ಭಾನುವಾರ, ಸೆಪ್ಟೆಂಬರ್ 1, 2013

ವಿನಯಾಂತರಾಳದಿಂದ

ವಿನಯಾಂತರಾಳದಿಂದ
-ಹರಿ

ಸುವರ್ಣ ನ್ಯೂಸ್ ವಾಹಿನಿಯಲ್ಲಿ ಸೆಲೆಬ್ರಿಟಿಗಳನ್ನು ಅವರ ತಾಯಂದಿರ ಜೊತೆಗಿನ ಅನುಭವಗಳ ಬಗ್ಗೆ ಮಾತನಾಡಿಸುವ ನಟಿ ವಿನಯಾ ಪ್ರಸಾದ್ ಅವರೊಂದಿಗಿನ ತಾಯಿನುಡಿಯ ಪಾಲಿಸಿ ಇದು. ಅಮ್ಮ ಎಂಬ ರಿಯಲಿಸ್ಟಿಕ್ ರಿಯಾಲಿಟಿ ಶೋದ ನೆಪದಲ್ಲಿ ಅಮ್ಮನ ಬಗ್ಗೆ ಮಾತನಾಡಿದ್ದಾರೆ ವಿನಯಾಪ್ರಸಾದ್.

ಈ 'ಅಮ್ಮ'ನ ಬಗ್ಗೆ ನಿಮಗಿರುವ ಪ್ರೀತಿ ಎಷ್ಟು?

ಇದು ತುಂಬಾ ಮೂಲಭೂತವಾದ ವಿಷಯ. ಅಮ್ಮನಿಲ್ಲದೆ ಪ್ರಪಂಚ ಇಲ್ಲ. ನಮ್ಮ ಭೂಮಿಯೂ ನಮಗೆ ಅಮ್ಮನೇ. ಹಾಗಾಗಿ, ಇದು ಮೇಲೆ ಮೇಲೆ ಮಾತಾಡೋ ವಿಷಯ ಅಲ್ಲ. ಮನದಾಳದಿಂದ ಬರುವಂಥದ್ದು. ಈ ಕಾರ್ಯಕ್ರಮಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ತುಂಬ ಖುಷಿ ಆಯ್ತು. ನನಗೆ ನನ್ನ ಅಮ್ಮ, ಅವರಮ್ಮ, ನನ್ನ ಮಗಳು ಎಲ್ಲರೊಂದಿಗೆ ಒಡನಾಡಿದ ಅನುಭವ ಇದೆ. ನಾನು ಏನೇ ಕಲಿತಿದ್ದರೂ ನನ್ನ ಅಮ್ಮನಿಂದ. ಅದನ್ನು ಈ 'ಅಮ್ಮ'ನಿಗೆ ಧಾರೆ ಎರೆಯುತ್ತಿದ್ದೇನೆ.

ಈ ಕಾರ್ಯಕ್ರಮಕ್ಕೆ ನಿಮ್ಮ ತಯಾರಿ ಹೇಗಿತ್ತು?

ನಮ್ಮ ಇತಿಹಾಸ, ಪುರಾಣದಲ್ಲೇ ಅಮ್ಮನ ಬಗ್ಗೆ ಸಾಕಷ್ಟು ಸಂಗತಿಗಳಿವೆ. ಹಾಗಾಗಿ ರಾಮಾಯಣ ಮಹಾಭಾರತವನ್ನು ಈ ಕಾರ್ಯಕ್ರಮಕ್ಕಾಗಿ ಅಮ್ಮನ ದೃಷ್ಟಿಯಿಂದ ನೋಡಲು ಶುರುಮಾಡಿದೆ. ಹಿರಣ್ಯಕಶಿಪು ಕಥೆಯಲ್ಲಿ ಕಯಾದು ಪ್ರಹ್ಲಾದನ ಕತೆ ಕೂಡಾ ನನಗೆ ಸಹಾಯ ಮಾಡಿತು. ಜೊತೆಗೆ ನನ್ನ ಅಮ್ಮ ನನಗಾಗಿ ಏನು ಮಾಡಿದ್ದಾರೆ, ನಾನು ಅವರಿಗಾಗಿ ಏನು ಮಾಡಿದ್ದೇನೆ ಎಂಬುದು ಸಂಪೂರ್ಣ ಗೊತ್ತಿದೆ. ಅದನ್ನೂ ಆಧಾರವಾಗಿ ಇಟ್ಟುಕೊಂಡಿದ್ದೇನೆ.
ಅಮ್ಮ ಎಂದರೆ ಅದು ಭಾವನಾತ್ಮಕ ವಿಷಯ. ಈ ವಿಷಯದ ಬಗ್ಗೆ ಎಲ್ಲರೂ ಮನಸ್ಸು ಬಿಚ್ಚಿ ಮಾತನಾಡುವಂತೆ ಮಾಡುವುದು ಕಷ್ಟದ ಕೆಲಸವೇ. ಅದನ್ನು ಹೇಗೆ ಮಾಡ್ತೀರಾ?

ನಮ್ಮ ಕಾರ್ಯಕ್ರಮಕ್ಕೆ ಒಬ್ಬ ಸೆಲೆಬ್ರಿಟಿ ಬಂದು ಕೂತ ತಕ್ಷಣ ಅವರನ್ನು ಗಮನಿಸೋಕೆ ಶುರುಮಾಡ್ತೀನಿ. ಅವರಿಗೆ ಕಾರ್ಯಕ್ರಮದ ಬಗ್ಗೆ ಹೇಳುವಾಗ ಅವರು ಯಾವ ವಿಷಯಕ್ಕೆ ಹೆಚ್ಚು ರಿಯಾಕ್ಷನ್ ತೋರಿಸ್ತಾರೆ ಅಂತ ನೋಟ್ ಮಾಡಿಕೊಳ್ಳುತ್ತೇನೆ. ಅದರ ಬಗ್ಗೆಯೇ ಹೆಚ್ಚು ಪ್ರಶ್ನೆ ಕೇಳುತ್ತೇನೆ. ಅದು ಅವರ ಸಬ್ಜೆಕ್ಟ್ ಆಫ್ ಇಂಟರೆಸ್ಟ್. ಈ ಹಿನ್ನೆಲೆ ಇಟ್ಟುಕೊಂಡು ಮಾತು ಶುರುಮಾಡ್ತೀನಿ. ಕೆಲವರು ನಾವು ಕೇಳಿದ್ದಕ್ಕೆ ಮಾತ್ರ ಉತ್ತರಿಸಿ ಸುಮ್ಮನಾಗ್ತಾರೆ. ಅದು ಅವರ ಅಭ್ಯಾಸ, ಹಾಗಾಗಿ ಅವರು ಹೇಳಿದ ವಿಷಯವನ್ನೇ ಇಟ್ಕೊಂಡು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಜೊತೆಗೆ, ಅವರ ವೃತ್ತಿಯಲ್ಲಿ ಅವರ ಅಮ್ಮನ ಇನ್‌ಫ್ಲುಯೆನ್ಸ್ ಬಗ್ಗೆ ಮಾತಾಡಿಸ್ತೀನಿ.

ಈ ಕಾರ್ಯಕ್ರಮದಿಂದ ನೀವು ಏನು ಅಪೇಕ್ಷೆ ಮಾಡ್ತೀರಿ, ಇದನ್ನ ಹೇಗೆ ಆನಂದಿಸುತ್ತೀರಿ? ನಿಮಗೆ ಇದು ಯಾವ ರೀತಿಯ ತೃಪ್ತಿ ಕೊಡುತ್ತೆ?

ಸಂಭಾವನೆ ಕೇವಲ ಹಣಕ್ಕೆ ಸಂಬಂಧಿಸಿದ್ದು. ಆದರೆ ಇದು ಮನಸ್ಸಿಗೆ ಖುಷಿ ಕೊಡುವ ವಿಷಯ. ನಾರ್ಮಲ್ ಆಗಿ ನಾನು ಓದೋದು ಹೆಚ್ಚು. ಟಿವಿ ಜಾಸ್ತಿ ನೋಡಲ್ಲ. ಒಬ್ಬ ಬರಹಗಾರ ಪ್ರತಿಯೊಂದು ಸಾಲನ್ನು ಬರೆಯುವಾಗ ಹೇಗೆ ಯೋಚನೆ ಮಾಡಿರ್ತಾನೆ ಅನ್ನೋದರ ಬಗ್ಗೆ ಯೋಚನೆ ಮಾಡ್ತೀನಿ. 'ಹೂವು ಅರಳಿತು' ಎನ್ನುವ ಸರಳ ಸಾಲು ಬರೆಯುವಾಗ ಅವನ ಮನಸ್ಸಲ್ಲಿ ಏನಿರುತ್ತೆ ಎನ್ನುವುದನ್ನು ಯೋಚನೆ ಮಾಡುತ್ತೇನೆ. ನಮಗೆ ತುಂಬ ಸರಳ ಅನಿಸಿದ್ದು ಅದರ ಅಂತರಾತ್ಮಕ್ಕೆ ಇಳಿದಾಗ ಆಸಕ್ತಿ ಹೆಚ್ಚುತ್ತೆ. ನನಗೆ ಮಾತಾಡೋದು ಅಂದ್ರೆ ತುಂಬ ಇಷ್ಟ. ಆದರೆ, ಇಲ್ಲಿ ಸರಾಗವಾಗಿ ತಪ್ಪಿಲ್ಲದೆ ಮಾತಾಡಬೇಕು. ಇದು ವ್ಯವಹಾರಕ್ಕೆ ಅಲ್ಲ ಖುಷಿಗೋಸ್ಕರ ಮಾಡ್ತಾ ಇರೋ ಕೆಲಸ ಅನ್ನೋ ತೃಪ್ತಿ ನನಗಿದೆ.

ಮಕ್ಕಳಿಗೆ ಒಮ್ಮೊಮ್ಮೆ ಅಪ್ಪನ ಮೇಲೆ ಅಥವಾ ಅಮ್ಮನ ಮೇಲೆ, ಹೀಗೆ ಯಾರೋ ಒಬ್ಬರ ಮೇಲೆ ಮಾತ್ರ ಜಾಸ್ತಿ  ಅಟ್ಯಾಚ್‌ಮೆಂಟ್ ಇರುತ್ತೆ. ಅದು ಯಾಕೆ ಅಂತ ನಿಮಗನಿಸುತ್ತೆ?

ಅದು ಅವರವರ ಜೀವನಶೈಲಿ ಮೇಲೆ ಡಿಪೆಂಡ್ ಆಗಿರುತ್ತೆ. ಅಲ್ಲದೆ ಮಕ್ಕಳು ಕೂಡ ಕಿಲಾಡಿಗಳು. ಅವರಿಗೆ ಯಾರಿಂದ ಯಾವ ಕೆಲಸ ಆಗುತ್ತೆ ಅಂತ ಗೊತ್ತಿರುತ್ತೆ. ನಾನು ಆ್ಯಂಕರ್ ಆಗಿ ಪ್ರೊಫೆಷನಲ್ ಆಗಿ ಎಲ್ಲರ ಸೂಕ್ಷ್ಮತೆ ಗಮನಿಸ್ತೀನಿ. ಆದರೆ ಮಕ್ಕಳಿಗೆ ಅದು ಆಟೋಮ್ಯಾಟಿಕ್ ಆಗಿ ಬಂದಿರುತ್ತೆ. ಯಾವ ವಿಷಯವನ್ನು ಯಾರತ್ರ ಹೇಳಬೇಕು ಅಂತ ಅವರಿಗೆ ಚೆನ್ನಾಗಿ ಗೊತ್ತಿರುತ್ತೆ. ಅದನ್ನು ಎನ್‌ಕ್ಯಾಷ್ ಮಾಡಿಕೊಳ್ಳೋಕೆ ಯತ್ನಿಸುವುದೂ ಈ ಅಟ್ಯಾಚ್‌ಮೆಂಟ್‌ಗೆ ಕಾರಣ. ಜೊತೆಗೆ ಪ್ರತಿಯೊಬ್ಬರಿಗೂ ಒಂದು ಕಂಫರ್ಟ್ ಝೋನ್ ಅಂತ ಇರುತ್ತೆ. ಅದನ್ನು ಕ್ರಿಯೇಟ್ ಮಾಡಿಕೊಳ್ಳೋದು ತಂದೆ ತಾಯಂದಿರ ಕರ್ತವ್ಯ. ಒಂದು ಸಲ ನೀವು ಮಕ್ಕಳ ಮಾತಿಗೆ ಸರಿಯಾಗಿ ಸ್ಪಂದಿಸಲಿಲ್ಲ ಅಂದ್ರೆ ಮುಂದಿನ ಬಾರಿ ಅವರು ಆ ವಿಷಯ ನಿಮ್ಮತ್ರ ಮಾತೋಡೋದೇ ಇಲ್ಲ.

'ಎಲ್ಲಾ ಗಂಡುಮಕ್ಕಳೂ ಅಮ್ಮನ ಮಾತು ಕೇಳ್ತಾರೆ' ಅನ್ನೋದು ಹೆಂಡತಿಯರ ವಾದ, ಆದರೆ 'ಮಗನಿಗೆ ಹೆಂಡತಿ ಬಂದಮೇಲೆ ಅಮ್ಮ ಬೇಡ ಆಯ್ತು' ಅನ್ನೋದು ತಾಯಂದಿರ ವಾದ. ನಮ್ಮ ಕುಟುಂಬಗಳಲ್ಲಿರುವ ಈ ಎರಡು ಕಾಮನ್ ಮತ್ತು ವೈರುಧ್ಯದ ಆರೋಪಗಳಲ್ಲಿ ಯಾವುದು ನಿಜ?

ಅದು ಆಯಾ ವ್ಯಕ್ತಿಗಳ ಮೇಲೆ ಡಿಪೆಂಡ್ ಆಗಿದ್ದರೂ ಎರಡೂ ವಿಷಯಗಳು ಖಂಡಿತ ನಿಜ. ತಾಯಿಗೆ ಮದುವೆಯಾಗಿ ಇನ್ನೊಬ್ಬರ ಮನೆಗೆ ಹೋಗುವ ಮಗಳ ಮೇಲಿರುವಷ್ಟೇ ಪ್ರೀತಿ ತನ್ನ ಮಗನ ಮೇಲೂ ಇರುತ್ತೆ. ಅಷ್ಟು ವರ್ಷ ಅವನ ಪೂರ್ತಿ ಜವಾಬ್ದಾರಿ ಅವಳ ಕೈಲಿರುತ್ತೆ. ನನ್ನ ಮಗ ಅನ್ನೋ ಐಡೆಂಟಿಟಿ ಇರೋನಿಗೆ, ಇಂಥವಳ ಗಂಡ ಅಂತ ಐಡೆಂಟಿಟಿ ಬಂದಾಗ ಅವಳಿಗೆ ಕಸಿವಿಸಿ ಆಗುತ್ತೆ. ಇಷ್ಟು ವರ್ಷ ನನ್ನ ಕರ್ತವ್ಯ ಮುಗಿಸಿದ್ದೇನೆ ಈಗ ಅವನು ಸೊಸೆಯ ಪಾಲು.

ಅವಳ ಜೊತೆ ಅವನ ಸಂಬಂಧ ಚೆನ್ನಾಗಿದ್ದರೆ ಅವನೂ ಚೆನ್ನಾಗಿರ್ತಾನೆ ಅನ್ನೋದು ಆಕೆಗೆ ಗೊತ್ತಾಗಬೇಕು. ಅಲ್ಲದೆ ತಾನೂ ಕೂಡಾ ಇನ್ನೊಬ್ಬನ ಹೆಂಡತಿಯಾಗಿ ಇನ್ನೊಬ್ಬರ ಸೊಸೆಯಾಗಿ ಬಂದವಳು ಅನ್ನೋದು ಗೊತ್ತಿದ್ರೆ ತೊಂದರೆ ಆಗಲ್ಲ. ಸೊಸೆಯಾಗಿ ಬಂದವಳೂ ಕೂಡ ತನಗೂ ತಾಯಿ ಇದ್ದಾಳೆ. ಸಹೋದರ ಇರ್ತಾನೆ. ಅವನಿಗೂ ಹೆಂಡತಿ ಬರ್ತಾಳೆ. ಅವಳು ನಮ್ಮ ಮನೆಗೆ ಬಂದಾಗ ನನಗೆ ಹೇಗನ್ನಿಸುತ್ತಿತ್ತು ಅನ್ನೋದನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು.

ನಿಮ್ಮ ತಾಯಿ ಜೊತೆಗಿನ ನಿಮ್ಮ ಸಂಬಂಧ ಮತ್ತು ನಿಮ್ಮ ಮಗಳ ಜೊತೆಗಿನ ನಿಮ್ಮ ಸಂಬಂಧದಲ್ಲಿ ನಿಮಗೆ ಏನಾದರೂ ಹೋಲಿಕೆ ಕಂಡುಬಂದಿದೆಯಾ?

ನಮ್ಮ ತಾಯಿ ಹೆಚ್ಚು ಕೆಲಸ ಮಾಡುವಾಗ ನಾನಾಗಿಯೇ ಹೋಗಿ ಸಹಾಯ ಮಾಡುತ್ತಿದ್ದೆ. ಆದರೆ, ಅವರನ್ನು ಮಾಡಬೇಡ ಅಂತ ತಡೀತಿರಲಿಲ್ಲ. ಈಗ ನನ್ನ ಮಗಳು ನಾನು ಹೆಚ್ಚು ಕೆಲಸ ಮಾಡ್ತಾ ಇದ್ರೆ ಇದೆಲ್ಲಾ ನೀನ್ಯಾಕೆ ಮಾಡಬೇಕು, ಕೆಲಸದವರು ಇದಾರೆ ಬಾ ಅಂತ ಕರೀತಾಳೆ. ನಾನು ನನ್ನ ಅಮ್ಮನಿಗೆ ಕೊಟ್ಟಿದ್ದು ಕಂಫರ್ಟ್, ನನ್ನ ಮಗಳು ನನಗೆ ಕೊಟ್ಟಿದ್ದೂ ಅದೇ. ಅಮ್ಮನಿಗೆ ಕಷ್ಟ ಆಗಬಾರದು ಅನ್ನೋ ಕಾಳಜಿ.

ನಿಮ್ಮ ತಾಯಿ ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಟ್ಟ ವಿಷಯ ಯಾವುದು?

ನನ್ನ ಮಗಳು ಎಲ್ಲವನ್ನೂ ಶ್ರದ್ಧೆಯಿಂದ ಮಾಡ್ತಾಳೆ ಅನ್ನೋ ಖುಷಿ. ಮನೆಯಲ್ಲೂ ನಾನು ಇಷ್ಟೇ ಶ್ರದ್ಧೆಯಿಂದ ಕೆಲಸ ಮಾಡ್ತೀನಿ. ಇದರಲ್ಲಿ ಹೆಚ್ಚುಗಾರಿಕೆ ಇಲ್ಲ. ಈ ಸಿಂಪ್ಲಿಸಿಟಿಯನ್ನ ಅಮ್ಮ ಇಷ್ಟಪಡ್ತಾರೆ. ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ನನ್ನ ಗುಣವನ್ನ ಅಮ್ಮ ಇಷ್ಟಪಡ್ತಾರೆ. ಜೊತೆಗೆ, ಈ ಸಿನಿಮಾದವರು ಅಂದಾಕ್ಷಣ  ಕುಟುಂಬದ ಒಳಗೆ ಸಾಕಷ್ಟು ಲೂಸ್ ಟಾಕ್ ಇರುತ್ತೆ. ಅಂಥ ಅಪಸ್ವರ ಬಂದ್ರೆ  ನನ್ನಮ್ಮ ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ. 'ಅವಳು ಎಷ್ಟು ಕಷ್ಟಪಡ್ತಾಳೆ ಗೊತ್ತಾ, ಒಂದ್ ಸಲ  ಹೋಗಿ ನೋಡಿ ಆಮೇಲೆ ಮಾತಾಡಿ' ಅಂತ ತರಾಟೆಗೆ ತಗೋತಾರೆ. ಆಕೆ ಕೂಡಾ ತುಂಬ ಶ್ರಮಜೀವಿ.

ನೀವು ನಿಮ್ಮ ತಾಯಿಯ ಬಗ್ಗೆ ಹೆಮ್ಮೆ ಪಡುವಂಥ ಒಂದು ವಿಷಯ ಯಾವುದು?

ನಾನು ಚಿಕ್ಕವಳಿದ್ದಾಗ ಅಪ್ಪನಿಗೆ ಎಲ್‌ಐಸಿ ಕೆಲಸ. ಆಗ ಮೂರು ಜನ ಮಕ್ಕಳಿದ್ವಿ. ಒಮ್ಮೆ ಒಂದು ಊರಿಗೆ ಟ್ರಾನ್ಸ್‌ಫರ್ ಆಗಿತ್ತು. ಆದರೆ ಅಲ್ಲಿ ನಮಗೆ ಮನೆಯ ವ್ಯವಸ್ಥೆ ಆಗಿರಲಿಲ್ಲ. ಹಾಗಾಗಿ ಒಂದು ಪ್ರವಾಸಿ ಮಂದಿರದ ಒಂದು ಚಿಕ್ಕ ರೂಮಲ್ಲೇ 2 ತಿಂಗಳು ಜೀವನ ಮಾಡಿದ್ವಿ. ಅಲ್ಲೇ ಅಡಿಗೆ, ಊಟ, ಅಲ್ಲೇ ತೊಳೆಯೋದು, ಅಲ್ಲೇ ಮಲಗೋದು, ಅಲ್ಲಿಂದಲೇ ಸ್ಕೂಲಿಗೆ ಹೋಗೋದು ಎಲ್ಲ. ಅದು ಒಂಥರಾ ಪಿಕ್‌ನಿಕ್ ಥರಾ ಇತ್ತು. ನನ್ನಮ್ಮ ಅವತ್ತು ಅಯ್ಯೋ ಇಂಥ ಜಾಗದಲ್ಲಿ ಬದುಕಬೇಕಾ ಅಂತ ಗೊಣಗಲಿಲ್ಲ. ಹಾಗೆ ಮಾಡಿದ್ದರೆ, ನಾವು ಅದನ್ನು ಇಂದಿಗೂ ಎಂಜಾಯ್ ಮಾಡೋಕಾಗ್ತಿರಲಿಲ್ಲ.

ನಿಮ್ಮ ಮಗಳ ಮೇಲೆ ಯಾರಾದ್ರೂ ದೂರು ಹೇಳಿದರೆ ನೀವು ಅವಳನ್ನು ಹೇಗೆ ವಹಿಸಿಕೊಂಡು ಮಾತಾಡ್ತೀರಿ?

ನಾನು ಯಾವುದಕ್ಕೂ ತಕ್ಷಣ ರಿಯಾಕ್ಟ್ ಮಾಡಲ್ಲ. ವಿಷಯದ ಬಗ್ಗೆ ಯಾರ ಜೊತೆಗೂ ನಾನು ವೈಯಕ್ತಿಕವಾಗಿ ಮಾಡಾಡೊಲ್ಲ. ಸಮಯ ತೆಗೆದುಕೊಂಡು ಯೋಚನೆ ಮಾಡಿ ಆಮೇಲೆ ಸಮಸ್ಯೆಯ ಮೂಲ ಹುಡುಕಿ ಎಲ್ಲರನ್ನೂ ಕೂಡಿಸಿಕೊಂಡು ಮಾತಾಡುತ್ತೇನೆ. ಸಂಬಂಧಗಳಲ್ಲಿ ಪಾರದರ್ಶಕತೆ ಬಹಳ ಮುಖ್ಯ. ಆದರೆ, ನನ್ನ ಮಗಳ ಬಗ್ಗೆ ಅಂಥ ದೂರು ಬರೋದು ಇಲ್ಲವೇ ಇಲ್ಲ ಅನ್ನಬಹುದು. ಅವಳು ತುಂಬಾ ಶ್ರದ್ಧೆಯಿಂದ ಕಥಕ್ ನೃತ್ಯದಲ್ಲಿ ತೊಡಗಿಸಿಕೊಂಡಿದ್ದಾಳೆ. ಒಂದೆರಡು ಧಾರಾವಾಹಿಗಳಲ್ಲಿ ನಟಿಸಿದ್ದರೂ ಅದು ಅವಳ ಗುರಿ ಅಲ್ಲ. ಸಿನಿಮಾ ಆಸಕ್ತಿಯೂ ಅವಳಿಗಿಲ್ಲ. ಅವಳಿಗೇನಿದ್ದರೂ ಕಥಕ್ ನೃತ್ಯದಲ್ಲಿ ದೊಡ್ಡ ಸಾಧನೆ ಮಾಡೋ ಆಸೆ. ಈಗ 'ಮಹಾಮಾಯೆ ಸ್ಕೂಲ್ ಆಫ್  ಪರ್ಫಾರ್ಮಿಂಗ್ ಆರ್ಟ್ಸ್‌' ಅಂತ ಸ್ಕೂಲ್ ಶುರುಮಾಡಿದಾಳೆ. ಅವಳಿಗೆ ಮದುವೆಯಾಗಿ ಎರಡು ವರ್ಷ. ಅಳಿಯ ಸೂರ್ಯ ಕೂಡಾ ಭರತನಾಟ್ಯಂ ಡಾನ್ಸರ್. ಇಬ್ಬರೂ ಇಷ್ಟಪಟ್ಟು ಮಾಡಿಕೊಂಡ ಆಯ್ಕೆ ಅವರದು. ಈಗ ನಾನು ಅತ್ತೆ ಕೂಡಾ ಆಗಿದ್ದೇನೆ. ಜೀವನ ಚೆನ್ನಾಗಿದೆ.

ನಿಮ್ಮ ಮಗಳು ನಿಮಗೆ ಕೊಟ್ಟ ಬೆಸ್ಟ್ ಕಾಂಪ್ಲಿಮೆಂಟ್ ಯಾವುದು?

ನನ್ನ ಮಗಳು ನನ್ನ ಬಗ್ಗೆ 'ಐ ಹ್ಯಾವ್ ಎ ಸೂಪರ್ ಮಮ್ಮಿ' ಅಂತಾಳೆ. ಸ್ಟಾರ್ ಅಲ್ಲ. ಮಮ್ಮಿ ಅಷ್ಟೆ. ಮನೆಯಲ್ಲಿ ನಾನು ಯಾವ ಕಾರಣಕ್ಕೂ ನಾನು ನಟಿ ಅಲ್ಲ. ಅಲ್ಲಿ ನಾನು ಒಬ್ಬ ಮಗಳು ಅಮ್ಮ, ಅತ್ತೆ, ಮೊಮ್ಮಗಳು ಅಷ್ಟೆ. ಎಲ್ಲರ ಮನಸ್ಸನ್ನೂ ಅರ್ಥ ಮಾಡಿಕೊಂಡು ಸ್ಪಂದಿಸುವ ನನ್ನ ವ್ಯಕ್ತಿತ್ವವನ್ನು ಅವಳು ತುಂಬ ಇಷ್ಟಪಡ್ತಾಳೆ. ಆದರೆ, ಕೆಲವೊಮ್ಮೆ ನಿನ್ನ ಅತಿ ತಾಳ್ಮೆಯಿಂದ ನಿನಗೆ ಮಾನಸಿಕ ಒತ್ತಡ ಆಗುತ್ತೆ ಅಂತ ಬುದ್ಧಿನೂ ಹೇಳ್ತಾಳೆ.

ಇತ್ತೀಚೆಗೆ ಕಸದ ತೊಟ್ಟಿಯಲ್ಲಿ ಮಗುವನ್ನು ಬಿಸಾಕಿ ಹೋಗುವ ಕೆಲವು ತಾಯಂದಿರಿಂದಾಗಿ, ಕೆಟ್ಟ ತಾಯಿ ಇರೋಕೆ ಸಾಧ್ಯವೇ ಇಲ್ಲ ಎನ್ನುವ ನಮ್ಮ ಹಳೆಯ ನಂಬಿಕೆಗೆ, ಹೊಡೆತ ಬೀಳ್ತಾ ಇದೆಯಾ? ಈ ಅಮ್ಮ ರಿಯಾಲಿಟಿ ಶೋನ ನಿರೂಪಕಿಯಾಗಿ ಏನು ಹೇಳ್ತೀರಾ?

ಇದು ಇವತ್ತಿನ ಸಮಸ್ಯೆ ಅಲ್ಲ. ಕುಂತಿ ಕರ್ಣನನ್ನು ಬಿಟ್ಟು ಹೋದ ಉದಾಹರಣೆ ಆಗಲೇ ಇದೆ. ಆಗ ಕುಂತಿ ಒಬ್ಬಳೇ ಇದ್ದಳು. ಈಗ ಕುಂತಿಯರ ಸಂಖ್ಯೆ ಕೊಂಚ ಹೆಚ್ಚಾಗಿದೆ. ಆದರೆ, ಇದು ಅನಾಗರಿಕ ಮನೋಭಾವನೆಯ ಸಮಸ್ಯೆ. ಮನುಷ್ಯತ್ವದ ಸೋಂಕಿಲ್ಲದೆ ಒಂದು ಮಗುವನ್ನು ಹೆರಬೇಕ್ಯಾಕೆ? ಬಿಸಾಕ್‌ಬೇಕ್ಯಾಕೆ? ಅಂಥ ತಾಯಿಯಾಗಿ ಹುಟ್ಟಬಾರದು, ಅಂಥ ತಾಯಿಗೆ ಮಗುವಾಗಿಯೂ ಹುಟ್ಟಬಾರದು. ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ಬೇಕು. ಕೇವಲ ವಿದ್ಯೆ ಅಲ್ಲ, ಸಮಾಜವನ್ನ  ಎದುರಿಸೋ, ಧೈರ್ಯ ಕಲಿಸಬೇಕು.

ಕೃಪೆ: ಕನ್ನಡಪ್ರಭ

Tag: Vinaya Prasad

ಕಾಮೆಂಟ್‌ಗಳಿಲ್ಲ: