ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮನು ಬಳಿಗಾರ್


 ಮನು ಬಳಿಗಾರ್ 


ಕಳೆದ ತಿಂಗಳು ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮನು ಬಳಿಗಾರ್ ಅವರ ಆಪ್ತ ಭೇಟಿ ದೊರಕಿತು. ಹೀಗಾಗಿ ಅವರ ಕುರಿತು ಹೀಗೊಂದು ಮೆಲುಕು ಹಾಕೋಣವೆಂದೆನಿಸಿತು. 

ನಾಡೋಜ ಡಾ.‍ ಮನು ಬಳಿಗಾರ್, ಸಾಹಿತಿಯಾಗಿ, ಸರ್ಕಾರಿ ಅಧಿಕಾರಿಗಳಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹೀಗೆ ಹಲವು ರೀತಿಯಲ್ಲಿ ಹೆಸರಾದವರು.

ಮನು ಬಳಿಗಾರ್ ಅವರು, ಅಂದಿನ ಧಾರವಾಡ ಜಿಲ್ಲೆಯಲ್ಲಿದ್ದು ಈಗ ಗದಗ ಜಿಲ್ಲೆಯಲ್ಲಿಯಲ್ಲಿರುವ ಶಿಗ್ಲಿಯಲ್ಲಿನ ಪ್ರಗತಿಪರ ಕೃಷಿ ಕುಟುಂಬದಲ್ಲಿ ಜನಿಸಿದರು. ತಂದೆ ಪರಮೇಶ್ವರಪ್ಪ ಬಳಿಗಾರ್.  ತಾಯಿ ಶಂಕ್ರಮ್ಮ ಬಳಿಗಾರ್. ನಿವೃತ್ತ ಭಾರತೀಯ ಆಡಳಿತ ಸೇವಾ ಅಧಿಕಾರಿ ವಿ.ಪಿ. ಬಳಿಗಾರ್ ಅವರು ಮನು ಬಳಿಗಾರ್ ಅವರ ತಮ್ಮಂದಿರು. ಮನು ಬಳಿಗಾರ್ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ., ಎಲ್.ಎಲ್.ಬಿ. ಹಾಗೂ ಎಂ.ಎ. ಪದವಿಗಳನ್ನು ಗಳಿಸಿದರು.

ಮನು ಬಳಿಗಾರ್ 14ನೇ ವಯಸ್ಸಿನಿಂದಲೇ ಸಾಹಿತ್ಯ ಕೃಷಿ ಆರಂಭಿಸಿದವರು. ಕರ್ನಾಟಕ ಆಡಳಿತ ಸೇವೆಗೆ ಬರು ಮೊದಲೇ ಅವರು 50ಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದು, ಒಂದು ಕವನ ಸಂಕಲನವನ್ನೂ ತಯಾರು ಮಾಡಿದ್ದರು.

1979ರಲ್ಲಿ ಕೆ ಎ ಎಸ್ ಮಾಡಿದ ಮನು ಬಳಿಗಾರ್ ಅವರು ಕರ್ನಾಟಕ ಸರ್ಕಾರದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, ಕಂದಾಯ ಇಲಾಖೆ,  ಬೆಂಗಳೂರು ಮಹಾನಗರ ಪಾಲಿಖೆಯ ಡೆಪ್ಯೂಟಿ ಕಮೀಷನರ್ ಹಾಗೂ ಕೌನ್‌ಸಿಲ್ ಕಾರ್ಯದರ್ಶಿ; ಗ್ರಾಮೀಣಾಭಿವೃದ್ದಿ ಮತ್ತು  ಪಂಚಾಯತ್‌ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಆಹಾರ ನಾಗರಿಕ ಪೂರೈಕೆ ಇಲಾಖೆ, ಪ್ರವಾಸೋದ್ಯಮ, ಐ.ಟಿ.ಬಿ.ಟಿ ಇಲಾಖೆಗಳ ಸಚಿವರುಗಳ ಆಪ್ತ ಕಾರ್ಯದರ್ಶಿ ಮುಂತಾದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಿಲ್ಲದೆ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿ, ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿದರು. ಸರ್ಕಾರಿ ಸೇವೆಯ 3 ವರ್ಷಗಳ ವಿಸ್ತೃತ ಸೇವಾವಧಿಯಲ್ಲಿ ರೋರಿಕ್ ಮತ್ತು ದೇವಿಕಾರಾಣಿ ಎಸ್ಟೇಟ್ ಬೋರ್ಡಿನ ಸಿಇಓ ಆಗಿ ಸಹಾ ಕಾರ್ಯನಿರ್ವಹಿಸುತ್ತಿದ್ದ ಇವರು, 
ಇನ್ನೂ 6 ತಿಂಗಳು ಇರುವಾಗಲೇ ನಿವೃತ್ತಿ ಪಡೆದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಗೆ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿ, 5 ವರ್ಷಗಳ ಕಾಲ ಆ ಜವಾಬ್ದಾರಿಯನ್ನು ನಿರ್ವಹಿಸಿದರು. ವೃತ್ತಿಜೀವನದಲ್ಲಿ IRDPಯಲ್ಲಿ  ಸಲ್ಲಿಸಿದ  ಸೇವೆಗಾಗಿ ಎರಡು ಬಾರಿ ಚಿನ್ನದ ಪದಕ ಗಳಿಸಿದ್ದರು. 

ಮನು ಬಳಿಗಾರ್ ಅವರು ಬಹುಮುಖಿಯಾಗಿ ಸಾಹಿತ್ಯ ಕೃಷಿ ನಡೆಸಿದವರು.   ರವೀಂದ್ರನಾಥ ಠಾಕೂರರ 200ಕ್ಕೂ ಹೆಚ್ಚು ಕವನಗಳನ್ನು ಅವರು ಕನ್ನಡಕ್ಕೆ ಭಾಷಾಂತರಿಸಿ ಸಂಕಲನವಾಗಿ ಪ್ರಕಟಿಸಿದ್ದಾರೆ. ಇವರ ಹಲವಾರು ಕಥೆಗಳು ಇಂಗ್ಲೀಷ್, ಒಡಿಯ, ತೆಲುಗು, ಸಂಸ್ಕೃತ ಮತ್ತು ಹಿಂದಿಗೆ ಭಾಷಾಂತರಗೊಂಡಿವೆ. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಇವರ  'ಬೆಳಕ ಬೆಡಗು' ಅಂಕಣ ಮೂಡಿಬಂದಿತ್ತು.   ಅವ್ಯಕ್ತ, ಋಣ, ಬದುಕು ಮಾಯೆಯ ಮಾಟ, ದ ಡೆತ್ ಅಂಡ್ ಅದರ್ ಸ್ಟೋರೀಸ್,  ಕೆಲವು ಕತೆಗಳು ಇವರ ಕಥಾ ಸಂಕಲನಗಳಲ್ಲಿ ಸೇರಿವೆ.  ನನ್ನ ನಿನ್ನೊಳಗೆ,  ಎದ್ದವರು ಬಿದ್ದವರು, ಸಾಕ್ಷರ ಗೀತೆಗಳು, ನಯಾಗರ ಮತ್ತು ಜಲಪಾತಗಳು ಮುಂತಾದವು ಇವರ ಕವಿತಾ ಸಂಕಲನಗಳಲ್ಲಿ ಸೇರಿವೆ.  ಏಕಾಂತ ಮತ್ತು ಏಕಾಗ್ರತೆ, ಬೆಳಕ ಬೆಡಗು, ಸಂಸ್ಕೃತಿ ವಿಹಾರ, ದೇಶ ವಿದೇಶ ಉಪನ್ಯಾಸಗಳು ಇವರ ಲಲಿತ ಪ್ರಬಂಧ ಸಂಕಲನಗಳಲ್ಲಿ ಸೇರಿವೆ. ಮೈಲಾರ ಮಹಾದೇವ ಇವರ ನಾಟಕ ಕೃತಿ. ಅತಿ ವಿರಳ ರಾಜಕಾರಣಿ ಎಸ್.ಆರ್. ಕಂಠಿ, ಪ್ರತಿಭಾವಂತ ಸಂಸದೀಯ ಪಟುಗಳು, ಅಬ್ದುಲ್ ನಜೀರ್‌ಸಾಬ್, ಅಪ್ಪ  ಮುಂತಾದವು ಜೀವನ ಚರಿತ್ರೆಗಳು. ಬಹುಮುಖಿ (ಶಿವರಾಮ ಕಾರಂತರ ಬದುಕು-ಬರಹ),  ಗಾನಗಂಧರ್ವ (ಕುಮಾರ ಗಂಧರ್ವರ ಜೀವನ, ಸಾಧನೆ), ಜ್ಞಾನಪ್ರಭಾ, ಕಲ್ಪವೃಕ್ಷ, ತಲಸ್ಪರ್ಶಿ, ತುಳಸಿ ಮುಂತಾದವು ಇವರ ಸಂಪಾದನೆಗಳಲ್ಲಿ ಸೇರಿವೆ.

ಮನು ಬಳಿಗಾರ್ ಅವರಿಗೆ ಹಂಪಿ ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ "ನಾಡೋಜ" ಗೌರವ ಮತ್ತು  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಾಹಿತ್ಯ ಕ್ಷೇತ್ರದಲ್ಲಿನ ಕೊಡುಗೆಗಾಗಿ ಗೌರವ ಡಾಕ್ಟರೇಟ್  ಸಂದಿದೆ.  ಇದಲ್ಲದೆ ಬೆಟಗೇರಿ ಕೃಷ್ಣಶರ್ಮ ಕಥಾ ಪ್ರಶಸ್ತಿ, ರನ್ನ ಸಾಹಿತ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಪು.ತಿ.ನ ಪ್ರಶಸ್ತಿ, ಕೆಂಪೇಗೌಡ ಸಾಹಿತ್ಯ ಪ್ರಶಸ್ತಿ, ಲಿಂಗರಾಜ ದೇಸಾಯಿ ಸಾಹಿತ್ಯ ಪ್ರಶಸ್ತಿ, ಬೆಳಗಾವಿಯ ಎಂ.ಕೆ. ಪಬ್ಲಿಸಿಟಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳಲ್ಲದೆ, ವಿಶ್ವದಾದ್ಯಂತ ಅನೇಕಾನೇಕ ಸಮಾವೇಶದ ಅಧ್ಯಕ್ಷೀಯ ಗೌರವಗಳು ಸಂದಿವೆ. 

ಮನು ಬಳಿಗಾರ್ ಅವರು ತಮ್ಮ ಸರ್ಕಾರಿ ಸೇವಾವಧಿಯಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿನ ಅಧ್ಯಕ್ಷತೆಯ 5 ವರ್ಷಗಳ
ಅವಧಿಯಲ್ಲಿ ಹಾಗೂ ತಮ್ಮ ಬಹುಮುಖಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಅನೇಕ ಉತ್ಸವ, ಸಮ್ಮೇಳನಗಳನ್ನು ಸಂಘಟಿಸಿದವರು.  ಅವರಿಗಿರುವ ನೆನಪಿನ ಶಕ್ತಿ ಅಗಾಧ.  ಶೀಘ್ರವಾಗಿ ಖಚಿತ ನಿರ್ಧಾರ ಕೈಗೊಳ್ಳುವಿಕೆ, ವ್ಯಾಪಕ ಸಂಪರ್ಕ, ಅಪಾರ ವ್ಯಾಸಂಗದ ಅರಿವುಳ್ಳ ಸಾಹಿತ್ಯ ಜ್ಞಾನ ಇವೆಲ್ಲ ಬೆರಗು ಹುಟ್ಟಿಸುವಂತಹವು.

Manu Baligar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ