ರಾಸು ವೆಂಕಟೇಶ
ರಾ. ಸು. ವೆಂಕಟೇಶ ಅವರು ಒಬ್ಬ ಅಪರೂಪದ ಸಾಹಿತ್ಯ - ಸಾಂಸ್ಕೃತಿಕ ಪ್ರೇಮಿ. ಬೆಂಗಳೂರು ದೂರದರ್ಶನದಲ್ಲಿ ವೃತ್ತಿ ನಿರ್ವಹಿಸಿದ ವೆಂಕಟೇಶ್ ಅವರ ಪ್ರವೃತ್ತಿಯಲ್ಲಿನ ಸಾಹಿತ್ಯ, ರಂಗಭೂಮಿ, ಪತ್ರಿಕೋದ್ಯಮ, ಸಾಮಾಜಿಕ ಹಾಗೂ ಶೈಕ್ಷಣಿಕವನ್ನು ಒಳಗೊಂಡ ಕ್ಷೇತ್ರಗಳ ವ್ಯಾಪ್ತಿ ವಿಶಾಲವಾದದ್ದು.
ಮಾರ್ಚ್ 8, ರಾ. ಸು. ವೆಂಕಟೇಶ ಅವರ ಜನ್ಮದಿನ. ಬಾನುಲಿ ಮತ್ತು ದೂರದರ್ಶನ ಕ್ಷೇತ್ರದಲ್ಲಿ ತಾಂತ್ರಿಕ ಶಿಕ್ಷಣ ಗಳಿಸಿರು ಇವರು ವಾರ್ತಾ ಮತ್ತು ಪ್ರಸಾರ ಮಂತ್ರಾಲಯದಡಿಯಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ 37 ವರ್ಷಗಳ ಕಾಲ ಉದ್ಯೋಗ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ರಾ. ಸು. ವೆಂಕಟೇಶ ಅವರಿಗೆ 14ನೇ ವಯಸ್ಸಿನಿಂದಲೇ ಸಾಹಿತ್ಯದತ್ತ ಒಲವು ಮೂಡಿತು. ಅವರ ಮೊದಲ ಬರಹ ಪ್ರಕಟವಾದದ್ದು 1978ರಲ್ಲಿ. ಹಲವಾರು ಸಂಘಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸದಾ ಕ್ರಿಯಾಶೀಲರಾಗಿರುವ ಮನಸ್ಸು ಅವರದು. ಕನ್ನಡ ನಾಡು ನುಡಿಯ ಬಗ್ಗೆ ಕಾಳಜಿ ಇರುವ ಇವರಿಗೆ ಕನ್ನಡೇತರರಿಗೆ ಕನ್ನಡ ಕಲಿಸಿದ ಖುಷಿ ಇದೆ.
ರಾ. ಸು. ವೆಂಕಟೇಶ ಅವರು ಹವ್ಯಾಸಿ ಸಾಹಿತ್ಯಕ ಮಾಸಿಕ ಪತ್ರಿಕೆಯ ಸಂಪಾದಕರಾಗಿ, ಹವ್ಯಾಸಿ ಲೇಖಕರ ಬಳಗದ ಅದ್ಯಕ್ಷರಾಗಿ, ಹವ್ಯಾಸಿ ಪ್ರಕಾಶನದ ಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು 'ಕಲೋಪಾಸಕರು' ನಾಟಕ ಸಂಸ್ಥೆಯ ಸಂಸ್ಥಾಪಕರಾಗಿದ್ದು, ಹಲವಾರು ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ, ಭಾಗಿಯಾಗಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ರಾ. ಸು. ವೆಂಕಟೇಶ ಅವರು 1980ರ ಸುಮಾರಿನಲ್ಲಿ ಕೆಂಪೇಗೌಡ ನಗರ ಎಚ್ಚೆತ್ತ ನಾಗರೀಕರ ಸಂಘಟನೆ ಹುಟ್ಟುಹಾಕಿದರು. ಮುಂದೆ ಜನಮುಖಿ ವಿಚಾರ ವೇದಿಕೆ, ಜನಮುಖಿ ಪ್ರಕಾಶನಗಳನ್ನು ನಡೆಸಿದರು.
ರಾ. ಸು. ವೆಂಕಟೇಶ ಅವರು ಚಾಮರಾಜ ಪೇಟೆ ಕ ಸಾ ಪ ಘಟಕದ ಕಾರ್ಯದರ್ಶಿಯಾಗಿ ಮೂರು ಸಾಹಿತ್ಯ ಸಮ್ಮೇಳನಗಳ ಯಶಸ್ಸಿನಲ್ಲಿ ಭಾಗಿಯಾದರು. ಮೂರೂ ಸಮ್ಮೇಳನಗಳ ಸ್ಮರಣ ಸಂಚಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಸಾಧನೆ ಇವರದ್ದು.
ಇವರು ಕಥೆ, ಕವನ, ವಿಮರ್ಶೆ, ಸಂದರ್ಶನ, ಲೇಖನ, ಪದಬಂಧ ಹೀಗೆ ಹಲವು ಬಗೆಯ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.ಬೆಂಗಳ್ಳೂರ್ ಹೈಸ್ಕೂಲ್ ಹೈಕ್ಳು ಸಂಘಟನೆಯಲ್ಲಿ 700 ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳನ್ನು ಸಂಘಟಿಸಿ ಒಂದೇ ವೇದಿಕೆಯಲ್ಲಿ 40ಮಂದಿ ನಿವೃತ್ತ ಶಿಕ್ಷಕರಿಗೆ *ನ ಭೂತೋ ನ ಭವಿಷ್ಯತಿ* ಎಂಬಂತೆ ಗುರುನಮನ ಅರ್ಪಿಸಿದ ಹೆಗ್ಗಳಿಕೆ ಇವರದು. ಜೊತೆಗೆ ಶಾಲೆಯ ಅಮೃತ ಮಹೋತ್ಸವಗಳಂತಹ ಕಾರ್ಯಕ್ರಗಳ ಯಶಸ್ಸಿಗೂ ಕಾರಣರಾಗಿದ್ದಾರೆ.
ರಾ. ಸು. ವೆಂಕಟೇಶ ಅವರದು ಹಳೆಯ ನೆನಪು, ಹಳೆಯ ಗೆಳೆತನ, ಹಳೆಯ ಘಟನೆಗಳ ನೆನಪಿನಲ್ಲಿ ಸದಾ ಸಂತಸ ಕಾಣುವ ವ್ಯಕ್ತಿತ್ವ. ತಾವು ಓದಿದ ಪ್ರಾಥಮಿಕ ಶಾಲೆ ಚಾಮರಾಜಪೇಟೆಯ ಶ್ರೀ ರಾಮ ಮಂದಿರ ಹಿರಿಯ ವಿದ್ಯಾರ್ಥಿಗಳ ಸಂಘಟನೆಯಲ್ಲೂ ತೊಡಗಿಸಿಕೊಂಡವರು. ಇವರು ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸೇವಾ ರತ್ನ ಪುರಸ್ಕೃತರು. ಸಾಮಾಜಿಕ ಕಳಕಳಿಗಾಗಿ ಲಯನ್ಸ್ ಪ್ರಶಸ್ತಿ ಪುರಸ್ಕೃತರು ಕೂಡಾ.
ರಾ. ಸು. ವೆಂಕಟೇಶ ಅವರ ಬದುಕಿನ ಬಂಧ ಸಂಬಂಧಗಳ ಸುತ್ತ "ಚಿತ್ತದೊಳಗೊಂದು ಸುತ್ತು" ಮತ್ತು "ಹೃದ್ಗತ" ಕೃತಿಗಳು ಪ್ರಕಟಿತವಾಗಿದೆ. *ರೆಕ್ಕೆ ಮುರಿದ ಹಕ್ಕಿ* ಕಿರುಚಿತ್ರಕ್ಕೆ ಸಾಹಿತ್ಯ ರಚಿಸಿ, ಹಿನ್ನೆಲೆ ದನಿಗಾಗಿ ರಾಷ್ಟ್ರೀಯ ಪುರಸ್ಕಾರ ಗಳಿಸಿದ್ದಾರೆ.
ರಾ. ಸು. ವೆಂಕಟೇಶ ಅವರು ಕಲೆ ಸಾಹಿತ್ಯ ಸಂಸ್ಕೃತಿಗಳ ಅನಾವರಣಕ್ಕೆಂದು ತಮ್ಮ ಮನೆಯ ಮೇಲೆ ನಲ್ವತ್ತು ಜನ ಸೇರಬಹುದಾದ ಮಾತಿನ ಮನೆ ಸಭಾಂಗಣ/ವೇದಿಕೆಯನ್ನು ನಿರ್ಮಿಸಿ ಪ್ರತಿ ತಿಂಗಳೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತಿದ್ದಾರೆ. ಈ ಮೂಲಕ ಕಳೆದ 5 ವರ್ಷಗಳಲ್ಲಿ 99 ಕಾರ್ಯಕ್ರಮಗಳನ್ನು ನಡೆಸಲಾಗಿದ್ದು 2025ರ ಮಾರ್ಚ್ 9ರಂದು ನೂರನೆಯ ಕಾರ್ಯಕ್ರಮ ನಡೆಯುತ್ತಿದೆ. ನಾಡಿನ ಹೆಸರಾಂತ ಗಣ್ಯರು ಈ ವೇದಿಕೆಯಲ್ಲಿ ವಿರಾಜಿಸಿದ್ದಾರೆ.
ಅಪೂರ್ವ ಉತ್ಸಾಹಿ ಕ್ರಿಯಾಶೀಲ ಕನ್ನಡ ಸಹೃದಯಿ ರಾ. ಸು. ವೆಂಕಟೇಶ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
ಕಾಮೆಂಟ್‌ಗಳು