ಸುಷ್ಮಾ ಅನಿಲ್
ಸುಷ್ಮಾ ಅನಿಲ್
ವಿದುಷಿ ಸುಷ್ಮಾ ಅನಿಲ್ ಅವರು ಪ್ರಸನ್ನ ವದನದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವುದನ್ನು ಕೇಳುವುದೇ ಚಂದ. ಸುಷ್ಮಾ ಅವರು ಎರಡು ದಶಕಗಳಿಗೂ ಮೀರಿ ತಮ್ಮ ಲಯ, ಶ್ರುತಿ, ಭಕ್ತಿ, ಭಾವಗಳಿಗೆ ಬದ್ಧವಾದ ಸುಮಧುರ ಗಾಯನಕ್ಕೆ ಹೆಸರಾಗಿದ್ದಾರೆ.
ಮಾರ್ಚ್ 27 ಸುಷ್ಮಾ ಅವರ ಜನ್ಮದಿನ. ಇವರ ತಾತಾ ಗಂಜಿಗುಂಟೇ ನರಸಿಂಹದಾಸರೆಂದು ಪ್ರಖ್ಯಾತರಾಗಿದ್ದ ವಿದ್ವಾನ್ ನರಸಿಂಹ ಮೂರ್ತಿಗಳು ಸಂಗೀತ ಸಂಯೋಜಕರಾಗಿ ಮತ್ತು ಪಿಟೀಲು ವಾದಕರಾಗಿ ತಮ್ಮ ಸಂಗೀತದಲ್ಲಿನ ಭಕ್ತಿ ಸಂಚಲನಕ್ಕೆ ಖ್ಯಾತರಾಗಿದ್ದವರು. ಇಂತಹ ಸಂಗೀತ ಕುಟುಂಬದಲ್ಲಿ ಜನಿಸಿದ ಸುಷ್ಮಾ ಅವರಿಗೂ ಸಹಜವಾಗಿಯೇ ಸಂಗೀತ ಒಲಿದಿತ್ತು.
ಸುಷ್ಮಾ ಅವರು ಜೈನ್ ವಿಶ್ವವಿದ್ಯಾಲಯದಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಪದವಿ ಗಳಿಸಿದ್ದು, 2004-2009 ಅವಧಿಯಲ್ಲಿ ಯುನೈಟೆಡ್ ಕಿಂಗ್ಡಂ ಅಲ್ಲಿ ವೃತ್ತಿಯಲ್ಲಿದ್ದರು.
ಸುಷ್ಮಾ ಅವರು ತಮ್ಮ ಪ್ರಾರಂಭಿಕ ಸಂಗೀತ ಮಾರ್ಗದರ್ಶನವನ್ನು ವಿದುಷಿ ರುಕ್ಮಿಣಿ ಹಾಗೂ ವಿದುಷಿ ನಾಗವಲ್ಲಿ ನಾಗರಾಜ್ ಅವರಲ್ಲಿ ಪಡೆದು, ಮುಂದಿನ ಸಂಗೀತ ಸಾಧನೆಯನ್ನು ವಿದುಷಿ ಕಲಾವತಿ ಅವಧೂತ್ ಅವರಲ್ಲಿ ಮಾಡಿದರು. ಇತ್ತೀಚಿನ ವರುಷಗಳಲ್ಲಿ ಅವರು ತಮ್ಮ ನಿರಂತರ ಪರಿಶ್ರಮಯುಕ್ತ ಸಾಧನೆಯನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತ ವಿದ್ವಾನ್ ಎಚ್. ಕೆ. ಅನಂತರಾಮ್ ಅವರಲ್ಲಿ ನಡೆಸಿದ್ದಾರೆ.
ಸುಷ್ಮಾ ಅನಿಲ್ ಅವರು ಆಕಾಶವಾಣಿ, ದೂರದರ್ಶನ ಹಾಗೂ ಪ್ರಖ್ಯಾತ ವೇದಿಕೆಗಳಲ್ಲಿ ನಿರಂತರವಾಗಿ ಆಹ್ವಾನಿತರಾಗಿ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತ ಬಂದಿದ್ದಾರೆ. ಮಂಕುತಿಮ್ಮನ ಕಗ್ಗ, ವಚನ ಹಾಗೂ ಹಳಗನ್ನಡ ಕಾವ್ಯ ಗಾಯನಗಳಲ್ಲೂ ಅವರ ಜನಪ್ರಿಯತೆ ಇದೆ.
ತಮ್ಮ ವ್ಯಾಸಂಗದ ದಿನಗಳಿಂದ ಸುಷ್ಮಾ ಅವರು ತಮ್ಮ ಪ್ರತಿಭೆಗಾಗಿ ವೈಯಕ್ತಿಕ ಹಾಗೂ ತಮ್ಮ ವಿದ್ಯಾಸಂಸ್ಥೆಗಳಿಗೆ ಬಹುಮಾನಗಳನ್ನು ಗೆದ್ದವರು. ಜೀ ವಾಹಿನಿಯ ಸರಿಗಮಪ ಅಂತಹ ವೇದಿಕೆಯಲ್ಲೂ ಇವರು ತಮ್ಮ ಪ್ರತಿಭೆ ತೋರಿದವರು. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನರಲ್ಲಿ ವೈರಲ್ ಆಗಿರುವ ಇವರ ಗಾಯನದ ಹಿನ್ನೆಲೆಯಲ್ಲಿ ಸುವರ್ಣಾ ನ್ಯೂಸ್ ವಾಹಿನಿ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಮುಂತಾದ ಮಾಧ್ಯಮಗಳು ಇವರ ವಿಶೇಷ ಸಂದರ್ಶನಗಳನ್ನು ನಡೆಸಿವೆ.
ಸುಶ್ರಾವ್ಯ ಗಾಯನಕ್ಕೆ ಹೆಸರಾದ ಹಸನ್ಮುಖಿ ಸುಷ್ಮಾ ಅನಿಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday to popular singer Sushma Anil 🌷🌷🌷

ಕಾಮೆಂಟ್ಗಳು