ಸಂತೋಷ
ಸಂತೋಷ ಎಲ್ಲರಿಗೂ ಬೇಕು.
ಹೇಗಿದೀರಿ ಅಂತ ಯಾರಿಗಾದ್ರೂ ಮೆಸೇಜ್ ಹಾಕಿದ್ರೆ 'ಸೂಪರ್ ಆಗಿದೀನಿ' ಅಂತ ಹೇಳಿ, 'ನೀವು ಹೇಗಿದೀರಿ?' ಅಂತ ಅವರು ಕೇಳಿದಾಗ, ಅವರು ಸುಖವಾಗಿದೀನಿ ಅಂತ ಹೇಳಿದ್ದಕ್ಕೆ ಹೊಟ್ಟೆ ಕಿವುಚಿದಂತಾಗುವುದರ ಜೊತೆಗೆ, ನಾನು ಸುಖವಾಗಿದೀನಿ ಅಂತ ಆಗ್ಲಿ, ಸುಖವಾಗಿಲ್ಲ ಅಂತ ಆಗ್ಲೀ, ಹೇಳಲಿಕ್ಕಾಗದ ಸಂದಿಗ್ಧ ಮತ್ತಷ್ಟು ಹಿಂಸೆ ಮಾಡುತ್ತೆ! ನಾವು ಮಾತಾಡಿಸಿದವರು ತಮ್ಮ ಕಷ್ಟ ಹೇಳಿದಾಗ ಕಾರುಣ್ಯ ಮೂಡುವ ಬದಲು ಈ ಕಷ್ಟದ ಮಧ್ಯೆ ನಾನೇಕೆ ಬಂದೆ ಎನಿಸುವುದೂ ಇದೆ!
ನಿನ್ನೆ ಕೇಳಿದ ಡಿವಿಜಿ ಮತ್ತು ಜಿಪಿ ರಾಜರತ್ನಂ ಮಾತುಕತೆಯಲ್ಲಿ ಡಿವಿಜಿ ಹೇಳಿದ್ದು ನೆನಪಾಗುತ್ತೆ "ಸುಖ ಅನ್ನೋದು ಒಂದು ಕ್ಷಣಕ್ಕೆ ಸಂಬಂಧಿತ ಅಲ್ಲ, ಅದು ಒಂದು ಸುದೀರ್ಘ ಕಾಲಮಾನಕ್ಕೆ ಸಂಬಂಧಿಸಿದ್ದು ಅಂತ!".
ಸುಖ ಅನ್ನೋದು ಕೇವಲ ಪದ ಅಲ್ಲ. ಅದು ನಮಗೇನಿದೆ ಏನಿಲ್ಲ ಎಂಬುದರ ಮಾಪನ ಅಲ್ಲ. ನಗುವೂ ಅಲ್ಲ. ಸೆಲೆಬ್ರೇಷನ್ ಅಲ್ಲ.
ತಲೆಯೊಳಗೆ ನೆರದಿಹವು ನೂರಾರು ಹಕ್ಕಿಗಳು
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು
ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹವು
ನೆಲೆಯಲ್ಲಿ ನಿದ್ದೆಗೆಲೋ? ಮಂಕುತಿಮ್ಮ.
ಇದು ನಮ್ಮ ಬದುಕಿನ ಬಗ್ಗೆ ದೊಡ್ಡ ವ್ಯಾಖ್ಯಾನ ಅನಿಸುತ್ತೆ.
ಏನೋ ಇದ್ರೂ ಇಲ್ಲ ಎಂಬ ಭಾವ, ಇಲ್ಲದಿದ್ದದ್ದು ಇದ್ದಿದ್ರೆ ಎಂಬ ಅಸಾಧ್ಯ ಆಶಯ, ಮಾಡಬಹುದಾದದ್ದು ಮಾಡಲಿಲ್ಲ ಎಂಬ ಅತೃಪ್ತಿ, ಮಾಡಬೇಕೆಲ್ಲ ಎಂಬ ದುಗುಡ, ಮಾಡ್ತಾ ಇರೋದು ನಿಜವಾಗಲೂ ಆಗುತ್ತಾ ಎಂಬ ಸಂದೇಹ, ಅವರಿಲ್ಲ ಅಂತ, ಮತ್ತೊಬ್ಬರಿದ್ದಾರೆ ಅಂತ, ಅವರೇ ನನ್ನ ಸ್ಥಿತಿಗೆ ಕಾರಣ ಅಂತ, ಹೀಗೆ ಸುರುಳಿಗಳಲ್ಲಿ ನಮ್ಮನ್ನ ನಾವು ಸುತ್ಕೊಂಡಿದ್ರೆ, “I am fine” ಅನ್ನೋದು ಸುಖಾನಾ?
ಇವಕ್ಕೆಲ್ಲ ಉತ್ತರ ಕಂಡುಕೊಳ್ಳೋದು ಮಾತ್ರವೇ ಸುಖ. ಅದು ಸ್ವಂತ ಅವಲೋಕನದಿಂದ ಮಾತ್ರವೇ ದಕ್ಕುವಂತದ್ದು.
ಈ ಸುಖ ಎಂಬ ಸಾಮರ್ಥ್ಯ ಎಲ್ಲರಿಗೂ ದಕ್ಕಲಿ.
ಕಾಮೆಂಟ್‌ಗಳು