ಶುಕ್ರವಾರ, ಸೆಪ್ಟೆಂಬರ್ 6, 2013

ಗುಲ್ ಮೊಹರ್ ಗೀತ


ಒಂದು  ಗುಲ್ ಮೊಹರ್ ಗೀತ

ಸಾಲ್ಮರಗಳಲಿ ಚಂದದ ಚಾಮರ
ನೋಟದ ವರ ಗುಲ್ ಮೊಹರು;
ವೃಕ್ಷಗಳಲ್ಲೆ ಕಲಾವಿದವೀ ತರು
ಕುಂದದ ಹರುಷದ ತವರು.

ಹೂ ಮೊಗ್ಗಿಗೆ ಎದೆ ಕದಿಯುವ ಹಿಗ್ಗಿದೆ
ಮರಕಿದೆ ಸ್ವಂತದ ಮೊಹರು;
ಪ್ರಧಾನಿ ಪಂಕ್ತಿಯೊಳಿರುವಂತೆಯೆ ಶ್ರೀ
ಪಂಡಿತ ಜವಾಹರ ನೆಹರು.

ಮರ ಮರ ಉಮರ, ಹೂ ಮಿಡಿಗಾಯಿ
ವಿಚಾರ ಭಾವ ರುಬಾಯಿ;
ನನೆ ನನೆಯೂ ಸಹ ಬಿರ್ಲನ ಭಾಯಿ,
ಎಸಳೆಸಳೆಲ್ಲ ರುಪಾಯಿ.

ಬಿಸಿಲೆಣ್ಣೆಗೆ ಹೊತ್ತಿವೆ ಕೊಂಬೆಯ ಬತ್ತಿ
ಝಗಝಗಿಸಿದೆ ತಣ್ಣಗೆ ನೆತ್ತಿ;
ಅರೆ, ಅರೆ! ತುಳುಕಿದ್ದೆಲೆ ಈಗೆಲ್ಲಿವೆ?
ಎಣಿಸಬಹುದು ಮರ ಹತ್ತಿ.

ಬರಿ ಹೂವೆ ಇದು; ಕೋಮಲಗೆಂಪಿನ
ಈ ಕಾವ್ಯಾತ್ಮಕ ದುಂದು?
ಸುರ ನಾವೇ ಇದು ಮನೆಯೆದುರಿಳಿದಿದೆ
ಇಂದ್ರನ ಬೊಕ್ಕಸ ತಂದು.

ಮೇ ಹೊತ್ತಿಹ ಮೇನೆಯ ಮದುವಣಗಿತ್ತಿ
ಅಹಹ, ನಯನ ಮನೋಹರಂ;
ರಂಗಿನ ದಿರಿಸಿನ ಚೈತ್ರಾವೇಶ;
ಗುಲ ಮೊಹರ್ ಅಲ್ಲ, ಗುಲ್ ಮೊಹರಂ.

ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್

*

ಮತ್ತೊಂದು ಗುಲ್ ಮೊಹರ್ ಗೀತ

ಮೇ ಮಾಹೆಯ ಬೀದಿ ಬದಿಯ ಕೆಂಗನಸಿನ ಈ ಮರ
ತಿರುಗಿದಂತೆ ತೋರುತಿಹುದು ಬುಗುರಿಯೊಂದು ಗಿರಗಿರ

ಹಚ್ಚ ಹಸಿರು ಮುಚ್ಚಿ ಹೋಗಿ ಅಚ್ಚಗೆಂಪು ಹೊರೆಹೊರೆ
ಗೊಂಚಲಿಸಿದೆ, ಬಿಚ್ಚು ಮನದ ಪ್ರಕೃತಿ ಮೆಚ್ಚಿ ಹರಸಿರೆ.

ಕಡು ಬೇಸಗೆ ಕೆಂಡದುರಿಗೆ ಬೆಳ್ದಿಂಗಳ ಚಾಮರ
ಅರಸನನ್ನು ಕವಿಯಾಗಿಸಬಹುದು ಗುಲ್ ಮೊಹರ್ ಮರ.

ಹಾದಿ ನಡೆವೆ ಎಲ್ಲ ಜನರಿಗಯಸ್ಕಾಂತವಾಗುತ
ಮರ ಮೆರೆದಿದೆ ಬೆಂದ ಕಣ್ಗೆ ಜೇನ ತಂಪನೆರೆಯುತ.

ಸಸ್ಯ ಜಗದ ಈ ಸೋಜಿಗ ನೆರೆಯ ಸಪ್ಪೆ ದೃಶ್ಯಕೆ
ಸವಿಯ ಬೆರೆಸಿ, ನೆವವಾಗಿದೆ ಹೃದಯ ಪಾರವಶ್ಯಕೆ

ಸುಗುಣವೊಂದು ಸೊಂಪಿಸಿರಲು ಹೆಣ್ಣಿಗೊಲುಮೆ ಹೆಚ್ಚಿದೆ?
ಕಂಪು ಇಲ್ಲದಿದ್ದರೇನು, ಕೆಂಪು ಎದೆಯ ಮೆಚ್ಚದೆ?

ಈ ಪುಷ್ಪದ ಸೌಕುಮಾರ್ಯ, ನಾಜೂಕಿಗೆ ಸಾಟಿಯೆ?
ಪಿಚಕಾರಿಯ ಹೂವು ಗಡಸು, ವರ್ಣ ಕೂಡ ನಾಟಿಯೆ!

ಕೊನೆಗೆ ಒಣಗಿ ಬಣ್ಣಗೆಟ್ಟು ಮೇವಾಗಿರೆ ಕಿಚ್ಚಿಗೆ
ಚೆಲುವ ಗತಿಗೆ ಮರುಗಿ ಸುಯ್ವೆ, ನೊಂದು ವಿಧಿಯ ಹುಚ್ಚಿಗೆ.

ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್Tag: Gulmohar Geetha, Mattondu Gulmohar Geetha

ಕಾಮೆಂಟ್‌ಗಳಿಲ್ಲ: