ಆರ್. ಎ. ರಮಾಮಣಿ
ವಿದುಷಿ ಆರ್. ಎ. ರಮಾಮಣಿ ಇನ್ನಿಲ್ಲ
Respects to departed soul Great Carnatic Vocalist Vidushi R.A. Ramamani 🌷🙏🌷
ಹಿರಿಯ ಸಂಗೀತಗಾರ್ತಿ ವಿದುಷಿ. ಆರ್.ಎ. ರಮಾಮಣಿ ನಿಧನರಾಗಿದ್ದಾರೆ. ಅವರು ವಿಶ್ವದಾದ್ಯಂತ ಸಂಗೀತ ಸುಧೆ ಹರಿಸಿದ ಗಾಯನ ಕಲಾವಿದೆಯಾಗಿ, ಸಂಯೋಜಕಿಯಾಗಿ ಮತ್ತು ಸಂಗೀತ ಗುರುವಾಗಿ ಹೆಸರಾಗಿದ್ದರು.
ರಮಾಮಣಿ ಅವರು 1977 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಇವರು ಬಳ್ಳಾರಿ ಸಹೋದರರು, ಅನೂರ್ ರಾಮಕೃಷ್ಣ, ಆರ್.ಕೆ. ಶ್ರೀಕಂಠನ್ ಮತ್ತು ಪಾಲ್ಘಾಟ್ ಕೆ.ವಿ. ನಾರಾಯಣಸ್ವಾಮಿ ಮುಂತಾದವರಲ್ಲಿ ಉನ್ನತ ಸಂಗೀತ ಸಾಧನೆ ಮಾಡಿದ್ದರು.
ಮಧುರವಾದ ಧ್ವನಿಯನ್ನು ಹೊಂದಿದ್ದ ರಮಾಮಣಿ ಅವರು, ಪಾಂಡಿತ್ಯಪೂರ್ಣ ಪ್ರಸ್ತುತಿಗಳಿಗೆ ಹೆಸರಾಗಿದ್ದರು. "ಕೊಣಕ್ಕೋಲ್" - ಸಾಂಪ್ರದಾಯಿಕ ತಾಳವಾದ್ಯ ಕಲೆಯಲ್ಲೂ ಪರಿಣತಿ ಹೊಂದಿದ್ದರು. ಅವಧಾನ ಪಲ್ಲವಿಯನ್ನು ಎರಡು ವಿಭಿನ್ನ ಲಯ ಚಕ್ರಗಳೊಂದಿಗೆ ಪ್ರಸ್ತುತಪಡಿಸಿ ಖ್ಯಾತರಾಗಿದ್ದರು. ಪಾಶ್ಚಿಮಾತ್ಯ ಸಂಗೀತ ಪ್ರಕಾರಗಳನ್ನೂ ಧೈರ್ಯದಿಂದ ಪ್ರಯೋಗಿಸಿದ್ದ ಅವರು ಹಲವಾರು ಸುಮಧುರ ಮತ್ತು ಲಯಬದ್ಧ ಗಾನ ಮಾದರಿಗಳನ್ನು ಸಂಯೋಜಿಸಿದ್ದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜಾಝ್ ಬ್ಯಾಂಡ್‌ಗಳೊಂದಿಗೆ ಪ್ರದರ್ಶನ ನೀಡಿದ ಮೊದಲ ಕರ್ನಾಟಕ ಗಾಯಕಿ ಎಂದು ಕೂಡಾ ಹೆಸರಾಗಿದ್ದರು.
ರಮಾಮಣಿ ಅವರಿಗೆ ಕರ್ನಾಟಕ ಗಾನಕಲಾ ಪರಿಷತ್ತಿನ ಗಾನ ಕಲಾಶ್ರೀ, ಗಾನ ಕಲಾಭೂಷಣ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು. 1992 ರಲ್ಲಿ ಭಾರತೀಯ ಲಲಿತಕಲಾ ಸಂಘವು ಇವರನ್ನು ಅತ್ಯುತ್ತಮ ಮಹಿಳಾ ಗಾಯಕಿ ಎಂದು ಘೋಷಿಸಿತ್ತು.
ರಮಾಮಣಿ ಅವರು ಮಹಾನ್ ಮೃದಂಗ ವಿದ್ವಾಂಸರಾದ ತಮ್ಮ ಪತಿ ಟಿ ಎ ಎಸ್ ಮಣಿ ಅವರೊಂದಿಗೆ ಸಂಗೀತ ಗಾಯನ ಮತ್ತು ತಾಳವಾದ್ಯ ಸಂಗೀತ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ. ಈ ದಂಪತಿಯ ಸುಪುತ್ರರಾದ ಕಾರ್ತಿಕ್ ಮಣಿ ಅವರೂ ಸಹಾ ತಾಳವಾದ್ಯ ಸಂಗೀತ ಕಲಾವಿದರಾಗಿ ಖ್ಯಾತರಾಗಿದ್ದಾರೆ.
ಅಗಲಿದ ಹಿರಿಯ ಸಂಗೀತಕಲಾ ಚೇತನಕ್ಕೆ ಗೌರವಯುತ ನಮನ 🌷🙏🌷
ಕಾಮೆಂಟ್‌ಗಳು