ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೇಲೂರು ರಘುನಂದನ್


 ಬೇಲೂರು ರಘುನಂದನ್ 


ಡಾ. ಬೇಲೂರು ರಘುನಂದನ್ ಅವರು ಬೋಧಕರಾಗಿ, ರಂಗಕರ್ಮಿಯಾಗಿ, ನಾಟಕಕಾರರಾಗಿ ಮತ್ತು ಬಹುಮುಖಿ ಬರಹಗಾರರಾಗಿ ಹೆಸರಾಗಿದ್ದಾರೆ. 

ಮೇ 21,  ರಘುನಂದನ್ ಅವರ ಜನ್ಮದಿನ. ಮೂಲತಃ ಇವರು ಹಾಸನ ಜಿಲ್ಲೆಯ ಬೇಲೂರಿನವರು. ತಂದೆ ರಮೇಶ್. ತಾಯಿ ಸುಬ್ಬಲಕ್ಷ್ಮಿ.  ಇವರು ಬೇಲೂರಿನ ವೈ.ಡಿ.ಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರೈಸಿದರು.  ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವಿ ಗಳಿಸಿರುವ ಇವರು, ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ "ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು" ಕುರಿತಾಗಿ  ಎಂ.ಫಿಲ್ ಮತ್ತು "ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು” ಮಹಾಪ್ರಬಂಧಕ್ಕಾಗಿ  ಪಿಎಚ್.ಡಿ ಗಳಿಸಿದ್ದಾರೆ.  

ಬೇಲೂರಿನ ಗಮಕಿ ವಿದುಷಿ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ಬೇಲೂರು ರಘುನಂದನ್ ಬೇಲೂರಿನ ಶಾಂತಲ ಪದವಿ ಕಾಲೇಜು, ಹೊಯ್ಸಳ ಕಾಲೇಜು ಮತ್ತು ಸರ್ವೋದಯ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು.  2009ರಿಂದ ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ, ಪ್ರಸಕ್ತ  ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ವರ್ಷ ಉದಯ ಟಿ.ವಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಹಾಗೂ ಬೆಂಗಳೂರಿನ ಕೆನರಾ ಬ್ಯಾಂಕ್ ಲೇಔಟ್ ನಲ್ಲಿರುವ ಅರಬಿಂದೊ ಶಾಲೆಯಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿರುವ ಅನುಭವ ಇವರೊಂದಿಗಿದೆ.

ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕಥಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಕೃತಿಗಳಲ್ಲಿ ಈ ಕೆಳಗಿನವು ಸೇರಿವೆ:

ಕಾವ್ಯ: ಶ್ವೇತಪ್ರಿಯ, ಕನ್ನಡಿ ಮುಂದೆ ನಿಂತಾಗ, ಕವಿಶೈಲದ ಕವಿತೆಗಳು, ಹಸುರು, ಸೊನ್ನೆಯಾಗುವ ಕಾಯ, ಮಗ್ಗದ ಮನೆ
ಕಟ್ಟುಪದಗಳು : ನೂರೊಂದು ವಚನಗಳು, ಅರಿವು ತೊರೆ, ಬೆತ್ತಲು, ಅಮ್ಮ ಮುಂತಾದವು. 


ಮಕ್ಕಳ ಸಾಹಿತ್ಯ : ಚಿನ್ನಾರಿಯ ಚಿತ್ರ, ನಿಸರ್ಗ ಮತ್ತು ಗುಬ್ಬಚ್ಚಿ, ಹಾರುವ ಆನೆ, ಬೊಂಬಾಯ್ ಮಿಠಾಯಿ (ಮಕ್ಕಳ ನಾಟಕ), ಚಿಟ್ಟೆ (ಮಕ್ಕಳ ಏಕವ್ಯಕ್ತಿ ನಾಟಕ)


ಪ್ರವಾಸ ಸಾಹಿತ್ಯ : ಜೀವನ್ಮುಖಿ ತೀಸ್ತಾ


ಅಂಕಣ ಬರಹ : ಉಮಾಸಿರಿ, ಚಿಣ್ಣರ ಅಂಗಳ, ಹೊಸ ಫಸಲು, ಬೇಂದ್ರೆ ನಾಟಕಗಳು ಮುಂತಾದವು


ನಾಟಕಗಳು : ರಕ್ತವರ್ಣೆ, ಸಾಲು ಮರಗಳ ತಾಯಿ, ತಿಪ್ಪೇರುದ್ರ, ರೂಪ ರೂಪಗಳನು ದಾಟಿ ಮತ್ತು ಬೆಳಕಿನ ಅಂಗಡಿ, ಮೋಹನ ತರಂಗಿಣಿ, (ಪ್ರಕಟಿತ), ಭೂಮಿ, ರೂಬಿಕ್ಸ್ ಕ್ಯೂಬ್, ತೊರೆದು ಜೀವಿಸಬಹುದೆ, ಉಧೋ ಉಧೋ ಎಲ್ಲವ್ವ, ಕ್ಲೀನ್ ಅಂಡ್ ಕ್ಲಿಯರ್ ಪಾಯಖಾನೆ, ಗಾರ್ಗಿ, ಹತ್ಯಾಕಾಂಡ, (ವಿದುರಾಶ್ವತ್ಥದ ವೀರಗಾಥೆ), ಮುದ್ದುಮಗಳೇ ಮುಂತಾದವು

ಸಂಪಾದನೆ : ಕಿ.ರಂ ಹೊಸಕವಿತೆ ಸಂಪುಟ 1 ಮತ್ತು 2


ವಿಮರ್ಶೆ : ಕ್ರಿಯೆ ಪ್ರತಿಕ್ರಿಯೆ


ರಂಗಗೀತೆಗಳು : ರಾಗರಂಗ


ಕಥಾಸಾಹಿತ್ಯ : ಅಪ್ಪ ಕಾಣೆಯಾಗಿದ್ದಾನೆ, ರಂಗಿ, ಏಡಿ ಅಮ್ಮಯ್ಯ, ಆಗಮನ, ಒಂದು ಮೂಟೆ ಅಕ್ಕಿ ಹಾಗೂ ಇನ್ನಿತರ ಕತೆಗಳು 

ಬೇಲೂರು ರಘುನಂದನ್ ಅವರ ಬಹುಮುಖಿ ಬರಹಗಳು ನಾಡಿನ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಇವರ  ಸಾಹಿತ್ಯ ಕೃತಿಗಳು ಇಂಗ್ಲಿಷ್, ಹಿಂದಿ, ಹಾಗೂ ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. 
ರಘುನಂದನ್ ಅವರ ಪ್ರಯೋಗಗೊಂಡ ಇಲ್ಲವೇ ಪ್ರಯೋಗಕ್ಕೆ ಸಿದ್ಧಗೊಂಡಿರುವ ನಾಟಕಗಳಲ್ಲಿ ಆಯಾಮ, ದಹನಾಗ್ನಿ, ಪ್ರೇಮಮಯಿ ಶರ್ಮಿಷ್ಠೆ ಸೇರಿವೆ.


2017ರಲ್ಲಿ ಕರ್ನಾಟಕ ಸರ್ಕಾರ, ಕರ್ನಾಟಕ ನಾಟಕ ಅಕಾಡೆಮಿಗೆ ಬೇಲೂರು ರಘುನಂದನ್ ಅವರನ್ನು  ಸದಸ್ಯರನ್ನಾಗಿ ನೇಮಕ ಮಾಡಿತ್ತು. 

ಸಾಹಿತ್ಯ, ರಂಗಭೂಮಿ, ಸಿನೆಮಾ, ಸಂಗೀತ ಹಾಗೂ ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿಯುಳ್ಳ ರಘುನಂದನ್ ಅವರು ಕಾಜಾಣದ ಸಂಸ್ಥೆಯ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮಾಡುತ್ತಾ ಬಂದಿದ್ದಾರೆ. 

ಬೇಲೂರು ರಘುನಂದನ್ ಅವರಿಗೆ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ 2022ನೇ ಸಾಲಿನ ಭಾರತರತ್ನ  ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಸಂದಿದೆ.  ಇದಲ್ಲದೆ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕನ್ನಡ ಸಂಘರ್ಷ ಸಮಿತಿ ಕೊಡಮಾಡುವ ಕುವೆಂಪು ಯುವಕವಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ನೀಡುವ ಜ್ಯೋತಿ ಪುರಸ್ಕಾರ, ಬೇಲೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಸಾಲು ಮರದ ತಿಮ್ಮಕ್ಕ ಹಸುರು ಪ್ರಶಸ್ತಿ, ನಾ.ಡಿಸೋಜಾ ಎಚ್.ಎಸ್.ವಿ.ಪುಟಾಣಿ ಸಾಹಿತ್ಯ ಪುರಸ್ಕಾರ, ತೇಜಸ್ವಿ ಕಟ್ಟೀಮನಿ ಯುವ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ, ಬಿ.ಎಂ.ಶ್ರೀ ಪ್ರತಿಷ್ಠಾನದ ಷಾ. ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ, ದಿವಂಗತ ಸಾರಂಗಿ ವೆಂಕಟರಾಮಯ್ಯ ಪುಟ್ಟಚಟ್ಟಮ್ಮ ದತ್ತಿನಿಧಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ನೇಸರು ಜಾಗತಿಕ ಏಕಾಂಕ ನಾಟಕ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ, ಜೀವಪದ ಪ್ರಶಸ್ತಿ, ಕರ್ನಾಟಕ ಮತ್ತು ತೆಲುಗು ಬರಹಗಾರರ ಸಂಘದ ವತಿಯಿಂದ ಅಂತರರಾಷ್ಟ್ರೀಯ ಯುಗಾದಿ ಪುರಸ್ಕಾರ, ಆರ್ಯಭಟ ಪುರಸ್ಕಾರ, ಲೇಖಿಕಾ ಸಾಹಿತ್ಯಶ್ರೀ ಪುರಸ್ಕಾರ, 'ಆಯಾಮ’ ನಾಟಕಕ್ಕೆ ಶಿವಮೊಗ್ಗದ ರಂಗ ಕಲಾವಿದರ ಒಕ್ಕೂಟದಿಂದ ಬಹುಮಾನ, ಬೆಂಗಳೂರು ಕಿರು  ನಾಟಕೋತ್ಸವದಲ್ಲಿ 'ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ, ಹಶ್ಮಿ ಥಿಯೇಟರ್ ನಡೆಸಿದ ಎನಾಕ್ಟ್ ರಾಷ್ಟ್ರೀಯ ರಂಗೋತ್ಸವದಲ್ಲಿ ಅತ್ಯುತ್ತಮ ನಾಟಕಕಾರ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ. 2019ನೇ ಸಾಲಿನ ಬೇಲೂರು ತಾಲೂಕು ಕನ್ನಡ  ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಇವರಿಗೆ ಲಭಿಸಿತ್ತು.

ಸಾಧಕರಾದ ಬೇಲೂರು ರಘುನಂದನ್ ಅವರಿಗೆ. ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Beluru Raghunandan 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ