ಭಾನುವಾರ, ಸೆಪ್ಟೆಂಬರ್ 29, 2013

ಸಾಲು ಮರದ ತಿಮ್ಮಕ್ಕ ಎಂಬ "ಭರವಸೆ"


ತಾಯಿ ತಿಮ್ಮಕ್ಕ,
ಬಾಯಿಮಾತಲ್ಲ ನಿನ್ನ ದಿವ್ಯಕಾಯಕ.
ನೂರುಗಟ್ಟಲೆ ಸಸಿಗಳನ್ನು ನೆಟ್ಟಿದ್ದೀಯೇ,
ದೂರದಿಂದ ನೀರು ಹೊತ್ತು ತಂದಿದ್ದೀಯೆ,
ಕೈಯಾರೆ ಎರೆದು ಬೆಳೆಸಿದ್ದೀಯೆ,
ಬೆವರ ಹನಿ ಬೆರೆಸಿದ್ದೀಯೆ,
ನೀ ನೆಟ್ಟ ಮರಗಳಲ್ಲಿ
ಹಕ್ಕಿಗಳು ಗೂಡು ಕಟ್ಟಿವೆ
ಮಕ್ಕಳು ಜೋಕಾಲಿ ಆಡಿದ್ದಾರೆ,
ಬಿಸಿಲ ಕೋಲು ರಂಗೋಲಿ ರಚಿಸಿದೆ,
ದಾರಿಹೋಕರು ದಣಿವಾರಿಸಿಕೊಂಡಿದ್ದಾರೆ,
ಬುತ್ತಿ ಬಿಚ್ಚಿ ಉಂಡಿದ್ದಾರೆ,
ನೀರು ನೆರಳು ಪಡೆದಿದ್ದಾರೆ,
ಕಾಲು ಚಾಚಿ ಮಲಗಿದ್ದಾರೆ,
ಕಣ್ಣು ಮುಚ್ಚಿ ಕಮ್ಮನೆಯ ಕನಸು ಕಂಡಿದ್ದಾರೆ.

ನಿನ್ನ ಹಸ್ತಸ್ಪರ್ಶ ಪಡೆದ ಕುಡಿಗಳು
ಭವಿಷ್ಯದಲಿ ಲಕ್ಷವೃಕ್ಷಗಳಾಗುತ್ತವೆ,
ಕೋಟಿಗೂ ಮೀರುತ್ತವೆ,
ನಾಡಿಗೆ ಕಾಡಿನ ಕಂಪು ಕಸಿಯಾಗುತ್ತದೆ,
ಇನ್ನು ಮುಂದೆ
ಕಣ್ಣ ಮುಂದಿನ ಎಳೆಯರು
ನಿನ್ನ ಹಿಂಬಾಲಿಸುತ್ತಾರೆ.
ದೀಪದಿಂದ ದೀಪ ಹತ್ತಿಕೊಳ್ಳುತ್ತದೆ,
ನಂದಾದೀಪಗಳ ನವಯುಗ ಪ್ರಾರಂಭವಾಗುತ್ತದೆ,
ಬದುಕಿನಲ್ಲಿ ಭರವಸೆ ಮೂಡುತ್ತದೆ.

ಸಾಹಿತ್ಯ:  ಡಾ. ಎಚ್. ಎಸ್. ಸುಜಾತ


ಕಾಮೆಂಟ್‌ಗಳಿಲ್ಲ: