ತಿಳಿದವರೇ .... ಹೇಳಿ
ಕಾವ್ಯದ
ಬಗ್ಗೆ ತಿಳಿದವರೇ
ಹೇಳಿ.
ನನಗೆ ಕಾವ್ಯ ಗೊತ್ತಿಲ್ಲ
ತಿಳಿಸಾರು
ಗೊತ್ತು.
ತಿಳಿಸಾರು
ಎಂದರೆ ಏನೆಂದುಕೊಂಡಿರಿ?
ಅದಕ್ಕೂ
ಬೇಕು ಒಳಗೊಂದು
ಜಲತತ್ವ
- ಗಂಧತತ್ವ -
ಕುದಿದು
ಹದಗೊಂಡ ಸಾರತತ್ವ...
ಹೀಗೆ
-
ಇತ್ತು
ಸಾರಿನ ಪಾತ್ರೆ ಮೂಲೆಯಲ್ಲಿ
ನಂಗದೆಯೂ
ನಂಗಿದಂತಿದ್ದ
ಬೂದಿ
ಮುಚ್ಚಿದ ಕೆಂಡದೊಲೆಯ ಮೇಲೆ
ಕಾಯುತ್ತಿದ್ದಂತೆ.
ಕಾದರೇನು?
ಮಾಂಸದಡುಗೆಯ
ಕಿಡಿಮಿಂಚು ವಗ್ಗರಣೆಯ
ಬಡಿಸುವ
ಝಣ್ ಝಣ್ ನಡಿಗೆಯವರ
ಲಘು
ನಗೆ ಬಗೆ ವಿನಿಮಯ ಒಡ್ಡೋಲಗದಲ್ಲಿ
ತೆಳ್ಳನೆಯ
ತಿಳಿಸಾರು ಹಾಗೆಯೇ ಇತ್ತು
ಬೆಳಗಿಂದ
ನಂಗದೆಯೂ
ನಂಗಿದಂತಿದ್ದ ಕೆಂಡದೊಲೆಯ ಮೇಲೆ
ಕುದಿಕುದಿದು
ಬತ್ತಿ
ರಾತ್ರಿಯಾದರೂ
ಹಳಸದೆ
ಕಾವ್ಯದ
ಬಗ್ಗೆ ದೊಡ್ಡಕ್ಕೆ ತಿಳಿದವರೇ
ಹೇಳಿ.
ಗೊತ್ತೇ ತಿಳಿಸಾರು ನಿಮಗೆ?
ಕ್ಷಮಿಸಿ, ಗೊತ್ತಿಲ್ಲ ಕಾವ್ಯ ನನಗೆ
ಸಾಹಿತ್ಯ: ವೈದೇಹಿ
Tag: Tilidavare heli, kaavyada bagge tilidavare heli
ಕಾಮೆಂಟ್‌ಗಳು