ಮಂಗಳವಾರ, ಸೆಪ್ಟೆಂಬರ್ 3, 2013

ನಾದಲೀಲೆ

ನಾದಲೀಲೆ

ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ  

ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ
ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ.
ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ  ಕೋಲು ಸಖೀ. . . .

ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ.
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕೋಲು ಸಖೀ. . . .

ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ
ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾದಲನೆಡೆ ಬೇಡ ಬಹಳು ಕಾದಲೆ ಹೂಮಾಲೆ.
ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ
ಕೋಲು ಸಖೀ. . . .

ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.
ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ
(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)
ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?
ಬೇಟೆಯಲ್ಲ; ಆಟವೆಲ್ಲ, ಬೇಟದ ಬಗೆ, ನಾರಿ.
ಕೋಲು ಸಖೀ. . . .

ಸಾಹಿತ್ಯ: ಅಂಬಿಕಾತನಯದತ್ತ

(ಜೀವನದ ತಾಲ-ಲಯಾನುಸಾರಿತ್ವದಲ್ಲಿ ಒಂದು ನಾದ ತನ್ಮಯತೆ ಇದೆ.  ಮರಣದ ಭಯ ಬೇತಾಲಕ್ಕೆ ಎಳೆಯುವುದು.  ಜೀವನದ ತನ್ಮಯತೆ ಬೆಳಕು, ಹೂವು, ಹರಿಣ, ಹಸುಗಳ ಜೀವನದಲ್ಲೂ ದಿನವೂ ಕಂಗೊಳಿಸುವುದು

ಮುಂಜಾವಿನ ಹೊತ್ತಿನಲ್ಲಿ ಆಹ್ಲಾದಕರವಾದ ತಣ್ಣನೆಯ ಗಾಳಿಯು ಬೀಸುತ್ತಿರುತ್ತದೆ. ಕಾಡಿನ ಮುಗ್ಧ ಪ್ರಾಣಿಗಳಾದ ಚಿಗರೆಗಳು ಈ ಎಲರನ್ನು ಅಂದರೆ ಗಾಳಿಯನ್ನು ಮೂಸಿ ನೋಡುತ್ತ ಬದುಕಿನ  ಆನಂದವನ್ನು ಸವಿಯುತ್ತಿವೆ.  ಕವಿಯು ಸಾತ್ವಿಕ ಹಾಗು ಸುಂದರ ಪ್ರಾಣಿಗಳಾದ ಚಿಗರೆಗಳನ್ನಷ್ಟೇ ವರ್ಣಿಸುತ್ತಿರುವದನ್ನು ಗಮನಿಸಬೇಕು. ಈ ಚಿಗರೆಗಳಾದರೂ ಎಂತಹವು? ತರಳ ಎರಳೆ ಅಂದರೆ ಪುಟ್ಟ ಚಿಗರೆ ಮರಿ, ಚಿಗುರ ಚಿಗರೆ ಅಂದರೆ ಪ್ರಾಯವು ಚಿಗುರುತ್ತಿರುವ (=adolescent) ಚಿಗುರೆ ಹಾಗು ಹೂವು ಹೂವು ಹುಲ್ಲೆ ಅಂದರೆ ಗರ್ಭಧಾರಣೆಯ ಯೋಗ್ಯ ವಯಸ್ಸನ್ನು ತಲುಪಿದ ಚಿಗುರೆ. ಪ್ರಕೃತಿಯು ಸೃಷ್ಟಿಸುವದನ್ನು ಬಯಸುತ್ತದೆ, ಬೆಳೆಯುವದನ್ನು ಬಯಸುತ್ತದೆ ಎನ್ನುವ ಪ್ರಕೃತಿಯ ಹಂಬಲವನ್ನು ಈ ಎಳೆವಯಸ್ಸಿನ ಸಂಕೇತಗಳು ಹೇಳುತ್ತವೆ. ಈ ಸಾತ್ವಿಕ ಪ್ರಾಣಿಗಳ ಕಣ್ಣುಗಳ ಮುಂದೆ ಇರುವದು ಕಂಗೊಳಿಸುವ ಕೆಂಪು ಅಂದರೆ ಅರುಣೋದಯ, ಸೂರ್ಯೋದಯಕ್ಕಿಂತ ಮೊದಲು ಬಾನು ಕೆಂಪಾಗಿ ಕಾಣುವ ದೃಶ್ಯ. ಇದು ಬದುಕಿನಲ್ಲಿ ಉತ್ಸಾಹ ತುಂಬುವ ನೋಟ. ಆದರೆ ಈ ಮುಗ್ಧ ಪ್ರಾಣಿಗಳಿಗೆ ತಮ್ಮ ಹಿಂದೆ ಕಂಗೆಡಿಸುವ ಅಂದರೆ ಧೈರ್ಯಗುಂದಿಸುವಂತಹ ಮಂಜು ಇದೆ ಎನ್ನುವದು ಕಾಣುತ್ತಿಲ್ಲ. ಆ ಮಂಜಿನ ಪರದೆಯ ಹಿಂದೆ ಅಡಗಿರುವವನು ಬೇಟೆಗಾರ ಅಂದರೆ ಮೃತ್ಯು. ಇದರ ಅರಿವಿಲ್ಲದ ಈ ಮುಗ್ಧ ಪ್ರಾಣಿಗಳು ಜೀವಸ್ನೇಹಿಯಾದ ಮುಂಜಾವಿನ ಗಾಳಿಯನ್ನು ಸೇವಿಸುತ್ತ ಆನಂದದಿಂದಿವೆ.

ಎರಡನೆಯ ನುಡಿಯಲ್ಲಿಯೂ ಸಹ ಎಳೆಯ, ಮುಗ್ಧ, ಸಾತ್ವಿಕ ಪ್ರಾಣಿಗಳ ಸಂಕೇತಗಳಿವೆ. ಆದರೆ ಈ ಪ್ರಾಣಿಗಳು ಕಾಡಾಡಿ ಪ್ರಾಣಿಗಳಲ್ಲ. ಮನುಷ್ಯನ ನಾಗರಿಕತೆಯ ಮೊದಲ ಮೆಟ್ಟಲಿನಲ್ಲಿ ಅವನ ಜೊತೆಗೆ ನಾಡಿನಲ್ಲಿ ನೆಲೆಸಿದ ಗೋ-ಸಮೂಹ. ಕರೆವ ಕರು ಅಂದರೆ female calf. ಕುಣಿವ ಮಣಕ ಅಂದರೆ male calf.  ಇವು ಸಂತಾನವನ್ನು ಬೆಳೆಯಿಸುವ ಉತ್ಸಾಹದಲ್ಲಿರುವ ಎಳೆ ಜೀವಿಗಳು. ‘ಗೋಗಭೀರೆ’ ಅಂದರೆ ಈಗಾಗಲೇ ಸಂತಾನವನ್ನು ಪಡೆದಿರುವ ಗೋವು. ಇವಳನ್ನು ‘ ತೊರೆವ ’ ಅಂದರೆ ಸಮೃದ್ಧಿಯಾಗಿ ಹಾಲು ನೀಡುತ್ತಿರುವ, ಪ್ರೌಢ ವಯಸ್ಸಿನ ಗೋವು ಎಂದು ಕವಿ ಬಣ್ಣಿಸುತ್ತಾನೆ. ಮುಂಜಾವಿನಲ್ಲಿ ಎಲ್ಲೆಲ್ಲೂ ಬೀಸುತ್ತಿರುವ ಪ್ರಾಣವಾಯುವನ್ನು  ಈ ಗೋ-ಸಮೂಹವೂ ಸಹ ಹೀರುತ್ತಿದೆ. ಇವುಗಳಿಗೂ ಸಹ ಅರುಣೋದಯದ ಕೆಂಪು ಕಾಣುತ್ತಿದೆಯೇ ಹೊರತು, ತಮ್ಮ ಹಿಂದೆ ಇರುವ ಮಂಜು ಕಾಣುತ್ತಿಲ್ಲ. ಈ ಗೋವುಗಳನ್ನು ಸಂರಕ್ಷಿಸಬೇಕಾದ, ಕೊಳಲು ಹಿಡಿದ ಗೋಪಾಲಕನು ಕವಿಗೆ ಕಾಣುತ್ತಿಲ್ಲ. ಆದರೆ ಆತನು ಎಲ್ಲೆಲ್ಲೂ ಇರುವನು ಹಾಗು ಈ ಗೋಸಮೂಹವನ್ನು ರಕ್ಷಿಸುವನು ಎನ್ನುವ ಭರವಸೆ ಕವಿಗಿದೆ. ಆದುದರಿಂದಲೇ ಗೋಪಾಲಕನು ‘ಎಲ್ಲು ಇಹನು’ ಎಂದು ಕವಿ ಹೇಳುತ್ತಾನೆ. ಕವಿಯು ಅಪ್ರತ್ಯಕ್ಷವಾಗಿ ವಿಶ್ವರಕ್ಷಕನಾದ ಭಗವಂತನ ಬಗೆಗೆ ಪ್ರಸ್ತಾವಿಸುತ್ತಾನೆ.  (‘ಗೋ’ ಪದಕ್ಕೆ ‘ಜೀವಿ’ ಎನ್ನುವ ಅರ್ಥವೂ ಇದೆ. ಆದುದರಿಂದ ಗೋಪಾಲನೆಂದರೆ ಎಲ್ಲ ಜೀವಿಗಳನ್ನು ಪಾಲಿಸುವ ಭಗವಂತನೇ ಆಗುತ್ತಾನೆ

ಮೊದಲ ನುಡಿಯಲ್ಲಿ ಕವಿಯು ಕಾಡಿನಲ್ಲಿಯ ಸಾತ್ವಿಕ ಪ್ರಾಣಿಗಳನ್ನು ಬಣ್ಣಿಸಿದ್ದರೆ, ಎರಡನೆಯ ನುಡಿಯಲ್ಲಿ ನಾಡಿನಲ್ಲಿ ನೆಲೆ ನಿಂತ ಮಾನವ-ಸ್ನೇಹಿ ಮುಗ್ಧ ಜೀವಿಗಳನ್ನು ಬಣ್ಣಿಸಿದ್ದಾನೆ. ಇದೀಗ ಮೂರನೆಯ ನುಡಿಯಲ್ಲಿ ಸಂಸ್ಕೃತಿಯ ಮುಂದಿನ ಮೆಟ್ಟಲಾದ ಮಾನವರ  ವಿಚಾರವಿದೆ. ಮಾನವರು  ಪ್ರಾಣಿಗಳಿಗಿಂತ ಹೆಚ್ಚಿನ ಪ್ರಜ್ಞೆಯುಳ್ಳವರು. ಉತ್ಕ್ರಾಂತಿಯ ಕಾಲಮಾನದಲ್ಲಿ ಹೇಳುವದಾದರೆ, ಪ್ರಾಣಿಗಳು ಅರುಣೋದಯ ಕಾಲದವರಾದರೆ, ಮನುಷ್ಯ ಜೀವಿಗಳು ಬೆಳ್ಳಿಚುಕ್ಕೆ ಮುಳುಗಿದ ಕಾಲದವರು; ಅಂದರೆ ಅರುಣೋದಯದ ನಂತರದ ಸೂರ್ಯೋದಯದ ಕಾಲದವರು. ಅದನ್ನು ತೋರಿಸಲೆಂದು ಕವಿ ಬೆಳ್ಳಿಚುಕ್ಕೆಯು(=ಶುಕ್ರ ಗ್ರಹವು) ಈಗ ಚಿಕ್ಕೆಯಾಗಿ ಮುಳುಗಿದೆ ಎಂದು ಹೇಳುತ್ತಾನೆ.   ಆದರೇನು,  ಮಾನವರೂ ಸಹ ಪ್ರಕೃತಿಯ ಕೂಸುಗಳೇ. ಬದುಕಿನ ಮುಂದುವರಿಕೆಯು ಪ್ರಕೃತಿಯ ಅಪೇಕ್ಷೆಯಾಗಿದೆ. ಆದುದರಿಂದಲೇ ಇಲ್ಲಿ ಕಾದಲೆಯು ಅಂದರೆ ಪ್ರಿಯತಮೆಯು ತನ್ನ ಕಾದಲನಿಗೆ ಬೇಡಲು ಬರುತ್ತಿದ್ದಾಳೆ. ಅವಳು ಬೇಡುತ್ತಿರುವದು ಪ್ರಣಯವನ್ನು. ಪ್ರಣಯದ ಸಂಕೇತವಾದ ಹೂಮಾಲೆಯೇ ಅವಳಾಗಿದ್ದಾಳೆ. ಆದರೆ ಈ ಮಾನವರಿಗೂ ಸಹ ಕಣ್ಣು ಮುಂದಿನ ಕೆಂಪು ಕಾಣುತ್ತದೆಯೇ ಹೊರತು, ಅದರ ಹಿಂದಿನ ಮಂಜು ಕಾಣುತ್ತಿಲ್ಲ. (ಇಲ್ಲಿ ಕೆಂಪು ಬಣ್ಣವು ಜೀವನದ ಸಂಕೇತವಾಗಿ, ಉತ್ಸಾಹದ ಸಂಕೇತವಾಗಿ ಬಂದಿದೆ, ಹಾಗು ಮಂಜು ನಮ್ಮ ಅರಿವಿಗೆ ಕಾಣದ ಮೃತ್ಯುವಿನ ಸಂಕೇತವಾಗಿದೆ.

ಮೊದಲ ಮೂರು ನುಡಿಗಳಲ್ಲಿ ಹುಟ್ಟು ಸಾವುಗಳ ನಡುವಿನ ಬದುಕಿನ ವರ್ಣನೆ ಇದ್ದರೆ, ಕೊನೆಯ ನುಡಿಯಲ್ಲಿ ಇದು ವಿಶ್ವಾತ್ಮನ ಆಟವೆನ್ನುವ ದರ್ಶನವಿದೆ. ಆದುದರಿಂದ ಇದು ಬೇಟೆಯಲ್ಲ. ಇದೆಲ್ಲ (ಅವನ) ಆಟ; ಇದು ಬೇಟ, ಅಂದರೆ ಪ್ರಣಯದ ಒಂದು ರೀತಿ ಎಂದು ಕವಿ ಹೇಳುತ್ತಾರೆ. ಈ ಪ್ರಣಯವು ಪ್ರಕೃತಿ ಹಾಗು ವಿಶ್ವಾತ್ಮನಾದ ಪುರುಷ ಇವರೀರ್ವರ ನಡುವಿನ ಪ್ರಣಯ. ಈ ‘ಪುರುಷ’ನ ಸ್ವರೂಪವನ್ನು ವಿಶದೀಕರಿಸಲು ಕವಿಯು “ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ” ಎನ್ನುವ ಒಂದು ಅದ್ಭುತ ರೂಪಕವನ್ನು ಅಚಾನಕವಾಗಿ ಬಳಸಿ ಓದುಗರನ್ನು ಬೆರಗಿನಲ್ಲಿ ಸೆರೆ ಹಿಡಿಯುತ್ತಾರೆ.

ಆ ವಿಶ್ವಾತ್ಮನಿಗೆ ಮುಗಿಲೇ ಬಾಯಿ, ಗಾಳಿಯೇ ಅವನ ಕೊಳಲು ಹಾಗು ಬೆಳಕೇ ಆತನ ಹಾಡು. ಮುಗಿಲು, ಗಾಳಿ ಹಾಗು ಬೆಳಕು ಇವು ಪಂಚಮಹಾಭೂತಗಳಾದ ಪೃಥ್ವಿ, ಅಪ್, ತೇಜ, ಆಕಾಶ ಹಾಗು ವಾಯು ಇವುಗಳಲ್ಲಿ ಮೂರು ಮಹಾಭೂತಗಳ ಅಂದರೆ ಆಕಾಶ, ವಾಯು ಹಾಗು ತೇಜ ಇವುಗಳ ಸಂಕೇತವಾಗಿವೆ ಎನ್ನುವದನ್ನು ಗಮನಿಸಬೇಕು.

ಜೊತೆಜೊತೆಗೇ ವಿಶ್ವಾತ್ಮನನ್ನು ಕೃಷ್ಣನಿಗೆ ಹೋಲಿಸುವ ಕೆಲವು ಸಂಕೇತಗಳನ್ನು ಈ ಕವನದಲ್ಲಿ ಬಳಸಲಾಗಿದೆ. ತಾಯಿ ಯಶೋದೆಗೆ ಪುಟ್ಟ ಕೃಷ್ಣನು ತನ್ನ ಬಾಯಿಯಲ್ಲಿ ಸಕಲ ಲೋಕಗಳನ್ನು ಅನಿರೀಕ್ಷಿತವಾಗಿ ತೋರಿಸಿ ಬೆರಗುಗೊಳಿಸಿದನು. ಈ ಗೀತೆಯಲ್ಲಿ ಕವಿಯು ಗೋಪಾಲಕನನ್ನು ವಿಶ್ವಾತ್ಮನಿಗೆ ಹೋಲಿಸುವಂತಹ ರೂಪಕವನ್ನು  ಥಟ್ಟನೆ ಬಳಸಿ ಓದುಗನನ್ನು ಬೆರಗಿನಲ್ಲಿ ಸೆರೆ ಹಿಡಿಯುತ್ತಾನೆ. ಕೃಷ್ಣನು ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸುವಂತೆ, ಕವಿಯು ಓದುಗರಿಗೆ ‘ಮುಗಿಲ ಬಾಯ, ಗಾಳಿ ಕೊಳಲ, ಬೆಳಕ ಹಾಡ’ ಎನ್ನುವ ವಿಶ್ವರೂಪವನ್ನು ತೋರಿಸುತ್ತಾನೆ. ಓದುಗರನ್ನು ಸಾಧಾರಣ ನೋಟದಿಂದ ಅಸಾಧಾರಣ ನೋಟಕ್ಕೆ ಓಯ್ಯುವ  ಈ ರೂಪಕವು ಕನ್ನಡ ಕಾವ್ಯದಲ್ಲಷ್ಟೇ ಅಲ್ಲ, ಜಗತ್ತಿನ ಕಾವ್ಯದಲ್ಲೇ ಒಂದು ಅದ್ಭುತ, ಅನನ್ಯ ರೂಪಕವಾಗಿದೆ.

ಈ ವಿಶ್ವಾತ್ಮನಲ್ಲಿ ನಂಬಿಕೆ ಇರುವ ಕಾರಣದಿಂದಲೇ ಕವಿಯ ಮನಸ್ಸಿನಲ್ಲಿ ಒಂದು ಸತ್ಯ ಹೊಳೆಯುತ್ತದೆ. ಅದನ್ನು ಕವಿಯು ತನ್ನ ನಲ್ಲೆಗೆ ಉದ್ಘೋಷಿಸುವದಿಲ್ಲ; ಉಸುರುತ್ತಾನೆ. ಆದುದರಿಂದ ಆ ಸತ್ಯದ ಪ್ರಥಮಾರ್ಧವನ್ನು ಸ್ವಗತರೂಪದಲ್ಲಿ, ಕಂಸಿನಲ್ಲಿ ತೋರಿಸಲಾಗಿದೆ: (ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ). ಹಾಗು ಈ ಸತ್ಯದ ದ್ವಿತೀಯಾರ್ಧವನ್ನು ಕವಿಯು ಅಪ್ತವಾಗಿ ತನ್ನ ನಲ್ಲೆಗೆ ಬೋಧಿಸುತ್ತಾನೆ:  “ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?”

ಕೋಲಾಟದ ಪಲ್ಲದೊಂದಿಗೆ ಈ ಗೀತೆ ಮುಗಿಯುತ್ತದೆ.)

ವಿವರ ಕೃಪೆ: ಸುನಾತ್, ಸಲ್ಲಾಪ ಬ್ಲಾಗ್

Tag: Kolu Sakhee chandramukhi, naadaleele

ಕಾಮೆಂಟ್‌ಗಳಿಲ್ಲ: