ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಶ್ವಸೃಷ್ಟಿಯ ರಹಸ್ಯ ತಿಳಿಸುವ ದೇವಕಣ ಪತ್ತೆ?

ವಿಶ್ವಸೃಷ್ಟಿಯ ರಹಸ್ಯ ತಿಳಿಸುವ ದೇವಕಣ ಪತ್ತೆ?

ಭೌತ ವಿಜ್ಞಾನದ ‘ಗಾಡ್ ಪಾರ್ಟಿಕಲ್’ ಅಥವಾ ವಿಶ್ವದ ಮೂಲಕಣವನ್ನು ಅನ್ವೇಷಿಸಿರುವುದಾಗಿ ಯೂರೋಪಿನ ಪ್ರತಿಷ್ಠಿತ ಸಿ ಇ ಆರ್ ಎನ್ ಸಂಶೋಧನಾ ಕೆಂದ್ರದ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

ಈ ವಿಶ್ವವೆಂಬ ಸೃಷ್ಟಿಕ್ರಿಯೆ ಮಹಸ್ಪೋಟದ ರೂಪವಾಗಿ ಹೊರಹೊಮ್ಮಿತು ಎಂದು ಹೇಳಲಾಗುವ 'ಬಿಗ್ ಬ್ಯಾಂಗ್' ಸಿದ್ಧಾಂತಕ್ಕೆ ಅನುರೂಪವಾಗಿ ಎಂಬಂತೆ,  ‘ಪರಮಾಣು ಕಣ’ಗಳನ್ನು ಡಿಕ್ಕಿ ಹೊಡೆಸುವ ಮೂಲಕ  ಎಲ್ ಎಚ್ ಸಿ ಎಂದು ಕರೆಯಲ್ಪಡುವ ‘ಲಾರ್ಜ್ ಹಾಡ್ರನ್  ಕೊಲೈಡರು’ಗಳನ್ನು ಸೃಷ್ಟಿಸಲಾಗಿದ್ದು, ಸೃಷ್ಟಿಮೂಲದ  ಸ್ಥಿತಿಯನ್ನು ಮರುಸೃಷ್ಟಿಸಲು ಈ ನಿಟ್ಟಿನಲ್ಲಿ  ಪ್ರಯತ್ನಿಸಲಾಗಿದೆ.  ಈ ಮೂಲಕ  ವಿಶ್ವದ ಹುಟ್ಟಿನ ಸತ್ಯ ಅರಿಯುವ ಕೆಲಸದಲ್ಲಿ ಮಹತ್ವದ ಸಾಧನೆ ನಮ್ಮದಾಗಿದೆ ಎಂಬುದು ವಿಜ್ಞಾನಿಗಳ ಅಂಬೋಣ.  

‘ಗಾಡ್ ಪಾರ್ಟಿಕಲ್’ ವಿಶ್ವದ ಮೂಲ ತತ್ವವನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಮುಖ ಕೀಲಿಕೈ ಆಗಿದೆ.  ಇದು ಉಳಿದ ಪಾರ್ಟಿಕಲ್ಗಳಿಗೆ ಪರಮಾಣುವನ್ನು ಅವುಗಳ ದ್ರವ್ಯರಾಶಿಯನ್ನಾಗಿ ಮಾಡುವ ಕೆಲಸ ನೀಡುತ್ತದೆ.  ಪ್ರೋಟಾನುಗಳನ್ನು ಬೆಳಕಿನ ವೇಗದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆಸಿದಾಗ ಉಂಟಾಗುವ ಸ್ಪೋಟವು ‘ಗಾಡ್ ಪಾರ್ಟಿಕಲ್’ ಅನ್ನು ಸೃಷ್ಟಿಸುತ್ತದೆ ಎಂಬುದು ಎಲ್ ಎಚ್ ಸಿ ವಿಜ್ಞಾನಿಗಳ ನಂಬಿಕೆ.   ಈಗ ವಿಜ್ಞಾನಿಗಳು ಸೃಷ್ಟಿಸಿರುವ ಈ ಗಾಡ್ ಪಾರ್ಟಿಕಲ್  125 ಬಿಲಿಯನ್  ಎಲೆಕ್ಟ್ರಾನ್  ವೊಲ್ಟುಗಳಷ್ಟು ತೂಗುತ್ತದೆ ಎಂದು ಹೇಳಲಾಗಿದ್ದು ಇದು ಸೃಷ್ಟಿ ಕ್ರಿಯೆಯನ್ನು ಅರ್ಥೈಸುವ ಮಹತ್ವದ ಶೋಧನೆಗಳಿಗೆ ಅನುವು ಮಾಡಿಕೊಡುವಂತದ್ದಾಗಿದೆ ಎಂಬುದು ವಿಜ್ಞಾನಿಗಳು ಭಾವಿಸಿದ್ದಾರೆ.  

ಅಂದ ಹಾಗೆ ‘ಗಾಡ್ ಪಾರ್ಟಿಕಲ್’ ಎಂದು ಕರೆಯಲ್ಪಡುವ ಈ ಕಣಕ್ಕೆ ಭೌತವಿಜ್ಞಾನದಲ್ಲಿನ ಸಾಧನೆಗಾಗಿ ಪೀಟರ್ ಹಿಗ್ಸ್ ಹೆಸರು ನೀಡಲಾಗಿತ್ತು.  ಈ ಗಾಡ್ ಪಾರ್ಟಿಕಲ್ ಅನ್ವೇಷಣೆಯಲ್ಲಿ ಪ್ರಥಮ ಸಂಶೋಧನಾ ಕಾರ್ಯ ನಿರ್ವಹಿಸಿದವರು ಭಾರತದ ಸತ್ಯೇಂದ್ರನಾಥ ಬೋಸ್ಬೋ.  ಹಾಗಾಗಿ ‘ಭಾರತ ದೇಶವು ಈ ಗಾಡ್ ಪಾರ್ಟಿಕಲ್ ಅನ್ವೇಷಣೆಯಲ್ಲಿ ಚಾರಿತ್ರಿಕವಾಗಿ ತಂದೆಯ ಸ್ಥಾನ ಹೊಂದಿದೆ’ ಎಂದು ಸಿ ಇ ಆರ್ ಎನ್  ಪ್ರಮುಖ ವಿಜ್ಞಾನಿಗಳಾದ ಪಾಲೋ ಗಿಬೇಲಿನೋ ಅವರು ಇತ್ತೀಚೆಗೆ ನುಡಿದಿದ್ದರು.  ಬೋಸ್ ಮತ್ತು ಐನ್ ಸ್ಟೀನ್ ಅವರ ನಂತರದಲ್ಲಿ ಪೀಟರ್ ಹಿಗ್ಸ್ ಅವರು ಈ ಕುರಿತು ಆಳವಾದ ಸಂಶೋಧನೆ ನಡೆಸಿದ್ದರು.  ಇದೀಗ ಸಿ ಇ ಆರ್ ಎನ್ ಸಂಸ್ಥೆಯ ವಿಜ್ಞಾನಿಗಳ ಬೃಹತ್  ತಂಡ  ಈ ಕುರಿತಾದ ಮಹತ್ವದ ಸಾಧನೆಗೆ ದಾಫುಗಾಲಿಟ್ಟಿದೆ.

ಯೂರೋಪಿನ ಸಿ ಇ ಆರ್ ಎನ್ ನಡೆಸುತ್ತಿರುವ ಈ ಸಂಶೋಧನೆಯಲ್ಲಿ ಇಂದಿಗೂ ಭಾರತದ ನೂರಕ್ಕೂ ಹೆಚ್ಚು ವಿಜ್ಞಾನಿಗಳೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Tag: Devakana

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ