ಕೃಪಾ ದೇವರಾಜ್
ಕೃಪಾ ದೇವ ರಾಜ್
ಬರಹಗಾರ್ತಿ ಕೃಪಾ ದೇವರಾಜ್ ಅವರು ಬಹುಮುಖಿ ಪ್ರತಿಭೆಯಾಗಿ ಹೆಸರಾಗಿದ್ದಾರೆ.
ಮೇ 6, ಕೃಪಾ ದೇವರಾಜ್ ಅವರ ಜನ್ಮದಿನ. ಅವರು ಕೊಡಗಿನ ಗಡಿಭಾಗ ತಿತಿಮತಿಯಲ್ಲಿ ಹುಟ್ಟಿ ಬೆಳೆದವರು. ತಂದೆ ಈರಪ್ಪ. ತಾಯಿ ಅನುಸೂಯ. ಈ ತಂದೆ ತಾಯಿಯ ಪ್ರಥಮ ಸುಪುತ್ರಿಯಾದ ಕೃಪಾ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದು, ಆನಂತರ ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಂ.ಕಾಂ ಪದವಿ ಪಡೆದರು. ಡಿಪ್ಲೋಮಾ ಇನ್ HRM ಪದವಿಯನ್ನು ವಿವಾಹದ ಪಡೆದುಕೊಂಡರು. ಕೇಂದ್ರ ಸರ್ಕಾರದ, Diploma in Agricultural Extension Service for Input dealers "ದೇಸಿ" ಪದವಿಯನ್ನು ICAR ಕೃಷಿ ವಿಜ್ಞಾನ ಕೇಂದ್ರ ಹೈದರಾಬಾದ್ ಕೇಂದ್ರ, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮುಖಾಂತರ ಒಂದು ವರ್ಷದ 2016-17 ಕಾಲಾವಧಿಯಲ್ಲಿ ನಡೆಸಿದ್ದಾಗ, ಟಾಟಾ ಕಾಫಿ ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ ಶುಲ್ಕದ ಮೊತ್ತವನ್ನು ಕೊಟ್ಟು ಓದಿಸಿದ್ದು, ಕೊಡಗು ಜಿಲ್ಲೆಯ ಒಟ್ಟು 40 ವಿದ್ಯಾರ್ಥಿಗಳಲ್ಲಿ 93% ಅಂಕಗಳಿಸುವುದರ ಮೂಲಕ ಕೊಡಗಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಮದುವೆ, ಮಕ್ಕಳು, ಉದ್ಯೋಗ ಇವೆಲ್ಲದರ ನಡುವೆ ಓದಿ ಇಷ್ಟು ಅಂಕ ಪಡೆದಿದ್ದು ಇವರ ಹೆಗ್ಗಳಿಕೆ.
ಕೃಪಾ ಅವರು ಪ್ರಸ್ತುತ ಟಾಟಾ ಕಾಫಿಯ ತೋಟಗಾರಿಕಾ ವಿತರಣಾ ವಿಭಾಗದಲ್ಲಿ , ವಿರಾಜಪೇಟೆ ಶಾಖೆಯಲ್ಲಿ Branch in Charge ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ಪುತ್ರರನ್ನು ಹೊಂದಿದ್ದು, ಇವರ ಪತಿ ಶ್ರೀ ದೇವರಾಜ್ ಅವರು ಮಡಿಕೇರಿ ತಾಲ್ಲೂಕು ಕಚೇರಿಯಲ್ಲಿ ಶಿರಸ್ತೆದಾರರಾಗಿದ್ದಾರೆ.
ಭಾವದ ಕದತಟ್ಟಿ - ಕವನ ಸಂಕಲನ, ಮರ್ಮರ ಕಥಾ ಸಂಕಲನ, ಚೌಚೌ ಬಾತ್ - ಲಲಿತ ಪ್ರಬಂಧಗಳ ಸಂಕಲನ, ಕಾರ್ಪಣ್ಯದ ಹೂವು - ಕವನ ಸಂಕಲನ ಪುಸ್ತಕಗಳನ್ನು ಹೊರ ತಂದಿದ್ದಾರೆ. ಇವರ *ಮರ್ಮರ* ಕಥಾ ಸಂಕಲನಕ್ಕೆ ಇತ್ತಿಚೆಗೆ ಬೆಳಗಾವಿಯಲ್ಲಿ *ಆಜೂರ ಪ್ರತಿಷ್ಠಾನದ ಪ್ರತಿಷ್ಠಿತ ರಾಜ್ಯ ಮಟ್ಟದ ಪ್ರಶಸ್ತಿ* ದೊರಕಿದೆ. ಇವರ ಐದನೇ ಕೃತಿ ಹೊಸ ಕಥಾ ಸಂಕಲನ *ಮಂತ್ರ ಪುಷ್ಪ* 2025ರ ವೀರಲೋಕದ ಪುಸ್ತಕ ಸಂತೆಯಲ್ಲಿ ಲೋಕಾರ್ಪಣೆಗೊಂಡಿದೆ. ಕೇರಳದ ಕಾಲಾಟಿಯ ಶಂಕರಾಚಾರ್ಯ ವಿಶ್ವವಿದ್ಯಾಲಯ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಹೊರತರುವ ಕವನ ಸಂಕಲನಕ್ಕೆ ಇವರ 12 ಕವನಗಳು ಆಯ್ಕೆ ಆಗಿದೆ. ಇವರಿಗೆ ಕೊಡಗು ಜಿಲ್ಲಾ ಕನ್ನಡ ಪರಿಷತ್ತಿನಿಂದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಸಂದಿದೆ.
ಪ್ರಖ್ಯಾತ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಕವನ ವಾಚನ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ "ಕಾಡುವ ಕೀರಂ" ಅಹೋರಾತ್ರಿ ಕವಿಗೋಷ್ಠಿ ಹೀಗೆ ಹಲವಾರು, ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಸಾಹಿತ್ಯ ಚಟುವಟಿಕೆಗಳಲ್ಲಿ , ಕವಿಗೋಷ್ಠಿಗಳಲ್ಲಿ ಕೃಪಾ ಭಾಗವಹಿಸಿದ್ದಾರೆ. ಇವರ ಕಥೆ ಕವನ ಲೇಖನಗಳು ಸುಧಾ ತರಂಗ ಮಂಗಳಾ, ವಿಜಯ ಕರ್ನಾಟಕ, ಶಕ್ತಿ ಇನ್ನಿತರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕೃಪಾ ಅವರು ಬರಹಗಾರ್ತಿಯಾಗಿಯಲ್ಲದೇ, ಕನ್ನಡ ಸಾಹಿತ್ಯ ಪರಿಷತ್, ಜಾನಪದದ ಪರಿಷತ್, ಕಥಾಗುಚ್ಛದ ಕಾರ್ಯಕ್ರಮ ಇನ್ನಿತರ ಕಾರ್ಯಕ್ರಮಗಳಲ್ಲಿ ನಿರೂಪಣೆ, ಹಲವಾರು ಸ್ಪರ್ಧೆಗಳಿಗೆ ತೀರ್ಪುಗಾರಳಾಗಿ,., ಟಿವಿ ಮಾಧ್ಯಮದಲ್ಲಿ ವಾರ್ತಾ ವಾಚಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಸಂಸ್ಕೃತಿ ಯಾನ ಕೊಡಗು ಜಿಲ್ಲಾ ಸಂಚಾಲಕಿಯಾಗಿದ್ದಾರೆ.
ಮನೆ, ಮಕ್ಕಳು, ಕಚೇರಿ, ಯೋಗ, ವ್ಯಾಯಾಮ, ಪ್ರಕೃತಿ ನಡಿಗೆ, ಚಾರಣ, ಸೈಕ್ಲಿಂಗ್, ಡ್ರೈವಿಂಗ್, ಗೆಳತಿಯರು ಹೀಗೆ ಸದಾ ಚಟುವಟಿಕೆಯಿಂದ ಕ್ರಿಯಾಶೀಲರಾಗಿರುವ ವ್ಯಕ್ತಿತ್ವ ಕೃಪಾ ಅವರದು.
ಹಸನ್ಮುಖಿ ಉತ್ಸಾಹಿ ಆತ್ಮೀಯರಾದ ಕೃಪಾ ದೇವರಾಜ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.

ಕಾಮೆಂಟ್‌ಗಳು