ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್.ವಿ.ವೆಂಕಟಸುಬ್ಬಯ್ಯ


 ರಂಗಕರ್ಮಿ ಎಚ್.ವಿ.ವೆಂಕಟಸುಬ್ಬಯ್ಯ ಸಂಸ್ನರಣೆ 🌷🙏🌷

ಲೇಖಕರು: ನಾರಾಯಣ ರಾಯಚೂರು Narayan Raichur 

ಶ್ರೀರಂಗ-ಸಂಪದ"- ಆರುನೂರು ಪುಟಗಳ ಸತ್ವ-ಸಮೃದ್ಧ,ಸಂಗ್ರಹಯೋಗ್ಯ ಬೃಹದ್- ಗ್ರಂಥ. ವಿಶ್ವವಿದ್ಯಾಲಗಳೊ ,ಅಕಾಡೆಮಿಗಳೋ ವರ್ಷಾನುಗತಾಳೆ ತಿಣುಕಾಡಿ ಪ್ರಕಟಿಸಬಲ್ಲ ಗ್ರಂಥ!. ರಂಗಭೂಮಿಯನ್ನು 'ಹವ್ಯಾಸ'ವಾಗಿ ಸ್ವೀಕರಿಸಿದ' ವ್ಯಕ್ತಿ'ಯೊಬ್ಬ ಇಂತಹ ಸಾಹಸಕ್ಕೆ ಕೈಹಾಕುವುದು ಹುಚ್ಚು-ಸಹಾಸವೇ ಸರಿ. ತಾರುಣ್ಯದಿಂದಲೇ ನಾಟಕದ 'ಹುಚ್ಚಿ'ದ್ದ ಎಚ್.ವಿ.ವೆಂಕಟಸುಬ್ಬಯ್ಯನವರಿಗೆ ಇಂತಹ ಸಾಹಸ,ಸವಾಲುಗಳೇ ಅಚ್ಚು-ಮೆಚ್ಚು!! ಅಂತೆಯೇ ತಮ್ಮ ಪರಮ-ಗುರು ಶ್ರೀರಂಗರಿಗೆ ಅರ್ಪಿಸಿದ ಅನುಪಮ ಗುರು-ಕಾಣಿಕೆ ಕೃತಿಯೇ-"ಶ್ರೀರಂಗ-ಸಂಪದ".  

ಎಂಭತ್ತಾರು ವರ್ಷಗಳ ತುಂಬು ಜೀವನ ನಡೆಸಿ ಅದರಲ್ಲಿ ಎಪ್ಪತ್ತು ವರ್ಷಗಳನ್ನು ರಂಗ-ಕಾಯಕದಲ್ಲೇ ತೇಯ್ದು, ರಂಗಭೂಮಿಯ ಸರಿ-ಸುಮಾರು ಎಲ್ಲ ವಿಭಾಗಳಲ್ಲೂ ತೊಡಗಿಕೊಂಡು ಕೊಡುಗೆ ನೀಡಿ, ಸೆಪ್ಟೆಂಬರ್ ೧೨,೨೦೨೨ರಂದು ನಮ್ಮನ್ನಗಲಿದ, ಹಂಪಾಪುರ (ಎಚ್)ವೆಂಕಟರಾಮಯ್ಯ (ವಿ)ವೆಂಕಟಸುಬ್ಬಯ್ಯ ಅವರದು ಅಪರಿಮಿತ ಸಾಧನೆಯ ಅಪರೂಪದ ವ್ಯಕ್ತಿತ್ವ

 ನನ್ನ-ಅವರ ಒಡನಾಟ ನಾಲ್ಕು ದಶಕದ್ದು. "ಗುಲಾಮನ ಸ್ವತಂತ್ರ ಯಾತ್ರೆ" ನಾಟಕವನ್ನು ಅವರು ರಂಗಸಂಪದಕ್ಕಾಗಿ ನಿರ್ದೇಶಿಸುತ್ತಿದ್ದ ದಿನಗಳವು. ನಾನು ಅವರಿಗೆ ಪ್ರಾಂಪ್ಟ್-ಅಸಿಸ್ಟೆಂಟ್; ಕಲಿಯಲು ಸಾಕಷ್ಟು ಅವಕಾಶವಿರುವ ಕೆಲಸವದು. ಸುಬ್ಬಣ್ಣನವರ ನಿರ್ದೇಶನದ ವೈಖರಿ, ಶಿಸ್ತು, ಪರಿಕಲ್ಪನೆ ಹಾಗೂ ಒಟ್ಟು ಪ್ರಯೋಗದ ಪರಿಣಾಮದ ಹಿಂದಿನ ಅವರ ಶ್ರಮ- ಕೌಶಲ್ಯದ ಪರಿಚಯವಾದದ್ದು ಅಲ್ಲಿಯೇ. ಮುಂದೆ ಮಹಾ ಬೆರಗಿನ "ಡಾ.ಫಾಸ್ಟ್ ಸ್ "ನಾಟಕಕ್ಕೆ ಅವರು ಮಾಡಿದ್ದ ಅದ್ಭುತ ಲೈಟಿಂಗ್, ಕಲಾಕ್ಷೇತ್ರದ ಗೋಡೆ-ಛಾವಣಿಗಳನ್ನೆಲ್ಲ ಆವರಿಸಿ ನಾನೂ ಸೇರಿದಂತೆ ಅನೇಕರನ್ನು ದಂಗುಗೊಳಿಸಿದ್ದು ಐತಿಹಾಸಿಕ ದಾಖಲೆ. 

ಶ್ರೀರಂಗರ ಅತ್ಯಾಪ್ತ ; ಆಧುನಿಕ ನಾಟಕಗಳ ಆದ್ಯಪ್ರವರ್ತಕರಲ್ಲೊಬ್ಬರಾದ ಶ್ರೀರಂಗರು ಬಲು ಕಟ್ಟು-ನಿಟ್ಟಿನ ನಾಟಕಕಾರ. ಅವರ ಸ್ಕ್ರಿಪ್ಟ್ ಹಾಗೂ ಅವರೇ ನೀಡಿರುತ್ತಿದ್ದ ನಿರ್ದೇಶನಗಳನ್ನು ಚಾಚೂ ತಪ್ಪಿಸುವಂತಿಲ್ಲ. ಅಂತೆಯೇ ಅವರು ವಿಶ್ವಾಸದಿಂದ ರಂಗ ಪ್ರಯೋಗದನುಮತಿ ನೀಡುತ್ತಿದ್ದುದು ಕೆಲವರಿಗೆ ಮಾತ್ರ; ಇನ್ನು ಆಪ್ತವಲಯದ ಪ್ರವೇಶವಂತೂ ದುರ್ಲಭವೇ. ಸುಬ್ಬಣ್ಣ ಸೌಭಾಗ್ಯವಂತರು. ಶ್ರೀರಂಗರ ಪರಮಾಪ್ತರಾಗಿ, ಸಮಗ್ರ ಮಂಥನ,ಅಗ್ನಿಸಾಕ್ಷಿ,ಉತ್ತಮ ಪ್ರಭುತ್ವ.. ಶೋಕ ಚಕ್ರ ಗಳಂತಹ ಅನೇಕ ನಾಟಕಗಳನ್ನು ರಂಗ -ಸಾಕ್ಷಾತ್ಕಾರಗೊಳಿಸಿ  ಹೆಸರಾದವರು. 

ಸುಬ್ಬಣ್ಣರ ಸಾತ್ವಿಕ ಸಿಟ್ಟು:ತುರ್ತು ಪರಿಸ್ಥಿಯ ನಂತರ ನಡೆದ, ಇಂದಿರಾಗಾಂಧಿ ಅವರು ಸ್ಫರ್ಧಿಸಿ ಹೆಸರುಮಾಡಿದ್ದ  ಚಿಕ್ಕಮಗಳೂರು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಜನ-ಜಾಗೃತಿಗಾಗಿ ರಂಗ -ಸಂಪದ ತಂಡಕ್ಕಾಗಿ ವೆಂಕಟಸುಬ್ಬಯ್ಯ( ಸುಬ್ಬಣ್ಣ) ಶ್ರೀರಂಗರ 'ಸಮಗ್ರ ಮಂಥನ' ನಾಟಕವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ , ಪರಿಣಾಮಕಾರಿಯಾಗಿ ಪ್ರಯೋಗಿಸಿ, ಪೊಲೀಸರ ಕೆಂಗಣ್ಣಿಗೆ ಗುರಿಯಾಗುವಂತೆನಿಸಿದರೂ ಉಪಾಯದಿಂದ ಕಣ್ತಪ್ಪಿಸಿ ರಂಗ-ಸಂಚಾರ ಮಾಡಿಕೊಂಡು ಬಂದು , ನಾಟಕದ ಸಂದೇಶವನ್ನು ತಲುಪಿಸಿ ಗೆದ್ದರು-ಮಾತ್ರವಲ್ಲ, ಸಮಯ-ಸಂದರ್ಭಾನುಸಾರ ಮೃದು-ಸ್ವಾಭಾವಿಗಳೂ ಕಠಿಣ ಹೃದಯಿಗಳಾಗಬಲ್ಲರೆಂದು ತೆರೆದು ತೋರಿದರು.

ನಾ.ಕಸ್ತೂರಿ, ಬಿ.ಸಿ, ಕೈಲಾಸಂ, ಲಂಕೇಶ್, ನ.ರತ್ನ ಹೀಗೆ ವಿಭಿನ್ನ ಬಗೆಯ ನಾಟಕಕಾರರ ನಾಟಕಗಳನ್ನು ಸುಬ್ಬಣ್ಣ ಪ್ರಯೋಗಿಸಿ ಪಕ್ವಗೊಂಡರು. ಬೆಳಕು ಮತ್ತು ವಸ್ತ್ರವಿನ್ಯಾಸದ ಹೊಣೆಹೊತ್ತು ಸುಬ್ಬಣ್ಣ ನಿರ್ದೇಶಿಸಿದ, ಎಂ..ಎಸ್.ಕೆ. ಪ್ರಭು ಅವರ 'ಮಹಾ-ಪ್ರಸ್ಥಾನ' ನಾಟಕ ಮಾತ್ರ ಸ್ಮರಣಾರ್ಹ ರಂಗ ಪ್ರಯೋಗಳಲ್ಲೊಂದಾಗಿ ಇಂದಿಗೂ ರಂಗಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.   
ಆರ್.ನಾಗೇಶ್, ಜೆ.ಲೋಕೇಶ್, ಸಿ.ಜಿ.ಕೆ. ಮೊದಲಾದ ತಮ್ಮ ಸಮಕಾಲೀನರ ಜೊತೆ ಯಯಾತಿ, ರಂಗ ಭಾರತ, ತಾಯಿ, ಸೂರ್ಯ ಶಿಕಾರಿ ಮೊದಲಾದ ನಾಟಕಗಳಲ್ಲಿ ಹಿನ್ನೆಲೆಯ ವಿಭಾಗಳನ್ನು ಹಾಗು ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ 'ಕರ್ನಾಟಕ ವೈಜಯಂತ' ಮತ್ತು ಕೀರ್ತಿನಾಥ ಕುರ್ತಕೋಟಿ ಅವರ 'ಚಂದ್ರಗುಪ್ತ' ನಾಟಕಗಳನ್ನೂ  ಸಮರ್ಥವಾಗಿ ಪ್ರದರ್ಶನಕ್ಕೆ ತಂದ  ಸುಬ್ಬಣ್ಣ  ಅನೇಕ ಬಾನುಲಿ ನಾಟಕಗಳನ್ನೂ ಸಿದ್ಧಗೊಳಿಸಿ, ಸೈ  ಎನಿಸಿಕೊಂಡವರು. ದಶಕದ  ಹಿಂದೆ, ಸುಬ್ಬಣ್ಣ ಅಮೇರಿಕಾ ಪ್ರವಾಸ ಕೈಗೊಂಡಾಗ ಕ್ಯಾಲಿಫೋರ್ನಿಯಾದ ಕನ್ನಡ-ಕೂಟ ಆಯೋಜಿಸಿದ ಶ್ರೀರಂಗರ ಜನ್ಮ ಶತಮಾನೋತ್ಸವ ಸಂದರ್ಭಕ್ಕೆ, ಕೂಟದ ಕಲಾವಿದರಿಂದಲೇ ಶ್ರೀರಂಗರ  'ಉತ್ತಮ ಪ್ರಭುತ್ವ ಲೊಳಲೊಟ್ಟೆ ' ನಾಟಕವನ್ನು ಯಶಸ್ವೀಯಾಗಿ ಪ್ರಯೋಗಿಸಿದ್ದುಂಟು. 

ಅಧ್ಯಯನ-ಅಧ್ಯಾಪನ ; ಪ್ರತಿಷ್ಠಿತ ಎಲ್.ಆರ್.ಡಿ.ಈ ಉದ್ಯೋಗಿಯಾಗಿದ್ದ ಸುಬ್ಬಣ್ಣ ತಾವು ಕಲಿತದ್ದನ್ನು ರಂಗಕ್ಕೇ ಧಾರೆಯೆರಯಬೇಕೆಂಬ ತುಡಿತದಿಂದ ಅಧ್ಯಾಪಕರಾಗಿ ಅನೇಕ ರಾಷ್ಟ್ರೀಯ ರಂಗ ತರಬೇತಿ ಶಿಬಿರ,ವಿಶ್ವವಿದ್ಯಾಲಯಗಳ ರಂಗ ವಿಭಾಗ ಹಾಗೂ  ಬೆಂಗಳೂರಿನ ಪ್ರತಿಷ್ಠಿತ ಅಭಿನಯತಂಗದ ಪ್ರಾಂಶುಪಾಲತ್ವಗಳ  ಮೂಲಕ ರಂಗ-ಪ್ರಶಿಕ್ಷಣಕ್ಕೂ ಅನವರತ ಕೊಡುಗೆ ನೀಡಿದವರು. ಅಂದಿನ ರಂಗ ಘಟಾನುಘಟಿಗಳಾದ ವಿ.ರಾಮಮೂರ್ತಿ, ಏ.ಎಸ್ .ಮೂರ್ತಿ, ಪ್ರೊ-.ಬಿ.ಸಿ, ನಾಣಿ, ಪದ್ದಣ್ಣರಂತಹ  ಸಖ್ಯ-ಸಾಮೀಪ್ಯಗಳಿಂದ ರಂಗ ಅಧ್ಯಯನ,ಅಧ್ಯಾಪನಗಳನ್ನು ಶ್ರದ್ದೆಯಿಂದ ನಡೆಸಿ, ಶಿಷ್ಯ -ಸಮೂಹವನ್ನೇ ನೀಡಿ/ಬಿಟ್ಟು  ನಡೆದರು.

ಚಿತ್ರಕಲೆ, ಸಂಗೀತ, ಫೋಟೋಗ್ರಾಫಿ, ರಂಗ ಮಾಹಿತಿ ಸಂಗ್ರಹಣೆ; ಒಂದೇ-ಎರಡೇ!! ಎಲ್ಲ ಉತ್ತಮ ಕಲೆ-ಕಸುಬು ಕೈಗೂಡಿಸಿಕೊಳ್ಳಬೇಕೆಂಬ ತುಡಿತ ಸುಬ್ಬಣ್ಣರದು. ಇವೆಲ್ಲ, ಸಾರ್ಥಕ-ಸಾಕಾರಗೊಳಿಸಿಕೊಂಡವರೂ ಅವರು
ಇಂತಹ ಗಂಭೀರ ಕೆಲಸಗಳ ಮಧ್ಯದಲ್ಲೂ ಸುಬ್ಬಣ್ಣ, ಹಾಸ್ಯ-ಪ್ರಿಯತೆಗೂ ಜಾಗ ಕೊಟ್ಟಿದ್ದರು.ಸುಧಾ,ಮಯೂರ,ಪ್ರಜಾವಾಣಿಗಳೂ ಸೇರಿದಂತೆ ಅನೇಕ ಪತ್ರಿಕಗಳಲ್ಲಿ ಪ್ರಕಟಗೊಂಡ ಅವರ ಹನಿಗವನ, ಚುಟುಕಗಳ ಸಂಗ್ರಹ 
"ವನ್ ಡೇ ಮಾತರಂ", ಆ.ರಾ. .ಸೆ .ಅವರತಂಹ ಖ್ಯಾತ ಹಾಸ್ಯ ಪಟುವಿನ ಮುನ್ನುಡಿ ಮಾತುಗಳೊಂದಿಗೆ ಪ್ರಕಟಗೊಂಡು ಸಾಹಿತ್ಯಪ್ರಿಯರ ಮೆಚ್ಚುಗೆಗೂ ಪಾತ್ರವಾಗಿದೆ. ಇದೆ ಮಾದರಿಯ ಇನ್ನೊಂದು ಸಂಕಲನ-'ಬನದ ಹೂ'.

 ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಬಿ.ವಿ.ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸರಿದಂತೆ ಹಲವು ಹತ್ತು ಪ್ರಶಸ್ತಿಗಳು ಸರಳ, ಸಜ್ಜನ-ಸಾಧಕ ಸುಬ್ಬಣ್ಣನವರ ಹೆಸರಿನೊಂದಿಗೆ ಸೇರಿ ತಮ್ಮ ಗೌರವ ಹೆಚ್ಚಿಸಿಕೊಂಡಿವೆ.     
  
ಪತ್ನಿ, ವೈದ್ಯೆ ಶಾರದಾ, ನಟಿ ಮಾನಸ ಸೇರಿದಂತೆ ಇಬ್ಬರು ಹೆಣ್ಣುಮಕ್ಕಳು, ಮೊಮ್ಮಮಕ್ಕಳ ತುಂಬು ಸಂಸಾರದೊಂದಿಗೆ ಮಲ್ಲೇಶ್ವರಂನ "ನೈಮಿಷಾ " ದಲ್ಲಿ ನೆಲೆಸಿದ್ದ ಸುಬ್ಬಣ , ಕಳೆದೆರಡು ದಶಕಗಳಿಂದ ರಂಗ ದಾಖಲೀಕರಣದ ಯಜ್ಞವನ್ನೇ ಪ್ರಾರಂಭಿಸಿದ್ದರು. ಹಲವಾರು ಬಾರಿ ಕರೆ ಮಾಡುತ್ತಿದ್ದರು-"ಬನ್ನಿ, ರಾಯಚೂರ್, ಈ ದಾಖಲೀಕರಣಕ್ಕೆ ಒಂದು ಸುಂದರ ರೂಪು- ರೇಷೆ ನೀಡೋಣ' ಎನ್ನುತ್ತಿದ್ದರು. ಒಂದೆರಡು ಬಾರಿ ಭೇಟಿ ಮಾಡಿ ಅವರ ದಾಖಲೀಕರಣದ ಪ್ರೀತಿ ಕಂಡು ಅವಾಕ್ಕಾಗಿ ಬಂದಿದ್ದೆ. ಈಗ ಅವುಗಳಲ್ಲಿ ಬಹುಪಾಲು ನಾಟಕ ಅಕಾಡೆಮಿಯಲ್ಲಿ ಸಂಗ್ರಹಿತವಾಗಿರುವುದನ್ನು ಬಲ್ಲೆ. ಒಳ್ಳೆಯ ಕೆಲಸ-ಒಳ್ಳೆಯ ಕೊಡುಗೆ! ಆದರೀಗ ಮತ್ತೆ ಕರೆ ಮಾಡುವ ಸುಬ್ಬಣ್ಣರಿಲ್ಲ; ಬಣ್ಣ ಕಳಚಿ "ಮಹಾ-ಪ್ರಸ್ಥಾನ " ಗೈದಿದ್ದಾರೆ ; ದಾಖಲೆಯ ಕಂತೆಗಳ ಕೊಟ್ಟು ಹೋಗಿದ್ದಾರೆ  -ಕಾಪಿಟ್ಟು , ಮುನ್ನಡೆಸುವ ಕೆಲಸವನ್ನು ರಂಗಕರ್ಮಿಗಳಿಗೆ  ಬಿಟ್ಟು ಹೋಗಿದ್ದಾರೆ!!  

ಕೃತಜ್ಞತೆ: ಲೇಖಕರಾದ ನಾರಾಯಣ ರಾಯಚೂರು ಅವರಿಗೆ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ