ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಕಸ್ತೂರಿ ರಂಗನ್

ಕೆ. ಕಸ್ತೂರಿ ರಂಗನ್

ಡಾ.  ಕೆ. ಕಸ್ತೂರಿ ರಂಗನ್ ಮಹಾನ್ ಬಾಹ್ಯಾಕಾಶ ವಿಜ್ಞಾನಿಯಾಗಿ, ಖಗೋಳ ಶಾಸ್ತ್ರಜ್ಞರಾಗಿ ಮತ್ತು  ಇಸ್ರೋದ ಅಧ್ಯಕ್ಷರಾಗಿ ಹೆಸರಾಗಿದ್ದವರು. 

ಕಸ್ತೂರಿ ರಂಗನ್ ಅವರು 1940ರ ಅಕ್ಟೋಬರ್‌ 24ರಂದು ಎರ್ನಾಕುಲಂನಲ್ಲಿ ಜನಿಸಿದರು. ತಂದೆ ಸಿ. ಎಮ್. ಕೃಷ್ಣಸ್ವಾಮಿ ಅಯ್ಯರ್.  ತಾಯಿ ವಿಶಾಲಾಕ್ಷಿ.  ತಮಿಳುನಾಡಿನ ಮೂಲದವರಾದ ಇವರ ಪೂರ್ವಜರು ಕೇರಳದ ವಿವಿಧ ಪ್ರಾಂತ್ಯಗಳಲ್ಲಿ ನೆಲೆಸಿದರು.  ಕಸ್ತೂರಿ ರಂಗನ್ ಅವರು ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಉನ್ನತ ಸಾಧನೆಗಳೇ ಅಲ್ಲದೆ, ಹೈ ಎನರ್ಜಿ ಅಸ್ಟ್ರಾನಮಿಯಲ್ಲಿ ಪಿಎಚ್.ಡಿ ಗಳಿಸಿದರು. ಖಗೋಳಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನಗಳ ಕುರಿತಾಗಿ 240 ವೈಚಾರಿಕ ಪ್ರಬಂಧಗಳನ್ನು ಪ್ರಕಟಿಸಿದ್ದರು.

ಕಸ್ತೂರಿ ರಂಗನ್ ಅವರು 1994ರಿಂದ 2003ರವರೆಗೆ ಇಸ್ರೋದ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದರು.  ಅದಕ್ಕೆ ಮುಂಚಿತವಾಗಿ ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಹೊಸ ಪೀಳಿಗೆಯ ಬಾಹ್ಯಾಕಾಶ ನೌಕೆ, ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ (INSAT-2), ಭಾರತೀಯ ದೂರಸಂವೇದಿ ಉಪಗ್ರಹಗಳು (IRS-1A ಮತ್ತು -1B) ಹಾಗೂ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ಧಿ ಮೇಲ್ವಿಚಾರಣೆ ನಿರ್ವಹಿಸಿದರು. ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣಾ ಉಪಗ್ರಹಗಳಾದ ಭಾಸ್ಕರ-I ಮತ್ತು II ಗಳಿಗೆ ಯೋಜನಾ ನಿರ್ದೇಶಕರಾಗಿದ್ದರು. ಅವರ ನಾಯಕತ್ವದಲ್ಲಿ, ಈ ಕಾರ್ಯಕ್ರಮವು ಭಾರತದ ಪ್ರತಿಷ್ಠಿತ ಉಡಾವಣಾ ವಾಹನಗಳಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮತ್ತು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಗಳ ಯಶಸ್ವಿ ಉಡಾವಣೆ ಮತ್ತು ಕಾರ್ಯಾಚರಣೆ ಸೇರಿದಂತೆ ಹಲವಾರು ಪ್ರಮುಖ ಮೈಲಿಗಲ್ಲುಗಳಿಗೆ ಸಾಕ್ಷಿಯಾಯಿತು. GSLVಯ ಮುಂದುವರಿದ ಆವೃತ್ತಿಯಾದ GSLVMk-III ನ ಅಧ್ಯಯನಗಳು ಸಹ ಪೂರ್ಣಗೊಂಡವು, ಅದರಲ್ಲಿ ಅದರ ಪೂರ್ಣ ಸಂರಚನೆಯನ್ನು ವ್ಯಾಖ್ಯಾನಿಸುವುದು ಸೇರಿತ್ತು. ಇದಲ್ಲದೆ, ಅವರು ದೂರಸಂವೇದಿ ಉಪಗ್ರಹಗಳಾದ IRS-1C ಮತ್ತು IRS-1D ಗಳ ಅಭಿವೃದ್ಧಿ ಮತ್ತು ಉಡಾವಣೆ, ಹೊಸ ಪೀಳಿಗೆಯ INSAT ಸಂವಹನ ಉಪಗ್ರಹಗಳ ಸಾಕ್ಷಾತ್ಕಾರ, ಸಾಗರ ವೀಕ್ಷಣಾ ಉಪಗ್ರಹಗಳಾದ IRS-P3 ಮತ್ತು IRS-P4 ಗಳ ಮೇಲ್ವಿಚಾರಣೆ ಸಹಾ ಮಾಡಿದರು. ಚಂದ್ರಯಾನ-1 ರ ವ್ಯಾಖ್ಯಾನಕ್ಕೆ ಕಾರಣವಾಗುವ ವ್ಯಾಪಕ ಅಧ್ಯಯನಗಳ ಮೂಲಕ ಭಾರತವು ಗ್ರಹ ಪರಿಶೋಧನಾ ಯುಗವನ್ನು ಪ್ರವೇಶಿಸಲು ಅವರು ಉಪಕ್ರಮವನ್ನು ಮುನ್ನಡೆಸಿದರು. ಈ ಪ್ರಯತ್ನಗಳು ಭಾರತವನ್ನು ಪ್ರಮುಖ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಂದಿರುವ ಆರು ದೇಶಗಳಲ್ಲಿ ಪ್ರಮುಖವಾದ ಬಾಹ್ಯಾಕಾಶ ಪ್ರಯಾಣಿಕ ರಾಷ್ಟ್ರವನ್ನಾಗಿ ಮಾಡಿತು. ಇದಲ್ಲದೆ ಕಾಸ್ಮಿಕ್ ಎಕ್ಸ್-ರೇ ಮತ್ತು ಗಮ್ಮಾ ರೇ ಎಕ್ಸ್-ರೇ ಸಂಪನ್ಮೂಲಗಳು ಮತ್ತು ವಿವಿಧ ವಾತಾವರಣಗಳಲ್ಲಿನ ಅವುಗಳ ಪ್ರಭಾವಗಳ  ಮೇಲೂ ಅಸಾಮಾನ್ಯ ಕೊಡುಗೆ ನೀಡಿದ್ದರು.  ವೇದಗಳಲ್ಲಿ ಮೂಡಿಬರುವ ವೈಜ್ಞಾನಿಕ ಚಿಂತನೆಗಳ ಕುರಿತಾದ ಹೊಳಹುಗಳ ಬಗ್ಗೆಯೂ ಅವರಿಗೆ ಆಳವಾದ ತಿಳುವಳಿಕೆ ಇತ್ತು.

ಕಸ್ತೂರಿರಂಗನ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪರಿಸರ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಅಪರಿಮಿತ ಕೊಡುಗೆ ನೀಡಿದ್ದರು. ತಮ್ಮ ಜೀವಿತದ ಕೊನೆಯವರೆಗೂ ರಾಜಾಸ್ಥಾನದ ಕೇಂದ್ರ ವಿಶ್ವವಿದ್ಯಾಲಯ ಮತ್ತು NIIT ವಿಶ್ವವಿದ್ಯಾಲಯದಗಳ ಕುಲಪತಿಗಳಾಗಿದ್ದರು. 

ಕಸ್ತೂರಿರಂಗನ್ ರಾಜ್ಯಸಭೆ ಸದಸ್ಯರಾಗಿ ದೇಶದ ಮಹತ್ವಪೂರ್ಣ ನೀತಿಗಳನ್ನು ರೂಪಿಸುವಲ್ಲಿಯೂ ನಿರ್ಣಾಯಕ ಪಾತ್ರ ವಹಿಸಿದ್ದರು.  ಪಶ್ಚಿಮ ಘಟ್ಟ ಸಂರಕ್ಷಣೆಯ ಕುರಿತಾದ ಸಮಿತಿಗೆ ಅಧ್ಯಕ್ಷರಾಗಿದ್ದರು. 2020ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಸಮಿತಿಯ ನೇತೃತ್ವ ವಹಿಸಿದ್ದರು.

ಕಸ್ತೂರಿರಂಗನ್ ಅವರಿಗೆ ಭಾರತ ಸರ್ಕಾರದ ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಗೌರವಗಳು ಸಂದಿದ್ದವು.

ಡಾ. ಕಸ್ತೂರಿ ರಂಗನ್ ಅವರು 2025ರ ಏಪ್ರಿಲ್ 25ರಂದು ನಿಧನರಾದರು.  ಇಂತಹ ಮಹಾನ್ ವ್ಯಕ್ತಿಗಳ ನಿರ್ಗಮನ ಲೋಕಕ್ಕೆ ಅತಿ ದೊಡ್ಡ ನಷ್ಟ.  ಅದರೆ ಕಾಲದ ನಿಯಮಕ್ಕೆ ನಾವು ತಲೆ ಬಾಗಲೇಬೇಕು.  ಇಂತಹ ಮಹಾನ್ ಸಾಧಕರು ಮಾಡಿಹೋದ ಕೆಲಸ ನಮ್ಮನ್ನು ಪ್ರೇರಿಸುವಂತಾಗಬೇಕು.

On the birth anniversary of Great Space Scientist Dr. Kasturi Rangan Sir 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ