ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯೋಗವೆಂಬ ನನ್ನ ಬದುಕಿನ ಕಾಣ್ಕೆ


ಯೋಗವೆಂಬ ನನ್ನ ಬದುಕಿನ ಕಾಣ್ಕೆ

ಯೋಗ ಎಂಬ ಕ್ಷೇತ್ರದಲ್ಲಿ ಮಹಾನ್ ಸಾಧಕರಿದ್ದಾರೆ.  ಯೋಗದಲ್ಲಿನ ನನ್ನ ಸಾಧನೆ ತುಂಬಾ ಕ್ಷೀಣವಾದದ್ದು ಎಂಬ ನಮ್ರ ಅರಿವು ನನ್ನಲ್ಲಿದೆ.  

ಸುಮಾರು 1985-86 ವರ್ಷದಲ್ಲಿ ಮಲ್ಲೇಶ್ವರದಲ್ಲಿನ ವಿವೇಕಾನಂದ ಯೋಗ ಕೇಂದ್ರದಲ್ಲಿ ಡಾ. ನಾಗರತ್ನ ಅವರನ್ನು ಭೇಟಿಯಾಗಿ,  ವಿವೇಕಾನಂದ ಕೇಂದ್ರದವರು ಮಲ್ಲೇಶ್ವರದ ರಾಮಮಂದಿರದಲ್ಲಿ ನಡೆಸುತ್ತಿದ್ದ ಯೋಗ ತರಬೇತಿಗೆ ಕೆಲಕಾಲ ಹೋಗಿ ಅದನ್ನು ಹಲವು ವರ್ಷ ಅಭ್ಯಾಸ ಮಾಡುತ್ತಿದ್ದೆ.  ಮುಂದೆ 2002ರ ಸುಮಾರಿನಲ್ಲಿ ಸ್ವಾಮಿ ಸುಖಬೋಧಾನಂದರು ನಡೆಸುತ್ತಿದ್ದ ಶಿಬಿರಗಳಲ್ಲಿ ಪ್ರಾಣಾಯಾಮ, ಧ್ಯಾನದ ತಿಳಿವು ಮೂಡಿಬಂತು.  ದುಬೈನಲ್ಲಿದ್ದಾಗ ಅಲ್ಲಿಯೂ ಯೋಗವನ್ನು ಉಚಿತವಾಗಿ ಕಲಿಸುವ ಕಡೆ ಕೆಲವು ಸಲ ಯೋಗದ ಅಭ್ಯಾಸವನ್ನು ಮಾಡಿದೆ. ಈ ಯೋಗ,  ಪ್ರಾಣಾಯಾಮ, ಧ್ಯಾನದ ಅಭ್ಯಾಸಗಳು ನಿರಂತರವಾಗಿ ನನ್ನ ಜೊತೆ ಸಾಗಿ ಬರುತ್ತಿವೆ.

ಹೇಗೆ ಹೇಗೋ ಕುಳಿತುಕೊಳ್ಳುವ ವಿಧಾನ, ಕೆಲಸದ ಒತ್ತಡ ಇವುಗಳಿಂದ ಮೂಡುವ ಬೆನ್ನು ನೋವು, ಕತ್ತು ನೋವು, ತಲೆ ನೋವು ಇವುಗಳಿಗೆ ಯೋಗದ ಅಭ್ಯಾಸಗಳು ನೀಡಿರುವ ಪರಿಹಾರ; ಎಲ್ಲ ರೀತಿಯ ಒತ್ತಡ, ಸಂದಿಗ್ದಗಳು, ಸ್ವಯಂ ದೌರ್ಬಲ್ಯಗಳು, ಕೀಳರಿಮೆಗಳು, ಅಪಮಾನದ ಭಾವಗಳು, ಸೋಲುಗಳು, ನನಗೆ ಬೇಕಾಗಿರುವುದೇನು ಮುಂತಾದವನ್ನು ಅರ್ಥೈಸಿಕೊಂಡು ಮುಂದೆ ಸಾಗುವಿಕೆ, ಇವುಗಳಿಗೆ ಪ್ರಾಣಾಯಾಮ ಮತ್ತು ಧ್ಯಾನಗಳು ನನಗೆ ನೀಡಿರುವ ಸಹಾಯ ಅಪರಿಮಿತವಾದದ್ದು.

ಕೇವಲ ಯೋಗ, ಪ್ರಾಣಾಯಾಮ, ಧ್ಯಾನದಿಂದಲೇ ಎಲ್ಲ ಆಗುತ್ತದೆಯೆ?ಅವೆಲ್ಲ ಇಲ್ಲದಿದ್ದವರು ಬದುಕೇ ಇಲ್ಲವೇ?

ಯಾರೇ ಆಗಲಿ, ಯಾವುದೇ ರೀತಿಯಲ್ಲಿಯೇ ಆಗಲಿ,  ತಮ್ಮ ಬದುಕನ್ನು ಅವಲೋಕಿಸಿಕೊಂಡು, ತಮ್ಮದೇ ಮಾರ್ಗ ಅವಲೋಕಿಸಿಕೊಂಡು ಬದುಕನ್ನು ತಮ್ಮ ಆಚಾರ, ಆಹಾರ, ವಿಹಾರ, ವಿಚಾರಗಳಲ್ಲಿ ಸಹ್ಯವಾಗಿಸಿಕೊಂಡಿರಬಹುದು. ಅದು ನಾವು ಕಾಣುವಂತಹದ್ದೇ ಮೈಮುರಿಯುವಂತಹ ವ್ಯಾಯಾಮ, ನಮ್ಮ ಪದ್ಧತಿಯಲ್ಲೇ ಮೂಗು ಹಿಡಿಯುವಿಕೆ, ತಲೆ ಬಾಗುವಿಕೆ ಆಗಿಲ್ಲದಿದ್ದರೂ, ಅದನ್ನೂ ಯೋಗ ಎಂದು ಭಾವಿಸಲು ಅಡ್ಡಿಯಿಲ್ಲ.  

ಹೀಗಾಗಿ ನಮಗೇನು ಬೇಕೊ ಅದನ್ನು ಆಗಾಗ ಅವಲೋಕಿಸಿಕೊಂಡು, ಪ್ರಶಾಂತ  ಮನವನ್ನು ಇರಿಸಿಕೊಂಡು ಮುಂದೆ ಸಾಗುವ ಜೀವನ ಕಲೆ ನಮಗೆ ಆಗತ್ಯ ಇದೆ ಎಂದು ಕಂಡುಕೊಳ್ಳುವುದು ಪ್ರತಿಯೊಬ್ಬರ ಜೀವನಧರ್ಮ ಕಲೆ ಆಗಿರಬೇಕು ಅನಿಸುತ್ತದೆ.

ಏನೊ ಇಂತವು, ಒಂದಷ್ಟು ಅಭ್ಯಾಸದಲ್ಲಿದೆ ಅಂತ ಹೇಳಿಕೊಂಡ ಮಾತ್ರಕ್ಕೆ, ನಮ್ಮಲ್ಲಿ ಅವಗುಣಗಳಿಲ್ಲ, ನ್ಯೂನತೆಗಳಿಲ್ಲ ಅಂತ ಅಲ್ಲ.  ಈ ಅವಗುಣ, ನ್ಯೂನತೆಗಳನ್ನು ಕಂಡುಕೊಳ್ಳಲು ನಮ್ಮ ಮೇಲ್ಕಂಡ ಅಭ್ಯಾಸಗಳು ಕನ್ನಡಿಯಾಗಿ ನಮಗೆ ಸಹಾಯಮಾಡುತ್ತವೆ ಎಂದು ಭಾವಿಸುವುದು ಉಚಿತವಾದೀತು. 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!