ಶುಕ್ರವಾರ, ಸೆಪ್ಟೆಂಬರ್ 6, 2013

ಶ್ರೀಸಂಸಾರಿಶ್ರಿರಾಮನು ತಾನೊಬ್ಬನೆ ಎಲ್ಲೂ ಪೂಜೆಗೊಳ್ಳುವುದು ಕಂಡಿಲ್ಲ
ಹೋಗಿ ನೋಡಿ ನೀವ್ಯಾವುದೆ ಊರಿನ ಯಾವುದೆ ರಾಮನ ಗುಡಿಗೆ!
ಯಾವುದೇ ಮನೆಯ ಗೋಡೆಯ ಮೇಲಿನ ಪಠವನ್ನಾದರು ನೋಡಿ
ರಾಮನೊಬ್ಬನೇ ಎಂದೂ ಎಲ್ಲೂ ಬಾರನು ಪೂಜೆಯ ಮಣೆಗೆ

ಎಡಕ್ಕೆ ಸೀತ, ಬಲಕ್ಕೆ ಲಕ್ಷ್ಮಣ, ಕಾಲ ಕೆಳಗೆ ಹನುಮಂತ
ಕೆಲವು ಪಠದಲ್ಲಿ ತಮ್ಮ ಶತೃಘ್ನ ಚಾಮರ ಹಾಕುವ ಭಂಗಿ
ಹಿಂದೆ ಕೊಡೆ ಹಿಡಿದ ಭರತ, ವಿಭೀಷಣ-ಜಾಂಬವ-ದೊರೆ ಸುಗ್ರೀವ
ಕೆಲವು ಪಠದಲ್ಲಿ ಮಾಂಡವಿ, ಊರ್ಮಿಳೆ, ನಗುತ್ತಿರುವ ಶೃತಕೀರ್ತಿ

ಉಳಿದ ದೇವರಂತೆಂದಿಗು ರಾಮ ಒಬ್ಬನೆ ಪೂಜೆಯ ಕೊಳ್ಳನು
ರಾಮಪೂಜೆ ಬರಿ ರಾಮನ ಪೂಜೆಯೆ? ಅದೊಂದು ಕುಟುಂಬ ಪೂಜೆ
ಎಷ್ಟು ವಿಶಾಲ...ಎಷ್ಟು ವಿಸ್ತೃತ...ಶ್ರಿರಾಮನ ಈ ಸಂಸಾರ!
ಇದು ತಾನಾಯಿತು ತನ್ನ ಕಣ್ಗೊಂಬೆ ತಾನಾಯಿತು-ಚೌಕಟ್ಟಲ್ಲ.

ರಾಮ ಸಂಸಾರ ಒಟ್ಟು ಸಂಸಾರ. ತಮ್ಮಂದಿರು ನಾದಿನಿ ತಾಯಿ
ಆಳು ಕಾಳಿಗೂ ಮನ್ನಣೆಯುಂಟು. ಜೊತೆಗೆ ಗೆಳೆಯರಿಗು ಕೂಡ
ಅಯೋಧ್ಯೆಯಲ್ಲೇ ಲಂಕೆ-ಕಿಷ್ಕಿಂಧ-ಗುಡ್ಡಗಾಡು ಸೇರಿರಲು
ಆರ್ಯ-ದ್ರಾವಿಡ-ಆದಿವಾಸಿಗೂ ರಾಮಪೂಜೆಯಲಿ ಪಾಲು

ಸಂಸಾರದ ಈ ಸಾರ ವ್ಯವಸ್ಥೆ ಪೂಜೆಗೊಳ್ವುದೀ ನೆಲದಲ್ಲಿ
ನಿತ್ಯರಾಧನೆ ನಿತ್ಯನೈವೇದ್ಯ ರಾಮನ ಪೂಜೆಯ ನೆವದಲ್ಲಿ
ವರ್ಗ ವರ್ಣ ವೈಷಮ್ಯ ಲೆಕ್ಕಿಸದೆ ಪೂಜೆಗೊಳ್ಳುತಿದೆ ಸಂಸಾರ
ಸ್ವರ್ಗವೆನ್ನುವುದು ಇನ್ನೆಲ್ಲಿರುವುದು-ಇಲ್ಲೇ ಕಾಲಡಿನೆಲದಲ್ಲೆ

ಈ ಕೌಟುಂಬಿಕ ಗೋಷ್ಠಿ ಪಠದಲ್ಲಿ ಸ್ನೇಹ ಮೋಹ ತಿಕ್ಕಾಟಗಳು!
ತಮ್ಮ ತಮ್ಮ ಗಂಡಂದಿರ ಪಕ್ಕ ಬೀಗುವರರೆನಗೆ ಹೆಣ್ಣುಗಳು!
ಹೆಗಲಿಗೆ ಹೆಗಲನು ತಾಗಿಸಿ ನಿಂತಿದ್ದಾನೆ ಜಾಂಬವನು ಭರತನಿಗೆ
ಚಿತ್ರ ಪಠದ ಅಂದಾಜೇ ಇಲ್ಲ ತಿರುವುಮೂತಿ ಹನುಮಂತನಿಗೆ

ಕರಿಯ ಮುಸುಕಲ್ಲಿ ಬಿಂಬಗ್ರಾಹಿ ಮಂದ್ರದಲ್ಲಿ ಗೊಣಗಿದ ಹೀಗೆ:
‘ಹೆಗಲ ಬಿಲ್ಲ ಕೆಳಗಿಳಿಸಿರಿ ಸ್ವಾಮಿ, ಜಾಗ ಉಂಟು ಇನ್ನೊಬ್ಬರಿಗೆ!’
ಥಟ್ಟನೆ ನೆನಪು ಸೇತುರಾಮನಿಗೆ ಮರಳು ಸೇವೆಯ ಅಳಿಲುಮರಿ!
ರಾಮ ಧ್ಯಾನಿಸಿದ: ಮರುಕ್ಷಣದಲ್ಲಿ ಅಳಿಲಿದೆ ಆತನ ಹೆಗಲಲ್ಲಿ

ಸಾಹಿತ್ಯ:  ಡಾ. ಎಚ್.ಎಸ್. ವೆಂಕಟೇಶಮೂರ್ತಿ  

(ಉತ್ತರಾಯಣ ಮತ್ತು... ಕವನ ಸಂಕಲನದಿಂದ)

Tag: Sreesamsaari, Srisamsari

ಕಾಮೆಂಟ್‌ಗಳಿಲ್ಲ: