ಸೂರ್ಯಕೀರ್ತಿ
ಸೂರ್ಯಕೀರ್ತಿ
ಕೀರ್ತಿ ಪಿ. ಬೆಟ್ಟಳ್ಳಿ ಮಹತ್ವದ ಕನ್ನಡ ಯುವಪ್ರತಿಭೆ. ಅವರು 'ಸೂರ್ಯಕೀರ್ತಿ' ಎಂಬ ಹೆಸರಿನಲ್ಲಿ ಸಾಹಿತ್ಯ ಸಾಧನೆ ಮಾಡುತ್ತ ಬಂದಿದ್ದಾರೆ. ಬತಹಗಾರರಾಗಿ, ಪ್ರಕಾಶಕರಾಗಿ, ಬೋಧಕರಾಗಿ, ಸಂಪಾದಕರಾಗಿ, ಹೀಗೆ ಇವರ ಸಾಧನೆ ಬಹುಮುಖಿಯಾದದ್ದು.
ಜನವರಿ 29, ಸೂರ್ಯಕೀರ್ತಿ ಅವರ ಜನ್ಮದಿನ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬೆಟ್ಟಹಳ್ಳಿ ಅವರ ಹುಟ್ಟೂರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಉನ್ನತ ಶ್ರೇಣಿಯಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ( ಎಂ.ಕಾಂ), ಸಾಹಿತ್ಯದ ಕನ್ನಡ ಎಂ.ಎ, ಸಾಹಿತ್ಯ ಪರಿಷತ್ತಿನ ಕನ್ನಡ ಪರೀಕ್ಷೆಗಳಲ್ಲಿ ರ್‍ಯಾಂಕ್ ಹೀಗೆ ವಿಭಿನ್ನ ನೆಲೆಗಳ ಕಲಿಕೆಯ ಆಸಕ್ತ ಮನಸ್ಸು ಇವರದು. ಸೂರ್ಯಕೀರ್ತಿ ಬೆಂಗಳೂರಿನ ಸಹಪ್ರಾಧ್ಯಾಪಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಇವರು ಸಂಸ್ಕೃತ ಕಾವ್ಯಗಳ ಓದು, ಬೌದ್ಧ ಸಾಹಿತ್ಯ, ಶಾಸನ ಮತ್ತು ಪುರಾತತ್ವ, ಹಳಗನ್ನಡ ಓದು, ವ್ಯಾಕರಣ, ರಂಗಭೂಮಿ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತರಾಗಿದ್ದಾರೆ. ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.
ಸೂರ್ಯಕೀರ್ತಿ ಅವರ ವಿಮರ್ಶೆ, ಕವಿತೆ, ಪ್ರಬಂಧ, ಕತೆ, ಅಂಕಣ ಬರಹಗಳು ಕನ್ನಡದ ಎಲ್ಲ ನಿಯತಕಾಲಿಕಗಳಲ್ಲಿ ನಿರಂತರ ಮೂಡಿಬರುತ್ತಿವೆ. ಇವರು 2017ನೇ ಸಾಲಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯದಿಂದ "ಚೈತ್ರಾಕ್ಷಿ" ಎಂಬ ಕವಿತಾ ಸಂಕಲನ ಪ್ರಕಟಿಸಿದರು. ಈ ಕೃತಿ 2018ನೇ ಸಾಲಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ "ಸುಮನ್ ಸೋಮಶೇಖರ ಸೋಮವಾರ ಪೇಟೆ ದತ್ತಿ" ಪ್ರಶಸ್ತಿ ಗಳಿಸಿತು. ಇವರ 'ಮೀನು ಕುಡಿದ ಕಡಲು' ಕೃತಿಗೆ ಅಲ್ಲಮ ಪ್ರಶಸ್ತಿ ಸಂದಿದೆ. ಪ್ರೇಮ ದೈವಿಕ ಪರಿಮಳ – ಕವಿತಾ ಸಂಕಲನ, ಕಿರಂ ಹೊಸ ಕವಿತೆ 2023 - ಸಂಪಾದಿತ ಕೃತಿ, Love is a divine fragrance- An Anthology of Gender issues – Editor, Multilingual in language and literature – An International Conference – Editor ಇವರ ಕೃತಿಗಳಲ್ಲಿ ಸೇರಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಚೀನಾದ ಗಾಲಾ ವಸಂತ ಕಾವ್ಯ ಹಬ್ಬ 2023ರಲ್ಲಿ ಸೂರ್ಯಕೀರ್ತಿಯವರು ಭಾಗಿಯಾಗಿದ್ದಾರೆ. ಮತ್ತು ಚೈನೀಸ್ ಸ್ಪ್ರಿಂಗ್ ಫೆಸ್ಟಿವಲ್ ಗಾಲಾ ಆಫ್ ಪೊಯಟ್ರಿ 2023, ಈ ಕಾರ್ಯಕ್ರಮದಲ್ಲಿ ಕೊಡಮಾಡುವ ‘ಅಂತರಾಷ್ಟ್ರೀಯ ಕವಿ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ರಾಷ್ಟ್ರಮಟ್ಟದ 'ಸಂಗಂ ಸಾಹಿತ್ಯ ಪುರಸ್ಕಾರ'ಕ್ಕೆ ಹಾಗೂ 'ಸು ರಂ ಎಕ್ಕುಂಡಿ ಕಾವ್ಯ ಪ್ರಶಸ್ತಿಗೆ' ಇವರ ‘ಮೀನು ಕುಡಿದ ಕಡಲು’ ಪುಸ್ತಕ ಕೊನೆಯ ಹಂತಕ್ಕೆ ಆಯ್ಕೆಯಾಗಿದೆ.
ಸೂರ್ಯಕೀರ್ತಿ ನಿರ್ದೇಶನದ 'ಜಲಗಾರ', 'ಹೆಣದ ಬಟ್ಟೆ', 'ಅನಿಮಲ್ ಫಾರ್ಮ್' ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ.
ಸೂರ್ಯಕೀರ್ತಿ ಅವರ ಕವಿತೆಗಳು ಚೀಣಿ, ಬಂಗಾಳಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ.
ಆತ್ಮೀಯರಾದ ಸೂರ್ಯಕೀರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
Happy birthday Surya Keerthy
ಕಾಮೆಂಟ್‌ಗಳು