ಹುಣಸವಾಡಿ ರಾಜನ್
ಹುಣಸವಾಡಿ ರಾಜನ್
ಹುಣಸವಾಡಿ ರಾಜನ್ ಅವರು ಲೋಕ ಶಿಕ್ಷಣ ಟ್ರಸ್ಟ್ ಬಳಗದ ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಹೆಸರಾಗಿದ್ದಾರೆ.
ರಾಜನ್ ಅವರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹುಣಸವಾಡಿಯಲ್ಲಿ 1957ರ ಏಪ್ರಿಲ್ 26ರಂದು ಜನಿಸಿದರು. ತಂದೆ ನಾರಾಯಣರಾವ್ ಶಾನುಭೋಗರು. ರಾಜನ್ ಅವರ ಬಾಲ್ಯದ ಶಿಕ್ಷಣ ಹುಣಸವಾಡಿಯ ಸರ್ಕಾರಿ ಶಾಲೆಯಲ್ಲಿ, ಮಾಧ್ಯಮಿಕ ಶಿಕ್ಷಣ ಮಧುಗಿರಿ ತಾಲೂಕಿನ ಕವಣದಾಲದಲ್ಲಿ, ಪ್ರೌಢಶಿಕ್ಷಣ ಮಧುಗಿರಿ ತಾಲೂಕಿನ ನಿಟ್ಟರಹಳ್ಳಿಯ ಜಯಮಂಗಲಿ ಪ್ರೌಢಶಾಲೆಯಲ್ಲಿ ನೆರವೇರಿತು. ಬೆಂಗಳೂರಿನಲ್ಲಿ ಪಿಯು ಬಳಿಕ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಇಂಗ್ಲಿಷ್ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಇಂಗ್ಲಿಷ್ ಪದವಿ ಪಡೆದರು.
ರಾಜನ್ ಅವರಿಗೆ ನಾಟ್ಯ, ನಾಟಕ, ಸಂಗೀತದಲ್ಲಿ ತೀವ್ರ ಆಸಕ್ತಿ. ಸೆಂಟ್ರಲ್ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಪ್ರಾರಂಭದಿಂದಲೇ ಸಾಂಸ್ಕೃತಿಕ ಲೋಕದಲ್ಲಿ ಸಕ್ರಿಯರಾದರು. ರಂಗಭೂಮಿಯ ನಂಟು ಬೆಳೆಯಿತು. ಬಿ.ವಿ. ಕಾರಂತ, ಆರ್. ನಾಗೇಶ್, ಸಿ.ಆರ್. ಸಿಂಹ, ವಿ. ರಾಮಮೂರ್ತಿ, ವೆಂಕಟಸುಬ್ಬಯ್ಯ ಮೊದಲಾದವರ ಮೂಲಕ ರಂಗಭೂಮಿಯಲ್ಲಿ ನಿರ್ದೇಶಕ, ನಟ ಹಾಗೂ ನೇಪಥ್ಯ ಕಲಾವಿದರಾಗಿ ದುಡಿದರು. ದೆಹಲಿ ಮದ್ರಾಸ್-ಚೆನ್ನೈ, ಹೈದರಾಬಾದ್, ಮುಂಬೈ, ಕೊಲ್ಕೊತ್ತ ಸೇರಿದಂತೆ ದೇಶದೆಲ್ಲೆಡೆ ರಂಗಪ್ರಯೋಗಗಳಲ್ಲಿ ಭಾಗಿಯಾದರು.
ರಾಜನ್ 1981ರಿಂದ ಪತ್ರಿಕಾ ಕ್ಷೇತ್ರ ಪ್ರವೇಶಿಸಿದರು. ರಂಗಭೂಮಿಗೆ ಮೀಸಲಾದ 'ಸೂತ್ರಧಾರ' ವಾರ್ತಾಪತ್ರದ ಸಂಸ್ಥಾಪಕ ಸಂಪಾದಕರಾದರು. ನಂತರ ಜನವಾಣಿ, ಲೋಕವಾಣಿ, ಸಂಜೆವಾಣಿ, ಟೈಂಸ್ ಆಫ್ ಡೆಕ್ಕನ್, ನ್ಯೂಸ್ ಟೈಮ್, ಇಂಡಿಯನ್ ಪೋಸ್ಟ್, ಮೊದಲಾದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದರು. 1986ರಲ್ಲಿ ಸಂಯುಕ್ತ ಕರ್ನಾಟಕ ಬಳಗಕ್ಕೆ ಸೇರ್ಪಡೆಗೊಂಡರು. ವರದಿಗಾರರಾಗಿ, ಉಪಸಂಪಾದಕರಾಗಿ, ಪ್ರಧಾನ ವರದಿಗಾರರಾಗಿ ನಂತರ ಕಾರ್ಯನಿರ್ವಾಹಕ ಸಂಪಾದಕರಾದರು. ಸಂಪಾದಕರಾಗಿ 27 ವರ್ಷಗಳ ಕಾಯಕ ಮಾಡಿದರು. 2016ರಲ್ಲಿ ಮತ್ತೆ ಸಂಯುಕ್ತ ಕರ್ನಾಟಕ ಸೇರ್ಪಡೆಗೊಂಡರು.
ರಾಜನ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕೇಂದ್ರ ಸರ್ಕಾರದ ಉನ್ನತ ನಿಯೋಗದ ಜತೆ ವಿಶ್ವಸಂಸ್ಥೆ, ಅಮೆರಿಕ, ಫ್ರಾನ್ಸ್ ದೇಶಗಳಿಗೆ ಪ್ರವಾಸ ಮಾಡಿದ್ದರು.
ಹುಣಸವಾಡಿ ರಾಜನ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ, ನಾಟಕ ಅಕಾಡೆಮಿಯ ಸುವರ್ಣ ಕರ್ನಾಟಕ ಪ್ರಶಸ್ತಿ, ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ರಾಜನ್ ಅವರ ಪತ್ನಿ ಸಿ.ಎಚ್. ಭಾಗ್ಯ Bhagya Ch ಅವರು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಆಗಿ ನಿವೃತ್ತರಾಗಿದ್ದು, ಕವಯತ್ರಿಯಾಗಿಯೂ ಹೆಸರಾಗಿದ್ದಾರೆ. ಅವರ ಪುತ್ರಿ ಭೂಮಿಕಾ ರಾಜನ್ ಜೆಎನ್‌ಯು ಸ್ಕಾಲರ್.
ಹುಣಸವಾಡಿ ರಾಜನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
On the birthday of Great Journalist Rajan Hunaswadi🌷🌷🌷

ಕಾಮೆಂಟ್‌ಗಳು