ಮೊಗಳ್ಳಿ ಗಣೇಶ್
ಮೊಗಳ್ಳಿ ಗಣೇಶ್ ಇನ್ನಿಲ್ಲ
ಕನ್ನಡಿಗರ ಮೆಚ್ಚಿನ ಕಥೆಗಾರರಲ್ಲಿ ಒಬ್ಬರಾದ ಮೊಗಳ್ಳಿ ಗಣೇಶ್ ಅವರು ನಿಧನರಾದ ಸುದ್ದಿ ಬಂದಿದೆ.
ಮೊಗಳ್ಳಿ ಗಣೇಶ್ 1963ರ ಜುಲೈ 1 ರಂದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನ ಹಳ್ಳಿಯಲ್ಲಿ ಜನಿಸಿದರು. ಒಮ್ಮೆ ತೊಂಬತ್ತರ ದಶಕದಲ್ಲಿ ಯುವ ವಯಸ್ಸಿನ ಮೊಗಳ್ಳಿ ಗಣೇಶ್ ಸಾಹಿತ್ಯದಲ್ಲಿ ಗ್ರಾಮೀಣ ಪ್ರದೇಶದ ಮಣ್ಣಿನ ವಾಸನೆಯ ಕುರಿತಾಗಿ ಹೇಳಿದ್ದ ಪ್ರೀತಿಯ ಮಾತುಗಳು ಇಂದೂ ನನ್ನಲ್ಲಿ ಅಣುರಣಿಸುತ್ತಿದೆ. ಅಂತಹ ನೇರ ಸ್ಪಷ್ಟ ಮಾತುಗಾರಿಕೆ ಮತ್ತು ಬರಹಗಳು ಅವರಲ್ಲಿ ಪ್ರಾರಂಭದಲ್ಲೇ ಮೂಡಿತ್ತು.
ಮೊಗಳ್ಳಿ ಗಣೇಶರು ಓದಿದ್ದು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಅರ್ಥಶಾಸ್ತ್ರ. ಆದರೆ ಅವರಲ್ಲಿ ಹರಿಯುತ್ತಿರುವುದು ಮಣ್ಣಿನ ವಾಸನೆಯುಕ್ತ ಸಾಹಿತ್ಯಪ್ರೀತಿ. ಅವರ ಬುಗುರಿ, ನನ್ನಜ್ಜನಿಗೊಂದಾಸೆಯಿತ್ತು, ಒಂದು ಹಳೆಯ ಚಡ್ಡಿ ಇತ್ಯಾದಿ ಕಥೆಗಳು ಕನ್ನಡದ ಅತ್ಯುತ್ತಮ ಸಣ್ಣ ಕಥೆಗಳಾಗಿ ಗುರುತಿಸಲ್ಪಟ್ಟಿವೆ. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿದ್ದವು. ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಮೊಗಳ್ಳಿ ಗಣೇಶರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು.
ಮೊಗಳ್ಳಿ ಗಣೇಶ್ ಡಾಕ್ಟರೇಟ್ ಸಾಧನೆಯನ್ನೂ ಮಾಡಿದ್ದರು. ‘ಆದಿಮ’ ಎಂದು ಪ್ರಕಟಗೊಂಡ ಈ ಸಂಶೋಧನಾ ಕೃತಿಯ ಬಗ್ಗೆ ಎಂ. ಎಂ. ಕಲಬುರ್ಗಿ ಹೇಳುತ್ತಾರೆ: “ಆದಿಮ” ಓದಿದೆ. “ಒಡಲ ನೂಲಿನಿಂದ ಜೇಡ ನೇಯುವಂತೆ ಜಾಲ” ಎಂಬ ಬೇಂದ್ರೆ ಮಾತು ನೆನಪಾಯಿತು. “ಕನ್ನಡ ಪಿಎಚ್.ಡಿ ಪ್ರಬಂಧ ರಚನೆಯ ಇತಿಹಾಸದಲ್ಲಿ ಬಾಹ್ಯ ಆಕರ ನಿರಾಕರಣೆಯ ಈ ಬರವಣಿಗೆ ಹೊಸ ಪ್ರಯೋಗ. ಇಲ್ಲಿ ನಿಮ್ಮ ಆಶಯ ಕಣ್ಣಿಗೆ ಕಾಣುತ್ತದೆ, ಮನಕ್ಕೆ ಮುಟ್ಟುತ್ತದೆ. ಕೈಗೆ ಸಿಗುವುದಿಲ್ಲ – ಬಯಲದೇಹಿ ಅಲ್ಲಮನಂತೆ” ಎಂದು.
ಮೊಗಳ್ಳಿ ಗಣೇಶ್ ಅವರು ಮೊದಲು ಬರೆಯಲು ಪ್ರಾರಂಭಿಸಿದ್ದು ಕವಿತೆಗಳನ್ನು. ಕಥೆಯಲ್ಲಿ ಹೇಳಿಕೊಳ್ಳಲಾಗದ ಸುಖದುಃಖಗಳನ್ನು ಕವಿತೆಯಲ್ಲಿ ಹೇಳುವುದು ಹೆಚ್ಚು ಸಲೀಸು, ಆಪ್ತ ಹಾಗೂ ಸುಖಕರ ಎನ್ನುವುದು ಅವರ ಮಾತು. ತೀರ ಸಂಕಟವೆನಿಸಿದಾಗ ಕವಿತೆಯೇ ತೀರಾ ಹತ್ತಿರದ ಸಂಬಂಧಿಯಂತೆ ಕಾಣಿಸುತ್ತದೆ, ನನ್ನನ್ನು ನಾನೇ ಸಂತೈಸಿಕೊಳ್ಳಲು ಕಾವ್ಯಕ್ಕಿಂತ ಒಳ್ಳೆಯ ಉಪಕರಣ ಬೇರೇನಿದೆ ಎಂದು ಅವರು ಹೇಳುತ್ತಾರೆ. ‘ಸೂರ್ಯನನ್ನು ಬಚ್ಚಿಡಬಹುದೆ?’ ಮತ್ತು ‘ಅನಾದಿ’ ಅವರ ಕಾವ್ಯ ಸಂಕಲನಗಳು.
ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ದೇವರ ದಾರಿ, ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ) ಮುಂತಾದವು ಮೊಗಳ್ಳಿ ಗಣೇಶ್ ಅವರ ಕಥಾ ಸಂಕಲನಗಳು. ತೊಟ್ಟಿಲು, ಕಿರೀಟ ಅವರ ಕಾದಂಬರಿಗಳು. ‘ಬೇರು’ ಎಂಬ 986 ಅವರ ಬೃಹತ್ ಕಾದಂಬರಿ ತಯಾರಾಗಿತ್ತು. ‘ಕಥನ’ ಅವರ ಪ್ರಬಂಧ ಸಂಕಲನ. ‘ಸೊಲ್ಲು’, ‘ವಿಮರ್ಶೆ’, ‘ಶಂಬಾ ಭಾಷಿಕ ಸಂಶೋಧನೆ’, ‘ತಕರಾರು’ ಅವರ ವಿಮರ್ಶಾ ಕೃತಿಗಳು. ‘ವಿಶ್ಲೇಷಣೆ’ ಎಂಬ ಅಂಕಣ ಕೂಡಾ ಜನಪ್ರಿಯ. ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಅವರ ಚಿಂತನ ಕೃತಿ. ಗಣೇಶ್ ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದರೆ, ಅವರ ಅನೇಕ ಬರಹಗಳು ಇತರ ಭಾಷೆಗಳಿಗೆ ಹೋಗಿವೆ.
ಮೊಗಳ್ಳಿ ಗಣೇಶ್ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವರನಟ ರಾಜಕುಮಾರ್ ಹೆಸರಿನಲ್ಲಿರುವ ಅಧ್ಯಯನ ಪೀಠಕ್ಕೆ ನಿರ್ದೇಶಕರಾದ ಜವಾಬ್ದಾರಿ ಹೊತ್ತಿದ್ದರು. ಅಲ್ಲಿ 'ಕನ್ನಡ ಸಿನಿಮಾ ವಿಶ್ವಕೋಶ' ಮಾಡುವ ಯೋಜನೆಯಲ್ಲಿ ತೊಡಗಿಕೊಂಡಿದ್ದರು. ತಾರೆಗಳ ಪ್ರಭೆಯಲ್ಲಿ ಅನೇಕ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ತೆರೆಮರೆಯಲ್ಲಿಯೇ ಉಳಿಯುತ್ತಾರಲ್ಲ ಅಂಥವರ ಬದುಕು ಹಾಗೂ ಸಾಧನೆ ಬಗೆಗಿನ ಪುಸ್ತಕ ಮಾಲಿಕೆಯ 'ಆತ್ಮಕಥನ ಮಂಟಪ' ಎಂಬ ಯೋಜನೆಗೂ ಕೈ ಇಟ್ಟಿದ್ದರು.
ಅವರ ಅನಾದಿ ಕವಿತೆ ಹೀಗಿದೆ:
ಆಡಿಕೊಳ್ಳುತ್ತಿದೆ ಕಾಲಾತೀತ ಮಗು
ದಿಕ್ಕಿಲ್ಲ ದೆಸೆಯಿಲ್ಲ ದೇವರಂಥ ಹಸುಗೂಸು
ರುಂಡವಿಲ್ಲದ ಗೊಂಬೆಗೆ ಮರು ಜೀವ ತುಂಬಿ
ಬಿಸಾಡಿದ ಆಟಿಕೆಗಳಲ್ಲೆ ಮಾಟದ ನೋಟ ಕಂಡು
ಮುರಿದ ರೆಕ್ಕೆಯಲ್ಲೆ ದಿಗಂತಗಳ ದಾಟಿ
ತುಕ್ಕು ಹಿಡಿದ ಬಂಡಿಯಲ್ಲೆ ಭೂಮಿ ಸುತ್ತಿ
ಕುಣಿಯುತ್ತಿದೆ ಮಗು ದಣಿವಿಲ್ಲ
ಕಾಲಾತೀತ ಹಿಗ್ಗಿಗೆ ಕೊನೆಯಿಲ್ಲ
ಹಾಡಿನ ನಾಡಿ ಬಡಿತಕ್ಕೆ ಬಿಡುವಿಲ್ಲ
ಆಡುತ್ತಿದೆ ಮಗು ಆಕಾಶದ ಮೈದಾನದಲ್ಲಿ
ಚೂರುಪಾರು ಬಣ್ಣದ ಕಾಗದದಲ್ಲೆ ಕಾಮನ ಬಿಲ್ಲು ಬಿಡಿಸಿ
ಹರಿದ ಗಾಳಿ ಪಟವನೆ ದಿಗಂತದಾಚೆಗೂ ಹಾರಿಸಿ
ನಗುತ್ತಿದೆ ಮಗು ನೋವಿಲ್ಲ ನಂಜಿಲ್ಲ ಅನಾದಿಗೆ ಆಕಾಶವೆ ಆಧಾರವಾಗಿ
ನಲಿಯುತ್ತಿದೆ ಬೀದಿ ಬದಿಯ ಮಗು ಹೆಬ್ಬುಲಿಗಳ ಚೆದುರಿಸಿ
ಹೆಮ್ಮಾರಿ ಮುಡಿ ಹಿಡಿದಾಡಿಸಿ ಕಾಳಿಂಗದೆಡೆ ಮೇಲೆ ನರ್ತಿಸಿ
ವಿಷದ ಕಡಾಯದಲ್ಲೆ ಮಿಂದೆದ್ದು ಬಂದು ಬೊಬ್ಬಿರಿದು
ನಗುತ್ತಿದೆ ಮಗುವಿಗಾವ ಭಯವೂ ಇಲ್ಲ ಯಾರ ಶಂಕೆಯೂ ಇಲ್ಲ
ಬೆಳೆಯುತ್ತಿದೆ ಆಕಾಶದ ಉದ್ದಗಲಕ್ಕೂ ಅನಾದಿ ಮಗು.
‘ದೇವರ ದಾರಿ’ ಕೃತಿಗೆ ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ‘ತಕರಾರು’ ವಿಮರ್ಶೆಗೆ ಕರ್ನಾಟಕ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಮೊಗಳ್ಳಿ ಗಣೇಶ್ ಅವರಿಗೆ ಸಂದಿದ್ದವು.
ನಾನು ಮೊಗಳ್ಳಿ ಗಣೇಶರ ಬಗ್ಗೆ ಹಲವು ವರ್ಷಗಳ ಹಿಂದೆ ಬರೆದಾಗ, ನನ್ನನ್ನು ಆತ್ಮೀಯರಿಂದ ಹುಡುಕಿಸಿ ದುಬೈನಲ್ಲಿದ್ದ ನನಗೆ ಕರೆ ಮಾಡಿ ಪ್ರೀತಿ ಹರಿಸಿದ್ದರು.
ಸರಳ ಸ್ನೇಹ ಜೀವಿ ವಿಶಿಷ್ಟ ಸಾಧನೆಗಳ ಆತ್ಮೀಯ ಮೊಗಳ್ಳಿ ಗಣೇಶ್ ಇಷ್ಟು ಬೇಗ ಈ ಲೋಕವನ್ನಗಲುತ್ತಾರೆ ಎಂದು ಎಂದೂ ಊಹಿಸಿರಲಿಲ್ಲ. ಅಗಲಿದ ಆಪ್ತ ಕನ್ನಡದ ಸಾಹಿತಿಗೆ ನಮ್ರ ನಮನ.
Respects to departed soul Dr. Mogalli Ganesh 🌷🌷🌷

ಕಾಮೆಂಟ್‌ಗಳು