ದೀಪಾ ಹಿರೇಗುತ್ತಿ
ದೀಪಾ ಹಿರೇಗುತ್ತಿ
ದೀಪಾ ಹಿರೇಗುತ್ತಿ ಅವರು ಬಹುಮುಖಿ ಪ್ರತಿಭಾನ್ವಿತ ಬರಹಗಾರ್ತಿಯಾಗಿ ಮತ್ತು ಸಂಸ್ಕೃತಿ ಚಿಂತಕರಾಗಿ ಹೆಸರಾಗಿದ್ದಾರೆ.
ದೀಪಾ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದವರು. ಫೆಬ್ರವರಿ 27 ದೀಪಾ ಅವರ ಜನ್ಮದಿನ. ಇವರು ಕೊಪ್ಪ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ.
ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ದೀಪಾ ಅವರು ಸಶಕ್ತ ಬರಹಗಾರ್ತಿಯಾಗಿ ಮತ್ತು ಅಂಕಣಗಾರ್ತಿಯಾಗಿ ರೂಪುಗೊಂಡಿದ್ದಾರೆ. ನಾಡಿನ ಎಲ್ಲ ಪತ್ರಿಕೆಗಳಲ್ಲಿ ಅವರ ಬಹುಮುಖಿ ಬರಹಗಳು ಬೆಳಕು ಕಂಡಿವೆ.
“ನಾನು, ನೀವು ಮತ್ತು ...” ದೀಪಾ ಅವರ ಪ್ರಸಿದ್ಧ ಅಂಕಣ. 'ಪರಿಮಳವಿಲ್ಲದ ಹೂಗಳ ಮಧ್ಯೆ' ಅವರ ಚೊಚ್ಚಲ ಕವನ ಸಂಕಲನ. 'ಫೀನಿಕ್ಸ್' ಸೋಲಿಸಬಹುದು ಸೋಲನ್ನೇ!, 'ಬ್ರ್ಯಾಂಡ್ ಬಿಲ್ಡರ್ಸ್' ಬಿತ್ತಿ ಬೆಳೆಸಿ ಬೆಳೆದವರು, 'ಸೋಲೆಂಬ ಬೆಳಕು' ವ್ಯಕ್ತಿತ್ವ ವಿಕಸನದ ಬರಹಗಳು ಇವರ ಪ್ರಸಿದ್ಧ ಕೃತಿಗಳಲ್ಲಿ ಸೇರಿವೆ.
ದೀಪಾ ಹಿರೇಗುತ್ತಿ ಅವರು ದಸರಾ ಕವಿಗೋಷ್ಠಿ, ಸಂಕ್ರಮಣ, ಪ್ರಜಾವಾಣಿ ಸಂಚಯ, ತಿಂಗಳು ಕವನಸ್ಪರ್ಧೆಯಲ್ಲಿ ಬಹುಮಾನ, ಪ್ರಜಾವಾಣಿ - ವಿಮೋಚನಾ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮುಂತಾದ ಅನೇಕ ಸಂಭ್ರಮಗಳಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದಿಂದ ಕೊಡಮಾಡುವ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗಡೆ ಪ್ರಶಸ್ತಿ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ 'ಮಯೂರ ವರ್ಮ ಪ್ರಶಸ್ತಿ' ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ.
ದೀಪಾ ಹಿರೇಗುತ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
ಕಾಮೆಂಟ್‌ಗಳು