ಜಯಂತ್ ವಿಷ್ಣು ನಾರಳೀಕರ
ಮಹಾನ್ ವಿಜ್ಞಾನಿ ಮತ್ತು ಸಾಹಿತಿ
ಜಯಂತ್ ವಿಷ್ಣು ನಾರಳೀಕರ ನಿಧನ
ಖ್ಯಾತ ಖಭೌತವಿಜ್ಞಾನಿ ಮತ್ತು ಲೇಖಕ ಪ್ತೊ. ಜಯಂತ್ ವಿಷ್ಣು ನಾರಳೀಕರ (86) ಅವರು ಇಂದು ನಿಧನರಾಗಿದ್ದಾರೆ. ನಾರಳೀಕರ ಅವರು ಖಭೌತ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಅಸಾಧಾರಣವಾದದ್ದು. ದೇಶದಲ್ಲಿ ಪ್ರಸಿದ್ಧ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸಾಹಿತಿಯಾಗಿಯೂ ಅವರು ಪ್ರಸಿದ್ಧರು.
ವಿಷ್ಣು ನಾರಳೀಕರ ಅವರು 1938ರ ಜುಲೈ 19ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದರು. ತಂದೆ ವಿಷ್ಣು ನಾರಳೀಕರ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ರ್‍ಯಾಂಗ್ಲರ್ ಗೌರವಾನ್ವಿತರು. ತಾಯಿ ಮುಂಬೈ ವಿಶ್ವವಿದ್ಯಾಲಯದಿಂದ ಸಂಸ್ಕೃತ ಪದವಿ ಪಡೆದಿದ್ದರು. ನಾರಳೀಕರ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಗಣಿತ ಮತ್ತು ಭೌತಶಾಸ್ತ್ರಗಳನ್ನು ಆಯ್ದುಕೊಂಡು 1957ರಲ್ಲಿ ಪ್ರಥಮ ರ್‍ಯಾಂಕ್ ಸಾಧನೆಯೊಂದಿಗೆ ಬಿ.ಎಸ್‍ಸಿ ಪದವಿ ಪಡೆದರು. ಟಾಟಾ ಗೌರವ ವೇತನ## ಪಡೆದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತ, ಭೌತ ಶಾಸ್ತ್ರ, ಸಂಖ್ಯಾ ಶಾಸ್ತ್ರಗಳನ್ನು ಆಭ್ಯಾಸ ಮಾಡಿ 1963ರಲ್ಲಿ ಡಾಕ್ಟೊರೇಟ್ ಗಳಿಸಿದರು. ಡಾಕ್ಟರೇಟ್ ಅಧ್ಯಯನದ ಸಂದರ್ಭದಲ್ಲಿ ತಮ್ಮ ಮಾರ್ಗದರ್ಶಕರಾದ ಪ್ರಸಿದ್ಧ ವಿಜ್ಞಾನಿ ಫ್ರೆಡ್ ಹೋಯ್ಲ್ ಅವರೊಂದಿಗೆ ಗುರುತ್ವಾಕರ್ಷಣೆ ಕುರಿತು ತಮ್ಮದೇ ಸಿದ್ಧಾಂತ ಸಿದ್ಧಪಡಿಸಿದ್ದರು. ಈ ಸಿದ್ಧಾಂತವು ‘ಹೋಯ್ಲ್-ನಾರಳೀಕರ್ ಸಿದ್ಧಾಂತ’ವೆಂದೇ ಹೆಸರಾಗಿದೆ.
ಜಯಂತ್ ಅವರು ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (1972-1989) ಸೇರುವ ಉದ್ದೇಶದಿಂದ ಭಾರತಕ್ಕೆ ಮರಳಿದರು. 1988ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗವು ಅವರನ್ನು ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಅಸ್ಟ್ರೋನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್ (ಐಯುಸಿಎಎ) ಸಂಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿತ್ತು. 2003ರಲ್ಲಿ ನಿವೃತ್ತಿಯಾದರು. ನ್ಯಾಶನಲ್ ಕೌನ್ಸಿಲ್ ಆಫ್ ಎಡುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಮಂಡಳಿಯ ಚೇರ್ ಪರ್ಸನ್ ಗೌರವ ಅವರಿಗೆ ನೀಡಲಾಗಿತ್ತು. Cosmology ಕ್ಷೇತ್ರದ ಸಂಶೋಧನೆಗಳಲ್ಲಿ ಅಪಾರ ಸಾಧನೆ ಮಾಡಿದ್ದ ಜಯಂತ್ ನಾರಳೀಕರ್ ಅವರು ಆ ಕುರಿತು ಅನೇಕ ಸಂಶೋಧನಾ ಬರಹಗಳು ಮತ್ತು ಪಠ್ಯ ಪುಸ್ತಕಗಳಲ್ಲದೆ, ಕಥಾನಕಗಳನ್ನೂ ರಚಿಸಿದ್ದರು.
ನಾರಳೀಕರ್ ಅವರಿಗೆ ಸ್ಮಿತ್ ಪ್ರೈಜ್ (1962), ಪದ್ಮಭೂಷಣ (1965), ಪದ್ಮವಿಭೂಷಣ (2004), ರಾಷ್ಟ್ರಭೂಷಣ ಗೌರವ, ಮಹಾರಾಷ್ಟ್ರ ಭೂಷಣ ಪ್ರಶಸ್ತಿ (2011), ರಾಯಲ್ ಅಸ್ಡ್ರಾನಾಮಿಕಲ್ ಸೊಸೈಟಿ ಆಫ್ ಲಂಡನ್ ಅಸೋಸಿಯೇಟ್ ಗೌರವ, ಭಾರತ ದೇಶದ ಮೂರೂ ವಿಜ್ಞಾನ ಅಕಾಡೆಮಿಗಳ ಅಸೋಸಿಯೇಟ್ ಗೌರವ, ಯುನೆಸ್ಕೊ ಕಳಿಂಗ ಗೌರವ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ನಾರಳೀಕರ್ ಅವರು ಸಾಹಿತಿಗಳಾಗಿಯೂ ಪ್ರಸಿದ್ದರು. ಇಂಗ್ಲಿಷ್, ಹಿಂದೀ ಮತ್ತು ಮರಾಠಿಯಲ್ಲಿ ಪ್ರಸಿದ್ದ ವಿಜ್ಞಾನದ ಕಾಲ್ಪನಿಕ ಬರಹಗಳು, ಕಾದಂಬರಿಗಳು ಮತ್ತು ಕಥೆಗಳನ್ನು ಬರೆದಿದ್ದರು. ಅವರ ಆತ್ಮಚರಿತ್ರೆಯ ಮರಾಠಿ ಪುಸ್ತಕಕ್ಕೆ 2014ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿತ್ತು. ಅವರು 2021ರ ಜನವರಿಯಲ್ಲಿ ನಾಸಿಕ್‌ನಲ್ಲಿ ನಡೆದ 94ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಜಯಂತ್ ವಿಷ್ಣು ನಾರಳೀಕರ ಅವರು 2025ರ ಮೇ 20ರಂದು ನಿಧನರಾದರು. ಅಗಲಿದ ಮಹಾನ್ ಚೇತನಕ್ಕೆ ನಮನ.
Respects to departed soul Great Astrophysicist and Writer Dr. Jayanth Vishnu Narlikar 🌷🙏🌷
ಕಾಮೆಂಟ್‌ಗಳು