ಸೋಮವಾರ, ಆಗಸ್ಟ್ 26, 2013

ಹಿಂದಿರುಗಿದ ಅಲೆಗಳು

ಹಿಂದಿರುಗಿದ  ಅಲೆಗಳು

ಪ್ರಖ್ಯಾತ ಬರಹಗಾರ ಆರ್ಥರ್ ಗಾರ್ಡನ್ ಅವರಿಗೆ ಬದುಕಿನ ಒಂದು ಘಟ್ಟದಲ್ಲಿ ಎಲ್ಲವೂ ಹುಸಿಯಾದಂತೆ, ಎಲ್ಲವೂ ಒಮ್ಮೆಲೆ ತಟಸ್ಥವಾದಂತೆ ಭಾಸವಾಗುವ ಅಸಹನೀಯಸ್ಥಿತಿ ಎದುರಾಗಿ ಬಿಟ್ಟಿತು.  ಅವರಲ್ಲಿದ್ದ ಉತ್ಸಾಹವೆಲ್ಲ ಮಾಸಿಹೋಗಿ, ಅವರು   ಬರವಣಿಗೆಗೆ ಪಟ್ಟ ಪರಿಶ್ರಮವೆಲ್ಲಾ  ನಿಷ್ಪಲವಾಗತೊಡಗಿತ್ತು.  ಬದುಕಿನಲ್ಲಿ ಪೂರ್ಣ ನಿರಾಶೆ, ಹತಾಶೆಗಳನ್ನು ತುಂಬಿಕೊಂಡ ಆರ್ಥರ್ ಗಾರ್ಡನರಿಗೆ ದಾರಿಕಾಣದಂತಾಗಿ ಹೋಯ್ತು.

ಕೊನೆಗೆ, ಬೇರೇನೂ ತೋಚದ ಆರ್ಥರ್ ಒಬ್ಬ ವೈದ್ಯರ ಬಳಿ ಬಂದು ತಮ್ಮಲ್ಲಿ ತುಂಬಿದ ಕ್ಲೇಶಗಳನ್ನೆಲ್ಲಾ ತೋಡಿಕೊಂಡರು.  ಆರ್ಥರ್ ಗಾರ್ಡನ್ ಅವರಿಗೆ ಯಾವ ದೈಹಿಕ ತೊಂದರೆಗಳೂ  ಇಲ್ಲ ಎಂಬುದನ್ನು  ಕಂಡುಕೊಂಡ ಆ ಸಹೃದಯಿ ವೈದ್ಯರು,  “ನಾನು ನಿಮಗೆ ಯಾವುದೇ ಔಷದಿಗಳನ್ನೂ ಸೂಚಿಸುತ್ತಿಲ್ಲ.   ಆದರೆ ಕೆಲವೊಂದು ನಾನು ನೀಡುವ ಕೆಲವೊಂದು ಸಲಹೆಗಳನ್ನು ನೀವು  ಒಂದು ದಿನದ ಮಟ್ಟಿಗೆ ಪಾಲಿಸಬೇಕಾದೀತು, ಸಾಧ್ಯವೇ?” ಎಂದರು.

ವೈದ್ಯರ ಪ್ರಶ್ನೆಗೆ ‘ಅಗತ್ಯವಾಗಿ’ ಎಂದು ತಲೆಯಾಡಿಸಿದ ಆರ್ಥರ್, ಕೌತುಕದ ಮುಖಚರ್ಯೆ ಬೀರಿದರು.

ವೈದ್ಯರು ಹೇಳಿದರು.  ನಾಳೆಯ ದಿನ, ನೀವು ಚಿಕ್ಕಂದಿನಿಂದ ತುಂಬಾ ಇಷ್ಟ ಪಟ್ಟಿರುವ  ಜಾಗಕ್ಕೆ ಏಕಾಂತವಾಗಿ ಹೋಗಬೇಕು.  ನಿಮ್ಮೊಡನೆ ನೀವು ತಿನ್ನಲಿಕ್ಕೆ ಏನನ್ನೇ ತೆಗೆದುಕೊಂಡು ಹೋಗಲು ಅಡ್ಡಿಯಿಲ್ಲ. ಆದರೆ, ನೀವು ಯಾರೊಡನೆಯೂ ಮಾತನಾಡುವುದಾಗಲಿ, ಓದು ಬರೆಯುವುದನ್ನು ಮಾಡುವುದಾಗಲಿ, ರೇಡಿಯೋ, ಮೊಬೈಲು, ವಾಕ್ಮನ್, ಐ-ಪಾಡ್, ಕಂಪ್ಯೂಟರ್ ಇತ್ಯಾದಿಗಳನ್ನು ಬಳಸುವುದನ್ನಾಗಲಿ ಮಾಡಕೂಡದು.

ಆರ್ಥರ್ ಗಾರ್ಡನ್ ಅವರು ಏನೋ ಹೊಸತನ್ನು ಕೇಳುತ್ತಿರುವ ಮುಗ್ಧತೆಯಲ್ಲಿ ತಲೆ ಆಡಿಸುತ್ತಿರುವಂತೆಯೇ, ವೈದ್ಯರು ನಾಲ್ಕು ಸಣ್ಣ ಕೈಬರಹದ ತುಂಡುಗಳನ್ನು ಮಾಡಿ, ಅದನ್ನು ಮಡಿಚಿ, ಆ ನಾಲ್ಕು ಚೀಟಿಗಳ  ಮೇಲೆ  ಕ್ರಮವಾಗಿ ಬೆಳಿಗ್ಗೆ 9, ಅಪರಾನ್ಹ 12, ಮಧ್ಯಾಹ್ನ 3 ಮತ್ತು ಸಂಜೆ 6 ಎಂದು ಬರೆದು ಗಾರ್ಡನ್ ಅವರ ಕೈಗಿಡುತ್ತ, “ಈ ಬರೆದಿರುವ ಸಮಯದಲ್ಲಿ ಆಯಾ ಚೀಟಿಗಳನ್ನು ತೆರೆದು ಅದರಲ್ಲಿ ಬರೆದಿರುವ  ನಿಯಮಗಳನ್ನು ಶ್ರದ್ಧೆಯಿಂದ ಪಾಲಿಸಬೇಕು. ನೀವು ಮಾಡಬೇಕಿರುವ ಕೆಲಸ ಇಷ್ಟೇ!” ಎಂದರು.

ಈ ವಿಚಿತ್ರ ವೈದ್ಯರ ಮುಖ ಮುಖ ನೋಡಿದ ಅರ್ಥರ್ ಗಾರ್ಡನ್, “ನೀವು ತಮಾಷೆ ಮಾಡುತ್ತಿಲ್ಲ ತಾನೆ?” ಎಂದರು.

ಇದರಲ್ಲಿ ತಮಾಷೆಯ ಮಾತೇ ಇಲ್ಲ.  “ನನ್ನ ಬಿಲ್ ನೋಡಿದರೆ ಖಂಡಿತವಾಗಿಯೂ  ಇದು ನಿಮಗೆ ಮನವರಿಕೆಯಾಗುತ್ತದೆ!”,  ವೈದ್ಯರು ನಸುನಗೆಯೊಡನೆ  ಪ್ರತಿಕ್ರಯಿಸಿದರು.

ಮಾರನೆಯ ದಿನ ಬೆಳಿಗ್ಗೆ ಗಾರ್ಡನ್ ಅವರು, ತಮ್ಮ ಪ್ರೀತಿಯ ಕಡಲ ತೀರಕ್ಕೆ ಬಂದಿಳಿದರು.  ಬೆಳಿಗ್ಗೆ ಒಂಬತ್ತು  ಆದೊಡನೆಯೇ ಮೊದಲ ಚೀಟಿಯನ್ನು ಬಿಡಿಸಿ ವೈದ್ಯರ ಕೈ ಬರಹ ಓದಿದರು: “ಗಮನವಿಟ್ಟು ಆಲಿಸಿ”.  ಮುಂದಿನ 3 ಗಂಟೆಗಳ ವರೆಗೆ ‘ಆಲಿಸುವುದೆ?’,   ‘ಏನನ್ನು?’.  ಮೊಬೈಲಿಲ್ಲ, ರೇಡಿಯೋ ಇಲ್ಲ, ವಾಕ್ ಮನ್ ಇಲ್ಲ. ಮಾತನಾಡುವ ಹಾಗೂ ಇಲ್ಲ.      ಏನನ್ನು ತಾನೇ ಆಲಿಸುವುದು.    ತಾವು ನೋಡಿದ ವೈದ್ಯ  ಹುಚ್ಚನಲ್ಲವಷ್ಟೇ?  ಇದ್ದಕ್ಕಿದ್ದಂತೆ ಆರ್ಥರ್ ಗಾರ್ಡನ್ ಅವರಲ್ಲಿ ಸ್ವಾಭಾವಿಕವೆನಿಸುವ  ಸಂದೇಹ ಮೂಡಿತು.

ಹೇಗೂ ಬಂದದ್ದಾಗಿದೆ, ಏನಾಗುತ್ತದೋ ಆಗಲಿ.  ವೈದ್ಯ ಹೇಳಿದ್ದು ಪಾಲಿಸುವುದರಲ್ಲಿ ವೈಯಕ್ತಿಕ ನಷ್ಟವಿಲ್ಲವಷ್ಟೇ! ಎಂದುಕೊಂಡು   ವೈದ್ಯರು ಹೇಳಿದ ಹಾಗೇ ಆಲಿಸಲು ಪ್ರಯತ್ನಿಸಿದರು.  ಅದೇ ಮಾಮೂಲಿ ಸಮುದ್ರದ ಶಬ್ಧ, ಸೀಗಲ್ ಪಕ್ಷಿಗಳ ಚೀತ್ಕಾರ ಕೇಳ ತೊಡಗಿತು.  ಸ್ವಲ್ಪ ಸಮಯದ ನಂತರ ಯಾವುದೋ ನಿಷ್ಯಬ್ಧತೆಯ ಅನುಭಾವ, ಎಲ್ಲೋ ಅವಿತಿದ್ದ ಕೆಲವು ಅಣುರಣಗಳ ಮಾರ್ಧನಿ ತೆರೆದುಕೊಳ್ಳತೊಡಗಿದ ಅನುಭವ ಗಾರ್ಡನ್ ಅವರಿಗೆ.  ಇದುವರೆಗೆ ಕೇಳದಿದ್ದ ಎಂತೆಂತದೋ ಕಿರು ದನಿಗಳು ಅವರಿಗೆ ಈಗ ಸ್ಪಷ್ಟವೋ ಎಂಬಂತೆ ಭಾಸವಾಗುತ್ತಿದ್ದವು.   ಈ ಅನುಭವದಲ್ಲಿ ತೇಲುತ್ತಿದ್ದವರಿಗೆ, ಬಾಲ್ಯದಿಂದ ಅವರೊಡನೆ ಬೆರೆತ ಸಮುದ್ರದೊಡನಾಟದ ನೆನಪುಗಳ ಬುತ್ತಿ ನಿಧಾನವಾಗಿ ತೆರೆದುಕೊಳ್ಳತೊಡಗಿತ್ತು.  ನಾನು ಅಂದಿನ ಈ ಕಡಲ ತೀರದಲ್ಲಿ ಮಗುವಾಗಿ ಕಲಿತ ಸವಿ ಪಾಠಗಳು ಎಷ್ಟೊಂದು!, ‘ತಾಳ್ಮೆ’, ‘ಗೌರವ’, ‘ಪಾರಸ್ಪರಿಕ ಅವಲಂಬನೆಗಳ ಕುರಿತಾದ ಜಾಗೃತಿ’ ಇವನ್ನೆಲ್ಲ ನೆನೆ ನೆನೆದು ಅವರ ಹೃದಯ ಮೂಖವಾಗತೊಡಗಿತ್ತು.    ಈ ಮೂಖತೆಯಲ್ಲಿ, ಅವರ ಆಲಿಸುವಿಕೆ ಮತ್ತಷ್ಟು ತೀವ್ರವಾದಂತೆನಿಸಿ, ಅಲ್ಲಿನ ಶಬ್ಧ-ನಿಶ್ಯಬ್ಧಗಳ ಸಂಗಮದಲ್ಲಿ ಅಪೂರ್ವ ಶಾಂತಿಯ ಉದಕದದ್ಭುದವು ಅವರ ಅಂತರಾಳದಲ್ಲಿ ಹೊನಲಾಗಿ ಹರಿಯತೊಡಗಿತ್ತು.

12 ಗಂಟೆಗೆ ಸೂರ್ಯ ನೆತ್ತಿಯ ಮೇಲೆಯೇ ಇಳಿಯತೊಡಗಿದ್ದ.  ಇದೇ ಸಮಯಕ್ಕೆ ಎರಡನೆಯ ವಿಸ್ಮಯದ ಚೀಟಿಯೆಂಬ ಉದ್ಯಾನದಲ್ಲಿ   ಗಾರ್ಡನರು ಅಡಿಯಿರಿಸಿದರು.  ಅಲ್ಲಿ ಬರೆದದ್ದು ಹೀಗಿತ್ತು: “ಅಲ್ಲಿಗೇ ಪುನಹ ಹಿಂದಿರುಗಲೆತ್ನಿಸಿ”.

‘ಅಲ್ಲಿಗೆ’ ಅಂದರೆ?,  ‘ಎಲ್ಲಿಗೆ, ಯಾವುದಕ್ಕೆ?’.   ಗಾರ್ಡನ್ ಅವರು ವಿಸ್ಮಯದಿಂದ ಪ್ರಶ್ನಿಸಿಕೊಳ್ಳತೊಡಗಿದರು.  ಪ್ರಶ್ನೆಗಳು ಕೆಲವೊಂದು ಪ್ರಶ್ನೆಗಳ ಸುಳಿಯಲ್ಲಿ ಸುಳಿ ಸುಳಿದು ಶೂನ್ಯ ಚಿಂತನೆಯತ್ತ ಪ್ರವೇಶ ಪಡೆದ ಅವರ ಅಂತರ್ಭಾವಕ್ಕೆ,  ‘ಅಲ್ಲಿಗೆ ಅಂದರೆ, ನನ್ನ ಬಾಲ್ಯದ ದಿನಗಳು’ ಎಂಬ  ಹೊಳಹು ಮೂಡಿಬಂತು.   ಕಳೆದ  ದಿನಗಳ ಸಂತಸದ  ಸ್ಮರಣೆಯಲ್ಲಿ  ಗಾರ್ಡನರು ತಮ್ಮನ್ನು ತಾವೇ  ನಿಧಾನವಾಗಿ ಪ್ರವಹಿಸಿಕೊಳ್ಳತೊಡಗಿದರು.   ಆ ಸುಂದರ ಸ್ಮರಣೆಯ ಸಂಚಾರದಲ್ಲಿ ಎಂತದೋ ಮುದವಿತ್ತು.  ಹೃದಯಾಪ್ತತೆ ಇನ್ನಷ್ಟು ಹತ್ತಿರ ಹತ್ತಿರವಾಗುತ್ತಿತ್ತು.

ಮಧ್ಯಾಹ್ನ 3 ಗಂಟೆ.  ಗಾರ್ಡನರಿಗೆ ಮತ್ತೊಂದು ಚೀಟಿಯ ಲೋಕಕ್ಕೆ ತೆರೆದುಕೊಳ್ಳುವ  ಸಮಯವಾಗಿತ್ತು.  ಮೂರನೆಯ ಚೀಟಿಯಲ್ಲಿ “ನಿಮ್ಮ ಆಶಯಗಳನ್ನು ಪರೀಕ್ಷಿಸಿಕೊಳ್ಳಿ” ಎಂದು ಬರೆದಿತ್ತು.

ಇದೇನಿದು, ಎಂದೂ ಯಾರೂ ತಮ್ಮನ್ನು ಕೇಳಿರದಂತಹ,  ಕೆಣಕುವ ಉದ್ಧಟತನ!  ‘ನನ್ನ ಆಶಯಗಳಲ್ಲಿ ಇರುವ ತಪ್ಪಾದರೂ ಏನು?’  ಎಂದು ಒಂದು ಕ್ಷಣ ಅಹಂನತ್ತ ಹೊರಳುವ ಪ್ರವೃತ್ತಿಯನ್ನು ಗಾರ್ಡನರ ಮನಸ್ಸು ಹಿಡಿಯಿತಾದರೂ, ಬೆಳಗಿನಿಂದ ಮೂಡಿಬಂದ ಹೊಸತನಗಳು ಅವರನ್ನು  ತಮ್ಮ ಆಶಯಗಳಾದ ‘ಯಶಸ್ಸು’, ‘ಮಾನ್ಯತೆ’, ‘ಭದ್ರತೆ’ ಇವುಗಳ ಕುರಿತಾದ ಚಿಂತನೆಗಳತ್ತ ಮನಸ್ಸನ್ನು ಹೊರಳಿಸಿದವು.

ಬದುಕಿನಲ್ಲಿ ‘ಯಶಸ್ಸು’, ‘ಮಾನ್ಯತೆ’, ‘ಭದ್ರತೆ’ ಇವುಗಳನ್ನು ಬಯಸುವುದು ತಪ್ಪೇ? ಎಂದು ಪ್ರಶ್ನಿಸಿಕೊಳ್ಳತೊಡಗಿದ  ಗಾರ್ಡನರ್  ಅವರ ಮನ, “ಇಲ್ಲ, ಇಲ್ಲೇನೋ ಬಿಟ್ಟು ಹೋದಂತಿದೆ!” ಎಂಬ ಅಪೂರ್ಣತೆಯನ್ನು ನಿಧಾನವಾಗಿ ಅರಸತೊಡಗಿತ್ತು.  “ಇಲ್ಲೇನೋ ಮುಖ್ಯವಾದದ್ದು ಬಿಟ್ಟು ಹೊಗಿದೆ, ಅದೇನೋ  ಬಿಟ್ಟು ಹೋಗಿದೆಯಲ್ಲ, ಅದೇ  ನಾನು ಇತ್ತೀಚಿನ ದಿನಗಳಲ್ಲಿ ಅನುಭವಿಸುತ್ತಿರುವ  ಅಪೂರ್ಣತೆಗೆ ಕಾರಣವಿರಬೇಕು”  ಎಂಬ ಮೊರೆತ ನಿಧಾನವಾಗಿ ಅವರ ಒಡಲಾಳದಲ್ಲಿ ಜಿನುಗತೊಡಗಿತ್ತು.

ಆರ್ಥರ್ ಗಾರ್ಡನ್ ತಮ್ಮ ಆಶಯಗಳ ಕಡಲಾಳಗಳನ್ನು ಮುಟ್ಟಲು ಅಂತರಾಳದಲ್ಲಿ ಈಯ ತೊಡಗಿದರು.  ಹಿಂದಿನ ಸುಮಧುರ ಸ್ಮೃತಿಗಳ ಅನುಭಾವಗಳು ಸ್ವಲ್ಪ ಸ್ವಲ್ಪ ಸಿಗುವ ಕುರುಹುಗಳು ಮೂಡತೊಡಗಿದವು.  ಹಿಂದೆಯೇ ಉತ್ತರ ಕೂಡ ಮೂಡ ತೊಡಗಿತು.  ಮಿಂಚೊಂದು ಹೊಳೆದಂತೆ ಅವರ ಹೃದಯ ದಾಖಲಿಸಿತು, “ಒಬ್ಬನ ಆಶಯಗಳು ತಪ್ಪಾಗಿದ್ದಲ್ಲಿ, ಆತನಿಗೆ ಏನೊಂದೂ ಸರಿಯಾಗಿರಲು ಸಾಧ್ಯವಿಲ್ಲ”.  ಗಾರ್ಡನ್ ಅವರು ಹೀಗೆ ಹೇಳುತ್ತಾರೆ, “ನೀನು ಯಾರೇ ಆಗಿರಬಹುದು, ‘ಅಂಚೆಯವ’ ಇರಬಹುದು, ‘ಕ್ಷೌರಿಕ’ ಆಗಿರಬಹುದು, ‘ವಿಮೆಯ  ಏಜೆಂಟನಿರಬಹುದು’, ‘ಗ್ರಹಿಣಿ’ಯೇ ಆಗಿರಬಹುದು.  “ನಾನು ಇತರರ ಸೇವೆ ಮಾಡುತ್ತಿದ್ದೇನೆ ಎಂಬ ಹೃದಯದ ಭಾವವಿರುವವರೆಗೆ ಮಾತ್ರ, ನಾನು ಉತ್ತಮವಾಗಿ ಕೆಲಸ ಮಾಡಲು ಸಾಧ್ಯ.  ಒಮ್ಮೆ ಈ ಕೆಲಸವನ್ನು ಕೇವಲ ನನ್ನ ಉದ್ಧಾರಕ್ಕಾಗಿ ಮಾಡುತ್ತಿದ್ದೇನೆ ಎಂಬ ಅಂಶ ನನ್ನ  ತಲೆಗೆ ಹತ್ತಿತೋ ಆಗ ಗುರುತ್ವಾಕರ್ಷಣಕ್ಕೆ ಕಡಿಮೆಯಿಲ್ಲದ  ಕೆಳಸೆಳೆತಕ್ಕೆ  ನನ್ನ ಕೆಲಸದ ಗುಣಮಟ್ಟವೂ ಪಾತಾಳಕ್ಕಿಳಿಯತೊಡಗುತ್ತದೆ.”

ಸಂಜೆ 6ರ ಸಂಧ್ಯಾ ಸಮಯದಲ್ಲಿ ಗಾರ್ಡನ್ ಅವರು ವೈದ್ಯರು ನೀಡಿದ ನಾಲ್ಕನೆಯ ಸಲಹಾ ಚೀಟಿಯನ್ನು ಪ್ರಶಾಂತ ಮನದಲ್ಲಿ ಬಿಡಿಸಿದರು.  “ನಿನ್ನ ಚಿಂತೆಗಳನ್ನು ಮರಳಿನ ಮೇಲೆ ಬರೆದು ಬಿಡು” ಎಂಬ ಬರಹವಿತ್ತು.  ಆರ್ದ್ರತೆಯಿಂದ ತುಂಬಿದ ಹೃದಯ ಭಾವದಲ್ಲಿ, ಹತ್ತಿರದಲ್ಲೇ ಕೈಗೆ ಸಿಕ್ಕಿದ  ಮುರಕಲು ಚಿಪ್ಪಿನಿಂದ ಅಷ್ಟೇ ಮುರುಕಿನ ಕೆಲವೊಂದು ಪದಗಳನ್ನು ಮರಳ ಮೇಲೆ ಗೀಚಿದ ಆರ್ಥರ್ ಗಾರ್ಡನ್ವ, ಗಾಂಭೀರ್ಯದಿಂದ ಮೇಲೆದ್ದು ಹಿಂದುರುಗಿ ನಡೆಯ ತೊಡಗಿದರು.  ಅವರು ಪುನಃ ಹಿಂದಿರುಗಿ ನೋಡಲಿಲ್ಲ; ಗಾಂಭೀರ್ಯ ಸೌಂದರ್ಯತೆಯಲ್ಲಿ ಮೀಯುತ್ತಿದ್ದ ಅವರ  ಹೃದಯಾಂತರಾಳವನ್ನು ಪ್ರತಿನಿಧಿಸುತ್ತಿವೆಯೋ ಎಂಬಂತೆ  ಅವರ ಹಿಂದೆ ಅಲೆಗಳು  ಹಿಂದಿರುಗುತ್ತಿದ್ದವು.

(ಮೂಲ:  ಆರ್ಥನ್ ಗಾರ್ಡನ್ ಅವರ ಬದುಕಿದ ಈ ಘಟನೆಯನ್ನು ಪ್ರಖ್ಯಾತ ಲೇಖಕ ಸ್ಟೀಫೆನ್ ಕೊವೆ ಅವರ “The Seven Habits of Highly Effective People”  ಪುಸ್ತಕದಲ್ಲಿ ಓದಿದ್ದೆ.  ಅದನ್ನು ಕನ್ನಡದಲ್ಲಿ ನಿಮ್ಮ ಮುಂದಿಟ್ಟಿದ್ದೇನೆ.)

Tag: Turn of the Tide, Hindurigida Alegalu

ಕಾಮೆಂಟ್‌ಗಳಿಲ್ಲ: