ಸಿಗ್ಮಂಡ್ ಫ್ರಾಯ್ಡ್
ಸಿಗ್ಮಂಡ್ ಫ್ರಾಯ್ಡ್
ಹೊರಗಿನ ಪ್ರಪಂಚದಲ್ಲಿ ಇತರರೊಂದಿಗೆ ಬದುಕಿಗೆ ತೆರೆದುಕೊಳ್ಳಬೇಕಾದ ಮನುಷ್ಯ, ತನಗೆ ಜನ್ಮಜಾತವಾಗಿ ಬಂದ ಜೀವಮಿತಿ, ಕಾಮನೆ, ಪ್ರವೃತ್ತಿ, ಭಯ ಇವುಗಳೊಂದಿಗೆ ಮಾಡಬೇಕಾದ ಹೋರಾಟ ಅನೇಕ ವಿಧದ್ದು. ಈ ಸಂಘರ್ಷವನ್ನು ಧಾರ್ಮಿಕ ಎಳೆಯಲ್ಲಿ ಕಾಣತೊಡಗಿದ ಮಾನವ ಎಲ್ಲೂ ಸಲ್ಲದವನಾಗಿ ಕಂಗೆಡುತ್ತಾನೆ. ಇಂತಹ ಅವಲೋಕನವನ್ನು ವೈಜ್ಞಾನಿಕ ನಿಟ್ಟಿನಲ್ಲಿ ಕೈಗೊಂಡ ಮಹತ್ವದ ವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್.
ಸಿಗ್ಮಂಡ್ ಫ್ರಾಯ್ಡ್ ಆಸ್ಟ್ರಿಯಾದ ನರಶಾಸ್ತ್ರಜ್ಞರಾಗಿದ್ದು ಮನಃಶಾಸ್ತ್ರದ ಮನೋವಿಶ್ಲೇಷಣಾ ಪಂಥವನ್ನು ಆರಂಭಿಸಿದ ಖ್ಯಾತ ಮನಃಶಾಸ್ತ್ರಜ್ಞ. ಇವರು 1856 ವರ್ಷದ ಮೇ 6 ರಂದು ಈಗ ಜೆಕಸ್ಲೋವಾಕಿಯದಲ್ಲಿರುವ ಫ್ರೆಯ್ ಬರ್ಗ್ ಎಂಬಲ್ಲಿ ಜನಿಸಿದರು. ಇವರು ತಮ್ಮ ಜೀವಮಾನವನ್ನೆಲ್ಲಾ ವಿಯೆನ್ನಾದಲ್ಲೇ ಕಳೆದರು.
ಯಾವ ಯಾವ ಶಾರೀರಿಕ ರೋಗಗಳಿಗೆ ಯಾವ ಯಾವ ಔಷಧಿಗಳನ್ನು ಕೊಟ್ಟು ಗುಣಪಡಿಸಬೇಕು ಎಂಬ ವಿಷಯವಾಗಿ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳಾಗುತ್ತಿದ್ದಾಗ ಮಾನಸಿಕ ರೋಗಗಳನ್ನು ಗುಣಪಡಿಸುವ ವಿಷಯದ ಕಡೆಗೆ ಗಮನ ಹರಿಸಿದ ವಿಜ್ಞಾನಿಗಳು ಕಮ್ಮಿ. ನರ ಮಂಡಲ ವ್ಯವಸ್ಥೆ, ಶರೀರದ ಅಂಗಗಳ ರಚನೆ, ಆರೋಗ್ಯಕರ ಶಾರೀರಕ ಸ್ಥಿತಿ ಎಲ್ಲ ಇರುತ್ತದೆ. ಆದರೆ ವ್ಯಕ್ತಿ ಮಾತ್ರ ವಿಚಿತ್ರವಾದ ರೀತಿಯಲ್ಲಿ, ಅಸಹಜವಾಗಿ ವರ್ತಿಸುತ್ತಿರುತ್ತಾನೆ. ಇದನ್ನೇ ಮಾನಸಿಕ ರೋಗ ಎನ್ನುತ್ತೇವೆ.
ವಿದ್ಯಾರ್ಥಿಯಾಗಿದ್ದಾಗ ಫ್ರಾಯ್ಡ್ ಅವರಿಗೆ ಮೊದಲು ರಾಸಾಯನಿಕ ಶಾಸ್ತ್ರದಲ್ಲಿ ಆಸಕ್ತಿ ಮೂಡಿತು. ಮುಂದೆ ಜೀವಶಾಸ್ತ್ರದಲ್ಲಿ ಕೆಲವು ಸಂಶೋಧನೆಗಳನ್ನು ಮಾಡಿ, ಔಷಧ ಶಾಸ್ತ್ರದಲ್ಲಿ ಮನಸ್ಸು ತೊಡಗಿಸಿದರು. ಆಮೇಲೆ ನರರೋಗಶಾಸ್ತ್ರದ ಅಧ್ಯಯನ ಮಾಡಿ 1886 ರಲ್ಲಿ ನರರೋಗ ಚಿಕಿತ್ಸಾಲಯವೊಂದನ್ನು ತೆರೆದರು.
ಚಿಕಿತ್ಸಾಲಯಕ್ಕೆ ಮಾನಸಿಕ ರೋಗಿಗಳು ಹೆಚ್ಚು ಸಂಖ್ಯೆಯಲ್ಲಿ ಬರತೊಡಗಿದಾಗ ಸಿಗ್ಮಂಡ್ ಫ್ರಾಯ್ಡ್ ಅವರ ಲಕ್ಷ್ಯ ಮನೋರೋಗ ಚಿಕಿತ್ಸಾ ವಿಧಾನಗಳತ್ತ ಹರಿಯಿತು. ಮಾನಸಿಕ ರೋಗಿಗಳನ್ನು ಗುಣಪಡಿಸುವ ಹೆಸರಿನಲ್ಲಿ ಅವರಿಗೆ ಹಿಂಸೆ ಕೊಡುತ್ತಿದ್ದ ಮಾಂತ್ರಿಕರ ಕಾಲ ಅದು. ಈ ಸಮಸ್ಯೆಯನ್ನು ಬಗೆಹರಿಸಲು ಫ್ರಾಯ್ಡ್ ಬೇರೆ ಬೇರೆ ಮನೋರೋಗಿಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಿದರು. ಅಂಥ ರೋಗಿಗಳ ಜತೆ ಸಮಾಧಾನದಿಂದ ವರ್ತಿಸಿ ಅವರನ್ನು ಗುಣಪಡಿಸುವ ವಿಧಾನಗಳನ್ನು ರೂಪಿಸತೊಡಗಿದರು. ಬ್ರಾಯೆರ‍್ ಎಂಬುವರು ಮನೋರೋಗಿಗಳನ್ನು ಗುಣಪಡಿಸಲು ಅನುಸರಿಸುತ್ತಿದ್ದ ಸಮ್ಮೋಹನ ವಿದ್ಯೆಯ (ಹಿಪ್ನಾಟಿಸಂ) ವಿಧಾನ ಇವರ ಗಮನ ಸೆಳೆಯಿತು. ಸಿಗ್ಮಂಡ್ ಫ್ರಾಯ್ಡ್ ಅದರ ಬಗ್ಗೆ ವ್ಯಾಸಂಗ ಮಾಡಿ ಅದಕ್ಕಿಂತ ಪರಿಣಾಮಕಾರಿಯಾದ “ಫ್ರೀ ಅಸೋಸಿಯೇಷನ್” (ಮುಕ್ತವಾಗಿ ಬೆರೆಯುವುದು) ಎಂಬ ವಿಧಾನವನ್ನು ಕಂಡುಹಿಡಿದರು. ಇವೆಲ್ಲವನ್ನೂ ಆಧಾರವಾಗಿಟ್ಟುಕೊಂಡು ಮನೋರೋಗಿಗಳ ಚಿಕಿತ್ಸೆಗೆ “ಸೈಕೊ ಅನಾಲಿಸಿಸ್” (ಮನೋ ವಿಶ್ಲೇಷಣೆ) ಎಂಬ ಹೊಸ ವಿಜ್ಞಾನ ಶಾಖೆಯನ್ನೇ ರೂಢಿಗೆ ತಂದರು.
ಕನಸುಗಳ ಬಗ್ಗೆ ಫ್ರಾಯ್ಡ್ ಅವರು ಮಾಡಿದ ಸಂಶೋಧನೆ ಮನೋವಿಜ್ಞಾನಕ್ಕೆ ಸಲ್ಲಿಸಿದ ಇನ್ನೊಂದು ದೊಡ್ಡ ಕೊಡುಗೆ. ಜಾಗೃತ ಮನಸ್ಸು ನಿದ್ರಿಸುತ್ತಿದ್ದಾಗ ಸುಪ್ತ ಮನಸ್ಸಿನ ಆಸೆಗಳು ಕನಸಿನ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತವೆ ಎಂಬುದನ್ನು ಅವರು ಗಮನಕ್ಕೆ ತಂದರು.
ನಾಜಿಗಳು ಆಸ್ಟ್ರಿಯವನ್ನು ಆಕ್ರಮಿಸಿದ್ದರಿಂದ ಲಂಡನ್ನಿನಲ್ಲಿ ನೆಲೆಸಿದ್ದ ಸಿಗ್ಮಂಡ್ ಫ್ರಾಯ್ಡ್, 1938ರ ಸೆಪ್ಟೆಂಬರ್ 23 ರಂದು ನಿಧನರಾದರು.
On the birth anniversary of neurologist and founder of psychoanalysis Sigmund Freud
ಕಾಮೆಂಟ್‌ಗಳು