ರೇಣುಕಾ ಶಹಾಣೆ
ರೇಣುಕಾ ಶಹಾಣೆ
ರೇಣುಕಾ ಶಹಾಣೆ ಭಾರತೀಯ ಕಿರುತೆರೆ ಕಂಡ ಅತ್ಯಂತ ಸುಂದರ ಮುಖಾರವಿಂದ. ಅವರು ಸಿದ್ಧಾರ್ಥ ಕಾಕ್ ಅವರೊಂದಿಗೆ ರಾಷ್ಟ್ರೀಯ ದೂರದರ್ಶನ ವಾಹಿನಿಯಲ್ಲಿ ಮೂಡಿಸಿದ 'ಸುರಭಿ' ಕಾರ್ಯಕ್ರಮದ ಪ್ರಸ್ತುತಿ ಇಂದಿಗೂ ಅವಿಸ್ಮರಣೀಯ. ಬಹುಮುಖಿ ಪ್ರತಿಭಾನ್ವಿತರಾದ ಈಕೆ ಅಭಿನೇತ್ರಿ, ಬರಹಗಾರ್ತಿ, ನಿರ್ದೇಶಕಿ ಮತ್ತು ಸಮಾಜಮುಖಿ ಕಾರ್ಯಕರ್ತೆ.
ರೇಣುಕಾ ಶಹಾಣೆ ಅವರು 1966ರ ಅಕ್ಟೋಬರ್ 7ರಂದು ಮುಂಬೈನಲ್ಲಿ ಜನಿಸಿದರು. ಕಲೆ ಇವರೊಂದಿಗೆ ಜನ್ಮಜಾತವಾಗಿತ್ತು. ಇವರ ತಾಯಿ ಶಾಂತಾ ಗೋಖಲೆ ಗೌರವಾನ್ವಿತ ಬರಹಗಾರ್ತಿ, ಅನುವಾದಕಿ, ಪತ್ರಕರ್ತೆ, ರಂಗಕರ್ಮಿ ಮತ್ತು ಚಲನಚಿತ್ರ ವಿಮರ್ಶಕಿಯಾಗಿ ಹೆಸರಾದವರು. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ರೇಣುಕಾ ಶಹಾಣೆ ಮನಃಶಾಸ್ತ್ರದಲ್ಲಿ ಸೈಂಟ್ ಗ್ಸೇವಿಯರ್ಸ್ ಇಂದ ಬಿ.ಎ. ಹಾಗೂ ಮುಂಬೈ ವಿಶ್ವವಿದ್ಯಾಲಯದಿಂದ ಕ್ಲಿನಿಕಲ್ ಸೈಕಲಾಜಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ರೇಣುಕಾ 1988ರಲ್ಲಿ 'ತಮಾಚ' ಎಂಬ ಚಿತ್ರದಲ್ಲಿ ಅನಾಮಧೇಯರಾಗಿ ಭಾಗಿಯಾಗಿದ್ದರು. ಮುಂದೆ ಅಜೀಜ್ ಮಿರ್ಜಾ ಅವರ ಪ್ರಸಿದ್ಧ ಧಾರಾವಾಹಿ 'ಸರ್ಕಸ್'ನಲ್ಲಿ ಆಗಿನ್ನೂ ಉದಯನ್ಮೋಖ ಕಲಾವಿದನಾಗಿದ್ದ ಶಾರುಖ್ ಖಾನ್ ಜೊತೆ ನಟಿಸಿದರು. 'ಸರ್ಕಸ್' ಧಾರವಾಹಿಯ ಕೀರ್ತಿಯಿಂದ ಇವರಿಗೆ ಕಿರುತೆರೆಯ ಇತಿಹಾಸದಲ್ಲಿ ಅವಿಸ್ಮರಣೀಯವೆನಿಸಿರುವ 'ಸುರಭಿ' ಕಾರ್ಯಕ್ರಮವನ್ನು ಸಿದ್ಧಾರ್ಥ ಕಾಕ್ ಅವರೊಡನೆ ಪ್ರಸ್ತುತಪಡಿಸುವ ಅವಕಾಶ ಕೂಡಿ ಬಂತು. ಆ ಕಾರ್ಯಕ್ರಮದಲ್ಲಿನ ಇವರ ಹಸನ್ಮುಖಿ ಸಮರ್ಥ ಕಾರ್ಯಕ್ರಮ ಪ್ರಸ್ತುತಿ, ಭಾರತೀಯ ಮನೆ ಮನೆಗಳಲ್ಲಿನ ಪ್ರತಿಯೊಂದೂ ಮನಗಳನ್ನೂ ಸಂಮೋಹನಗೊಳಿಸಿದಂತೆ ತನ್ನೆಡೆಗೆ ಆಕರ್ಷಿಸಿಕೊಂಡಿತ್ತು.
ರೇಣುಕಾ ಅವರು ಮರಾಠಿ ಮತ್ತು ಗುಜರಾಥಿ ಚಲನಚಿತ್ರಗಳಲ್ಲಿ ನಟಿಸುತ್ತಲೇ ಕಿರುತೆರೆಯಲ್ಲಿನ 'ಇಮ್ತಿಹಾನ್'ಹಾಗೂ ಆಶಾ ಪರೇಖ್ ಅವರ ನಿರ್ಮಾಣದ 'ಕೋರಾ ಕಾಗಜ್' ಧಾರಾವಾಹಿಗಳ ಅಭಿನಯದಿಂದ ಮತ್ತಷ್ಟು ಜನಪ್ರಿಯರಾದರು. ಆಸ್ಮಾನ್ ಸೆ ಆಗೇ, ಜುನೂನ್, ಸೈಲಾಬ್, ಮಿಸಸ್ ಮಾಧುರಿ ದೀಕ್ಷಿತ್, ಗುಟನ್, ಮಲಬಾರ್ ಹಿಲ್ ಮುಂತಾದವು ಅವರು ಇನ್ನಿತರ ಕಿರುತೆರೆಯ ಧಾರಾವಾಹಿಗಳು. 1994ರಲ್ಲಿ ಇವರು ಮಾಧುರಿ ದೀಕ್ಷಿತ್ ಅವರ ಸಹೋದರಿಯಾಗಿ ನಟಿಸಿದ 'ಹಮ್ ಆಪ್ಕೆ ಹೈ ಕೌನ್' ಚಿತ್ರದಲ್ಲಿನ ಮಂದಹಾಸಯುಕ್ತ ಅಭಿನಯ ಕೂಡಾ ಇಂದಿಗೂ ಅತ್ಯಂತ ಜನಪ್ರಿಯ.
ರೇಣುಕಾ ಶಹಾಣೆ ಅವರು ಮರಾಠಿ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯೂ ಮಹತ್ವದ್ದಾಗಿದೆ. ಅವುಗಳಲ್ಲಿ 'ಅಬೋಲಿ' ಅಂತಹ ಚಿತ್ರಗಳಲ್ಲಿನ ಶ್ರೇಷ್ಠ ಅಭಿನಯ ಹಾಗೂ 'ರೀಟಾ', 'ತ್ರಿಭಂಗ' ಅಂತಹ ಚಿತ್ರಗಳ ನಿರ್ದೇಶನ ಸೇರಿವೆ. 'ಅಬೋಲಿ' ಚಲನಚಿತ್ರದ ಅಭಿನಯಕ್ಕಾಗಿ ಅವರಿಗೆ ಫಿಲಂಫೇರ್ ಪ್ರಶಸ್ತಿ ಸಂದಿತು.
ರೇಣುಕಾ ಶಹಾಣೆ ಅವರ ಇತರ ಚಲನಚಿತ್ರಗಳಲ್ಲಿ ಹಿಂದಿಯ ಮಾಸೂಮ್ ಟುನ್ನು ಕಿ ಟೀನಾ, ತುಮ್ ಜಿಯೋ ಹಜಾರೋಂ, ಏಕ್ ಅಲಗ್ ಮೌಸಮ್, ದಿಲ್ ನೆ ಜಿಸೇ ಅಪ್ನಾ ಕಹಾ, ಸುನ್ ಜರಾ, 3 ಸ್ಟೋರೀಸ್, ಗೋವಿಂದಾ ನಾಮ್ ಮೇರಾ; ಹಾಗೂ ಮರಾಠಿಯ ಭಕರಖಡಿ 7 ಕಿಮೀ, ದೂಸರೀ ಗೋಷ್ಟ, ಅಕಲ್ಪಿತ್ ಹೈವೇ, ತೇ ಆಠ್ ದಿವಸ್, ಜನಿವಾ ಏಕ್ ಮುಂತಾದವು ಸೇರಿವೆ. 2018ರಲ್ಲಿ ಮತ್ತೊಮ್ಮೆ ಮಾಧುರಿ ದೀಕ್ಷಿತ್ ಜೊತೆಯಲ್ಲಿ 'ಬಕೆಟ್ ಲಿಸ್ಟ್' ಚಿತ್ರದಲ್ಲಿ ನಟಿಸಿದರು. 2021ರಲ್ಲಿ ತಾವೇ ಬರೆದ 'ತ್ರಿಭಂಗ' ಕಥೆಯಾಧಾರಿತ ಚಿತ್ರವನ್ನು ಕಜೋಲ್, ತನ್ವಿ ಅಜ್ಮಿ ಮತ್ತು ಮಿಥಿಲಾ ಪಾಲ್ಕರ್ ಅಭಿನಯದಲ್ಲಿ ನಿರ್ದೇಶಿಸಿದರು. ಈ ಚಿತ್ರ ವಿಮರ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತು.
ರೇಣುಕಾ ಅವರು ಹೆಸರಾಂತ ನಟ ಅಶುತೋಷ್ ರಾಣಾ ಅವರನ್ನು ವರಿಸಿದ್ದು, ಸಾರ್ವಜನಿಕ ಜೀವನದಲ್ಲಿ ಸರಳ, ಸಜ್ಜನಿಕೆ, ಕಲಾತ್ಮಕ ಸೃಜನಶೀಲತೆಗಳಿಗೆ ಹೆಸರಾಗಿರುವ ಈ ದಂಪತಿಗೆ ಇಬ್ಬರು ಸುಪುತ್ರರಿದ್ದಾರೆ.
ಪ್ರಸನ್ನತೆಯ ಕಳೆ ಮತ್ತು ಕಲಾವಂತಿಕೆಯ ಹಿರಿಮೆಯ ರೇಣುಕಾ ಶಹಾಣೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
My all time favorite Renuka Shahane 🌷🌷🌷

ಕಾಮೆಂಟ್‌ಗಳು