ಮಂಗಳವಾರ, ಸೆಪ್ಟೆಂಬರ್ 3, 2013

ಶಾಂತಿಭೂಷಣ್

ಶಾಂತಿಭೂಷಣ್

ಇದೀಗ ಲೋಕಪಾಲ ಮಸೂದೆಗೆ ಲಿಖಿತರೂಪ ನೀಡಲು ಜನಪ್ರತಿನಿಧಿಗಳ ಮುಖ್ಯಸ್ಥರಾಗಿ ನೇಮಕರಾಗಿರುವ ಶಾಂತಿಭೂಷಣ್  ಈ ನಾಡಿನಲ್ಲಿ ಹಲವಾರು ರೀತಿಯಲ್ಲಿ ಪ್ರತಿಷ್ಟರು.  ಇಂದು ದೇಶವನ್ನು ಭ್ರಷ್ಟಾಚಾರದ ವಿರುದ್ಧದ ತಮ್ಮ ಹೋರಾಟದಲ್ಲಿ ಜಾಗೃತಿಗೊಳಿಸಿರುವ ಅಣ್ಣಾ ಹಜಾರೆ ಅವರ ವಿಶ್ವಾಸಗಳಿಸಿರುವ ಶಾಂತಿಭೂಷಣ್ ಅವರಿಗೆ ಮತ್ಯಾರದೇ ಶಿಫಾರಸ್ಸು ಬೇಡ ಎಂದು ಇಡೀ ವಿಶ್ವ ಭಾವಿಸಿದ್ದಲ್ಲಿ ಅಚ್ಚರಿಯಿಲ್ಲ.

ಲೋಕಪಾಲ ಮಸೂದೆಯ ಸಮಿತಿಗೆ ಇರುವ ಐದು ಜನ ಸಾರ್ವಜನಿಕರ ಪಟ್ಟಿಯಲ್ಲಿ ತಂದೆ ಶಾಂತಿಭೂಷಣ್ ಮತ್ತು ಮಗ ಪ್ರಶಾಂತ್ ಭೂಷಣ್ ಇಬ್ಬರ ಹೆಸರೂ ಇರುವುದು ಸ್ವಜನ ಪಕ್ಷಪಾತವಾಗುವುದಿಲ್ಲವೇ ಎಂಬ ಸ್ವಾಮಿ ರಾಮದೇವ್ ಅವರ ಮಾತನ್ನು ಕೂಡಾ ಅಣ್ಣಾ ಹಜಾರೆ ತಿರಸ್ಕರಿಸಿದ್ದಾರೆ.  ಅಣ್ಣಾ ಹಜಾರೆ ಹೇಳುತ್ತಾರೆ, “ನಾನು ಗಾಂಧೀವಾದಿ ನನ್ನ ಬಗ್ಗೆ ಯಾರು ಏನು ಬೇಕಾದರೂ ಆರೋಪ ಮಾಡಲಿಕ್ಕೆ ಸ್ವಾಗತವಿದೆ.  ಒಂದು ಮಸೂದೆಯ ಕರಡು ಪ್ರತಿ ತಯಾರಿಕೆಯಲ್ಲಿ ಶ್ರೇಷ್ಠ ತಜ್ಞರು ಇರಬೇಕು ಎಂಬುದು ಮುಖ್ಯ.  ಯಾರು ಇದ್ದಾರೆ ಯಾರು ಇಲ್ಲ ಎಂಬುದಲ್ಲ”.  ಇದು ಅಣ್ಣಾ ಹಜಾರೆ ಅವರ ನೇರಮಾತು.  ಅಣ್ಣಾ ಹಜಾರೆ ಮುಖ್ಯಸ್ಥ  ಸ್ಥಾನಕ್ಕೆ ಪರಿಗಣಿಸಿದ್ದು ಎರಡೇ ಹೆಸರು.  ಒಂದು ಶಾಂತಿಭೂಷಣ್ ಮತ್ತು ಇನ್ನೊಬ್ಬರು ನಮ್ಮ ಲೋಕಾಯುಕ್ತ ಸಂತೋಷ್ ಹೆಗ್ಗಡೆ.  ಸಂತೋಷ್ ಹೆಗ್ಗಡೆ ಐದು ಜನ ಸದಸ್ಯರಲ್ಲಿ ಇದ್ದಾರೆ.  ಮತ್ತಿಬ್ಬರು ಸ್ವಯಂ ಅಣ್ಣಾ ಹಜಾರೆ ಮತ್ತು ಸಾಮಾನ್ಯ ಜನತೆಗೂ ‘ರೈಟ್ ಟು ಇನ್ಫಾರ್ಮೇಶನ್ – ಮಾಹಿತಿ ತಿಳಿದುಕೊಳ್ಳುವ ಹಕ್ಕು” ನೀಡುವ ಕ್ರಾಂತಿ ಸೃಷ್ಟಿಸಿದ ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರೀವಾಲ್.

ಶಾಂತಿಭೂಷಣ್ ಅವರು ಜನಿಸಿದ್ದು ನವೆಂಬರ್ 11, 1925ರಲ್ಲಿ.  2009ರಲ್ಲಿ ದೇಶದಲ್ಲಿ ನಡೆದ ಪ್ರಮುಖ ಸಮೀಕ್ಷೆ ಹೇಳುತ್ತದೆ, ಅವರು ದೇಶದ ಅತ್ಯಂತ ಪ್ರಭಾವೀ ಮಹನೀಯರಲ್ಲಿ 74ನೆಯವರು ಎಂದು.

ಶಾಂತಿಭೂಷಣ್ ಅಂದಿನ ಸಂಸ್ಥಾ ಕಾಂಗ್ರೆಸ್ಸಿನಲ್ಲಿ ಇದ್ದವರು.  ರಾಜ್ ನಾರಾಯಣ್ ಅವರ ಪರವಾಗಿ  ಶ್ರೀಮತಿ ಇಂದಿರಾಗಾಂಧಿ ಅವರ ವಿರುದ್ಧ ಅದ್ಭುತವಾಗಿ ವಾದಿಸಿದ ಶಾಂತಿಭೂಷಣ್, ಇಂದಿರಾಗಾಂಧಿ ಅವರ ಚುನಾವಣೆಯ ವಿಜಯ ಅಸಿಂಧು ಎಂದು ಅಲಹಾಬಾದ್ ಮುಖ್ಯ ನ್ಯಾಯಾಲಯದ ಜಸ್ಟಿಸ್ ಜಗಮೋಹನ್ ಲಾಲ್ ಅವರು ಐತಿಹಾಸಿಕ ತೀರ್ಪು ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದರು.  ಈ ಕುರಿತಂತೆ ಜಯಪ್ರಕಾಶ್ ನಾರಾಯಣ್ ಅವರು ತಮ್ಮ ಪುಸ್ತಕ “ಸೆರೆಮನೆಯ ದಿನಚರಿ – Prison Diary” ಯಲ್ಲಿ “ಶಾಂತಿಭೂಷಣ್ ಒಬ್ಬ ಅಪೂರ್ವ ನ್ಯಾಯವಾದಿ” ಎಂದು ಶ್ಲಾಘಿಸಿದ್ದಾರೆ.  ಇಂದಿರಾ ಗಾಂಧೀ ಅವರು ತುರ್ತು ಪರಿಸ್ಥಿತಿ ವಿಧಿಸಿದ್ದ ಆಸುಪಾಸಿನ ದಿನಗಳಲ್ಲಿ ಶಾಂತಿಭೂಷಣರ ಭಾಷಣ ಇಡೀ ದೇಶಕ್ಕೆ ವಿದ್ಯುತ್ ಸ್ಪರ್ಶದಂತಹ ಜಾಗೃತಿ ಮೂಡಿಸಿತ್ತು.  ಅತ್ಯುತ್ತಮ ವಾಗ್ಮಿಗಳಾದ ಅವರ ಮಾತು ಕೇಳುವುದು ಅಂದಿನ ಯುವಕರಾದ ನಮಗೆ ಪ್ರತಿಷ್ಠೆಯ ಅನುಭವವಾಗಿತ್ತು.

ಮುಂದೆ ಜನತಾ ಸರ್ಕಾರದ ಮೊರಾರ್ಜಿ ದೇಸಾಯಿಯವರ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗಿದ್ದ ಅವರ ಜಾಣ್ಮೆಯಲ್ಲಿ ಮುಂದೆ ತುರ್ತುಪರಿಸ್ಥಿತಿಯಂತಹ ಸ್ಥಿತಿಗಳು ಇನ್ನೆಂದೂ ಹುಟ್ಟದಂತಹ ನಿಯಂತ್ರಕ ಕಾನೂನುಗಳು ಸೃಷ್ಟಿಯಾದವು.  ಜನತಾ ಸರ್ಕಾರದ ಪತನದ ನಂತರ ಒಂದಿನಿತು ಬಿ.ಜೆ.ಪಿ ಜೊತೆಗಿದ್ದ ಶಾಂತಿಭೂಷಣ್ ಹಲವು ಭಿನ್ನಾಭಿಪ್ರಾಯಗಳ ದೆಸೆಯಲ್ಲಿ ರಾಜಕೀಯ ಪಕ್ಷಗಳ ಸಹವಾಸದಿಂದ ಪೂರ್ಣವಾಗಿ ಹೊರನಡೆದರು.

ಮುಂದೆ ಅವರು ಹಲವು ವಿವಾದಾತ್ಮಕವಾದ ಕೆಲವೊಂದು ಕೋರ್ಟ್ ವಾದಗಳಲ್ಲಿ ಪಾಲ್ಗೊಂಡಿದ್ದಾರೆ.  1994ರ ಮುಂಬೈ ಸರಣಿ ಬಾಂಬ್ ಸ್ಫೋಟದ ಇಬ್ಬರು ಆರೋಪಿಗಳ ಪರ ವಕಾಲತ್ತು ವಹಿಸಿದ್ದು; 2002ರ ವರ್ಷದಲ್ಲಿ ಅರುಂಧತಿ ರಾಯ್ ಅವರು ಎದುರಿಸಿದ ಉಚ್ಚತಮ ನ್ಯಾಯಾಲಯದ ನಿಂದನೆ ಆರೋಪಕ್ಕೆ ಅವರ ಸಲಹೆಗಾರರಾದದ್ದು;  ಭಾರತದ ಪಾರ್ಲಿಮೆಂಟ್ ಭವನದ ಮೇಲೆ ಬಾಂಬ್ ದಾಳಿಯ ಸಂದರ್ಭದಲ್ಲಿ ಸೆರೆಯಾಳಾದ ಶೌಕತ್ ಹುಸ್ಸೇನ್ ಗುರು ಎಂಬಾತನಿಗೆ ವಿಧಿಸಿದ ಹತ್ತು ವರ್ಷಗಳ ಕಠಿಣ ಶಿಕ್ಷೆಯ ವಿರುದ್ಧ ಸಲ್ಲಿಸಿದ ಮನವಿಗೆ ಪ್ರತಿನಿಧಿಯಾದದ್ದು ಮುಂತಾದವುಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.

ಭೂಷಣ್ ಅವರು ‘ಟ್ರಾನ್ಸ್ ಪೆರೆನ್ಸಿ ಇಂಟರ್ ನ್ಯಾಷನಲ್’ ಪರವಾಗಿನ ಕೌನ್ಸೆಲ್ ಆಗಿ ಹಲವಾರು ನ್ಯಾಯಾದೀಶರುಗಳನ್ನು ಆರೋಪಿಯಾಗಿಸಿದ ಘಸಿಯಾಬಾದ್ ಹಗರಣದಲ್ಲಿ ಮಂಡಿಸಿದ ವಾದ ಅದೆಷ್ಟು ಕಟುವಾಗಿತ್ತೆಂದರೆ ಅವರ ವಾದ ನ್ಯಾಯಾಲಯ ನಿಂದನೆಯ ಉದ್ದೇಶ ಹೊಂದಿದೆ ಮತ್ತು ಬೀದಿ ಹೋಕರು ತುಚ್ಚವಾಗಿ  ಮಾತನಾಡುವ ತೆರದಲ್ಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ ವಿಭಾಗೀಯ ಪೀಠ ಅದರ ವಿಚಾರಣೆಯನ್ನೇ ರದ್ಧುಗೊಳಿಸಿತು.

ಇನ್ನೊಂದು ಮುಖ್ಯ ಸಂಗತಿ ಇದೆ.  ನಮ್ಮ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಸುಪ್ರೀಂ ಕೋರ್ಟಿನಲ್ಲಿ ಹೂಡಿರುವ  ‘ಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್’ ಗೆ ನೀಡಿರುವ ಭೂಮಿಯ ಕುರಿತಾದ ವ್ಯಾಜ್ಯವನ್ನು ನಿರ್ವಹಿಸುತ್ತಿರುವವರು ಕೂಡಾ ಶಾಂತಿಭೂಷಣ್ ಅವರೆ.

ಬಿರ್ಲಾ ಕಾರ್ಪೋರೇಷನ್ನಿನ ರಾಜೇಂದ್ರ ಸಿಂಗ್ ಲೋಧ ಅವರ ಆಸ್ಥಿ ವಿಚಾರದ ವಾದದಲ್ಲಿ, ಲೋಧ ಅವರ ಪರವಾಗಿ ವಾದ ನಡೆಸಿದವರು ಕೂಡಾ ಶಾಂತಿಭೂಷಣ್ ಅವರೆ.

ಕಳೆದ ವರ್ಷದ ಸೆಪ್ಟೆಂಬರ್ ಮಾಸದಲ್ಲಿ ಶಾಂತಿಭೂಷಣ್ ಅವರು ಇಡೀ  ದೇಶದಲ್ಲಿನ ನ್ಯಾಯಾದೀಶರುಗಳ ನೈತಿಕತೆಯ  ಬಗ್ಗೆ ಪ್ರಶ್ನೆ ಹುಟ್ಟುವಂತಹ ಬಾಂಬ್  ಒಂದನ್ನು ಸಿಡಿಸಿದರು.  ಇದರಲ್ಲಿ ಅವರು ಭಾರತದ 16 ಮುಖ್ಯ ನ್ಯಾಯಮೂರ್ತಿಗಳಲ್ಲಿ ಕನಿಷ್ಠ 8 ಮಂದಿ ಭ್ರಷ್ಟರು ಎಂದು ಗಂಭೀರ ಆಪಾದನೆ ಮಾಡಿದರು. ಆರು ಮಂದಿ ಮುಖ್ಯ ನ್ಯಾಯಮೂರ್ತಿಗಳು ಪ್ರಾಮಾಣಿಕರು, ಇನ್ನುಳಿದಂತೆ ಇಬ್ಬರು ನ್ಯಾಯಮೂರ್ತಿಗಳ ಕುರಿತು ಅವರು ಅಭಿಪ್ರಾಯ ವ್ಯಕ್ತಪಡಿಸಲು ನಿರಾಕರಿಸಿದರು ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿತು.

ಎಂಟು ಮಂದಿ ಭ್ರಷ್ಟ ನ್ಯಾಯಮೂರ್ತಿಗಳ ಪಟ್ಟಿಯನ್ನು ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವುದಾಗಿ ವರದಿಯಾಯಿತು. ಸುಪ್ರೀಂ ಕೋರ್ಟ್‌ ನಲ್ಲಿರುವ ಭ್ರಷ್ಟ ನ್ಯಾಯಮೂರ್ತಿಗಳ ಕುರಿತು ಪತ್ರಿಕೆಯೊಂದರಲ್ಲಿ ಭೂಷಣ್ ಲೇಖನವೊಂದನ್ನು ಬರೆದಿದ್ದರು. ಆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ಇದರಿಂದ ಅವರು ಸುಪ್ರೀಂ ಕೋರ್ಟ್‌ಗೆ ಈ ಕುರಿತು ಮಾಹಿತಿ ನೀಡಿದರು.

ಈ ಕುರಿತು ನಡೆದ ಕಳೆದ ವಿಚಾರಣೆಯಲ್ಲಿ ಅವರು ಘೋಷಿಸಿದ್ದು ಹೀಗೆ  “The question of apology does not arise.  I am prepared to go to jail – ಇಲ್ಲಿ ಕ್ಷಮಾಪಣೆಯ ಪ್ರಶ್ನೆಯೇ ಇಲ್ಲ.  ನಾನು ಜೈಲಿಗೆ ಹೋಗಲು ಸಿದ್ಧನಿದ್ದೇನೆ”

ಹೀಗಿದ್ದಾರೆ ನೋಡಿ ಶಾಂತಿಭೂಷಣ್!

Tag: Shanti Bhushan

ಕಾಮೆಂಟ್‌ಗಳಿಲ್ಲ: