ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಿರಾಜ


 ಭಾರತಿರಾಜ 


ಮಹಾನ್ ಚಲನಚಿತ್ರ ನಿರ್ದೇಶಕ ಭಾರತಿರಾಜ ನಿಧನರಾಗಿದ್ದಾರೆ

ಭಾರತಿರಾಜ (ಮೂಲಹೆಸರು ಚಿನ್ನಸ್ವಾಮಿ) 1941ರ ಜುಲೈ 17ರಂದು ಜನಿಸಿದರು. ತಮಿಳು ಸಿನಿಮಾವನ್ನು ಸ್ಟುಡಿಯೋ ಗೋಡೆಗಳ ನಡುವಣ ಸೀಮಿತ ಜಗತ್ತಿನಚಲನಚಿತ್ರ ನಿರ್ಮಾಣದಿಂದ, ನಿಜವಾದ ಗ್ರಾಮೀಣ ಭೂದೃಶ್ಯಗಳಿಗೆ ತಂದುದಕ್ಕಾಗಿ ಭಾರತೀಯ ಸಿನಿಮಾ ರಂಗದಲ್ಲಿ ಅವರ ಖ್ಯಾತಿ ಬಲು ಹಿರಿದು.

'ಇಯಕ್ಕುನರ್ ಇಮಯಂ' (ನಿರ್ದೇಶಕರಲ್ಲಿ ಪರಾಕಾಷ್ಠೆಯವರು) ಎಂದು ಪ್ರೀತಿಯ ಸಂಬೋಧನೆಗೆ ಪಾತ್ರರಾಗಿದ್ದ ಭಾರತಿರಾಜ ಅವರು ಚಲನಚಿತ್ರೋದ್ಯಮದಲ್ಲಿ ಗಣ್ಯಸ್ಥಾನ ಹೊಂದಿದ್ದು, ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು (ದಕ್ಷಿಣ), ಆರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಒಂದು ನಂದಿ ಪ್ರಶಸ್ತಿಯನ್ನು ಗಳಿಸಿದ ಸಾಧಕರಾಗಿದ್ದರು.  ತಮಿಳು ಸಿನಿಮಾದಲ್ಲಿ ಇಂದಿಗೂ ಪ್ರಖ್ಯಾತರಾಗಿರುವ ಹಲವಾರು ಹೊಸ ನಟಿ ನಟರನ್ನು ಪರಿಚಯಿಸಿದ ಕೀರ್ತಿ ಇವರದು. ಒಂದು ವಿಶಿಷ್ಟ ನಡೆಯಲ್ಲಿ, ಅವರು "ರಾ" ಅಕ್ಷರದಿಂದ ಪ್ರಾರಂಭವಾಗುವ ಹಾಗೆ ಅನೇಕ ನಟಿಯರಿಗೆ ಹೊಸ ಹೆಸರು ಕೊಟ್ಟು ಚಿತ್ರರಂಗಕ್ಕೆ ಪರಿಚಯಿಸಿದರು.  ಹೀಗೆ ರಾಧಿಕಾ, ರೇವತಿ, ರಾಧಾ, ರಂಜಿತಾ ಮತ್ತು ರೇಖಾ ಸೇರಿದಂತೆ ಅನೇಕ ಪ್ರತಿಭಾನ್ವಿತ ನಟಿಯರನ್ನು ಉದ್ಯಮಕ್ಕೆ ಉಡುಗೊರೆಯಾಗಿ ನೀಡಿದರು. ತಮಿಳು ಚಲನಚಿತ್ರ ಉದ್ಯಮದಲ್ಲಿ ಇವರಿಂದ ಪ್ರಾರಂಭ ಪಡೆದು ಜನಪ್ರಿಯರಾಗಿ ಮಾರ್ಪಟ್ಟ ನಟರಲ್ಲಿ ಕಾರ್ತಿಕ್, ಪಾಂಡಿಯನ್, ಚಂದ್ರಶೇಖರ್, ನೆಪೋಲಿಯನ್ ಮತ್ತು ಜನಕರಾಜ್ ಸೇರಿದ್ದಾರೆ.

ಭಾರತಿರಾಜ ಅವರು ಚಲನಚಿತ್ರೋದ್ಯಮದಲ್ಲಿ ತಮ್ಮ ಛಾಪು ಮೂಡಿಸುವ ಮೊದಲೇ ಸಂಗೀತ ಸಂಯೋಜಕ ಇಳಯರಾಜ ಮತ್ತು ಅವರ ಸಹೋದರ ಗಂಗೈ ಅಮರನ್ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ರೋಗ ತಡೆಗಟ್ಟುವ ಅಭಿಯಾನಗಳಲ್ಲಿ ಭಾಗವಹಿಸುತ್ತಿದ್ದ ಸಂದರ್ಭದಲ್ಲಿ, ಇಳಯರಾಜ ಮತ್ತು ಅವರ ಸಹೋದರರೊಂದಿಗೆ ನಿಕಟ ಸ್ನೇಹವನ್ನು ಬೆಳೆಸಿಕೊಂಡರು. ಇವರುಗಳು ಜೊತೆಗೂಡಿ, ಹಲವಾರು ರಂಗ ನಾಟಕಗಳನ್ನು ನಿರ್ಮಿಸಿದ್ದರು. ದಕ್ಷಿಣ ತಮಿಳುನಾಡಿನ ಇಂದಿನ ಥೇಣಿ ಜಿಲ್ಲೆಯಿಂದ ಬಂದ ಭಾರತಿರಾಜ (ಅವರ ಮೂಲ ಹೆಸರು ಚಿನ್ನಸಾಮಿ) ಚೆನ್ನೈನಲ್ಲಿ ತಮ್ಮ ಸಹೋದರರೊಂದಿಗೆ ವಾಸಿಸುತ್ತಿದ್ದರು. ಅವರೆಲ್ಲರೂ ತಮ್ಮ ಆರಂಭಿಕ ವರ್ಷಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು.

ಭಾರತಿರಾಜ ಅವರು ಸೈನ್ಯಕ್ಕೆ ಸೇರಿದ್ದರು.  ಆದರೆ ಅಂತಿಮವಾಗಿ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಮನವೊಲಿಸಿ ಹೊರಬಂದರು. ಇಳಯರಾಜ ಅವರು ಭಾರತಿರಾಜ ಅವರ ಅನೇಕ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.  ಅಂತಿಮವಾಗಿ ಈ ಇಬ್ಬರೂ ಬೇರ್ಪಡುವ ಮೊದಲು ಮರೆಯಲಾಗದ ಜನಪ್ರಿಯ ಸರಣಿಯನ್ನು ನೀಡಿದರು. ಭಾರತಿರಾಜ ಅವರು 'ವೇದಂ ಪುದಿದು' ಚಿತ್ರದಲ್ಲಿ ಸಂಗೀತ ನಿರ್ದೇಶಕ ದೇವೇಂದ್ರನ್ ಅವರನ್ನು ಪರಿಚಯಿಸಿದರು.  ಇವರ ‘ಕಿಳಕ್ಕು ಸೀಮೈಯಿಲೆ’ ಚಿತ್ರಕ್ಕೆ ಎ. ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದರು.

ಭಾರತಿರಾಜ ಕೆಲಕಾಲ ಪುಟ್ಟಣ್ಣ ಕಣಗಾಲ್ ಅವರ ಸಹಾಯಕರಾಗಿದ್ದರು.  ಮುಂದೆ ಪಿ ಪುಲ್ಲಯ್ಯ, ಎಂ. ಕೃಷ್ಣನ್ ನಾಯರ್,  ಅವಿನಶಿ ಮಣಿ, ಎ. ಜಗನ್ನಾಥನ್ ಅವರ ಬಳಿಯೂ ಕೆಲಸ ಮಾಡಿದ್ದರು.

ಶ್ರೀದೇವಿ, ಕಮಲಹಾಸನ್ ಮತ್ತು ರಜನಿಕಾಂತ್ ನಟಿಸಿದ ಭಾರತಿರಾಜ ಅವರ ಚೊಚ್ಚಲ ಚಿತ್ರ '16 ವಯದಿನಿಲೆ' ತಮಿಳು ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆಯಿತು. ಈ ಚಿತ್ರದಲ್ಲಿನ ಶ್ರೀದೇವಿ, ಕಮಲಹಾಸನ್ ಮತ್ತು ರಜನಿಕಾಂತ್ ಪಾತ್ರಗಳು ಗ್ರಾಮೀಣ ನಡಾವಳಿಯಲ್ಲಿ ಬೆಸೆದ ರೀತಿ ಇಂದಿಗೂ ಅವಿಸ್ಮರಣೀಯ. ಇಳಯರಾಜ ಸಂಯೋಜಿಸಿದ ಈ ಚಿತ್ರಕ್ಕೆ ಇಳಯರಾಜ ನೀಡಿದ ಸಂಗೀತದಲ್ಲಿ ಪ್ರತಿ ಹಾಡೂ ಅಪಾರ ಜನಪ್ರಿಯತೆಯನ್ನು ಗಳಿಸಿತು. ಗಂಗೈ ಅಮರನ್ ಬರೆದ "ಸೆಂಥೂರ ಪೂವೆ" ಹಾಡು, ಗಾಯಕಿ ಎಸ್. ಜಾನಕಿಗೆ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು.

ಭಾರತಿರಾಜ ಅವರ ಎರಡನೇ ಚಿತ್ರ 'ಕಿಳಕ್ಕೆ ಪೋಗುಮ್ ರೈಲ್' ಪ್ರಬಲವಾದ ಸಾಮಾಜಿಕ ವಿಷಯಗಳನ್ನು ಒಳಗೊಂಡಿದ್ದು,  ಜಾತಿ ದಬ್ಬಾಳಿಕೆ ಮತ್ತು ಸಾಮಾಜಿಕವಾಗಿ ಮಹಿಳೆಯರಿಗೆ ನೀಡುತ್ತಿದ್ದ ಕೆಳಪ್ರಾಮುಖ್ಯತೆಯನ್ನು ಚಿತ್ರಿಸುವಲ್ಲಿ ಯಶಸ್ವಿಯಾಯಿತು. ಈ ಚಿತ್ರದಲ್ಲಿ ಮುಂದೆ ಪ್ರಸಿದ್ಧ ಕಲಾವಿದೆಯಾಗಿ ರೂಪುಗೊಂಡ ರಾಧಿಕಾ ಅವರನ್ನು ನಾಯಕಿಯಾಗಿ ಪರಿಚಯಿಸಲಾಯಿತು.

ಭಾರತಿರಾಜ ಅವರ 'ಸಿಗಪ್ಪು ರೋಜಾಕ್ಕಳ್' ಸರಳ ಸೌಮ್ಯತೆಯ ಹಿಂದಿರುವ ಕರಾಳತೆಯನ್ನು ಬಿಂಬಿಸುವ ಹೊಸ ಮಾದರಿಯ ಚಿತ್ರವಾಗಿತ್ತು.  'ನಿಳಲ್ಗಳ್' ಚಿತ್ರದಲ್ಲಿ, ಅವರು ನಟ ರವಿಯನ್ನು ಪರಿಚಯಿಸಿದಾಗ, ಅವರು 'ನಿಳಲ್ಗಳ್' ರವಿ ಎಂದೇ  ಖ್ತಾತರಾದರು.  ಪ್ರಖ್ಯಾತ ಸಾಹಿತಿ ವೈರಮುತ್ತು ಅವರು ಈ ಚಿತ್ರದ ಮೂಲಕ ಗೀತರಚನೆಕಾರರಾಗಿ ಪಾದಾರ್ಪಣೆ ಮಾಡಿ ಮುಂದೆ ಆ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ. ಟಿಕ್ ಟಿಕ್ ಟಿಕ್, ನೀರಮ್ ಆರಾದ ಪೂಕಳ್, ನಿಳಲ್ಗಳ್ ಮತ್ತು ಸಿಗಪ್ಪು ರೋಜಾಕ್ಕಳ್ ಮುಂತಾದ ಚಿತ್ರಗಳೊಂದಿಗೆ, ಭಾರತಿರಾಜ ತಮಗಿದ್ದ ಗಮನಾರ್ಹವಾದ ಬಹುಮುಖತೆಯನ್ನು ಪ್ರದರ್ಶಿಸಿದರು.  ಈ ಚಿತ್ರಗಳ ಮೂಲಕ ಗ್ರಾಮೀಣ ಚಿತ್ರಣವನ್ನು ಮೀರಿ ಸಹ ತಮಗಿದ್ದ ವಿಶಿಷ್ಟ ನಿರೂಪಣೆ ಶೈಲಿಯನ್ನು ಈ ಚಿತ್ರಗಳಲ್ಲಿ ನಿರೂಪಿಸಿದರು.

'ವೇದಂ ಪುದಿದು' ಚಿತ್ರದಲ್ಲಿ ಭಾರತಿರಾಜ ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಯ ಕಡೆಗೆ ಬೆಳಕು ಚೆಲ್ಲಿದರು.  ಅನೇಕ ವಿಧಗಳಲ್ಲಿ, ಇದು ಅವರ ಬ್ಲಾಕ್ಬಸ್ಟರ್ 'ಅಲೈಗಳ್ ಓಯುವುದಿಲ್ಲೈ' ಚಿತ್ರದ ಭಾವನೆಗಳನ್ನು ಪ್ರತಿಧ್ವನಿಸುವಂತಿದೆ.  'ಅಲೈಗಳ್ ಓಯುವುದಿಲ್ಲೈ'  ಚಿತ್ರ ಬ್ರಾಹ್ಮಣ ಹುಡುಗ ಮತ್ತು ಕ್ರಿಶ್ಚಿಯನ್ ಹುಡುಗಿಯ ನಡುವಿನ ಪ್ರೇಮ ಸಂಬಂಧವನ್ನು ಅನ್ವೇಷಿಸಿದೆ. ಈ ಚಿತ್ರವು  ಕಾರ್ತಿಕ್ ಮತ್ತು ರಾಧಾ ಅವರನ್ನು ಪರಿಚಯಿಸಿತು. 'ಮಣ್ ವಾಸನೈ' ಚಿತ್ರದ ಮೂಲಕ ಪರಿಚಿತರಾದವರು ಪ್ರಸಿದ್ಧ ನಟಿ ರೇವತಿ.  'ಮುದಲ್ ಮರಿಯಾದೈ' ಚಿತ್ರದಲ್ಲಿ ಭಾರತಿರಾಜ ಅವರು ಮಹಾನ್ ನಟ ಶಿವಾಜಿ ಗಣೇಶನ್ ಅವರನ್ನು ಅವರ ಪ್ರಸಿದ್ಧ ನಾಟಕೀಯತೆಗಳ ಅಭಿನಯದ ವಾತಾವರಣಕ್ಕೆ ಹೊರತಾದ,  ಸಂಯಮದ ಉಪಸ್ಥಿತಿಯನ್ನು ಪ್ರತಿನಿಧಿಸುವ  ದಿವ್ಯಪಾತ್ರ ನೀಡಿ,  ಅವರ ಚಿತ್ರಜೀವನಕ್ಕೆ ಹೊಸ ಆಯಾಮ ನೀಡಿದರು.  

ಭಾರತಿರಾಜ ಅವರು ಕೆಲವು ಚಿತ್ರಗಳಲ್ಲಿ ತಾವೇ ನಟಿಸಿದ್ದರು. 'ಕಲ್ಲುಕ್ಕುಳ್ ಈರಂ' ಚಿತ್ರದಲ್ಲಿ ನಾಯಕನ ಪಾತ್ರ ನಿರ್ವಹಿಸಿದ್ದರು.  ಇತ್ತೀಚಿನ ವರ್ಷಗಳಲ್ಲಿ ಧನುಷ್ ಮತ್ತು ನಿತ್ಯಾ ಮೆನನ್ ಅವರೊಂದಿಗೆ 'ತಿರುಚಿತ್ರಂಬಲಂ' ಅಂತಹ  ಚಿತ್ರಗಳಲ್ಲಿ ನೀಡಿದ ಅದ್ಭುತ ಅಭಿನಯವೂ ಸೇರಿದಂತೆ ಹಲವಾರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದರು.

ಭಾರತಿರಾಜ ತಮ್ಮ ಮಗ ಮನೋಜ್ ಅವರನ್ನು 'ತಾಜ್ ಮಹಲ್'‌ನಲ್ಲಿ ಪರಿಚಯಿಸಿದರು; ಮನೋಜ್ 2025 ವರ್ಷದಲ್ಲಿ ಇನ್ನೂ 48ನೇ ವಯಸ್ಸಿನಲ್ಲಿ ನಿಧನರಾಗಿದ್ದರು. 

ಕೆಲಕಾಲ ಅನಾರೋಗ್ಯದಿಂದ ಇದ್ದ ಭಾರತಿರಾಜ 2026ರ ಜೂನ್ 10ರಂದು ನಿಧನರಾದರು.  ಅಗಲಿದ ಚೇತನಕ್ಕೆ ನಮನ🌷🙏🌷

Respects to departed soul Great Film Maker Bharatiraja 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!