ಸೋಮವಾರ, ಸೆಪ್ಟೆಂಬರ್ 2, 2013

ವಿಶ್ವ ಹೃದಯ ದಿನ

ವಿಶ್ವ ಹೃದಯ ದಿನ

ಒಟ್ಟು ಸಾವಿನ ಪ್ರಮಾಣದಲ್ಲಿ ಶೇ.40ರಷ್ಟು ಹೃದಯಾಘಾತದಿಂದ ಸಂಭವಿಸುತ್ತಿದೆ. ಕಳೆದ ಮೂರು ದಶಕಗಳಲ್ಲಿ ಮಹಿಳೆಯರು, ಅದರಲ್ಲೂ ಯುವತಿಯರನ್ನು ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ.

ಹಿಂದೆ ಹೃದಯಾಘಾತ ಪುರುಷರಿಗೆ ಸೀಮಿತ ಎಂದು ಭಾವಿಸಲಾಗಿತ್ತು. ಆದರೆ, ಇತ್ತೀಚೆಗೆ ಶೇ.30ರಷ್ಟು ಮಹಿಳೆಯರು ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಮೂವತ್ತು ವರ್ಷ ಹಿಂದೆ 50 ವರ್ಷ ಮೇಲಿನ ಮಹಿಳೆಯರಲ್ಲಿ ಹೃದಯ ಸಮಸ್ಯೆ ವಿರಳವಾಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ ಒಟ್ಟು ಹೃದ್ರೋಗಿಗಳಲ್ಲಿ ಶೇ.25ರಷ್ಟು ಮಂದಿ 40 ವರ್ಷ ಒಳಗಿನವರು. ಮಧುಮೇಹಿಗಳಲ್ಲಿ ಶೇ.15 ರಿಂದ 20 ರಷ್ಟು ಮಂದಿ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಈಗ ಪುರುಷರಿಗೆ ಸರಿಸಮನಾಗಿ ಮಹಿಳೆಯರು ಮನೆ ಮತ್ತು ಕಚೇರಿ ಎರಡೂ ಕಡೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಒತ್ತಡ ಹೆಚ್ಚಾಗಿ, ಚಿಕ್ಕ ವಯಸ್ಸಿನಲ್ಲೇ ಹೃದ್ರೋಗ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಜತೆಗೆ, ರೋಗ ಕುರಿತು ಮಾಹಿತಿಯ ಕೊರತೆ ಮತ್ತು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ. ಇದರಿಂದ ಸಮಸ್ಯೆ ಗಂಭೀರ ಹಂತ ತಲುಪುವವರೆಗೂ ಚಿಕಿತ್ಸೆ ಪಡೆಯದಿರುವುದು ಮಹಿಳೆಯರಲ್ಲಿ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ವೈದ್ಯರು.

ಹೃದಯಾಘಾತಕ್ಕೆ ಎದೆಯ ಎಡ ಭಾಗದಲ್ಲೇ ನೋವು ಕಾಣಿಸಿಕೊಳ್ಳಬೇಕೆಂದಿಲ್ಲ. ಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ದವಡೆ, ಭುಜಗಳಲ್ಲೂ ನೋವು ಬರಬಹುದು, ಎದೆ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು. ತಂಪು ವಾತಾವರಣದಲ್ಲೂ ಬೆವರುವುದು, ಉಸಿರಾಡಲು ಕಷ್ಟ, ತಲೆ ಸುತ್ತುವುದು ಇತ್ಯಾದಿ ಹೃದಯಾಘಾತದ ಲಕ್ಷಣ. ಈ ರೀತಿ ಸಮಸ್ಯೆ ಕಾಣಿಸಿಕೊಂಡಾಗ ನಿರ್ಲಕ್ಷ್ಯ ವಹಿಸದೆ ಕೂಡಲೇ ವೈದ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.

ಆಹಾರ ಪದ್ಧತಿ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ, ಮಾನಸಿಕ ಒತ್ತಡ, ಸೋಮಾರಿತನ, ವ್ಯಾಯಾಮ ಮಾಡದಿರುವುದು, ಧೂಮಪಾನ, ತೂಕ ಹೆಚ್ಚಳ, ಜಂಕ್ ಆಹಾರ ಸೇವನೆ, ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ, ರಾತ್ರಿ ನಿದ್ದೆಗೆಡುವುದು ಇವೆಲ್ಲಾ ಹೃದಯ ಕಾಯಿಲೆಗಿರುವ ಹಲವು ಪ್ರಮುಖ ಕಾರಣಗಳು.

ಪೌಷ್ಟಿಕ ಆಹಾರ, ಹಣ್ಣು, ತರಕಾರಿ ಮತ್ತು ಮೀನು ಸೇವನೆ, ಧೂಮಪಾನ ತ್ಯಜಿಸುವುದು, ನಿತ್ಯ ವ್ಯಾಯಾಮ, ವೇಗದ ನಡಿಗೆ, ಸೈಕಲ್ ಸವಾರಿ, ಈಜು, ಒತ್ತಡ ಕಡಿಮೆ ಮಾಡಿಕೊಳ್ಳುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಪಾರಾಗಬಹುದು.

ಹೃದಯಾಘಾತ ಕುರಿತು ಜನರಲ್ಲಿ ಮಾಹಿತಿಯ ಕೊರತೆ ಇದೆ. ದೇಶದಲ್ಲಿ 3 ಕೋಟಿ ಜನ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, 2020ರ ವೇಳೆಗೆ 6 ಕೋಟಿ ತಲುಪುವ ಸಾಧ್ಯತೆಯಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ರೋಗಕ್ಕೆ ಕಾರಣ, ಮುನ್ನೆಚ್ಚರಿಕೆ ಕ್ರಮ ಹಾಗೂ ಲಕ್ಷಣಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು. 35 ವರ್ಷ ಮೇಲಿನ ಪುರುಷರು ಹಾಗೂ 45 ವರ್ಷ ಮೇಲಿನ ಮಹಿಳೆಯರು ವರ್ಷಕ್ಕೊಮ್ಮೆ ಹೃದಯ ಸಂಬಂಧಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಲೇಖನ: ಕೆ. ಎಂ. ಪಂಕಜ ಮತ್ತು ಡಾ. ಸಿ.ಎನ್.ಮಂಜುನಾಥ್, ನಿರ್ದೇಶಕ, ಜಯದೇವ ಹೃದ್ರೋಗ ಸಂಸ್ಥೆ.

ಕೃಪೆ: ಕಳೆದ ವರ್ಷ ‘ವಿಜಯಕರ್ನಾಟಕ’ದಲ್ಲಿ ಪ್ರಕಟಗೊಂಡಿದ್ದು 

Tag: Vishwa Hrudaya Dina, World Heart Day

ಕಾಮೆಂಟ್‌ಗಳಿಲ್ಲ: