ಎಂ.ಜಿ. ಗೋಪಾಲಕೃಷ್ಣನ್
ಎಂ.ಜಿ. ಗೋಪಾಲಕೃಷ್ಣನ್
ವಿದ್ವಾನ್ ಎಂ.ಜಿ. ಗೋಪಾಲಕೃಷ್ಣನ್ ಅವರು ಮೃದಂಗ ವಾದನದಲ್ಲಿ ಖ್ಯಾತರಾದವರು.
ಎಂ.ಜಿ. ಗೋಪಾಲಕೃಷ್ಣನ್ ಅವರು
1952ರ ಆಗಸ್ಟ್ 28ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸಂಗೀತ ವಿದ್ವಾಂಸರಾದ ಎಂ.ಎಸ್. ಗೋವಿಂದರಾವ್. ತಾಯಿ ಸಾವಿತ್ರಮ್ಮ. ಗೋಪಾಲಕೃಷ್ಣನ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಕಾಂ. ಹಾಗೂ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ, ತಿರುಪತಿಯಿಂದ ಎಂ.ಕಾಂ. ಪದವಿ ಗಳಿಸಿದರು.
ಎಂ.ಜಿ. ಗೋಪಾಲಕೃಷ್ಣನ್ ಅವರು ಜನಗಣತಿ ಕಾರ್ಯಾಲಯ, ಬೊರೂಕಾ ಸ್ಟೀಲ್ ಕಂಪನಿ, ಬಿ.ಎಚ್.ಇ.ಎಲ್ ತಿರುಚಿನಾಪಳ್ಳಿ, ಹಾಗೂ ಬಿ.ಎಚ್.ಇ.ಎಲ್. ಬೆಂಗಳೂರು ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಎಂ.ಜಿ. ಗೋಪಾಲಕೃಷ್ಣನ್ ಅವರಿಗೆ ಚಿಕ್ಕಂದಿನಿಂದಲೇ ಸಂಗೀತದಲ್ಲಿ ಆಸಕ್ತಿ ಮೊಳೆಯಿತು. ಮನೆಯಲ್ಲಿ ಸಂಗೀತದ ವಾತಾವರಣವಿತ್ತು. ಹಿರಿಯ ವಿದ್ವಾಂಸರುಗಳಾದ ಎ. ರಾಜಾಚಾರ್, ಕೆ.ಎನ್. ಕೃಷ್ಣಮೂರ್ತಿ, ಕುಂಭಕೋಣಂ ಎಂ. ರಾಜಪ್ಪ ಅಯ್ಯರ್, ತಿನ್ನಿಯಂ ಕೃಷ್ಣನ್, ತಂಜಾವೂರು ರಾಮಮೂರ್ತಿ, ಎ.ವಿ. ಆನಂದ್ ಇವರಲ್ಲಿ ಮೃದಂಗ ವಾದನ ಶಿಕ್ಷಣ ದೊರೆಯಿತು.
ಎಂ.ಜಿ. ಗೋಪಾಲಕೃಷ್ಣನ್ ಹಲವಾರು ಸಂಗೀತೋತ್ಸವಗಳಲ್ಲಿ ಮೃದಂಗ ಕಾರ್ಯಕ್ರಮ ನೀಡಿದ್ದಾರೆ. ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್, ಅಯ್ಯನಾರ್ ಕಾಲೇಜ್ ಆಫ್ ಮ್ಯೂಸಿಕ್, ನಾದಜ್ಯೋತಿ ತ್ಯಾಗರಾಜ ಸಂಗೀತ ಸಭಾ, ಹಂಸಧ್ವನಿ, ರಾಗಸುಧಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ, ಮುಂಬಯಿ, ಸ್ವಾತಿ ತಿರುನಾಳ್ ಸಂಗೀತ ಸಭಾ ತಿರುವನಂತಪುರ, ಚೆನ್ನೈ ಸೇರಿದಂತೆ ಅನೇಕ ಪ್ರಸಿದ್ಧ ವೇದಿಕೆಗಳಲ್ಲಿ ವಿವಿಧ ತಲೆ ಮಾರಿನ ಬಹು ಪ್ರಖ್ಯಾತ ಕಲಾವಿದರಿಗೆ ಮೃದಂಗ ಸಹವಾದನ ನೀಡಿದ್ದಾರೆ.
ಎಂ.ಜಿ. ಗೋಪಾಲಕೃಷ್ಣನ್ ಅವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಲಯ, ವಿನ್ಯಾಸ, ಕ್ಷಣಕ್ಷಣಮ್ ಸಂಸ್ಥೆಯ ಮೂಲಕ ಹಲವಾರು ಶಿಷ್ಯರಿಗೆ ನೀಡುತ್ತಿರುವ ಮೃದಂಗ ಶಿಕ್ಷಣ ನೀಡುತ್ತ ಬಂದಿದ್ದಾರೆ. ಇವರ ಅನೇಕ ಶಿಷ್ಯರು ಪ್ರಸಿದ್ಧ ಕಲಾವಿದರಾಗಿ ಹೆಸರಾಗಿದ್ದಾರೆ.
ಹಿರಿಯರಾದ ವಿದ್ವಾನ್ ಎಂ.ಜಿ. ಗೋಪಾಲಕೃಷ್ಣನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Vidwan MG Gopalakrishnan Sir 🌷🙏🌷
ಕಾಮೆಂಟ್‌ಗಳು