ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಕೃಇತಯೇ ಗುರು


ಪ್ರಕೃತಿಯೇ ಗುರು ಗಗನ ಲಿಂಗವು
ಜಗವೆ ಕೂಡಲ ಸಂಗಮ
ಹುಡಿಯೆ ಭಸ್ಮವು ಹುಲ್ಲೆ ಪತ್ರಿಯು
ಜಡವಿದೆಲ್ಲವು ಜಂಗಮ

ಕುಡಿವ ನೀರೇ ತೀರ್ಥ ತಿನ್ನುವ
ರೊಟ್ಟಿ ಶಿವನ ಪ್ರಸಾದವು
ಶ್ರಮದ ಬೆವರೇ ಸ್ನಾನ ದುಡಿತದ
ಹಾಡೆ ಮಂತ್ರನಿನಾದವು

ಭದ್ರವನ್ನೇ ನೋಳ್ಪ ಅಕ್ಷಿಯೆ
ಭಾವಿಸಲು ರುದ್ರಾಕ್ಷಿಯು
ಭದ್ರವನ್ನೇ ನುಡಿವೆ ಮಾಡುವೆ-
ನೆಂಬ ಬುದ್ಧಿಯೆ ದೀಕ್ಷಿಯು

ಸರ್ವವೂ ಶಿವನಂಶವೆನ್ನುವ 
ಧರ್ಮವೊಂದೇ ಧರ್ಮವು
ಅನ್ಯರನು ಅಳಲಿಸದ ಹಿತಕರ
ಕರ್ಮವೊಂದೇ ಕರ್ಮವು

ಎಲ್ಲರೆಲ್ಲರಿಗಾಗಿಯೆನ್ನುವ
ಜ್ಞಾನವೊಂದೇ ಜ್ಞಾನವು
ಒಲಿದು ಒಲಿಸುವ ನಲಿದು ನಲಿಸುವ
ಕಲೆಯೆ ಅಮೃತನಿಧಾನವು

ಉಣಿಸಿ ಉಣ್ಣುವ ಭಾವ ಭಕ್ತಿಯು
ಒಲ್ಲೆನೆನೆ ಸುವಿರಕ್ತಿಯು
ಕೂಡಿ ಕಲಿಯಲು ಕೂಡಿ ಬೆಳೆಯಲು
ಕೂಡಿ ನಲಿಯಲು ಮುಕ್ತಿಯು

ಕಾವ್ಯಾನಂದ (ಸಿದ್ಧಯ್ಯ_ಪುರಾಣಿಕ)
ಮಾನಸ ಸರೋವರ' ಕವನ ಸಂಕಲನ

Photos at Emirates Hills, Dubai






 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ