ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಾ ಸೀತಾರಾಮ್


 ಗೀತಾ ಸೀತಾರಾಮ್ ಗೀತಾ ಸೀತಾರಾಮ್


ಡಾ. ಗೀತಾ ಸೀತಾರಾಮ್  ಪ್ರಸಿದ್ಧ ಬರೆಹಗಾರ್ತಿ, ಸಂಗೀತಜ್ಞೆ, ಸಂಗೀತಕಲಾವಿದೆ, ಸಂಗೀತ ಗುರು  ಮತ್ತು ವಾಗ್ಗೇಯಗಾರ್ತಿ. 

ಡಾ. ಗೀತಾ ಸೀತಾರಾಮ್ ಅವರು ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ಸಂಶೋಧನಾಲಯ (CFTRI) ಸಂಸ್ಥೆಯಲ್ಲಿ ಡೆಪ್ಯೂಟಿ ಡೈರೆಕ್ಟರ್ ಸ್ಥಾನದವರೆಗಿನ ಹಲವಾರು ಗಣ್ಯ ಜವಾಬ್ಧಾರಿಗಳನ್ನು ನಿರ್ವಹಿಸಿ ನಿವೃತ್ತರಾಗಿದ್ದಾರೆ.

ಗೀತಾ ಸೀತಾರಾಮ್ ಅವರು ಕಾದಂಬರಿ, ನಾಟಕ, ಶಿಶು ಸಾಹಿತ್ಯ, ವ್ಯಕ್ತಿಚಿತ್ರಣ, ಸಂಗೀತ ಸಾಹಿತ್ಯ ಹೀಗೆ ಬಹುಮುಖಿಯಾದ ಸಾಹಿತ್ಯಕೃಷಿ ಮಾಡಿದ್ದಾರೆ.  ಸಂಗೀತ ಕ್ಷೇತ್ರದಲ್ಲಿ ಗಾಯನ ಕಲಾವಿದೆಯಾಗಿ, ಗುರುವಾಗಿ ಮಾತ್ರವಲ್ಲದೆ ವಾಗ್ಗೇಯಗಾರ್ತಿ ಎಂಬ ಹೆಗ್ಗಳಿಕೆಯೂ ಇವರದಾಗಿದೆ.  ಇವರ ಪತಿ ಯೋಗಶ್ರೀ ಡಾ. ಎ. ಆರ್. ಸೀತಾರಾಮ್ ಅವರು ಮೈಸೂರಿನ ಪ್ರಸಿದ್ಧ ಪರಮಹಂಸ ಯೋಗ ಥೆರಪಿ ಅಂಡ್ ಕೌನ್ಸೆಲಿಂಗ್ ಸೆಂಟರಿನ ಸಂಸ್ಥಾಪಕರು. ಗೀತಾ ಅವರು ಗೀತಾಂಜಲಿ ಸೆಂಟರ್ ಆಫ್ ಫೈನ್ ಆರ್ಟ್ ಸಂಸ್ಥೆಯ ನಿರ್ದೇಶಕಿಯಾಗಿದ್ದಾರೆ.  ಹೀಗೆ ಈ ಆದರ್ಶ ದಂಪತಿಗಳ ಕೊಡುಗೆ ಬಹುರೂಪಿಯಾದದ್ದು.

ಗೀತಾ ಸೀತಾರಾಮ್ ಅವರ ಕೃತಿಗಳಲ್ಲಿ ಬೇಲಿ, ಆಸರೆ, ಸಪ್ತಸ್ವರ, ನಾಕುತಂತಿ, ಉಂಗುರ, ನೆಳಲು, ಪೃಥಾ, ರಾಜ ಕಲಾವಿದ ರವಿವರ್ಮ ಮುಂತಾದ ಕಾದಂಬರಿಗಳಿವೆ. ಭೀಷ್ಮ, ಊರ್ಮಿಳಾ ಮುಂತಾದ ನಾಟಕಗಳಿವೆ. ಶಿಶು ಸಾಹಿತ್ಯದಲ್ಲೂ ಇವರ ಕೃಷಿ ಇದೆ.  ಕಡಲು,ಸಾಸಿವೆಯಲ್ಲಿ ಸಾಗರ, ಅಂಗೈಯಲ್ಲಿ ಆಗಸ ಮತ್ತು ಬದುಕು ಪಾರಿಜಾತ ಎಂಬ ನಾಲ್ಕು ಕಥಾಸಂಕಲನಗಳಿವೆ.  ವಿಶ್ವಕವಿ ರವೀಂದ್ರನಾಥ ಎಂಬ ರಂಗದರ್ಶನವಿದೆ. ಕರ್ನಾಟಕ ಸಂಗೀತ ನಡೆದು ಬಂದ ದಾರಿ, ವಂದನೆ ಅಭಿವಂದನೆ, ಮುಂತಾದ ಕೃತಿಗಳಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರ ನೂರೊಂದು ಸ್ವಂತ ರಚನೆಗಳ ಪುಸ್ತಕ 'ನಾದ ನುಡಿ ಸೌರಭ'ವನ್ನು 2015ರಲ್ಲಿ ಪ್ರಕಟಿಸಿದೆ. ಇದಲ್ಲದೆ ಇವರ 48ಸ್ವಂತ ಹಾಗೂ ಅನುವಾದಿತ ರಚನೆಗಳ ಸಂಗ್ರಹ  'ಗೀತಾಂತರಂಗ' ಕೃತಿಯನ್ನು ಜುಲೈ 2023ರಲ್ಲಿ ಸ್ವಾತಿ  ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಇವರ ತ್ಯಾಗರಾಜರ ಕೃತಿಗಳ ಆಧಾರಿತ ನಾದ ಬ್ರಹ್ಮ ರಚನಾಮೃತ ಭಾಗ ಒಂದು, ಎರಡು, ಮೂರು ತ್ಯಾಗರಾಜರ ಕೃತಿಗಳ ಕನ್ನಡ ರೂಪ(ತಲಾ 50 ರಚನೆಗಳು) ಪ್ರಕಟಗೊಂಡಿದೆ.  ಸ್ವಾತಿ ತಿರುನಾಳ್, ಪಿಟೀಲು ಚೌಡಯ್ಯನವರ ಕುರಿತು ರಂಗದರ್ಶನವಿದೆ. ಜನಮನಕ್ಕೆ ಮಿಡಿದ ಮೈಸೂರರಸರು (ಎರಡು ನಾಟಕಗಳು) ಅಚ್ಚಿನಲ್ಲಿದೆ.  ಕರ್ನಾಟಕ ಸಂಗೀತಕ್ಕೆ ದೀಪದರ್ಶಿನಿ,ಜಯಸಿಂಹ, ದಯಾದ್ಯುತಿ, ಶಾಂತಿಬ್ರಹ್ಮ.ಸಚ್ಚಿದ್ರೂಪ ಮತ್ತು ಶಿವದೀಪ್ತಿ ಎಂಬ ಆರು ಹೊಸ ರಾಗಗಳ ಕೊಡುಗೆ ನೀಡಿದ್ದಾರೆ. ಅನೇಕ ವೇದಿಕೆಗಳಲ್ಲಿ ಮತ್ತು ಆಕಾಶವಾಣಿಯಲ್ಲಿ ಶಾಸ್ತ್ರೀಯ ಹಾಗೂ ಲಘು ಸಂಗೀತ ಗಾಯನ ನೀಡಿದ್ದಾರೆ. ಜಯದೇವ ಕವಿಯ ಅಷ್ಟಪದಿಗಳು, ಡಿವಿಜಿಯವರ ಅಂತಃಪುರ ಗೀತೆಗಳು, ದಾಸರ ಪದಗಳು, ಮೊದಲಾದವುಗಳಿಗೆ ರಾಗಸಂಯೋಜನೆ ಮಾಡಿದ್ದಾರೆ.  ತಮ್ಮ ನೇತೃತ್ವದ ಗೀತಾಂಜಲಿ ಸೆಂಟರ್ ಆಫ್ ಫೈನ್ ಆರ್ಟ್ ಸಂಸ್ಥೆಯಲ್ಲಿ ಅನೇಕ ಪ್ರತಿಭೆಗಳನ್ನು ಪ್ರಕಾಶಿಸಿದ್ದಾರೆ. ಎಸ್. ಪಿ. ಬಾಲಸುಬ್ರಹ್ಮಣ್ಯಂ ನಡೆಸುತ್ತಿದ್ದ ಈಟಿವಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಆಹ್ವಾನಿತ ತೀರ್ಪುಗಾರ್ತಿಯಾಗಿ ಪಾಲ್ಗೊಂಡಿದ್ದಾರೆ.  ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ಮತ್ತು ಭಾರತಿ ದಾಸನ್ ವಿಶ್ವವಿದ್ಯಾಲಯಗಳಲ್ಲಿ ಆಹ್ವಾನಿತ ಸಂಗೀತ ಉಪನ್ಯಾಸಕಿಯಾಗಿದ್ದಾರೆ.  ವಿದೇಶಗಳಲ್ಲಿನ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ಇವರ ಅನೇಕ ಸಂಗೀತದ ಆಲ್ಬಮ್ಗಳೂ ಜನಪ್ರಿಯಗೊಂಡಿವೆ. ಇವುಗಳಲ್ಲಿ ಗೀತಾ ಸಿಂಧು, ಗೀತಾ ರಶ್ಮಿ, ಗೀತ ಮಾಧುರಿ, ವಸಂತ ಗೀತ, ಧನ್ಯಾ ಹಿರಣ್ಮಯಿ ಲಕ್ಷ್ಮಿ, ವಂದನೆ ಅಭಿವಂದನೆ ಮತ್ತು ತ್ಯಾಗರಾಜ ಗೀತಾಮೃತ.ಸಿರಿನೋಂಪಿ ಕನ್ನಡ ತಿರುಪ್ಪಾವೈ ಸೇರಿವೆ. 

ಡಾ.  ಗೀತಾ ಸೀತಾರಾಮ್ ಅವರಿಗೆ ಮಾಸ್ತಿ ಜನ್ಮಶತಾಬ್ದಿ ಪುರಸ್ಕಾರ, ವನಿತಾ ಪ್ರಜಾವಾಣಿ ಕಥಾಸ್ಪರ್ಧೆ ದೀಪಾವಳಿ ಪುರಸ್ಕಾರ, ಮೈಸೂರು ಮಿತ್ರ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ತಿರುಚ್ಚಿ ಫೈನ್ ಆರ್ಟ್ಸ್-ಪಲ್ಲವಿ ಗಾಯನ ಪ್ರಥಮ ಬಹುಮಾನ, ಮಾನಸ ಗಂಗೋತ್ರಿ ಶಾಸ್ತ್ರೀಯ ಸಂಗೀತ ಸ್ಪರ್ಧೆ ಪ್ರಥಮ ಬಹುಮಾನ, ಕುವೆಂಪು ವಿದ್ಯಾಪರಿಷತ್ ಶ್ರೀರಾಮಾಯಣ ದರ್ಶನಂ ಗಮಕ ಗಾಯನ-ಪ್ರಥಮ ಬಹುಮಾನ, ರಾಗ ಸಂಯೋಜನೆ CFTRI ಪ್ರಶಸ್ತಿ, ಮಾನಸ ಮೂವರ್ಸ್ ಕಾದಂಬರಿ ಸ್ಪರ್ಧೆ ಬಹುಮಾನ,  2019ರ ಮಹಿಳಾ ಲೇಖಕಿ
ಸಾವಿತ್ರಮ್ಮ ದೇಜಗೌ ಪ್ರಶಸ್ತಿ,  ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ಮುಕ್ತ ಸಾಹಿತ್ಯ ಅಕಾಡೆಮಿ ಮತ್ತು ರೋಟರಿ ಪ್ರಶಸ್ತಿ  (2023), ಅಪೂರ್ವ ಕಾದಂಬರಿ ಪ್ರಶಸ್ತಿ(ಲೇಖಿಕಾ ವೇದಿಕೆ 2024), ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ,  ನಾಟ್ಯಲೋಕಕ್ಕೆ ನೀಡಿರುವ  ಸಂಗೀತ ಕೊಡುಗೆಗಾಗಿ 'ನಾಟ್ಯ ಸಂಗೀತ ಶಾರದೆ' ಬಿರುದು ಸೇರಿದಂತೆ ಅನೇಕ ಗೌರವಗಳು ಸಂದಿವೆ.

Writer, Musician and scientist Dr. Geetha Seetharam 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ