಪ್ರಶಸ್ತಿ ಸಂದಿತು. 1985 ರಲ್ಲಿ ಜಿ. ದೇವರಾಜನ್ ಸಂಗೀತ ಸಂಯೋಜನೆಯ ಶ್ರೀ ನಾರಾಯಣ ಗುರು ಚಿತ್ರದ "ಶಿವಶಂಕರ ಸರ್ವ ಶರಣ್ಯ ವಿಭೋ" ಗೀತೆಗಾಗಿ ಅವರು ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ನಿರಾಮ್ ಚಿತ್ರದ "ಪ್ರಾಯಮ್ ನಮ್ಮಿಲ್" ಹಾಡು 1998 ರಲ್ಲಿ ಅವರಿಗೆ ಮೂರನೇ ಕೇರಳ ರಾಜ್ಯ ಪ್ರಶಸ್ತಿಯನ್ನು ತಂದುಕೊಟ್ಟಿತು.  ಮುಂದೆ ಕೂಡ ಅವರು ಕೇರಳ ಮತ್ತು ತಮಿಳು ನಾಡು ರಾಜ್ಯ ಸರ್ಕಾರಗಳ ಅನೇಕ ಪ್ರಶಸ್ತಿಗಳನ್ನು ಗಳಿಸಿದರು.  ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲೇ ಅಲ್ಲದೆ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಅವರ ಸುಶ್ರಾವ್ಯ ಗೀತೆಗಳಿವೆ.   ಕನ್ನಡದಲ್ಲಿ ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು, ಒಲವಿನ ಉಡುಗೊರೆ ಕೊಡಲೇನು, ಮಂದಾರ ಪುಷ್ಪವು ನೀನು, ಚಂದ ಚಂದ ಸಂಗಾತಿ ನೋಟವೆ ಚಂದ,  ಭೂಮಿ ತಾಯಾಣೆ ನೀ ಇಷ್ಟ ಕಣೆ, ಕನ್ನಡನಾಡಿನ ಕರಾವಳಿ, ನನ್ನವರು ಯಾರೂ ಇಲ್ಲ ... ಯಾರಿಗೆ ಯಾರೂ ಇಲ್ಲ ಮುಂತಾದ ಮರೆಯಲಾಗದ ಗೀತೆಗಳನ್ನು ಅವರು ಹಾಡಿದ್ದಾರೆ. ಇಳೆಯರಾಜಾ ಮತ್ತು ಎ. ಆರ್. ರಹಮಾನ್ ಮುಂತಾದ ಸಂಗೀತ ಸಂಯೋಜಕರೂ ಜಯಚಂದ್ರನ್ ಅವರನ್ನು ತಮ್ಮ ಚಿತ್ರಗೀತೆಗಳಿಗೆ ಉನ್ನತ ರೀತಿಯಲ್ಲಿ ಬಳಸಿದ್ದಾರೆ.

ಜಯಚಂದ್ರನ್ ಅವರು 2025ರ ಜನವರಿ 9ರಂದು ನಿಧನರಾಗಿರುವುದು ಚಿತ್ರರಂಗದ ಶ್ರೇಷ್ಠ ಕೊಂಡಿಯೊಂದು ಕಳಚಿದಂತಾಗಿದೆ. 

Respects to departed soul Great meolodioys playback singer P. Jayachandran 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ