ಧೀರೇಂದ್ರ ತೀರ್ಥ
ಶ್ರೀ ಧೀರೇಂದ್ರ ತೀರ್ಥರು
ರಿತ್ತಿಯ ಶ್ರೀ ಧೀರೇಂದ್ರ ತೀರ್ಥರು ಮಹಾನ್ ಯತಿಗಳಾಗಿ ಹೆಸರಾದ ಮಹನೀಯರು. ನಾರಾಯಣೋಪನಿಷತ್ ವ್ಯಾಖ್ಯಾನ, ಯಾಜ್ಞಿಕೋಪನಿಷತ್ ವ್ಯಾಖ್ಯಾನ, ವಿಷಯವಾಕ್ಯ ಸಂಗ್ರಹ, ಮನ್ಯುಸೂಕ್ತ ವ್ಯಾಖ್ಯಾನ, ಅಂಭೃಣೀಸೂಕ್ತ ವ್ಯಾಖ್ಯಾನ, ಗುರುಗುಣಸ್ತವನ ವ್ಯಾಖ್ಯಾನ, ಬಳಿತ್ಥಾಸೂಕ್ತ ವ್ಯಾಖ್ಯಾನ, ರಾಘವೇಂದ್ರ ಸ್ತೋತ್ರ ವ್ಯಾಖ್ಯಾನ, ಕರಕವಾದಾರ್ಥ ಮುಂತಾದ ಮಹತ್ಕೃತಿಗಳನ್ನು ರಚಿಸಿದ ಮಹಾನುಭಾವರಿವರು.
ಧೀರೇಂದ್ರ ತೀರ್ಥರ ಪೂರ್ವಾಶ್ರಮದ ಹೆಸರು ಶ್ರೀಜಯರಾಮಾಚಾರ್ಯ. ಇವರ ತಂದೆಯವರು ಶ್ರೀನಿವಾಸವಾಚಾರ್ಯರು (ಶ್ರೀ ವಾದೀಂದ್ರತೀರ್ಥರು). ಬಾಲ್ಯದಲ್ಲಿ ಅತಿಶಯ ಬುದ್ದಿವಂತರಾಗಿದ್ದು ತಂದೆಯವರ ಬಳಿಯಲ್ಲಿ ನ್ಯಾಯವೇದಾಂತ ಶಾಸ್ತ್ರಗಳನ್ನು ಅಧ್ಯಯನ ಮಾಡಿದರು ಹಾಗೂ ಅಪಾರ ಪಾಂಡಿತ್ಯವನ್ನು ಪಡೆದರು. ಮತ್ತು ವಾದಿಗಳನ್ನು ನಿಗ್ರಹಿಸುತ್ತಾ ಗ್ರಂಥ ರಚನೆ ಮಾಡುತಿದ್ದರು. ಇವರಿಗೆ ಮೂರು ಜನ ಪುತ್ರರು, ಒಬ್ಬ ಪುತ್ರಿಯಿದ್ದರು. ಮುಂದೆ ವೈರಾಗ್ಯದತ್ತ ಮನಸ್ಸು ತಿರುಗಿ ತೀರ್ಥಯಾತ್ರೆಗೈಯುತ್ತಾ ಶ್ರೀಮಧ್ವಮತದ ಪತಾಕೆಯನ್ನು ಹಾರಿಸಿದರು. ಮಂತ್ರಾಲಯಕ್ಕೆ ಬಂದು ಗುರುರಾಜರ ಸೇವೆಯನ್ನು ಮಾಡುತ್ತಾ ಇದ್ದರು. ನಂತರ ವಿಜಯೀಂದ್ರ ತೀರ್ಥರ ಸನ್ನಿಧಿಗೆ ಬಂದು ಅಲ್ಲಿ ಸೇವೆಗೈಯುತ್ತಿದ್ದರು. ಶ್ರೀಗುರುಗಳು ಸ್ವಪ್ನದಲ್ಲಿ ದರ್ಶನವಿತ್ತು, ಶ್ರೀವರದೇಂದ್ರ ತೀರ್ಥರಲ್ಲಿ ಸನ್ಯಾಸ ಪಡೆಯುವಂತೆ ಅಜ್ಞಾಪಿಸಿದರು. 1775-76ರಲ್ಲಿ ಶ್ರೀಧೀರೇಂದ್ರತೀರ್ಥರೆಂದು ಸನ್ಯಾಸಪಡೆದರು.
ತಪೋ ನಿಷ್ಠರಾದ ಶ್ರೀ ಧೀರೇಂದ್ರ ತೀರ್ಥರು ಜ್ಞಾನ, ಭಕ್ತಿ, ವೈರಾಗ್ಯ, ಸದ್ಗುಣಗಳಿಂದ ಪಂಡಿತ-ಪಾಮರರನ್ನು ಆಕರ್ಷಿಸಿದರು. ದಕ್ಷಿಣ ಭಾರತದಲ್ಲೆಲ್ಲಾ ಇವರ ಕೀರ್ತಿ ಮನೆಮಾತಾಗಿತ್ತು. ಶ್ರೀಗಳವರು ಮೇಲೆ ಹೇಳಿದ ವಿದ್ವತ್ಪೂರ್ಣವಾದ ಅನೇಕ ಗ್ರಂಥಗಳನ್ನು ರಚಿಸಿ ಮಧ್ವಪ್ರಮೇಯಗಳನ್ನು ಎತ್ತಿ ಸಾರಿದರು.
ಶ್ರೀ ಧೀರೇಂದ್ರ ತೀರ್ಥರು ಸಂಚಾರ ಮಾಡುತ್ತಾ ವರದಾ ನದೀ ತೀರದ ಹೊಸರಿತ್ತಿಗೆ ಬಂದು ನೆಲೆಸಿದರು. 1785-86ರಲ್ಲಿ ಬೃಂದಾವನಸ್ಥರಾದರು. 7 ವರ್ಷಗಳ ನಂತರ ಶ್ರೀಗಳ ದೇಹವನ್ನು ಕಳಾಕರ್ಷಣಕ್ಕಾಗಿ ಹೊರಕ್ಕೆ ತೆಗೆದಾಗ ಹಚ್ಚಿದ ಗಂಧಾಕ್ಷತೆ, ತುಳಸಿಹಾರ, ಶ್ಯಾಟಿ, ದೇಹದ ಕಾಂತಿ ಹಾಗೆಯೇ ಕಂಗೊಳಿಸುತ್ತಿದ್ದನ್ನು ಕಂಡು ಭಕ್ತಜನ ಆಶ್ಚರ್ಯಸಾಗರದಲ್ಲಿ ಮುಳುಗಿದರಂತೆ. ಅಣು ಮಂತ್ರಾಲಯವೆಂದೇ ಪ್ರಸಿದ್ಧವಾದ ಹೊಸರಿತ್ತಿಯ ಗುರುಗಳು ಮಂತ್ರಾಲಯದ ರಾಯರಂತೆ ಮಹಿಮೆಗೆ ಹೆಸರಾಗಿದ್ದಾರೆ.
Dheerendra Theertha
ಕಾಮೆಂಟ್‌ಗಳು