ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭೀಮ ದ್ರೌಪದಿ


 “ಭೀಮನೇ! ಮುಂದಿನ ಜನ್ಮದಲ್ಲಿ ಈ ಐದು ಜನರಲ್ಲಿ ನೀನು ಹಿರಿಯವನಾಗು! “ ಎಂದಳು ದ್ರೌಪದಿ


ಇರಾವತಿ ಕರ್ವೆ ಅವರ "ಯುಗಾಂತ" ಮಹಾಭಾರತದ ಕುರಿತಾದ ಶ್ರೇಷ್ಠ ಸಂಶೋಧನಾ ಕೃತಿ. ಅವರು ದ್ರೌಪದಿಯ ಅಂತರಂಗವನ್ನು ಚಿತ್ರಿಸುವಾಗ ಆಕೆ ಮತ್ತು ಭೀಮನ ನಡುವಿನ ಕೊನೆಯ ಸಂಭಾಷಣೆಯನ್ನು ಹೀಗೆ ಕಾಲ್ಪನಿಕ ಸೌಂದರ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ:

ಮರಗಳಿಲ್ಲದ ಒಂದು ಬಯಲು ಭಾಗಕ್ಕೆ ಅವರು ತಲುಪಿದರು. ಅಲ್ಲಲ್ಲಿ ಕಲ್ಲು ರಾಶಿಗಳ ಹೊರತು ಏನೂ ಇರಲಿಲ್ಲ. ಒಬ್ಬರ ಹಿಂದೆ ಒಬ್ಬರಂತೆ ಈ ಆರು ಜನರು ತಿಂಗಳುಗಟ್ಟಲೆ ಸಾಗಿದ್ದರು. ಇದ್ದಕ್ಕಿದ್ದಂತೆ ದ್ರೌಪದಿಯು ಕುಸಿದು ಕೆಳಗೆ ಬಿದ್ದಳು. ಭೀಮನು ಅಲ್ಲಿಯೇ ನಿಂತು “ಇವಳೇಕೆ ಬಿದ್ದಳು?” ಎಂಬ ಮೂಢಪ್ರಶ್ನೆಯನ್ನು ಕೇಳಿದನು. ಇಷ್ಟೊಂದು ದಾರಿ ನಡೆದ ನಂತರ ಅವಳು ಹೇಗೆ ಬೀಳದೇ ಇರಬಹುದು? ಆರು ಜನರು ಎಲ್ಲಿಗೆ ನಡೆಯುತ್ತಿದ್ದರು, ಅಲ್ಲಿಯವರೆಗೆ ಎಲ್ಲರೂ ಮುಟ್ಟಬಹುದು ಎಂಬ ಕಲ್ಪನೆಯು ಭೀಮನದಾಗಿರಬಹುದೇ?

“ನೋಡಣ್ಣಾ! ಅವಳು ಬಿದ್ದಳು. ಅವಳೇಕೆ ಬಿದ್ದಳು?” ಭೀಮನು ಕೇಳಿದನು. ಧರ್ಮನು ಹಿಂತಿರುಗಿ ನೋಡದೆ ಉತ್ತರಿಸಿದನು. “ಭೀಮನೇ, ಮುಂದೆ ಸಾಗು! ಅವಳು ಬಿದ್ದದ್ದು ಏಕೆಂದರೆ ಅವಳು ಅರ್ಜುನನನ್ನು ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸಿದಳು.” ಧರ್ಮನು ತನ್ನ ಜೀವನದಲ್ಲಿ ಆಳವಾಗಿ ಅಡಗಿಟ್ಟ ತನ್ನ ಮನೋವ್ಯಥೆಯನ್ನು ವ್ಯಕ್ತಪಡಿಸಿದನು. ದ್ರೌಪದಿ ಕುಸಿದ ಸ್ಥಳದ ಹತ್ತಾರು ಹೆಜ್ಜೆಗಳ ಅಂತರದಲ್ಲಿ ಇತರರು ಕುಸಿದರು. ಧರ್ಮನೇನು ತನ್ನ ನಾಯಿಯ ಜೊತೆಗೆ ಮುಂದೆ ಸಾಗಿದನು.

ದ್ರೌಪದಿಗೆ ಏನೋ ಸರಿದಾಡಿದ, ದೊಡ್ಡದಾಗಿ ಉಸಿರು ಗರೆಯುವ ಶಬ್ದವು ಕೇಳಿಸಿತು. ಅವಳು ಶಾಂತವಾಗಿ ಮರಣದ ಹಾದಿಯನ್ನು ಶೋಧಿಸುತ್ತಿದ್ದಳು. ಯಾವ ಪ್ರಾಣಿ ಬರುತ್ತಿರಬಹುದು? ಕತ್ತೆಕಿರುಬ ಇರಬಹುದೊ? ಭಯದಿಂದ ಸರ್ವಾಂಗವು “ಜುಮ್” ಎಂದಿತು. ಇಷ್ಟು ದಿನ ಈ ಬಯಲು ಭಾಗದಲ್ಲಿ ಯಾವ ಕಾಡು ಪ್ರಾಣಿಗಳೂ ಕಂಡು ಬಂದಿಲ್ಲ. ನನ್ನ ದೇಹವನ್ನು ಅಲ್ಲಲ್ಲಿ ಕಚ್ಚಿ ತುಂಡರಿಸುವುದಕ್ಕಿಂತ ನನ್ನ ಪ್ರಾಣವನ್ನು ಬೇರ್ಪಡಿಸಿದರೆ ಒಳಿತು! ಅವಳು ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡಳು. ಯಾವುದೋ ಅನಾಹುತ ಸಂಕಟ, ಸಮಯವನ್ನು ಕಾಯುತ್ತಿದ್ದಂತೆ ಅವಳ ಕಣ್ಣೆದುರು ನೆರಳು ಕವಿಯಿತು. ಅವಳ ಮತ್ತು ಸೂರ್ಯನ ಬೆಳಕಿನ ನಡುವೆ ಒಂದು ನೆರಳು ಬಂದಂತಿತ್ತು.

ಮಂದವಾದ ಕ್ಷೀಣ ಸ್ವರದಲ್ಲಿ “ದ್ರೌಪದೀ!” ಎಂಬ ಸ್ವರವು ಕೇಳಿಸಿತು. ಭೀಮನ ಸ್ವರವಾಗಿತ್ತು. ದ್ರೌಪದಿ ಆಶ್ಚರ್ಯದಿಂದ, ಆದರೆ ಆಯಾಸದಿಂದ ಕಣ್ಣು ತೆರೆದಳು. ಭೀಮನು ಅವಳಿಗೆ ನೆರಳಾಗಿ ಇದ್ದ. ಆತನೇ ಸರಿಯುತ್ತಾ, ಶ್ವಾಸೋಚ್ಛ್ವಾಸ ಮಾಡುತ್ತಾ ಕಷ್ಟದಿಂದ ಹತ್ತು-ಹನ್ನೆರಡು ಅಡಿ ಅಂತರದಲ್ಲಿ ಬಂದಿದ್ದನು. ದಾರಿಯಲ್ಲಿ ಅರ್ಜುನನು, ನಕುಲ, ಸಹದೇವರು ಮೃತರಾದುದನ್ನು ಕಂಡು, ದ್ರೌಪದಿ ಅಂತಹ ಸ್ಥಿತಿಯಲ್ಲಿಯೇ ಕಾಣಬಹುದೆಂದು ತಿಳಿದಿದ್ದನು.

ಕಣ್ಣಿನಿಂದ ಲಕ್ಷಿಸಿದನು. “ನಿನಗಾಗಿ ಏನು ಮಾಡಲಿ?” ಅವನು ತಡವರಿಸುತ್ತಾ ಕೇಳಿದನು.

ಆಯುಷ್ಯದಲ್ಲಿ ಯಾವಾಗಲೂ ಕೇಳಿದ ಇಂಥ ಪ್ರಶ್ನೆಯೇ ಈ ಸಮಯದಲ್ಲಿ ಅರ್ಥಹೀನ, ಅಸಮಂಜಸವಾಗಿತ್ತು. ದ್ರೌಪದಿಯು ಆನಂದದಿಂದ ನಕ್ಕಳು. ಭೀಮನ ಮುಖವನ್ನು ತನ್ನ ಮುಖದ ಹತ್ತಿರ ಹಿಡಿದು ತನ್ನ ಕೊನೆಯ ಉಸಿರಿನಲ್ಲಿ “ಭೀಮನೇ! ಮುಂದಿನ ಜನ್ಮದಲ್ಲಿ ಈ ಐದು ಜನರಲ್ಲಿ ನೀನು ಹಿರಿಯವನಾಗು! ನಿನ್ನ ಆಶ್ರಯದಲ್ಲಿ ನಾವೆಲ್ಲರೂ ನಿರ್ಭಯವಾಗಿ, ಸುಖವಾಗಿ ಬಾಳುವೆವು” ಎಂದಳು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!