ವಿಜಯ ಬಿರಾದಾರ
ವಿಜಯ ಬಿರಾದಾರ
'ನಾವು ಎಳೆಯರು ನಾವು ಗೆಳೆಯರು' ಖ್ಯಾತಿಯ ಸಾಹಿತಿಗಳಾದ ಶಂ. ಗು. ಬಿರಾದಾರ ಅವರ ಸುಪುತ್ರರಾದ ಪ್ರೊ. ವಿಜಯ ಬಿರಾದಾರ ಅವರು ಪ್ರಾಧ್ಯಾಪಕರಾಗಿ ಮತ್ತು 'ಸಂಯುಕ್ತ ಕರ್ನಾಟಕ'ದ ಪತ್ರಿಕಾ ವರದಿಗರರಾಗಿ ಮಹಾನ್ ಸೇವೆ ಸಲ್ಲಿಸಿ ಪ್ರಖ್ಯಾತರಾದವರು.
ವಿಜಯ ಬಿರಾದಾರ ಅವರು 1959ರ ಡಿಸೆಂಬರ್ 1ರಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ಎಂಬಲ್ಲಿ ಜನಿಸಿದರು. ತಂದೆ ಮಹಾನ್ ಸಾಹಿತಿ ಶಂ . ಗು . ಬಿರಾದಾರ. ತಾಯಿ ಕಮಲಾಬಾಯಿ. ಎಂ.ಇಡಿ ವರೆಗಿನ ವಿದ್ಯಾಸಾಧನೆ ಮಾಡಿದ ವಿಜಯ ಬಿರಾದಾರ ಅವರು ಉಪನ್ಯಾಸಕರಾಗಿ 35 ವರ್ಷ ಸೇವೆ ಸಲ್ಲಿಸಿರುವುದೇ ಅಲ್ಲದೆ, ಜಮಖಂಡಿ ತಾಲೂಕಿನಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ 30 ವರ್ಷ ಸೇವೆ ಸಲ್ಲಿಸಿದವರು. ಇವರ ಪತ್ರಿಕಾ ಬರಹಗಳು ಕಾವ್ಯ ಭಾಷೆಯ ಸುಮಧುರತೆಗೂ, ಉತ್ತಮ ವರದಿಗಳಿಗೂ ಪ್ರಖ್ಯಾತವಾಗಿವೆ. ಕೃಷ್ಣಾ ನದಿಯ ಬಗ್ಗೆ ಅವರಷ್ಟು ಬರೆದವರೇ ಇಲ್ಲವೆಂಬಷ್ಟು ಖ್ಯಾತಿ ಇದೆ. ಗುಂಪುಗಾರಿಕೆ, ಲಾಬಿ, ಟ್ರಿಕ್ ಮುಂತಾದವುಗಳಿಂದ ಸದಾ ದೂರ ನಿಂತು ವರದಿ ಮಾಡಿ ಮಾದರಿ ಪತ್ರಕರ್ತರೆನಿಸಿದ ಇವರು ಆದರ್ಶ ಶಿಕ್ಷಕರಾಗಿಯೂ ಪ್ರಸಿದ್ಧರು. ಜಮಖಂಡಿಯ ಅಭಿವೃದ್ಧಿ, ಅಲ್ಲಿಯ ಪ್ರತಿಭೆಗಳ ಪರಿಚಯ, ಶಿಕ್ಷಣ ಕ್ಷೇತ್ರದ ಸಾಧನೆ, ಅಲ್ಲಿಯ ಜನರಿಗಾಗುತ್ತಿದ್ದ ಅನ್ಯಾಯದ ಕುರಿತು ಸರ್ಕಾರದ ಗಮನ ಸೆಳೆದ ವಿಜಯ ಬಿರಾದಾರ ಅವರ ಬರಹಗಳೆಂದರೆ ಜನರಲ್ಲಿ ಅಪಾರ ಮೆಚ್ಚುಗೆ. ವಿಜಯಪುರ ಕಾಲೇಜು ನೌಕರರ ಸಂಘದ ಅಧ್ಯಕ್ಷರಾಗಿ ಹಲವು ಹೋರಾಟಗಳಲ್ಲಿನ ಸಂಘಟನಾ ಕಾರ್ಯಗಳಲ್ಲಿ ಹಾಗೂ ಜಮಖಂಡಿ ವಲಯದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮಾಡಿದ ಕೆಲಸಗಳಿಂದಲೂ ಅವರು ಖ್ಯಾತರಾದವರು.
ಪ್ರೊ. ವಿಜಯ ಬಿರಾದಾರ ಅವರ ಕುರಿತು ಅವರ ಅಭಿಮಾನಿಗಳು ಹೊರತಂದಿರುವ 'ವಿಜಯಪಥ' ಎಂಬ ಅಭಿನಂದನಾ ಗ್ರಂಥದಲ್ಲಿ ವಿಜಯ ಬಿರಾದಾರ ಅವರ ಅಮೂಲ್ಯ ಪತ್ರಿಕಾ ಬರಹಗಳ ಸಂಗ್ರಹ ಹಾಗೂ ನಾಡಿನ ಗಣ್ಯರು ಅವರ ಕುರಿತು ಅಭಿವ್ಯಕ್ತಿಸಿರುವ ಮೆಚ್ಚುಗೆಗಳಿದ್ದು ಮಹಾನ್ ಪತ್ರಕರ್ತ ಮತ್ತು ಲೇಖಕ ರವಿ ಬೆಳಗೆರೆ ಅವರ ಬೆನ್ನುಡಿ ಇದೆ.
ಸಾಧಕರೂ, ಸರಳ ಸಹೃದಯರೂ ಆದ ಪ್ರೊ. ವಿಜಯ ಬಿರಾದಾರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Vijay Biradar 🌷🙏🌷

ಕಾಮೆಂಟ್‌ಗಳು