ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆಗುಂಬೆಯ ಸೂರ್ಯಾಸ್ತ

ಆಗುಂಬೆಯ ಸೂರ್ಯಾಸ್ತಮಯ

(ಡಾ. ಬಿ.ಜಿ. ಎಲ್. ಸ್ವಾಮಿ ಅವರ ಆಗುಂಬೆಯ ಸೂರ್ಯಾಸ್ತದ ವರ್ಣನೆ 'ಹಸುರು ಹೊನ್ನು' ಪುಸ್ತಕದಿಂದ)

ಸಂಜೆ ಆಗುಂಬೆಯ ಸೂರ್ಯಾಸ್ತಮಯವನ್ನು ನೋಡಲು ಹೋಗಿ, ಇದಕ್ಕಾಗಿ ಕಟ್ಟಿರುವ ದಿಬ್ಬವನ್ನು ಹತ್ತಿ ಕುಳಿತೆವು.  ನಮ್ಮೆದುರಿಗೆ ವಿಶಾಲವಾದ ನೀಲಿ ಬಯಲು ಸೀರೆಯ ಹರವು; ಹೊರ ಮೇರೆಯಲ್ಲಿ ಅರಬ್ಬೀ ಕಡಲಿನ ಬೆಳ್ಳಿಯಂಚು, ಬೋರಲಿಟ್ಟ ಬಟ್ಟಲಿನಂತಿರುವ ನೀಲ ದಿಗಂತ ಅದರಾಚೆಯಿಂದ ಮೇಲೆದ್ದು ನಮ್ಮನ್ನೂ ಒಳಗೊಂಡಿದೆ.  ಆ ಮಹತೋಮಹೀಯ ವಿಶಾಲತೆಯಲ್ಲಿ ನಾವು ಅಣೋರಣೀಯ ಚುಕ್ಕೆಗಳು ಎಂಬ ಭಾವನೆ ಮೂಡುತ್ತದೆ.  ನಿಸರ್ಗದ ವಿಶಾಲತೆಯಲ್ಲಿ ನಾವೆಷ್ಟು ಮಾತ್ರದವರು ಎಂಬ ಒಂದು ನಿರಾಶೆಯುಂಟಾಗುತ್ತದೆ.  ಸೂರ್ಯ ಕುಸುಂಭಾರುಣನಾಗಿ ಕ್ಷಿತಿಜದಿಂದ ಇಳಿಯುವ ದೃಶ್ಯ ವಿಸ್ಮಯಕಾರಿಯಾದದ್ದು.  ಬರಬರುತ್ತ ಅಚ್ಚಕೆಂಪಗಾಗಿ ವರ್ತುಲಾಕಾರದ ಸೂರ್ಯಬಿಂಬ ಬೋರಲಿಟ್ಟ ಕುಂಭಾಕಾರಕ್ಕೆ ತಿರುಗಿ, ಅಂಡಾಕಾರ ತಳೆದು, ಹ್ಯಾಟಿನಂತೆ ಬದಲಾಗಿ, ಅಡ್ಡಗೆರೆಯಾಗಿ ನೀರಿನ 'ಹಿಂದೆ' ಮುಳುಗಿಹೋಗುತ್ತದೆ.  ಆಕಾಶವೆಲ್ಲ ಚಂದ್ರಬಣ್ಣಕ್ಕೆ ತಿರುಗುತ್ತದೆ.  ಬಿಂಬ ಕಣ್ಮರೆಯಾದ ಮೇಲೆ ಊದಾ ಛಾಯೆ ಮೂಡುತ್ತದೆ, ನೀಲಿ ಮಬ್ಬು ಕವಿಯುತ್ತದೆ.  'ಇದು ನಾಡಿದು, ಇದು ಕಾಡಿದು, ನೆರೆಯಿದು ಕರೆಯಿದು ನೆಲನಿದು ಪೊಲನಿದು ಬೆಟ್ಟಿದು ತಿಟ್ಟಿದು ನರನಿದು ಮರನಿದು ದರಿಯಿದೋವರಿಯಿದೆಂದು ಬಗೆಯಲಾರ' ದಷ್ಟು ಕತ್ತಲಾಗುತ್ತದೆ.  ಬಾನ ಚುಕ್ಕಿಗಳು ಮಿನುಗುತ್ತವೆ.  ಈ ದೃಶ್ಯಾವಳಿಯನ್ನು ಕಂಡು ಮಂಕರಾಗಿ, ಮೂಕರಾಗಿ ಕುಳಿತುಕೊಂಡಿದ್ದ ವಿದ್ಯಾರ್ಥಿಗಳನ್ನು ಎಬ್ಬಿಸಿಕೊಂಡು ಬರುವುದು ಶ್ರಮಸಾಧ್ಯವಾಯಿತು.


Photo credits: C. Sankara Subramanian


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ