ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಿ. ಲಂಕೇಶ್


 ಪಿ. ಲಂಕೇಶ್


ಲಂಕೇಶ್ ಅವರು ನಮ್ಮ ಕಾಲದ ಪ್ರಮುಖ ಚಿಂತನಕಾರರು.  ಅವರ ಕಥೆ, ಕವನ, ಪತ್ರಿಕೆ, ಅಧ್ಯಾಪನ, ಸಂಪಾದನೆ, ವಿಮರ್ಶೆ, ನಾಟಕ, ಸಿನಿಮಾ ಇವೆಲ್ಲ ಅವರ  ಸೃಜನಶೀಲತೆಯ ವಿಭಿನ್ನ ನೆಲೆಗಳು.  

ಪಿ. ಲಂಕೇಶ್ ಅವರು ಹುಟ್ಟಿದ್ದು 1935ರ ಮಾರ್ಚ್ 8ರಂದು.  ಶಿವಮೊಗ್ಗೆಯಲ್ಲಿ ಬೆಳೆದು ಓದಿ, ಮುಂದೆ ಬೆಂಗಳೂರು, ಮೈಸೂರುಗಳಲ್ಲಿ ಎಂ.ಎ ವರೆಗಿನ ವ್ಯಾಸಂಗ ನಡೆಸಿದ ಲಂಕೇಶರು ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ, ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು, ಸರ್ಕಾರೀ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪನ ನಡೆಸಿ ಒಂದು ಹಂತದಲ್ಲಿ ಸ್ವಯಂ ನಿವೃತ್ತಿ ಪಡೆದು ಪತ್ರಿಕೋದ್ಯಮಕ್ಕಿಳಿದರು.   ಕಥೆ, ಕವನ, ಕಾದಂಬರಿ, ಸಿನಿಮಾ ಮತ್ತು ಪತ್ರಿಕೋದ್ಯಮದ ತೊಡಗಿಕೊಳ್ಳುವಿಕೆಯಲ್ಲಿ ಅಸಾಹಾಯಕ, ಶೋಷಿತರ ವರ್ಗಕ್ಕೊಂದು ಧ್ವನಿಯನ್ನೂ, ಎಲ್ಲ ರೀತಿಯ ಭ್ರಷ್ಟ ವ್ಯವಸ್ಥೆಗಳನ್ನೂ ಯಾವುದೇ ಸಂಕೋಚ ಭಾವಗಳೂ ಇಲ್ಲದೆ, ಯಾವುದೇ ಸಭ್ಯತೆಗಳ ಮುಖವಾಡಗಳನ್ನೂ ಧರಿಸದೆ ತಮ್ಮೊಳಗಿನ ಅಥವಾ ಸಾಮಾನ್ಯನ ಒಳತುಡಿತಕ್ಕೆ ಏನು ಏನು ಭಾಷೆ ಬರುತ್ತದೋ ಎಲ್ಲವನ್ನೂ ನೇರವಾಗಿ ತೆರೆದಿಟ್ಟರು.  ಸಿನಿಮಾ ಮಾಡಿ ರಾಷ್ಟ್ರಪ್ರಶಸ್ತಿಗಳಲ್ಲಿ ಹೆಸರು ಮಾಡಿದರು.  ಸಾಹಿತ್ಯದಲ್ಲಿ ಕೇಂದ್ರ ಅಕಾಡೆಮಿ ಪ್ರಶಸ್ತಿ ಅವರನ್ನರಸಿ ಬಂತು.  

ಅದು ಗೋಕಾಕ್ ಚಳುವಳಿಯ ಬಗೆಗೆ ಕೂಗು ಪ್ರಾರಂಭವಾಗಿದ್ದ ಕಾಲ.  ಅದು ನಾನು ಕನ್ನಡ ಕಾರ್ಯಕರ್ತನಾಗಿ ಭಾಗವಹಿಸಿದ ಮೊದಲ ಸಾರ್ವಜನಿಕ ಸಭೆ.  ಅಲ್ಲಿ ಲಂಕೇಶರು ಮಾತನಾಡಿದರು.  ಅವರು ಅಲ್ಲಿ ಕನ್ನಡದ ಬಗೆಗಿಂತ ಗಾಂಧಿಯನ್ನು ನೆನಪಿಸಿದರು.  “ನಮ್ಮ ಚಳುವಳಿಗಳು ಹಿಂಸಾತ್ಮಕ ರೂಪ ತಾಳದಿರುವುದು ಬಹು ಮುಖ್ಯ.  ಗಾಂಧಿ ಮನಸ್ಸು ಮಾಡಿದ್ದರೆ ದೇಶ ಹತ್ತುರಿಯಬಹುದಿತ್ತು.  ಹಿಂಸೆ ತಾಂಡವ ಆಡಬಹುದಿತ್ತು.  ಆದರೆ ಗಾಂಧಿ ಹಾಗೆ ಮಾಡಲಿಲ್ಲ.  ಯಾರಿಗೆ ಅಧಿಕಾರ ಬೇಕಿದೆಯೋ ಅವರು ಮಾತ್ರ ಹಿಂಸೆಗೆ ಪ್ರಚೋದನೆ ಕೊಡುತ್ತಾರೆ.  ಗಾಂಧಿಗೆ ಅಧಿಕಾರ ಬೇಕಿರಲಿಲ್ಲ.  ಅವರಿಗೆ ಬೇಕಿದ್ದದ್ದು ಸಮಾಜದಲ್ಲಿ ಬದಲಾವಣೆ.  ತಾವು ಬಯಸಿದ್ದ ಸ್ವಾತಂತ್ರ್ಯದ ಗುರಿ.  ನಾವು ಇದನ್ನು ನೆನಪಿನಲ್ಲಿಡಬೇಕು.  ನಮ್ಮ ಚಳುವಳಿಯ ಗುರಿ ಮುಖ್ಯ.  ಅದಕ್ಕೆ ಹಿಂಸೆ ಮತ್ತು ಹಿಂಸೆಯ ಪ್ರಚೋದನೆಯ ಅಂಶಗಳನ್ನು ದೂರವಿಡುವುದು ಅತೀ ಮುಖ್ಯ” ಎಂಬ ಲಂಕೇಶರ ಮಾತುಗಳು ಇಂದೂ ಅಣುರಣಿಸುತ್ತಿವೆ.

ಲಂಕೇಶ್ ಅವರ ಲಂಕೇಶ್ ಪತ್ರಿಕೆಯಲ್ಲಿ ಮೂಡಿದ ತೇಜಸ್ವಿ, ವೈದೇಹಿ, ನಾಗತಿಹಳ್ಳಿ, ಸಾರಾ ಅಬೂಬಕರ್ ಮತ್ತು ಸ್ವಯಂ ಲಂಕೇಶ್ ಅವರ ಬರಹಗಳಿಗೂ ಅಲ್ಲಿ ಮೂಡುತ್ತಿದ್ದ ಇನ್ನಿತರ ಬೈಗುಳಾತ್ಮಕ ಭಾಷೆಗಳಿಗೂ ಇದ್ದ ವೈವಿಧ್ಯಮಯ ದಿಕ್ಕುಗಳ ಬಗ್ಗೆ ಹಲವಾರು ಬಾರೀ ಅಚ್ಚರಿ ಮೂಡಿದ್ದಿದೆ.  ಇದರಲ್ಲಿ ನನಗೆ ಅರ್ಥವಾದ ಒಂದು ಎಳೆ ಎಂದರೆ ಅವರು ಯಾವುದಕ್ಕೂ ಸೌಜನ್ಯತೆಯ ಸೋಗು ನೋಡಿ ಮುಚ್ಚಿಡುವ ಪ್ರವೃತ್ತಿ ತೋರುತ್ತಿರಲಿಲ್ಲ.  ಎಲ್ಲಿ ಮುಚ್ಚಿಡುವ ಪ್ರವೃತ್ತಿ ಇರುತ್ತದೋ ಅಲ್ಲಿ ಅಸತ್ಯದ, ಭ್ರಷ್ಟತನದ  ಎಳೆ ಕೂಡಾ ಪ್ರಾರಂಭವಾಗುತ್ತದೆ ಎಂಬ ಜಾಗೃತಿ ಅಲ್ಲಿದ್ದಿರಬಹುದೇ ಎಂದು ಆಗಾಗ ಯೋಚನೆ ನನ್ನಲ್ಲಿ ಮೂಡಿ ಹೋಗಿದೆ.

ಲಂಕೇಶರ ‘ಲಂಕೇಶ್ ಪತ್ರಿಕೆ’ ಪತ್ರಿಕೋದ್ಯಮದಲ್ಲಿ ಒಂದು ರೀತಿಯ ವಿಶಿಷ್ಟ ಹೆಜ್ಜೆಯದು.  ಯಾವುದೇ ರೀತಿಯ ಜಾಹೀರಾತಿಗೆ ಕೈಚಾಚದೆ, ಓದುಗನ ಬೆಂಬಲವನ್ನೇ ಬೆಂಬಲವಾಗಿ ಮಾಡಿಕೊಂಡು ಬೆಳೆದು ನಿಂತ ಈ ಪತ್ರಿಕೆ ಮುಂದೆ ಹಲವಾರು ಅಂತಹದ್ದೇ ಪರ್ತ್ರಿಕೆಗಳನ್ನು, ಹಲವಾರು ಪತ್ರಕರ್ತರನ್ನೂ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಪ್ರೇರೇಪಿಸಿತು.  ಲಂಕೇಶರ ಪತ್ರಿಕೆಯನ್ನು ಪೂರ್ತಿ ಮೆಚ್ಚಿದವರು, ಭಾಗಶಃ ಮೆಚ್ಚಿದವರು, ಪೂರ್ಣ ತಿರಸ್ಕರಿಸಿದವರು ಹೀಗೆ ಯಾವುದೇ ನೆಲೆಗಟ್ಟಿನವರ ಚಿಂತನೆ ಹೇಗಾದರೂ ಇರಲಿ, ಎಲ್ಲಾ ನಿಟ್ಟಿನಲ್ಲೂ ಲಂಕೇಶರ ಈ ಪತ್ರಿಕೆಯ ಕಾರ್ಯ  ಒಂದು ಸೃಜನ ಪ್ರಯೋಗವಾಗಿತ್ತು  ಎಂಬುದು ನಿರ್ವಿವಾದ.  ಲಂಕೇಶರ ಪತ್ರಿಕೆಯ ಪ್ರಹಾರಕ್ಕೆ ಗುಂಡೂರಾಯರ ಸರ್ಕಾರ ಮತ್ತು ರಾಮಕೃಷ್ಣ ಹೆಗ್ಗಡೆ ಸರ್ಕಾರಗಳು ಪಡೆದುಕೊಂಡ ಬಿಸಿಯ ಪರಿಣಾಮಗಳು ಕೂಡಾ ಒಂದು ರೀತಿಯ ಐತಿಹಾಸಿಕ ದಾಖಲೆಗಳಂತೆ ಜನರ ಮನಸ್ಸಿನಲ್ಲಿ ಉಳಿದಿವೆ.  ಲಂಕೇಶರ ನಿಧನಾನಂತರದಲ್ಲಿ ‘ಲಂಕೇಶ್’ ಬೇರೆ ಮತ್ತು ‘ಲಂಕೇಶ್ ಪತ್ರಿಕೆ’ ಬೇರೆ ಹೀಗೆ ಸಾಗಿತು,  ಅವರು ಬೆಳೆಸಿದ್ದ ಜಗತ್ತು!.

ಲಂಕೇಶರು ಪ್ರಧಾನವಾಗಿ ಕತೆಗಾರರು.  ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಎಂ.ಎ ವಿದ್ಯಾರ್ಥಿಯಾಗಿದ್ದಾಗಲೇ 1958ರಲ್ಲಿ ‘ವಾಮನ’ ಕಥೆ ಪ್ರಕಟಿಸಿದ್ದರು.  ನಂತರದಲ್ಲಿ ಸುಮಾರು ನಲವತ್ತರಷ್ಟು ಕಥೆಗಳನ್ನು ಬರೆದರು.  ‘ಕೆರೆಯ ನೀರನು ಚೆಲ್ಲಿ’, ‘ನಾನಲ್ಲ’, ‘ಉಮಾಪತಿಯ ಸ್ಕಾಲರ್ ಷಿಪ್ ಯಾತ್ರೆ’ , ‘ಕಲ್ಲು ಕರಗುವ ಸಮಯ’ ಹಾಗೂ ‘ಉಲ್ಲಂಘನೆ’ ಅವರ ಕಥಾ ಸಂಕಲನಗಳು.  ‘ಬಿಚ್ಚು’ ಹಾಗೂ ‘ತಲೆಮಾರು’ ಕವನ ಸಂಗ್ರಹಗಳು.  ‘ಪ್ರಸ್ತುತ’ ಅವರ ವಿಮರ್ಶಾ ಲೇಖನಗಳ ಸಂಗ್ರಹ.  ಒಟ್ಟು ಕಾದಂಬರಿಗಳು ಮೂರು - ‘ಬಿರುಕು’, ‘ಮುಸ್ಸಂಜೆಯ ಕಥಾ ಪ್ರಸಂಗ’, ಹಾಗೂ ‘ಅಕ್ಕ’.  ‘ತೆರೆಗಳು' ಮತ್ತು ಇತರ ಆರು ನಾಟಕಗಳು 1964ರಲ್ಲಿ ಪ್ರಕಟವಾದವು.  ನಂತರದಲ್ಲಿ ಪ್ರಕಟವಾದ ನಾಟಕಗಳು ‘ಸಂಕ್ರಾಂತಿ’ ಹಾಗೂ ‘ಗುಣಮುಖ’.  ‘ದೊರೆ ಈಡಿಪಸ್’ ಹಾಗೂ ‘ಅಂತಿಗೊನೆ’ ಪ್ರಮುಖ ಅನುವಾದಿತ ನಾಟಕಗಳು.  ‘ಕಂಡದ್ದು ಕಂಡ ಹಾಗೆ’ ಹಾಗೂ ‘ಟೀಕೆ ಟಿಪ್ಪಣಿ’ ಗದ್ಯ ಬರಹಗಳ ಸಂಕಲನಗಳು.  1997ರಲ್ಲಿ ಪ್ರಕಟವಾದ ‘ಹುಳಿಮಾವಿನ ಮರ’ ಅವರ ಆತ್ಮಕಥನ.  

ನವೋದಯ ಸಾಹಿತ್ಯದ ಆದರ್ಶವಾದ, ಭಾವರಂಜಕಥೆಗೆ ವಿರುದ್ಧವಾಗಿ ಹೊಸ ತಲೆಮಾರಿನ ಅತೃಪ್ತಿ, ಅಸಮಾಧಾನ, ಆಕ್ರೋಶಗಳಿಗೆ ದನಿಕೊಟ್ಟವರಲ್ಲಿ ಲಂಕೇಶ್ ಪ್ರಮುಖರೆನ್ನಬಹುದು. ಅವರ ಈ ಆಕ್ರೋಶಕ್ಕೆ ಮೊದಲ ಅಭಿವ್ಯಕ್ತಿ ಮಾಧ್ಯಮವಾಗಿದ್ದು ಕಾವ್ಯ.  ‘ಬಿಚ್ಚು’ ಎಂಬ ಮೊದಲ ಕವನದಲ್ಲೇ ಅವರು ಬಂಡಾಯ ಪ್ರವೃತ್ತಿಯನ್ನು ಮೊಳಗಿಸಿದ್ದರೆನ್ನಬಹುದು.  ‘ದೇಶಭಕ್ತ ಸೂಳೆ ಮಗನೆ ಪದ್ಯ’ ಎಂಬ ಕವಿತೆಯಲ್ಲಿ ರಾಷ್ಟ್ರವಂಚಕ ನಾಯಕರನ್ನು ಕುರಿತು ಹೀಗೆ ಆರ್ಭಟಿಸಿದ್ದಾರೆ.

‘ಆಹಾ ದೇಶ ಬಾಂಧವ, ನಿನ್ನ ಅಪ್ಪಿಕೊಂಡಾಡಲೆ?  
ನಿನ್ನ ಕೂದಲು ಬಾಚಿ ಹೂಮಾಲೆ ಹಾಕಲೆ? 
ವೀರ ಮಾತೆಯ ಆರ್ಯ ಸಂಸ್ಕೃತಿಯ ಕನಸು ಅನ್ನಲೆ?  
ತಿಲಕವಿಟ್ಟು ಸಂತೋಷ ತರಲೆ?  
ಸೂಳೆಮಗನೆ ನಿನ್ನ ಕರೆದಾಗ ನನ್ನನ್ನೇ ಕರೆದಂತಾಗುತ್ತಿ!’  

ಇದನ್ನು ಕುರಿತು ಗಿರಡ್ಡಿಯವರು ಹೇಳಿರುವಂತೆ, ‘ಒಬ್ಬ ಭ್ರಷ್ಟ ರಾಜಕಾರಣಿಯನ್ನು ಕಂಡಾಗ ಸಿಟ್ಟು ಬರುವುದು ಕೇವಲ ಅವರ ಬಗ್ಗೆ ಮಾತ್ರವಲ್ಲ ಸ್ವಂತದ ಬಗ್ಗೆ ಕೂಡ.  ಯಾಕೆಂದರೆ ಅವನು ಬೇರೆಯಲ್ಲ.  ನಮ್ಮ ಮನಸ್ಸಿನ ಆಳದಲ್ಲಿರುವ ದುರಾಶೆಯ ಪ್ರತಿರೂಪವೇ ಅವನು.  ಬಂಡವಾಳಶಾಹಿ ಶೋಷಕ ವ್ಯವಸ್ಥೆಯನ್ನು ಕುರಿತ ಅವರ ನಿಲುವು ಕೂಡಾ ಹಾಗೇ ಇದೆ”. ಈ ನಿಟ್ಟಿನಲ್ಲಿ ಅವ್ವ ಪದ್ಯದ ಲಯವನ್ನು ಗಮನಿಸಬಹುದು.

ನನ್ನವ್ವ ಬದುಕಿದ್ದು
ಕಾಲು ಕಡ್ಡಿಗೆ
ದುಡಿತಕ್ಕೆ ಮಕ್ಕಳಿಗೆ
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ

ಈ ಪದ್ಯಗಳು ಆಡುವ ಮಾತಿನ ಲಯ ಮತ್ತು ನುಡಿಗಟ್ಟಿಗೆ ಹತ್ತಿರವಾಗಿದ್ದು ತಮ್ಮ ಅನುಭವಕ್ಕೆ ಸಮಾಧಾನಕರವಾದ ತಕ್ಕ ಭಾಷಾಶರೀರವನ್ನು ಬಳಸಿದ್ದನ್ನು ಇಲ್ಲಿ ಕಾಣಬಹುದಾಗಿದೆ.  

ಲಂಕೇಶರು ನವ್ಯಕಾವ್ಯದ ಮೇರು ಸಮಯದಲ್ಲಿ ‘ಅಕ್ಷರ ಹೊಸ ಕಾವ್ಯ’ ಎಂಬ ನವ್ಯ ಕಾವ್ಯದ ಪ್ಪ್ರಾತಿನಿಧಿಕ Anthologyಯನ್ನು ಹೊರತಂದು ಕಾವ್ಯಕ್ಷೇತ್ರಕ್ಕೆ ಇಂಬುಕೊಟ್ಟರೆನ್ನಬಹುದು.  ಕನ್ನಡದ ಅಂದಿನ ದಿನದಲ್ಲೇ  ನವ್ಯಕಾವ್ಯ ಶ್ರೇಷ್ಠರಾಗಿದ್ದವರು  ಮತ್ತು ಮುಂದೆ ಆ ಹಾದಿಯಲ್ಲಿ ಭವ್ಯ ಹೆಜ್ಜೆಯನ್ನಿಟ್ಟು ಮುನ್ನಡೆದ ಸಾಧಕರ ಕಾವ್ಯ ಹೆಜ್ಜೆಗಳನ್ನು ಈ ಕೃತಿ ಸುಂದರವಾಗಿ ಸೆರೆಹಿಡಿದಿದ್ದು ಇಂದಿಗೂ ಕನ್ನಡ ಸಾಹಿತ್ಯ ಲೋಕದ ಒಂದು ಅನನ್ಯ ಕೃತಿಯಾಗುಳಿದಿದೆ.  

ನಾಟಕಕಾರರಾಗಿ ಲಂಕೇಶರು ಕನ್ನಡದಲ್ಲಿ ವಿಶಿಷ್ಟಸ್ಥಾನ ಪಡೆದಿದ್ದಾರೆ.  ಅವರ ಮೊದಲ ನಾಟಕ ‘ಟಿ ಪ್ರಸನ್ನನ ಗ್ರಹಸ್ಥಾಶ್ರಮ’. ನಂತರ ಸಾಲಾಗಿ ಬಂದದ್ದು ‘ತೆರೆಗಳು’, ‘ನನ್ನ ತಂಗಿಗೊಂದು ಗಂಡು ಕೊಡಿ’, ‘ಗಿಳಿಯು ಪಂಜರದೊಳಿಲ್ಲ’, ‘ಸಿದ್ಧತೆ’, ‘ಪೊಲೀಸರಿದ್ದಾರೆ ಎಚ್ಚರಿಕೆ’  ಹಾಗೂ ‘ಕ್ರಾಂತಿ ಬಂತು ಕ್ರಾಂತಿ’.  ಈ ಎಲ್ಲ ನಾಟಕಗಳ ಮುಖ್ಯ ವಸ್ತು – ನಮ್ಮ ಸಮಾಜದಲ್ಲಿ ಕಂಡು ಬರುವ ಆಷಾಢಭೂತಿತನ, ಜನರ ಸಿನಿಕತೆ, ವ್ಯವಸ್ಥೆಯ ನಿಷ್ಪಲತೆ ಬಗ್ಗೆ ಜನರ ಹತಾಶೆ, ಸಾಮಾಜಿಕ ಅಸಮಾನತೆಯ ವಿರುದ್ಧ ಪ್ರತಿಭಟನೆ.  ‘ಸಂಕ್ರಾಂತಿ’ ನಾಟಕದಲ್ಲಿ ಬಸವಣ್ಣನವರ ಕಾಲದಲ್ಲಿದ್ದ ವ್ಯವಸ್ಥೆ ಹಾಗೂ ಕ್ರಾಂತಿಯ ನಡುವೆ ಉಂಟಾಗುವ ಸಂಘರ್ಷದ ಚಿತ್ರಣವಿದೆ.   ಬಿಜ್ಜಳ ಹಾಗೂ ಬಸವಣ್ಣ  ಈ ಶಕ್ತಿಗಳ ಸಂಕೇತವಾಗುತ್ತಾರೆ.  ಸಂಕ್ರಾಂತಿ ಇಂದಿಗೂ ಪ್ರಸ್ತುತವಿರುವ ಸಾಮಾಜಿಕ ಸಮಸ್ಯೆಗಳ ಜೊತೆಗೆ, ಸಾರ್ವತ್ರಿಕವಾದ ಮಾನವೀಯ ಅವಸ್ಥೆಯ ಮೇಲೂ ಬೆಳಕು ಚೆಲ್ಲುವಂತಾಗುತ್ತದೆ.  

‘ಸಂಕ್ರಾಂತಿ’ ಧಾರ್ಮಿಕ ಚರಿತ್ರೆಯ ಸಂಘರ್ಷವನ್ನು ಚಿತ್ರಿಸಿದರೆ, ‘ಗುಣಮುಖ’ ಮೊಗಲ್ ಇತಿಹಾಸದ ನಾದಿರ್ ಷಾ ತನ್ನ  ಜೀವನದಲ್ಲಿ ಎದುರಿಸಿದ ಸೋಲು, ದ್ವಂದ್ವಗಳು ಮತ್ತು ಮಾನಸಿಕ ಅಸ್ವಸ್ಥತೆಗಳ ಚಿತ್ರಣದ ಮೂಲಕ  ‘ಸತ್ಯ ಮತ್ತು ಸುಳ್ಳು’ ಒಬ್ಬ ಸ್ವಪ್ರತಿಷ್ಟಿತನವನ್ನು ಸ್ಪರ್ಶಿಸುವ ಬಗೆಯನ್ನು ಲಂಕೇಶ್ ಮನೋಜ್ಞವಾಗಿ  ಹೇಳುತ್ತಾರೆ..  

‘ಫ್ಯಾಂಟಸಿ ನಿರೂಪಣೆಯನ್ನು ಲಂಕೇಶರು ಬಹಳ ಹಿಂದೆಯೇ ಆರಂಭಿಸಿದ್ದಕ್ಕೆ ಅವರ ‘ಬಿರುಕು’ ಕಾದಂಬರಿಯೇ ಉತ್ತಮ ನಿದರ್ಶನ.  ಇದರ ನಾಯಕ ಬಸವರಾಜ ತನ್ನ ಸುತ್ತಮುತ್ತ ಕಾಣುವ ಸತ್ವಹೀನವಾದ ಭ್ರಷ್ಟ ಸಮಾಜದೊಂದಿಗೆ ರಾಜಿಮಾಡಿಕೊಳ್ಳಲಾರದವನು.  ಆದರೆ ಎಲ್ಲ ನವ ನಾಯಕರಂತೆ ಅವನೂ ದುರ್ಬಲ ಮತ್ತು ಸಂವೇದನಾಶೀಲ.  ಸಮಾಜದ ವಿರುದ್ಧ ಬಂಡೇಳಲು ಶಕ್ತಿಯಿಲ್ಲದವನು ಹಾಗಾಗಿ ಈ ದ್ವಂದ್ವದಿಂದ ಪಾರಾಗಲು ಫ್ಯಾಂಟಸಿಯ ಹಾಗೂ ಸುಳ್ಳಿನ ಪರಿಸರದಲ್ಲಿ ತಲೆ ತಪ್ಪಿಸಿಕೊಳ್ಳುತ್ತಾನೆ.  ‘ಮುಸ್ಸಂಜೆಯ ಕಥಾ ಪ್ರಸಂಗ’ ವಾಸ್ತವವಾದಿ ರಾಜಮಾರ್ಗದಲ್ಲಿದ್ದರೆ,  ಮೂರನೆಯ ಕಾದಂಬರಿ  ‘ಅಕ್ಕ’ದಲ್ಲಿ ಕೊಳಗೇರಿಯ ಬದುಕು ಚಿತ್ರಿತವಾಗಿದೆ.  ದಲಿತ ಮತ್ತು  ಬಂಡಾಯ ಚಳುವಳಿಗಳ ಸಂದರ್ಭದಲ್ಲಿಯೂ ‘ಅಕ್ಕ’ ತುಂಬಾ ಪ್ರಸ್ತುತವಾದ ಗಣನೀಯ ಕೃತಿ ಎನಿಸಿಕೊಳ್ಳುತ್ತದೆ.  ಇದು ಲಂಕೇಶರ ಕಥನ ಸಾಹಿತ್ಯದಲ್ಲಿ ಒಂದು ಮಟ್ಟದ ಬೆಳವಣಿಗೆಯನ್ನು ತೋರುವಂತೆ ಸಮಕಾಲೀನ ಕನ್ನಡ ಕಥಾಸಾಹಿತ್ಯಕ್ಕೂ ತನ್ನದೇ ಆದ ಕಾಣಿಕೆಯನ್ನು ನೀಡಿದೆ.  ಕವಿತಾ ಲಂಕೇಶರು ಈ ಕಾದಂಬರಿಯನ್ನು ‘ದೇವೀರಿ’ ಎಂಬ ಚಿತ್ರವಾಗಿಸಿದ್ದಾರೆ.  

ಲಂಕೇಶರು ತಮ್ಮ  ಸಣ್ಣಕತೆಗಳಲ್ಲಿ ಒಂದು ಲೋಕವನ್ನೇ ತೆರೆದಿಟ್ಟಂತೆ ಭಾಸವಾಗುತ್ತದೆ.  ಅವರ ಕಥೆಗಳ ಮುಖ್ಯ ವೈಶಿಷ್ಟ್ಯವೆಂದರೆ ‘ಕಂಡದ್ದು ಕಂಡ ಹಾಗೇ’ ಚಿತ್ರಿಸುವ ಪೋಟೋಗ್ರಾಫಿಕ್ ಮಾದರಿಯ ಅವರ ಕಥನ ಕಲೆ.  ನೈತಿಕ ಬಿಕ್ಕಟ್ಟಿನಲ್ಲಿ ಸಿಲುಕುವ ಅನಿರ್ವಚನೀಯ ಅನಿಸಿಕೆಗಳು ಭಾವನೆಗಳಾಗಿ ತುಡಿಯುತ್ತಿರುವ ಅನುಭವವನ್ನು ಅವರ ಮೊದಲಿನ ಕತೆಗಳಾದ ‘ವಾಮನ’, ‘ನಿವೃತ್ತರು’ ಮುಂತಾದ ಕಥೆಗಳಲ್ಲಿ ಕಾಣಬಹುದು.  1970ರಲ್ಲಿ ಪ್ರಕಟವಾದ ‘ನಾನಲ್ಲ’ ಕಥಾ ಸಂಕಲನದ ‘ರೊಟ್ಟಿ’ ಕಥೆ ಲಂಕೇಶರ ಬರವಣಿಗೆಯಲ್ಲಿ ಮಹತ್ವದ ಕಥೆಯೆಂದು ವಿದ್ವಾಂಸರು ಗುರುತಿಸುತ್ತಾರೆ.  ರೊಟ್ಟಿಯ ವಸ್ತು ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ.  ಅವರ ಮತ್ತೊಂದು ಕಥೆ ‘ಉಮಾಪತಿಯ ಸ್ಕಾಲರ್ ಷಿಪ್ ಯಾತ್ರೆ’  ಕೂಡ ನವ್ಯೋತ್ತರ ಸಂದರ್ಭದಲ್ಲಿ ಸಣ್ಣ ಕಥೆಯಲ್ಲಿ ನಡೆದ ಹೊಸ ಪ್ರಯೋಗಗಳ ಉತ್ತಮ ಮಾದರಿಯಾಗಿದೆ.  1990ರಲ್ಲಿ ಪ್ರಕಟವಾದ ‘ಕಲ್ಲು ಕರಗುವ ಸಮಯ’ ಮತ್ತು ಇತರ ಕಥೆಗಳಲ್ಲಿ ಲಂಕೇಶರ ಮೊದಲ ಕಥೆಗಳಲ್ಲಿ ಕಾಣುತ್ತಿದ್ದ ಸಿಟ್ಟು, ಅಸಹನೆಗಳು ಕಡಿಮೆಯಾಗಿ, ಮಾಗಿದ ತಿಳುವಳಿಕೆಯಲ್ಲಿ, ಸಮಾಧಾನದಲ್ಲಿ, ಜೀವನದ ಗಾಢ ಪ್ರೀತಿಯಿಂದ ಕಥೆಗಳನ್ನು ಹೇಳಿದ್ದಾರೆ ಎಂದೆನಿಸುತ್ತದೆ.  

ಸಾಹಿತ್ಯಕವಾಗಿ ಒಬ್ಬ ಲೇಖಕ ಕೃತಿಯಿಂದ ಹೇಗೆ ಬೆಳೆಯುತ್ತಾನೆ, ಬದಲಾವಣೆ ಹೊಂದುತ್ತಾನೆ, ಓದುಗರನ್ನೂ ಹೇಗೆ ಬೆಳೆಸುತ್ತಾನೆ ಎಂಬುದೇ ಉತ್ತಮ ಕೃತಿಗಳ ಲಕ್ಷಣವಾಗಿದೆ.  ಈ ದೃಷ್ಟಿಯಿಂದ ಲಂಕೇಶರು ಕನ್ನಡದ ಮಹತ್ವದ ಲೇಖಕರಾಗಿ ಎಂದೆಂದೂ ಕಂಗೊಳಿಸುತ್ತಾರೆ.  

ಸಿನಿಮಾರಂಗದಲ್ಲಿ ಲಂಕೇಶ್ ‘ಸಂಸ್ಕಾರ’ ಚಿತ್ರದಲ್ಲಿನ ನಾರಣಪ್ಪನ ಪಾತ್ರ ನಿರ್ವಹಿಸಿದ್ದರು.   ‘ಪಲ್ಲವಿ’ ಎಂಬ ಮೊದಲ ಸಿನಿಮಾದಲ್ಲೇ ಉತ್ತಮ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು.  ‘ಅನುರೂಪ’, ‘ಖಂಡವಿದೆ ಕೊ ಮಾಂಸವಿದೆ ಕೊ’, ‘ಎಲ್ಲಿಂದಲೋ ಬಂದವರು’ ಚಲನಚಿತ್ರಗಳನ್ನೂ ನಿರ್ದೇಶಿಸಿದರು.  

‘ಹುಳಿ ಮಾವಿನಮರ’ ಲಂಕೇಶರ ಆತ್ಮಕಥೆ. ಇಲ್ಲಿ ಮಾವಿನಮರದ ಜೀವನ ಘಟ್ಟಗಳಂತೆ ತಮ್ಮ ಜೀವನ ಕಥನವನ್ನು ಲಂಕೇಶರು ನಿರೂಪಿಸಿದ್ದಾರೆ.  ಹೀಗೆ ವೈವಿಧ್ಯಮಯ ಬದುಕು ಸಾಧನೆಗಳ ಮೂರ್ತಿವೆತ್ತಂತಿದ್ದ  ಲಂಕೇಶರು 2000ದ ವರ್ಷದಲ್ಲಿ ಈ ಲೋಕವನ್ನಗಲಿದರು.  ಅವರ ನೆನಪು ಅಮರವಾದದ್ದು.

(ಈ ಲೇಖನದಲ್ಲಿನ ಸಾಹಿತ್ಯಕ ಅಂಶಗಳಿಗೆ ಎಂ.ಎಸ್. ರಘುನಾಥರ ಸಾಲು ದೀಪಗಳು ಬರಹವನ್ನು ಆಧರಿಸಿದ್ದೇನೆ)

On the birth day of journalist, writer and new way thinker P. Lankesh

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ