ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅರ್ನೆಸ್ಟೊ ಚೆ ಗೆವಾರ


 ಅರ್ನೆಸ್ಟೊ ಚೆ ಗೆವಾರ


ಅರ್ನೆಸ್ಟೊ ಚೆ ಗೆವಾರ, 'ಚೆ' ಎಂಬ ಹೆಸರಿನಿಂದ ಜನಪ್ರಿಯರಾದ ಅರ್ಜೆಂಟೀನಾದ ಮಾರ್ಕ್ಸ್‌ವಾದಿ ಕ್ರಾಂತಿಕಾರಿ, ವೈದ್ಯ, ಲೇಖಕ, ಗೆರಿಲ್ಲಾ ನಾಯಕ, ರಾಜತಾಂತ್ರಿಕ ಮತ್ತು ಮಿಲಿಟರಿ ಸಿದ್ಧಾಂತಿ. ಇವರು ಕ್ಯೂಬನ್ ಕ್ರಾಂತಿಯ ಪ್ರಮುಖ ವ್ಯಕ್ತಿ.

ಅರ್ನೆಸ್ಟೊ ಚೆ ಗೆವಾರ   1928ರ ಜೂನ್ 14ರಂದು ರೊಸಾರಿಯೋ, ಅರ್ಜೆಂಟೀನಾದಲ್ಲಿ ಸೆಲಿಯಾ ಡೆ ಲಾ ಸೆರ್ನ ವೈ ಲ್ಲೋಸಾ ಮತ್ತು ಅರ್ನೆಸ್ಟೊ ಗುವೇರಲಿಂಚ್ ದಂಪತಿಗೆ ಜನಿಸಿದರು. ಆತ ಈ ಕುಟುಂಬದ ಐದು ಮಕ್ಕಳಲ್ಲಿ ಹಿರಿಯರು. ಬ್ಯೂನಸ್ ವಿಶ್ವವಿದ್ಯಾಲಯದಲ್ಲಿ ವಿಧ್ಯಾಭ್ಯಾಸ ಪಡೆದರು. ಇವರ ಮನೆಯಲ್ಲಿ 3000ಕ್ಕಿಂತ ಹೆಚ್ಚು ಪುಸ್ತಕಗಳಿದ್ದವು. ಇದೇ ಇವರನ್ನು ಉತ್ಸಾಹಿ ಮತ್ತು ವಿಶಾಲದೃಷ್ಟಿಯ ಓದುಗರನ್ನಾಗಿ ಮಾಡಿತು.  ಕಾರ್ಲ್ ಮಾರ್ಕ್ಸ್, ವಿಲಿಯಂ ಫಾಲ್ಕ್ನರ್, ಆಂಡ್ರೆ ಗೈಡ್, ಎಮಿಲಿಯೊ ಸಲ್ಗಾರಿ ಮತ್ತು ಜೂಲ್ಸ್ ವರ್ನೆ ಜೊತೆಗೆ ಜವಾಹರಲಾಲ್ ನೆಹರು, ಫ್ರ್ಯಾನ್ಝ್ ಕಾಫ್ಕ, ಆಲ್ಬರ್ಟ್ ಕ್ಯಾಮಸ್, ವ್ಲಾಡಿಮಿರ್ ಲೆನಿನ್, ಮತ್ತು ಜೀನ್ ಪಾಲ್ ಸಾರ್ತ್ರೆ; ಹಾಗೆಯೇ ಅನಾಟೊಲೆ ಫ್ರಾನ್ಸ್, ಫ್ರೆಡ್ರಿಕ್ ಎಂಗೆಲ್ಸ್, ಎಚ್ ಜಿ ವೆಲ್ಸ್, ಮತ್ತು ರಾಬರ್ಟ್ ಫ್ರಾಸ್ಟ್ ಮುಂತಾದವರ ಕೃತಿಗಳನ್ನು ಆನಂದಿಸಿ ಓದುತ್ತಿದ್ದರು.

ವೈದ್ಯನಾಗಲು ಕನಸುಕಂಡಿದ್ದ ಗೆವಾರ ತಮ್ಮ ರಜಾದಿನಗಳಲ್ಲಿ ಲ್ಯಾಟಿನ್ ಅಮೆರಿಕದ ಉದ್ದಕ್ಕೂ ಪ್ರವಾಸ ಕೈಗೊಂಡರು.  ಈ ಸಮಯದಲ್ಲಿ ಮೂಡಿದ ಅನುಭವಗಳು ಅವರಲ್ಲಿ ಒಂದು ಪ್ರಬಲವಾದ ನಿರ್ಣಯ ಮೂಡಲು ಕಾರಣವಾಯಿತು. ಆ ಪ್ರದೇಶದಲ್ಲಿ ಬೇರುಬಿಟ್ಟ ಆರ್ಥಿಕ ಅಸಮಾನತೆ, ಬಂಡವಾಳಶಾಹಿ, ಏಕಸ್ವಾಮ್ಯತೆ, ಸಾಮ್ರಾಜ್ಯಶಾಹಿ ಮತ್ತಿತರ ಆಂತರಿಕ ಬಿಕ್ಕಟ್ಟುಗಳು ತೊಲಗಬೇಕಾದರೆ ಇರುವ ಒಂದೇ ಒಂದು ಮಾರ್ಗವೆಂದರೆ ಕ್ರಾಂತಿ ಎಂಬ ನಂಬಿಕೆ ಇವರಲ್ಲಿ ಬಲವಾಯಿತು.  ಈ ನಂಬಿಕೆಯೇ ಇವರನ್ನು ಅಧ್ಯಕ್ಷ  ಜಾಕೋಬ್ ಅರ್ಬೆಂಜ್ನ ಗ್ವಾಟೆಮಾಲಾ ಸಾಮಾಜಿಕ ಸುಧಾರಣೆಯ ಪಕ್ಷ ಸೇರಲು ಪ್ರೇರೇಪಿಸಿತು. ನಂತರ, ಮೆಕ್ಸಿಕೋ ಸಿಟಿಯಲ್ಲಿ ವಾಸಿಸುತ್ತಿರುವಾಗ ರೌಲ್ ಮತ್ತು ಫಿಡೆಲ್ ಕ್ಯಾಸ್ಟ್ರೋರ ಭೇಟಿಯಾಗಿ ಅವರ ಜುಲೈ 28ರ ಚಳವಳಿಯನ್ನು ಸೇರಿದರು.   ನಂತರ ಅಮೆರಿಕ ಬೆಂಬಲಿತ ಕ್ಯೂಬಾದ ಸರ್ವಾಧಿಕಾರಿ ಫಲ್ಜೆಂಸಿಯೋ ಬಟಿಸ್ಟಾನನ್ನು ಅಧಿಕಾರದಿಂದ ಕಿತ್ತುಹಾಕುವ ಉದ್ದೇಶದಿಂದ ಗ್ರನ್ಮ ಎಂಬ ಹಡಗಿನಲ್ಲಿ ಕ್ಯೂಬಾ ತಲುಪಿದರು. ಗೆವಾರ ಅತೀ ಶೀಘ್ರದಲ್ಲೇ ಬಂಡುಕೋರರ ನಡುವೆ ಪ್ರಸಿದ್ಧಿಯನ್ನು ಪಡೆದ ದೆಸೆಯಿಂದಾಗಿ ಎರಡನೆಯ ಅಧಿಕಾರಿಯಾಗಿ ಬಡ್ತಿ ಗಳಿಸಿದರು.   ಬಟಿಸ್ಟಾ ಆಡಳಿತ ಪದಚ್ಯುತಗೊಂಡನಂತರ ತನ್ನ ವಿಜಯದ ಎರಡು ವರ್ಷದ ಗೆರಿಲ್ಲಾ ಅಭಿಯಾನದಲ್ಲಿ ಪ್ರಮುಖ ಪಾತ್ರವಹಿಸಿದ್ದರು.  1964ರಲ್ಲಿ ಗೆವಾರಾ ತಮ್ಮ ಕ್ರಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ ಕ್ಯೂಬಾವನ್ನು ಬಿಟ್ಟು ವಿದೇಶ ಪ್ರವಾಸವನ್ನು ಕೈಗೊಂಡಿದ್ದರು.  1967ರ ಅಕ್ಟೋಬರ್ 9ರಂದು, ಸಿಐಎ ನೆರವಿನಿಂದ ಗೆವಾರಾ ಅವರನ್ನು ಬೊಲಿವಿಯದಲ್ಲಿ ಸೆರೆಹಿಡಿದು ಅಧಿಕಾರಿಗಳ ಕಟ್ಟಪ್ಪಣೆಯಿಂದ ಗುಂಡುಹೊಡೆದು ಕೊಲ್ಲಲಾಯಿತು.

ಗೆವಾರ ಪ್ರಭಾವೀ ಬರಹಗಾರರೂ ದಿನಚರಿಗಾರರೂ  ಆಗಿದ್ದರು.   ಅವರ  ‘ಗೆರಿಲ್ಲಾ ಸಮರ ಕೈಪಿಡಿ’ ಹಾಗೂ ಲ್ಯಾಟಿನ್ ಅಮೆರಿಕಾದ ಪ್ರವಾಸದ ಘಟನಾವಳಿಗಳನ್ನು ಒಳಗೊಂಡ 'ದ ಮೋಟರ್ ಸೈಕಲ್ ಡೈರೀಸ್' ಉತ್ತಮವಾಗಿ ಮಾರಾಟಗೊಂಡ ಕೃತಿಗಳು. 

2004ರಲ್ಲಿ ಸ್ಪೇನ್ಭಾ‌ಷೆಯಲ್ಲಿ ಚಲನಚಿತ್ರವಾದ ದ ಮೋಟರ್ ಸೈಕಲ್ ಡೈರೀಸ್ ವಿಮರ್ಶಕರಿಂದ ಉತ್ತಮ ವಿಮರ್ಶೆಯನ್ನು ಪಡೆದು ಯಶಸ್ವಿ ಚಿತ್ರವೆನಿಸಿತು. ಗೆವಾರ ಹುತಾತ್ಮರಾದ ಪರಿಣಾಮವಾಗಿ ಒಂದು ಐತಿಹಾಸಿಕ ಪಾತ್ರವಾಗಿ ಬಹುಸಂಖ್ಯೆಯ ಜೀವನಚರಿತ್ರೆ, ಪ್ರಬಂಧ, ಸಾಕ್ಷ್ಯಚಿತ್ರ, ಹಾಡುಗಳು, ಮತ್ತು ಚಿತ್ರಗಳಾಗಿ ಅಮರರಾಗಿದ್ದಾರೆ.

ಟೈಮ್ ನಿಯತಕಾಲಿಕವು ಗೆವಾರ ಅವರನ್ನು  20ನೇ ಶತಮಾನದ 100 ಅತ್ತ್ಯಂತ ಪ್ರಭಾವಿಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪ್ರಕಟಿಸಿತ್ತು. 

ಆಲ್ಬರ್ಟೊ ಕೊರ್ಡೊ ಎಂಬ ಛಾಯಾಗ್ರಾಹಕರು ತೆಗೆದಿರುವ Guerrillero Heroico ಎಂಬ ಇವರ ಭಾವಚಿತ್ರ ಪ್ರಸಿದ್ಧವಾಗಿದೆ. 

On the birth anniversary of Ernesto Che Guevara 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ